Kali The Mother “ಕಾಳಿಯೇ ತಾಯಿ”
Posted On September 30, 2017
![](https://tulunadunews.com/wp-content/uploads/2017/09/mother-kali-in-the-shrines-of-dakshineshwar-tarapith-1-768x640.jpg)
1899 ಫೆಬ್ರವರಿ 13 ಆಲ್ಬರ್ಟ್ ಹಾಲಿನಲ್ಲಿ ನಡೆದ ” ಕಾಳಿ” ಯ ಬಗೆಗಿನ ಉಪನ್ಯಾಸ,
ಮೇ 28 ಕಾಳಿ ಮಂದಿರದಲ್ಲಿನ ಉಪನ್ಯಾಸಗಳೆರಡೂ ಮುಂದೆ Kali The Motherಪುಸ್ತಕ ಬರೆಯಲು ಸಹಾಯಕವಾದವು.
ಕಾಳಿಯೇ ತಾಯಿ ಎಂದು ಹೊತ್ತಗೆಯುದ್ದಕ್ಕೂ ವಿವರಿಸಿರುವುದು ನಿಜಕ್ಕೂ ಅದ್ಭುತ.
ಅಸತ್ಯದಿಂದ ಸತ್ಯದೆಡೆಗೆ,
ಕತ್ತಲೆಯಿಂದ ಬೆಳಕಿನೆಡೆಗೆ, ಮೃತ್ಯುವಿನಿಂದ ಅಮೃತತ್ವದೆಡೆಗೆ,
ಅಜ್ಞಾನದ ಭೀಕರತೆಯಿಂದ ಕಾರುಣ್ಯದೆಡೆಗೆ ಬರುವಂತೆ ಮಾಡು.
ಎನ್ನುತ್ತಾ,ಅವಳ ಭೀಕರ ಸ್ವರೂಪದ ವರ್ಣನೆಯನ್ನು ನಿವೇದಿತಾ ಹೀಗೆ ವರ್ಣಿಸುತ್ತಾಳೆ.
ಪಾರ್ವತಿ ದುಷ್ಟ ರಾಕ್ಷಸರ ಸಂಹಾರಕ್ಕಾಗಿ ಕಾಳಿಯ ರೂಪ ತಾಳುತ್ತಾಳೆ.
![](https://tulunadunews.com/wp-content/uploads/2017/09/dakshineswar-kali.jpg)
ರಾಕ್ಷಸರ ಸಂಹಾರ ಮಾಡುತ್ತಾ ರುದ್ರ ನರ್ತನವಾಡುತ್ತಿದ್ದಾಳೆ. ಸುತ್ತಮುತ್ತ ಎಲ್ಲಾ ಕಡೆಗಳಲ್ಲಿ ಅವಳ ಭೀಕರತೆಯ ಕುರುಹುಗಳು ಕಾಣಿಸುತ್ತಿವೆ. ಕೊರಳಲ್ಲಿ ಧರಿಸಿರುವ ರುಂಡಮಾಲೆ, ಕೈಗಳಲ್ಲಿ ರಕ್ತ ಸಿಕ್ತಗೊಂಡಿರುವ ಆಯುಧಗಳು, ಒಂದು ಕೈಲಿ ಆಗಷ್ಟೆ ಸಂಹಾರಗೊಂಡ ರಾಕ್ಷಸನ ರಕ್ತಸಿಕ್ತ ರುಂಡ… ಆವೇಶಭರಿತಳಾಗಿ ಮುನ್ನುಗ್ಗಿ ತನಗರಿವಿಲ್ಲದೆ ತನ್ನ ಕಾಲನ್ನು ತನ್ನ ಪತಿದೇವನ ಎದೆಯ ಮೇಲೆ ಇರಿಸುತ್ತಾಳೆ. ಯಾರದೋ ಕಾಲಿನ ಸ್ಪರ್ಶವಾದಂತಾಗಿ ಶಿವ ತನ್ನ ಕಣ್ತೆರೆದು ನೋಡುತ್ತಾನೆ. ಒಬ್ಬರನ್ನೊಬ್ಬರು ಕಣ್ಣುಗಳಲ್ಲಿ ದಿಟ್ಟಿಸಿ ನೋಡುತ್ತಾರೆ. ಕಾಳಿ ತನ್ನ ಬಲಗೈಗಳನ್ನು ಆಶೀರ್ವದಿಸುತ್ತಿರುವಂತೆಯೂ, ತನ್ನ ನಾಲಿಗೆಯನ್ನು ಹೊರಚಾಚಿದ ಭಂಗಿಯಲ್ಲಿ ಸಂಕೋಚದಿಂದಲೂ, ಆಶ್ಚರ್ಯದಿಂದ ನೋಡುತ್ತಾಳೆ. ಅದು ಭಾರತದ ಹಳ್ಳಿಯ ಹೆಣ್ಣುಮಕ್ಕಳಲ್ಲಿ ಕಾಣಸಿಗುವ ಹಾವಭಾವ. ಆದರೆ ಶಿವನಿಗೆ ಆ ರೌದ್ರ ರೂಪ ಸೌಂದರ್ಯವಾಗಿ ಅನುಭೂತಿಯಾಗುತ್ತದೆ. ಅವಳ ಕಾಳರೂಪ, ನಗ್ನಾವಸ್ಥೆ, ಸುತ್ತಮುತ್ತ ಬಿದ್ದಿರುವ ರಾಕ್ಷಸರ ರಕ್ತಸಿಕ್ತ ಶವಗಳು ಮತ್ತು ರುಂಡಗಳು, ಅವಳ ಪಾದದಡಿಯಲ್ಲಿ ಆಶೀರ್ವಾದ ಪಡೆಯುವಂತೆ ತೋರುತ್ತಿದ್ದ ಶಿವನಿಂದ ಬಂದ ಉದ್ಗಾರ… “ತಾಯಿ”…
ಕಾಳಿಯೇ ತಾಯಿಯ ರೂಪದಲ್ಲಿ ಒಂದು ಮಗುವಿನೊಂದಿಗೆ ಹೇಗೆ ಒಡನಾಡಲು ಸಾಧ್ಯವಿದೆಯೋ ಹಾಗೆಯೇ ಮಗುವಿನಂತಾಗಿ ಆಕೆಯ ಮಡಿಲಲ್ಲಿ ಮಗುವಾಗುವುದೂ ಸಾಧ್ಯ .
ಹೇಗೆಂದರೆ ಶುದ್ಧ ಅಂತಃಕರಣದಿಂದ ಆಕೆಯನ್ನ ಆವಾಹಿಸಿಕೊಳ್ಳಬಹುದು.
ಪ್ರಾಪಂಚಿಕ ಪರಿಮಿತಿಗಳನ್ನ ಮೀರಿ ಸಂಪೂರ್ಣ ಜಾಗೃತಾವಸ್ಥೆಯಲ್ಲಿ ತಾಯಿಯ ಉದಾತ್ತ ಪ್ರೀತಿಯ ಅನುಭೂತಿಯನ್ನು ಪಡೆಯಲು ಸಾಧ್ಯ ಎನ್ನುತ್ತಾಳೆ.
ಸತ್ಯವನ್ನು ಹುಡುಕಾಡುವ ಅಭಿಲಾಷೆ ಹೆಚ್ಚಾಗುತ್ತಾ ಹೋದಂತೆ, ಇತರರಿಗೆ ವಿವರಿಸಲಾಗದ ಅಭೂತ ಪ್ರೇರಣೆಯೊಂದು ಅನುಭವಕ್ಕೆ ಬರುತ್ತಾ, ಪ್ರೀತಿ ಎಂಬುದೇ ತಾಯಿಯ ರೂಪ ಎಂಬುದು ಅರಿವಾಗುತ್ತದೆ.
ಪ್ರತಿಯೊಂದರಲ್ಲೂ ತಾಯಿಗೆ ಕಾಣುವಂತಹದ್ದು ಪ್ರೀತಿ ಮಾತ್ರ.
ಎಲ್ಲವೂ ಇಚ್ಛಾಶಕ್ತಿಯ ಮೂಲಕವೇ ಆಗಲಿ, ಧೈರ್ಯವೂ ಜೊತೆಯಾಗಲಿ.
ಹಾಗೆಯೇ ನಮ್ಮ ಗೋಧೂಳಿಯ ಸಮಯದ ಬಗೆಗೂ,ಸಂಜೆಯ ಸಮಯವನ್ನು ಕೇವಲ ಹೊತ್ತು ಎಂದು ಪರಿಗಣಿಸದೆ “ಸಮಯದ ಸಮಾಗಮ” ಎಂದು ಆ ಇಳಿಹೊತ್ತು ಮುಸ್ಸಂಜೆಯನ್ನು ವಿವರಿಸುತ್ತಾ, ಪ್ರಕೃತಿಯ ವರ್ಣನೆಯು ಮಹೋನ್ನತವಾಗಿದೆ.
![](https://tulunadunews.com/wp-content/uploads/2017/09/2016_10largeimg28_oct_2016_023203427.jpg)
ನಿವೇದಿತಾ ಕಲ್ಕತ್ತಾದ ಬಾಲಿಯಲ್ಲಿ ಬೇಬಿ ಲೆಗೆಟ್ ಗಾಗಿ ಬರೆಯುತ್ತಾಳೆ. “ಪ್ರೀತಿಯ ಬೇಬಿ, ನಿನಗೆ ಪ್ರಪ್ರಥಮವಾಗಿ ನೆನಪಾಗುವುದು ಯಾವುದು? ತಾಯಿಯ ಮಡಿಲಲ್ಲಿ ಮಲಗಿ, ಆಕೆಯ ಕಣ್ಣುಗಳನ್ನೇ ನೋಡುತ್ತಾ ಮುಗುಳ್ನಗುವುದು… ಅಲ್ಲವೇ? ನೀನು ಎಂದಾದರೂ ತಾಯಿಯೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡಿದ್ದೇಯಾ? ತಾಯಿ ಕಣ್ಣು ಮುಚ್ವಿದಾಗ ಮಗು ಅಡಗಿಕೊಳ್ಳುತ್ತದೆ. ಮತ್ತೆ ಕಣ್ಣು ಬಿಟ್ಟಾಗ ತಾಯಿಗೆ ಮಗು ಕಾಣಿಸುತ್ತದೆ. ಮಗು ಕಣ್ಣು ಮುಚ್ಚಿದಾಗ ಆಕೆ ಎಲ್ಲಿರುತ್ತಾಳೆ… ಮಗು ಮತ್ತೆ ಕಣ್ಣು ಬಿಟ್ಟಾಗ… ಓಹ್… ಒಮ್ಮೊಮ್ಮೆ ತಾಯಿ ಅಗೋಚರವಾಗಿಬಿಡುತ್ತಾಳೆ. ಬೇಬಿ, ತಾಯಿಗೆ ಇಡೀ ವಿಶ್ವವೇ ಮಗುವಿದ್ದಂತೆ. ಆಕೆ ವಿಶ್ವವೆಂಬ ಮಗುವಿನೊಂದಿಗೆ ಕಣ್ಣಾಮುಚ್ಚಾಲೆ ಆಟ ಆಡುತ್ತಾಳೆ. ಈ ಆಟದಲ್ಲಿ ಆಕೆಯನ್ನು ಒಂದೇ ಒಂದು ಸಲ ಆಕೆಯನ್ನು ಹುಡುಕಿ, ಒಂದು ಕ್ಷಣ ಆಕೆಯ ಕಣ್ಣುಗಳನ್ನೇನಾದರೂ ನೋಡಿದರೆ… ಅಬ್ಬಾ… ಏನಾಗುತ್ತದೆ ಗೊತ್ತೇ? ಅವನು ಅತ್ಯಂತ ಶಕ್ತಿವಂತನಾಗಿ, ಬುದ್ಧಿವಂತನಾಗಿ, ಆಕೆಗೆ ಪ್ರೀತಿಪಾತ್ರನಾಗಿ, ಅದು ಅವನ ಜೀವನದಲ್ಲಿ ಮರೆಯಲಾಗದ ಅದ್ಭುತ ಕ್ಷಣವಾಗಿಬಿಡುತ್ತದೆ. ನಂತರ ನಡೆಯುವುದೆಲ್ಲಾ ಅದ್ಭುತವೇ… ಆಕೆಯ ಇತರ ಮಕ್ಕಳು ಆಟವಾಡಲು ಜೊತೆಯಾಗುತ್ತಾರೆ… ಪಕ್ಷಿಗಳು ಹತ್ತಿರ ಬರುತ್ತವೆ, ಕಾಡುಮೊಲಗಳು ಕಾಲಿನ ಹತ್ತಿರ ಸುಳಿಯುತ್ತವೆ. ಅನಾಥ ಮಕ್ಕಳು ತಾಯಿಗೆ ಅತ್ಯಂತ ಪ್ರಿಯ. ಕಾರಣ ತಂದೆ, ತಾಯಿ, ಸೂರಿಲ್ಲದ ಆ ಮಕ್ಕಳಿಗೆ ಆಕೆ ಪ್ರೀತಿ ತೋರಿಸಿ ಆಶ್ರಯ ನೀಡಬಯಸುತ್ತಾಳೆ. ಎಲ್ಲರನ್ನೂ ಆಕೆ ಮಡಿಲಲ್ಲಿ ಮಲಗಿಸಿಕೊಳ್ಳುತ್ತಾಳೆ… ಎದೆಗವುಚಿಕೊಳ್ಳುತ್ತಾಳೆ… ಆ ತಾಯಿ ಯಾರು ಗೊತ್ತೇ… ಆಕೆಯೇ ಕಾಳಿ… ತಾಯಿ ಕಾಳಿ. ನಿನಗೆ ಎಂದಾದರೂ ಜೀವನದ ಕೆಲಸಮಯ ಅಸಂತೋಷವೆನಿಸಿದೆಯೇ? ಅಂತಹ ಸಂದರ್ಭದಲ್ಲಿ, ತಾಯಿಯೋ, ದಾದಿಯೋ, ಚಿಕ್ಕಮ್ಮ ಅಥವಾ ಮತ್ಯಾರೋ ಎತ್ತಿಕೊಂಡು, ಮುದ್ದಿಸಿ, ಸಂತೈಸಿದಾಗ ಸಮಾಧಾನ ಆಗುವುದುಂಟು. ಅಲ್ಲವೇ? ಕೆಲವೊಮ್ಮೆ ದೇವರೂ ಹಾಗೆಯೇ… ನಾವು ದೇವರು ಕಣ್ಣುಮುಚ್ಚಿಕೊಂಡಿದ್ದಾನೆಂದು ತಿಳಿದು ಭಯ ಪಡುತ್ತೇವೆ, ಒಂಟಿಯೆಂದು ಭಾವಿಸುತ್ತೇವೆ. ದೂರದಲ್ಲೆಲ್ಲೋ ಕಳೆದುಹೋದ ಅನುಭವ. ಆಗ ಜೋರಾಗಿ ಕೂಗುತ್ತೇವೆ. ಆದರೆ ಸತ್ಯವೇನು ಗೊತ್ತೇ? ಕತ್ತಲಿದ್ದ ಕಾರಣ ತಾಯಿ ಕಣ್ಣುಮುಚ್ಚಿದ್ದಾಳೆಂದು ತಪ್ಪು ಭಾವನೆಯಲ್ಲಿರುತ್ತೇವೆ.ಆಕೆಯನ್ನು ಕರೆದರೆ ಸಾಕು ಕಾಳಿ…! ಕಾಳಿ…! ತಾಯಿ ತನ್ನ ಕಣ್ಣುಗಳನ್ನು ಬಿಟ್ಟು ನೋಡುತ್ತಾಳೆ. ಆಕೆಯ ಭುಜಗಳಲ್ಲಿ ಮುಖವಿಟ್ಟರೆ, ಭಯ ದೂರವಾಗಿ ತಾಯಿಯ ಹೃದಯ ಬಡಿತ ಕೇಳುತ್ತದೆ…! ತಾಯಿ ಎಲ್ಲೆಡೆಯೂ ಇದ್ದಾಳೆ. ಅಲ್ಲವೇ?
ತಾಯಿ ಕಾಳಿ ಮಕ್ಕಳೊಂದಿಗೆ ಇನ್ನೊಂದು ರೀತಿಯ ಕಣ್ಣಾಮುಚ್ಚಾಲೆ ಆಡುತ್ತಾಳೆ. ಇದು ನೋಡಲು ಕಾಲ್ಪನಿಕ ಕಥೆಯಂತೆ ತೋರುತ್ತದೆ. ಕಾಳಿ ಬೇರೆ ಬೇರೆ ಜನರಲ್ಲಿ, ವಸ್ತುಗಳಲ್ಲಿ, ಅಥವಾ ಇನ್ನಾವುದಾರಲ್ಲಿಯೋ ಅಡಗಿಕೊಳ್ಳುತ್ತಾಳೆ. ತಾಯಿಯ ಕಣ್ಣುಗಳನ್ನು ನೀವು ಎಂದಾದರೂ ಯಾವ ರೂಪದಲ್ಲಾದರೂ ಕಾಣಬಹುದು. ಬೆಕ್ಕಿನ ಮರಿಯೊಂದಿಗೆ ಆಟವಾಡುತ್ತಿರುವಂತೆಯೋ, ಗೂಡಿನಿಂದ ಕೆಳಗೆ ಬೀಳುತ್ತಿರುವ ಹಕ್ಕಿಯನ್ನು ಹಿಡಿದುಕೊಂಡು ರಕ್ಷಿಸುತ್ತಿರುವಂತೆಯೋ ತಾಯಿಯ ದರ್ಶನವಾಗಬಹುದು. ಯಾರಿಗಾದರೂ ಏನಾದರೂ ಸಹಾಯದ ಅವಶ್ಯಕತೆಯಿದ್ದಲ್ಲಿ ಕಾಳಿ ನಮ್ಮನ್ನೆಲ್ಲಾ ಎಚ್ಚರಿಸಿ ಕರೆಯುತ್ತಾಳೆ. ಕಾಳಿ ಹೇಳುತ್ತಾಳೆ “ಒಂದು ಕಲ್ಲನ್ನು ತೆಗೆದುಕೊಂಡು ನೋಡು. ನಾನು ಅಲ್ಲಿದ್ದೇನೆ. ಮರದ ದಿಮ್ಮಿಯನ್ನು ಸೀಳಿ ನೋಡು… ಅಲ್ಲಿಯೂ ನಾನಿದ್ದೇನೆ” ನೀವು ಎಂದಾದರೂ ಕಲ್ಲನ್ನು ತೆಗೆದುಕೊಂಡು ಅಥವಾ ಮರದ ದಿಮ್ಮಿಯನ್ನು ಸೀಳಿ ಒಳಗೇನಿದೆ ಎಂದು ನೋಡಿದ್ದೀರಾ? ಅಲ್ಲಿ ದೇವರಿದ್ದಾನೆಂದು ಎಂದಾದರೂ ಯೋಚಿಸಿದ್ದೀರಾ? ಕಾಳಿ…! ನೀನೆಷ್ಟು ಸುಂದರ… ನಿನ್ನ ಕಣ್ಣಾಮುಚ್ಚಾಲೆ ಆಟ… ಓಹ್… ಕಾಳಿ… ಎಲ್ಲೆಲ್ಲೂ ನಿನ್ನದೇ ರೂಪ… ಎಲ್ಲೆಡೆಯೂ ನೀನಿದ್ದೀಯಾ…
ನಾವೆಲ್ಲಾ ಕಾಳಿಯ ಕರೆಗೆ ಓಗೊಡೋಣ. ನೆನಪಿಡಿ. ನಿಮ್ಮಿಂದ ಸಾಧ್ಯವೆನಿಸುವ ಯಾವುದೇ ಕೆಲಸದ ಅವಶ್ಯಕತೆಯಿದ್ದಾಗ ಕಾಳಿ ಕರೆ ನೀಡುತ್ತಾಳೆ. “ಇಲ್ಲಿ ನೋಡು ಮಗು” ಎನ್ನುತ್ತಾಳೆ. ಯಾರಾದರೂ ಪ್ರೀತಿಸುವ ವ್ಯಕ್ತಿ ಹತ್ತಿರ ಬಂದಾಗ “ನಾನಿಲ್ಲಿದ್ದೇನೆ” ಎನ್ನುತ್ತಾಳೆ.
ಕಾಳಿಯೇ ಅಕ್ಷರಶಃ ತಾಯಿ ಎಂದೆನ್ನುತ್ತಾ, ಪಕೃತಿಯ ಪ್ರತಿಯೊಂದರಲ್ಲೂ ಪ್ರಾಣಿ ,ಪಕ್ಷಿ, ಗಿಡ, ಮರ ಜಲಚರ, ಆಕಾಶ ನಕ್ಷತ್ರಗಳಾದಿಯಾಗಿ ಎಲ್ಲವನ್ನೂ ಮಗುವಿನಂತೆ ಆಕೆ ತಾಯಿಯಾಗಿ ಪ್ರೀತಿಸುತ್ತಾಳೆಯೋ ಹಾಗೆಯೇ ನಾವುಆ ಮೂಲಕ ತಾಯಿಯ ರೂಪವನ್ನ ಕಾಣಬಹುದು ಹಾಗೆಯೇ ಪ್ರತಿಯೊಂದನ್ನೂ ಪ್ರೀತಿಯಿಂದ ಕಾಣಬೇಕು.
ವೈರಾಗ್ಯದ ಜ್ವಾಲೆ ಪ್ರಜ್ವಲಿಸಿದಾಗ. ಮರಣವನ್ನೂ ಪ್ರೀತಿಸುವುದು ಕಷ್ಟವಾಗಲಾರದು. ಸಂಪೂರ್ಣ ತ್ಯಾಗದಿಂದಲೂ ಆನಂದವನ್ನು ಕಾಣಲು ಸಾಧ್ಯ.
ಕಾಳಿ ಮಾತೆಯನ್ನು ಕೇವಲ ಭಯಂಕರ ಮೂರ್ತಿಯೆಂದು ಪರಿಗಣಿಸದೆ ದಿವ್ಯ ಓಜಸ್ಸು ಎಂದು ಪರಿಗಣಿಸಿ ಆರಾಧಿಸುವುದು ಅತ್ಯುನ್ನತವಾದುದು.
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply