ಅಮಿತ್ ಶಾ ಇವತ್ತಿನ ಮಂಗಳೂರು ಸಭೆ ರದ್ದುಪಡಿಸಿದ್ದು ಯಾಕೆ ಗೊತ್ತಾ?
ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾ ಅವರು ಮಂಗಳೂರಿನಲ್ಲಿ ಏರ್ಪಡಿಸಲಾಗಿದ್ದ ರಾಜ್ಯ ಕೋರ್ ಕಮಿಟಿ ಸಭೆ ಸಹಿತ ಮೂರು ಘಟಕಗಳೊಂದಿಗೆ ವಿಶೇಷ ಸಭೆ ಹಾಗೂ ಸಂಜೆ ಪ್ರಬುದ್ಧರೊಂದಿಗೆ ಸಭೆ ಎಲ್ಲವನ್ನು ರದ್ದುಗೊಳಿಸಿ ಸಡನ್ನಾಗಿ ದೆಹಲಿಗೆ ಹೋದರು ಎನ್ನುವುದಕ್ಕೆ ಕೆಲವು ಪತ್ರಿಕಾ ಮಾಧ್ಯಮಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಕ್ಷದೊಳಗಿರುವ ಗುಂಪುಗಾರಿಕೆಯೇ ಕಾರಣ ಎಂದು ಅಸಂಬದ್ಧವಾಗಿ ಬರೆಯುತ್ತಿವೆ. ಇನ್ನೊಂದು ಪತ್ರಿಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ರಾತ್ರಿ 1.30 ಕ್ಕೆ ಅಮಿತ್ ಶಾ ಬಂದಿಳಿಯುವಾಗ ಒಂದೂವರೆ ಸಾವಿರ ಜನ ಮಾತ್ರ ಇದ್ದ ಕಾರಣ ಅಮಿತ್ ಶಾ ಬೇಸರಗೊಂಡರು ಎಂದು ಬರೆದಿದೆ. ಗುಂಪುಗಾರಿಕೆ ಇರುವುದರಿಂದ ಒಂದು ಗುಂಪಿನವರು ಕಡಿಮೆ ಜನ ಬಂದಿದ್ದರು ಎಂದು ಬರೆದಿರುವ ವರದಿಗಾರರು ಇದ್ದಾರೆ. ಈ ಎರಡೂ ವಿಷಯಗಳು ಎಷ್ಟರಮಟ್ಟಿಗೆ ಸತ್ಯಕ್ಕೆ ದೂರ ಎನ್ನುವುದು ಬಿಜೆಪಿಯ ಮುಖಂಡರಿಗೆ ಗೊತ್ತಿದೆ.
ಮೊದಲನೆಯದಾಗಿ ಒಂದು ಜಿಲ್ಲೆಯಲ್ಲಿ ತಾನು ಸಭೆ ಮಾಡಲು ತೀರ್ಮಾನಿಸಿರುವಾಗ ಅಲ್ಲಿ ಗುಂಪುಗಾರಿಕೆ ಇದೆ ಎನ್ನುವ ಕಾರಣಕ್ಕೆ ಸಭೆ ಮಾಡುತ್ತಿಲ್ಲ ಎಂದು ಹೇಳಲು ಅಮಿತಾ ಶಾ ಅವರು ಒಂದು ಬ್ಲಾಕಿನ ಅಧ್ಯಕ್ಷರು ಅಲ್ಲ. ಅವರು ರಾಷ್ಟ್ರೀಯ ಅಧ್ಯಕ್ಷರು. ಗುಂಪುಗಾರಿಕೆ ಇಲ್ಲದಂತಹ ಜಿಲ್ಲೆಯಲ್ಲಿ ಮಾತ್ರ ತಾನು ಸಭೆ ನಡೆಸುತ್ತೇನೆ, ಯಾಕೆಂದರೆ ಅಲ್ಲಿ ಪಕ್ಷದ ಸಭೆ ನಡೆಸುವುದು ಸುಲಭ ಎಂದು ಅವರು ಅಂದುಕೊಂಡಿದ್ದರೆ ಅವರು ಉತ್ತರ ಪ್ರದೇಶದಲ್ಲಿ, ಮಧ್ಯಪ್ರದೇಶದಲ್ಲಿ, ರಾಜಸ್ಥಾನದಲ್ಲಿ, ಗುಜರಾತಿನಲ್ಲಿ ಪಕ್ಷವನ್ನು ಈ ಪರಿ ನಡೆಸಲು ಆಗುತ್ತಿತ್ತಾ? ಉತ್ತರ ಪ್ರದೇಶದಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಕನಸಿನ ಮಾತು ಎಂದು ಎಲ್ಲರೂ ಅಂದುಕೊಂಡಾಗ ಅಲ್ಲಿ ರಾತ್ರಿ ಹಗಲು ಕುಳಿತು ರಣತಂತ್ರ ಮಾಡಿ ಭರ್ಜರಿ ಬಹುಮತ ತಂದು ಕೊಟ್ಟವರು ಅಮಿತ್ ಶಾ. ಪಕ್ಷ ಉಸಿರಾಡಲು ಕಷ್ಟಪಡುವಂತಹ ಸ್ಥಳದಲ್ಲಿ ಕುಳಿತು ಸಭೆ ನಡೆಸಿ ಅಧಿಕಾರಕ್ಕೆ ಹೇಗೆ ಏರುವುದು ಎನ್ನುವುದನ್ನು ಅವರಿಂದ ಕಲಿತುಕೊಳ್ಳಬೇಕು. ಹಾಗಿರುವಾಗ ಮಂಗಳೂರಿನಲ್ಲಿ ಗುಂಪುಗಾರಿಕೆ ಇದೆ, ನಾನು ಬರಲ್ಲ ಎಂದು ಹೇಳುತ್ತಾರೆ ಮತ್ತು ಅದನ್ನು ಪತ್ರಿಕೆಗಳು ಮುದ್ರಿಸುತ್ತವೆ ಎಂದರೆ ಬರೆದವರು ಪತ್ರಕತೃರು ಎನ್ನುವುದೇ ಡೌಟು.
ಇನ್ನು ರಾತ್ರಿ 1.30 ಕ್ಕೆ ಅಮಿತಾ ಶಾ ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವಾಗ ಎರಡು ಸಾವಿರ ಜನ ಕೂಡ ಇರಲಿಲ್ಲ ಎನ್ನುವುದು ಅಮಿತಾ ಶಾ ಕಾರ್ಯಕ್ರಮ ರದ್ದಾಗಲು ಕಾರಣ ಎಂದು ಬರೆಯಲಾಗಿದೆ. ವಿಷಯ ಏನೆಂದರೆ ಅಮಿತಾ ಶಾ ಅವರ ಸ್ವಾಗತಕ್ಕೆ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಿಂದ ಇಂತಿಂಷ್ಟು ಜನ ಬರಬೇಕು ಎನ್ನುವ ಸೂಚನೆ ಜಿಲ್ಲಾಧ್ಯಕ್ಷರು ಕೊಟ್ಟಿರಲಿಲ್ಲ. ಅಲ್ಲಿ ತಡರಾತ್ರಿವರೆಗೂ ಕಾದು ಅಮಿತ್ ಶಾ ಅವರನ್ನು ಕರ್ನಾಟಕದ ಗಡಿಯವರೆಗೆ ಬೀಳ್ಕೊಡಲು ಬಂದವರು ತಮ್ಮ ಸ್ವಹಿತಾಸಕ್ತಿಯಿಂದ ಬಂದವರು ಬಿಟ್ಟರೆ ಆದೇಶ ಪಾಲಿಸಲು ಬಂದವರಲ್ಲ. ಸಂಘದ ಗರಡಿಯಿಂದ ಬಂದವರು ತಮ್ಮ ಸ್ವಾಗತಕ್ಕೆ ದೊಡ್ಡ ಸಂಖ್ಯೆಯಲ್ಲಿ ಸಾವಿರಾರು ಜನ ವಿಮಾನ ನಿಲ್ದಾಣಕ್ಕೆ, ರೈಲು ನಿಲ್ದಾಣಕ್ಕೆ ಬರಬೇಕೆಂದು ನಿರೀಕ್ಷಿಸುವುದಿಲ್ಲ. ಹಾಗೆ ಜನ ಒಂದಿಷ್ಟು ಕಡಿಮೆಯಾದರು ಎನ್ನುವ ಕಾರಣಕ್ಕೆ ಇಡೀ ದಿನದ ಪ್ರಮುಖ ಕಾರ್ಯಕ್ರಮಗಳನ್ನು ರದ್ದು ಮಾಡಲ್ಲ. ಸ್ವಾಗತಕ್ಕೆ ಭರ್ಜರಿ ತಯಾರಿ ಆಗಬೇಕು ಎಂದು ಬಯಸುವುದು ಕಾಂಗ್ರೆಸ್ ಹೈಕಮಾಂಡ್.
ವಿಷಯ ಏನೆಂದರೆ ಕರ್ನಾಟಕಕ್ಕಿಂತ ಮೊದಲು ಅಮಿತ್ ಶಾ ಅವರ ಸ್ವರಾಜ್ಯ ಗುಜರಾತಿನಲ್ಲಿ ವಿಧಾನಸಭಾ ಚುನಾವಣೆ ಇದೆ. ವಡೋದರದಲ್ಲಿ ಚುನಾವಣಾ ತಂತ್ರಗಾರಿಕೆಯಲ್ಲಿ ಬಿಝಿಯಾಗಿದ್ದ ಶಾ ಅಲ್ಲಿಂದ ಅಹಮದಾಬಾದ್ ಗೆ ಬಂದು ಅಲ್ಲಿಂದ ವಿಶೇಷ ವಿಮಾನದಲ್ಲಿ ಮಂಗಳೂರಿಗೆ ಬಂದು ಯಾವುದೇ ಕಾರಣಕ್ಕೂ ಕೇರಳದ ಕಾರ್ಯಕ್ರಮಕ್ಕೆ ದಕ್ಕೆಯಾಗಬಾರದು ಎಂದೇ ನಿಶ್ಚಯಿಸಿದ್ದರು.
ಕೇರಳದಲ್ಲಿ ಅಕ್ಟೋಬರ್ 3 ರಂದು ಬೆಳಿಗ್ಗೆ ಪ್ರಮುಖರೊಂದಿಗೆ ಸಭೆ ನಡೆಸಿದ ಶಾ ಮಧ್ಯಾಹ್ನ ಮೂರು ಗಂಟೆಗೆ ಪಾದಯಾತ್ರೆ ಪ್ರಾರಂಭಿಸಿದರೆ ಎಷ್ಟು ಜನರು ತಾನೆ ಬರುತ್ತಾರೆ ಎಂದು ಪ್ರಾರಂಭದಲ್ಲಿ ಅಸಮಾಧಾನದಿಂದಲೇ ಇದ್ದರು. ಆದರೆ ಪಾದಯಾತ್ರೆ ಪ್ರಾರಂಭವಾಗುವಾಗ ಕಮ್ಯೂನಿಸ್ಟರ ಕಲ್ಲು ತೂರಾಟದ ನಡುವೆಯೂ ಸುಮಾರು ಎಂಟು ಸಾವಿರ ಜನ ಭಾಗವಹಿಸಿದ್ದು ನೋಡಿ ಸ್ವತ: ಹರ್ಷಚಿತ್ತರಾದ ಅಮಿತಾ ಶಾ ಒಂದು ಘಳಿಗೆ ಗುಜತಾತಿನ ಚುನಾವಣಾ ಒತ್ತಡವನ್ನು ಕೂಡ ಮರೆತುಬಿಟ್ಟರು. ಆದರೆ ಅಕ್ಟೋಬರ್ ನಾಲ್ಕರಂದು ಅವರು ದೆಹಲಿಯಲ್ಲಿ ಗುಜರಾತ್ ಚುನಾವಣೆಗೆ ಸಂಬಂಧಿಸಿದಂತೆ ಪ್ರಮುಖ ಸಭೆಯೊಂದನ್ನು ತುರ್ತಾಗಿ ನಡೆಸಲೇಬೇಕಾದ ಕಾರಣ ಅವರಿಗೆ ಅದನ್ನು ಮುಂದೂಡಿದರೆ ಪಕ್ಷದ ಹಿತದೃಷ್ಟಿಯಿಂದ ಗುಜರಾತಿನಲ್ಲಿ ಎದುರಾಗಬಹುದಾದ ದೊಡ್ಡ ಸವಾಲೊಂದನ್ನು ನಿರ್ಲಕ್ಷಿಸಿದಂತೆ ಆಗುತ್ತದೆ ಎಂದು ಅನಿಸಿ ಅವರು ತಕ್ಷಣ ದೆಹಲಿಗೆ ಹೊರಟು ಹೋಗಿದ್ದಾರೆ.
ಗುಜರಾತ್ ಚುನಾವಣೆಯನ್ನು ಒಮ್ಮೆ ದಡ ಮುಟ್ಟಿಸಿದರೆ ನಂತರದ ಮೂರುವರೆ ತಿಂಗಳು ಶಾ ಚಿತ್ತ ಕರ್ನಾಟಕ ಎನ್ನುವುದು ಪ್ರತಿಯೊಬ್ಬ ಸಂಘ ಪರಿವಾರದ ಸದಸ್ಯನಿಗೂ ಗೊತ್ತಿರುವ ಬಹಿರಂಗ ರಹಸ್ಯ. ಹಾಗಂತ ರಾಷ್ಟ್ರಾಧ್ಯಕ್ಷರು ಮಂಗಳೂರಿಗೆ ಸದ್ಯ ಬರುವುದೇ ಇಲ್ಲ ಎಂದಲ್ಲ. ಮುಂದಿನ ಹತ್ತು ದಿನಗಳೊಳಗೆ ಬರುವ ದಿನಾಂಕವನ್ನು ತಿಳಿಸುತ್ತೇನೆ ಎಂದು ಹೇಳಿಯೇ ಅಮಿತ್ ಶಾ ದೆಹಲಿಯಿಂದ ಇವತ್ತು ಮತ್ತೆ ಮಂಗಳೂರಿಗೆ ಬಂದು ಕಣ್ಣೂರಿಗೆ ಇಂದು ತೆರಳಲಿದ್ದಾರೆ!
Leave A Reply