ಮನಪಾ ಹೇಳುತ್ತಿದೆ ದಿಲ್ ಮಾಂಗೇ “ಮೋರ್” ಅದಕ್ಕೆ ಅತಿಕ್ರಮಣ ತೆರವಾಗುತ್ತಿಲ್ಲ!
ಮೋರ್ ನವರು ತಮ್ಮ ಅತಿಕ್ರಮಣವನ್ನು ಹೇಗೆ ರಾಜಾರೋಷವಾಗಿ ಮಾಡುತ್ತಾರೆ ಎಂದರೆ ಇವತ್ತು, ನಿನ್ನೆ ಪೋಸ್ಟ್ ಮಾಡಿರುವ ಫೋಟೋಗಳನ್ನು ನೋಡಿ. ಇದು ಅಪ್ಪಟ ಅತಿಕ್ರಮಣ ಮತ್ತು ಅನಧಿಕೃತ ವ್ಯವಸ್ಥೆ ಎಂದು ಪಾಲಿಕೆಯಲ್ಲಿ ಕಸ ಗುಡಿಸುವವರಿಗೂ ಗೊತ್ತಿರುತ್ತದೆ. ಮಂಗಳೂರಿನ ಚಿಲಿಂಬಿಯಲ್ಲಿರುವ ಮೋರ್ ಮಾಡಿರುವ ಅತಿಕ್ರಮಣವನ್ನು ತೆರವುಗೊಳಿಸಲು ಕೆಲವು ಸಮಯದ ಮೊದಲು ಒಮ್ಮೆ ಮೇಯರ್ ಕವಿತಾ ಸನಿಲ್ ಆದೇಶ ಕೊಟ್ಟಿದ್ದರು. ಮೇಯರ್ ಸುಮ್ಮನೆ ಕುಳಿತು ಅತಿಕ್ರಮಣಕ್ಕೆ ಪ್ರೋತ್ಸಾಹ ಕೊಡುತ್ತಿದ್ದಾರೆ ಎಂದು ನಾನು ಹೇಳುತ್ತಿಲ್ಲ. ಆದರೆ ಅವರ ಆದೇಶದ ನಂತರ ಏನಾಯಿತು ಎನ್ನುವುದೇ ಇವತ್ತಿನ ಟ್ವಿಸ್ಟ್.
ಮೇಯರ್ ಆದೇಶದಂತೆ ಪಾಲಿಕೆಯ ಅಧಿಕಾರಿಗಳು ಅಕ್ರಮ ತೆರವುಗೊಳಿಸಲು ಜೆಸಿಬಿ ಹಿಡಿದುಕೊಂಡು ಹೋಗಿದ್ದರು. ಅಲ್ಲಿ ಹೋದಾಗ ಅಲ್ಲಿನ ವ್ಯವಸ್ಥಾಪಕರು “ನೀವೆ ತೆರವು ಕಾರ್ಯಾಚರಣೆ ಮಾಡಿದರೆ ಅಕ್ಕಪಕ್ಕದಲ್ಲಿ ನಮ್ಮ ಮಾನ ಮರ್ಯಾದೆ ಹರಾಜಾಗುತ್ತದೆ. ಅದರ ಬದಲು ನಮಗೆ ಒಂದು ವಾರ ಕಾಲಾವಕಾಶ ಕೊಡಿ. ಅಷ್ಟರ ಒಳಗೆ ನಾವೇ ತೆರವುಗೊಳಿಸಿ ಕೊಡುತ್ತೇವೆ” ಎಂದು ವಿನಂತಿ ಮಾಡಿಕೊಂಡಿದ್ದರು. ಸರಿ, ನಮಗೆ ಬಂದ ಕೆಲಸ ಉಳಿಯಿತು. ಇನ್ನು ಶರ್ಟ್, ಪ್ಯಾಂಟ್ ಧೂಳಿ ಮಾಡಿಕೊಳ್ಳುವುದೇಕೆ, ಆಯಿತು, ನಿಮ್ಮ ಮರ್ಯಾದೆಯ ಕಾಳಜಿ ನಮಗೆ ಇದೆ, ವಾರದೊಳಗೆ ತೆರವು ಮಾಡಿಕೊಡಿ ಎಂದು ಅಧಿಕಾರಿಗಳು ಹೇಳಿ ಎಂಕ ಪಣಂಬೂರಿಗೆ ಹೋದ ಹಾಗೆ ಹೋಗಿ ಬಂದಿದ್ದರು.
ಆ ಬಳಿಕ ಒಂದು ವಾರ ಆಯಿತು, ಹತ್ತು ದಿನ ಆಯಿತು, ಮೋರ್ ನವರು ಆರಾಮವಾಗಿದ್ದಾರೆ, ಬುಧವಾರದ ಸಂತೆ ಎಂದು ಇನ್ನಷ್ಟು ತರಕಾರಿ, ಹಣ್ಣು ಹಂಪಲು, ಇವರ ತಳ್ಳುವ ಗಾಡಿಗಳು ಹೊರಗೆ ಹರಡಿಕೊಳ್ಳುತ್ತಿವೆ ಬಿಟ್ಟರೆ ತೆರವುಗೊಳಿಸುವ ಸೂಚನೆಯೇ ಕಾಣುತ್ತಿಲ್ಲ ಎಂದಾಗ ಅಧಿಕಾರಿಗಳು ಮತ್ತೊಮ್ಮೆ ಜೆಸಿಬಿ ಹಿಡಿದು ಹೊರಟರು. ಈ ಬಾರಿ ತೆರವುಗೊಳಿಸಿಯೇ ಹಿಂತಿರುಗುತ್ತೇವೆ ಅಂತ “ದಂಡ”ಯಾತ್ರೆಗೆ ಹೊರಟರು. ಇನ್ನೇನೂ ಇವರು ಚಿಲಿಂಬಿ ತಲುಪಿ ಜೆಸಿಬಿ ನೆಟ್ಟಗೆ ನಿಂತು ಮೈ ಕೊಡವಿ ತನ್ನ 18 ಹಲ್ಲುಗಳನ್ನು ತೆರೆದು ಬಾಯಿ ಅಗಲ ಮಾಡಿ ಮೋರ್ ನವರ ಅತಿಕ್ರಮಣವನ್ನು ನುಂಗಿ ಬಿಡಬೇಕು ಎಂದು ತಯಾರಾಗುವಷ್ಟರಲ್ಲಿ ಅಪ್ಪಟ ಕಾಲಿವುಡ್ ಸಿನೆಮಾದಂತೆ ಒಂದು ಟ್ವಿಸ್ಟ್ ಬರುತ್ತದೆ.
ಇನ್ನೇನೂ ಪಾಲಿಕೆಯ ಪಟ್ಟಣ ಯೋಜನಾ ಅಧಿಕಾರಿಯವರು “ಎಕ್ಷನ್” ಎಂದು ಹೇಳಬೇಕು ಅಷ್ಟರಲ್ಲಿ ಅವರ ಮೊಬೈಲಿಗೆ ಒಂದು ಕರೆ ಬರುತ್ತದೆ. ಆ ಕಡೆಯಿಂದ ಮಾತನಾಡಿದ ವ್ಯಕ್ತಿ ತೆರವು ಗಿರವು ಮಾಡುವುದು ಏನೂ ಬೇಡಾ, ಅಲ್ಲಿಯೇ ನಿಲ್ಲಿಸಿ ಸೀದಾ ಹೊರಟು ಬನ್ನಿ ಎಂದು ಸೂಚನೆ ಕೊಡುತ್ತಾರೆ. ಆ ಕಡೆಯಿಂದ ಸೂಚನೆ ಕೊಟ್ಟ ಮಹಾನುಭಾವ ಯಾರು ಎಂದು ಆ ಅಧಿಕಾರಿಗೆ ಬಿಟ್ಟರೆ ಯಾರಿಗೂ ಗೊತ್ತಿಲ್ಲ. ಅವರು ತಕ್ಷಣ ಎಕ್ಷನ್ ಅನ್ನಬೇಕಾದರೂ ಪ್ಯಾಕ್ ಅಪ್ ಎಂದು ಹೇಳಿ ತಮ್ಮ ಗಾಡಿಯನ್ನು ತಿರುಗಿಸುತ್ತಾರೆ. ಜೆಸಿಬಿ ಬಾಯಿಯನ್ನು ಮುಚ್ಚಿ ಮತ್ತೆ ಹಿಂದಿರುಗುತ್ತದೆ. ಇದು ನಮ್ಮ ಪಾಲಿಕೆಯ ಅವಸ್ಥೆ. ದೊಡ್ಡವರ ಮೇಲೆ ಕೈ ಹಾಕಲು ಇವರು ಹೋಗುವುದಿಲ್ಲ. ಸಣ್ಣವರ ಮೇಲೆ ಕೈ ಹಾಕಿದರೆ ಕೈ ಹಾಕಿದರೆ ಕೇಳುವವರಿಲ್ಲ. ನನ್ನ ವಿನಂತಿ ಇಷ್ಟೇ, ಮೊನ್ನೆಯ ಪರಿಷತ್ ಸಭೆಯಲ್ಲಿ ಅನಧಿಕೃತ ಗೂಡಂಗಡಿಗಳನ್ನು ತೆರವುಗೊಳಿಸಲು ಸೂಚನೆ ಕೊಡಲಾಗಿದೆ. ಅಕ್ಟೋಬರ್ ನ ಪರಿಷತ್ ಸಭೆಯಲ್ಲಿ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸುವ ಸೂಚನೆ ಹೊರಗೆ ಬರಲಿ. ಎಷ್ಟು ಅಂತ ಆ ಗೂಡಂಗಡಿಗಳನ್ನೇ ತೆರವುಗೊಳಿಸುವುದು, ಪಾಲಿಕೆ ಕೂಡ ಬೆಳೆಯಬೇಕಲ್ಲ. ದೊಡ್ಡ ದೊಡ್ಡದಕ್ಕೆ ಕೈ ಹಾಕಿ.
ಇನ್ನು ಮೇಯರ್ ಒಂದು ವೇಳೆ ಧೈರ್ಯ ತೋರಿಸಿ ಅಕ್ರಮ ಕಟ್ಟಡಗಳ ತೆರವಿಗೆ ಸೂಚನೆ ಕೊಟ್ಟರೂ ಅವರ ಸೂಚನೆ ಜಾರಿಗೆ ಬರುವ ಮೊದಲೇ ಬೇರೆ ಸದಸ್ಯರು, ಅಧಿಕಾರಿಗಳು ತಮ್ಮ ಚಿಲ್ಲರೆ ಬುದ್ಧಿ ತೋರಿಸಿ ಮೇಲೆಯಿಂದ ಫೋನ್ ಬರುವ ಹಾಗೆ ಮಾಡಬೇಡಿ. ಒಂದು ವೇಳೆ ಹಾಗೆ ಯಾರಾದರೂ ಮಾಡಿದರೆ ಅವರನ್ನು ಸದಸ್ಯರು, ಅಧಿಕಾರಿಗಳು ಎಂದು ಕರೆಯುವ ಬದಲಿಗೆ ಬ್ರೋಕರ್ ಗಳು ಎಂದು ಕರೆಯುವುದು ಸೂಕ್ತ. ನಾನು ಬ್ರೋಕರ್ ಎಂಬ ಮರ್ಯಾದಸ್ಥ ಶಬ್ದವನ್ನೇ ಬಳಸುತ್ತಿದ್ದೇನೆ, ಬೇಕಾದರೆ ಪಿಂಪ್ ಎಂದು ಕೂಡ ಕರೆಯಬಹುದಿತ್ತು. ಆದರೆ ಒಂದು ಅವಕಾಶ ಇನ್ನೊಮ್ಮೆ ಕೊಟ್ಟು ನೋಡೋಣ ಎನ್ನುವ ಕಾರಣಕ್ಕಾಗಿ ಮರ್ಯಾದೆ ಇನ್ನು ಕೊಡುತ್ತಿದ್ದೇನೆ. ಪಾಲಿಕೆಯ ಸದಸ್ಯರು ಅನಧಿಕೃತ ಬ್ರೋಕರ್ ಗಳಾಗುವುದು ನಿಲ್ಲಿಸಿ. ಇಲ್ಲದಿದ್ರೆ ಪಾಲಿಕೆಯ ಒಳಗೆ ಒಂದು ಕೋಣೆ ಖಾಲಿ ಮಾಡಿ “ಬ್ರೋಕರ್ಸ್ ರೆಸ್ಟ್ ರೂಂ” ಅಂತ ಮಾಡಿ. ಆಗ ಜನರಿಗೂ, ಬಿಲ್ಡರ್ಸ್ ಗಳಿಗೂ ಅನುಕೂಲವಾಗುತ್ತದೆ. ಪುನ: ಹುಡುಕುವ ಅಗತ್ಯ ಬರುವುದಿಲ್ಲ!
Leave A Reply