ಬೇಸಿಗೆಯಲ್ಲಿ ವಕೀಲರು ಕೋಟ್ ಧರಿಸಬೇಕಿಲ್ಲ!

ಕಪ್ಪು ಬಟ್ಟೆ ಧರಿಸುವುದರಿಂದ ಸೆಖೆಗಾಲದಲ್ಲಿ ಬದುಕು ಎಷ್ಟು ದುಸ್ತರವಾಗುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆದ್ದರಿಂದ ಬೇಸಿಗೆಯಲ್ಲಿ ಆದಷ್ಟು ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದರಿಂದ ಮನಸ್ಸಿಗೂ, ದೇಹಕ್ಕೂ ನೆಮ್ಮದಿ ಸಿಗುತ್ತದೆ. ಆದರೆ ಇಲ್ಲಿಯ ತನಕ ವಕೀಲರಿಗೆ ನ್ಯಾಯಾಲಯದ ಕಲಾಪದ ಸಮಯದಲ್ಲಿ ಕಪ್ಪು ಕೋರ್ಟ್ ಗಳನ್ನು ಧರಿಸಲೇಬೇಕಾಗಿತ್ತು. ಆದರೆ ಈಗ ಮಾರ್ಚ್ 15 ರಿಂದ ಮೇ 31 ರವರೆಗೆ ರಾಜ್ಯದ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಕಲಾಪಕ್ಕೆ ಹಾಜರಾಗುವ ವೇಳೆ ವಕೀಲರು ಕಪ್ಪು ಕೋರ್ಟ್ ಧರಿಸುವುದರಿಂದ ವಿನಾಯಿತಿ ನೀಡಿ ಹೈಕೋರ್ಟ್ ಅಧಿಸೂಚನೆ ಹೊರಡಿಸಿದೆ.
ಬೇಸಿಗೆ ಹಿನ್ನಲೆಯಲ್ಲಿ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ಕಪ್ಪು ಕೋಟ್ ಧರಿಸುವುದರಿಂದ ವಿನಾಯಿತಿ ಕೋರಿ ಬೆಂಗಳೂರು ವಕೀಲರ ಸಂಘ ಮತ್ತು ಕರ್ನಾಟಕ ವಕೀಲರ ಪರಿಷತ್ ಹೈಕೋರ್ಟಿಗೆ ಮನವಿ ಪತ್ರ ಸಲ್ಲಿಸಿತ್ತು. ಈ ಮನವಿಯನ್ನು ಪುರಸ್ಕರಿಸಿ ಕಪ್ಪು ಕೋಟ್ ಧರಿಸಲು ವಿನಾಯಿತಿ ನೀಡಿದ್ದು, ಇದು ಬಿಳಿ ಶರ್ಟ್ ಹಾಗೂ ನೆಕ್ ಬ್ಯಾಂಡ್ ಧರಿಸುವುದಕ್ಕೆ ಅನ್ವಯಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಜಿಲ್ಲೆ ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಇಲ್ಲ. ಈಗಾಗಲೇ ಬಿಸಿಲಿನ ಪ್ರಮಾಣದ ದಿನೇ ದಿನೇ ಏರುತ್ತಿದೆ. ಈ ಸಂದರ್ಭದಲ್ಲಿ ಬಿಳಿಬಟ್ಟೆ ಮೇಲೆ ಕಪ್ಪು ಕೋಟ್ ಮತ್ತು ಬ್ಯಾಂಡ್ ಹಾಕುವುದು ಕಷ್ಟ. ಹಾಗಾಗಿ ಬೇಸಿಗೆ ರಜೆ ಮುಗಿದು ನ್ಯಾಯಾಲಯಗಳು ಕೆಲಸ ಪುನರಾರಂಭಿಸುವವರೆಗೆ ಮಾರ್ಚ್ 15 ರಿಂದ ವಿನಾಯಿತಿ ನೀಡಬೇಕು ಎಂದು ವಕೀಲರ ಸಂಘ ಮನವಿ ಸಲ್ಲಿಸಿತ್ತು.
Leave A Reply