ಸಿದ್ದರಾಮಯ್ಯನವರೇ ಈಗೇಕೆ ಬ್ರಾಹ್ಮಣರು ನೆನಪಾದರು?
ರಾಜ್ಯ ಈವರೆಗೆ ಕಂಡ ಬ್ರಾಹ್ಮಣ ಮಹಾದ್ವೇಷಿ ಮುಖ್ಯಮಂತ್ರಿ ಎಂಬ ಕುಖ್ಯಾತಿ ಗಳಿಸಿರುವ, ಅಧಿಕಾರಕ್ಕೆ ಬಂದಾಗಿನಿಂದಲೂ ಜಾತಿಯ ಹೆಸರಿನಲ್ಲಿಯೇ ಯೋಜನೆ ರೂಪಿಸುತ್ತ, ಜಾತಿ ಆಧಾರಿತವಾಗಿಯೇ ಆಡಳಿತ ನಡೆಸುತ್ತ, ಜಾತಿ ಅತಿ ಸರಕಾರ ನೀಡಿರುವ ಮುಖ್ಯಮಂತ್ರಿ ಎನಿಸಿಕೊಂಡಿರುವವರು ಸಿದ್ದರಾಮಯ್ಯ.
ಆದರೆ ಅವರಿಗೀಗ ದಿಢೀರ್ ಬ್ರಾಹ್ಮಣ ಜಾತಿಯ ಮೇಲೆ ಪ್ರೀತಿ ಉಕ್ಕಿಹರಿಯುತ್ತಿದೆ. ಈ ಪ್ರೀತಿಗೆ ಕಾರಣವೆಂದರೆ ಮೈಸೂರಿನಲ್ಲಿ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಘಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕರೆದು ಸನ್ಮಾನ ಮಾಡಿದೆ. ಯಾಕೆ ಸನ್ಮಾನ ಮಾಡಲಾಗಿದೆ? ಬ್ರಾಹ್ಮಣರನ್ನು ಅತ್ಯಂತ ತುಚ್ಛವಾಗಿ ಕಂಡಿದ್ದಕ್ಕೇ? ಬ್ರಾಹ್ಮಣರನ್ನು ದ್ವೇಷಿಸಿದ್ದಕ್ಕೇ? ರಾಜ್ಯದಲ್ಲಿ ಜಾತಿ ವ್ಯವಸ್ಥೆಯನ್ನು ಇನ್ನಷ್ಟು ದೃಢಗೊಳಿಸಿದ್ದಕ್ಕೆ? ಈ ಪ್ರಶ್ನೆಗಳಿಗೆ ಬ್ರಾಹ್ಮಣ ಮಹಾಸಭಾದ ಜಿಲ್ಲಾ ಅಧ್ಯಕ್ಷ ಭಾನುಪ್ರಕಾರ ಶರ್ಮರೇ ಉತ್ತರಿಸಬೇಕು.
ಬ್ರಾಹ್ಮಣರ ಒಳಗಿನ ಜಗಳದ ಲಾಭ ಪಡೆಯುತ್ತಿರುವ ಸಿದ್ದರಾಮಯ್ಯ ಈಗ ಬ್ರಾಹ್ಮಣ ಪರ ಪ್ರೀತಿ ಪ್ರಕಟಿಸುತ್ತಿದ್ದಾರೆ. ಒಡೆದು ಆಲುವ ನೀತಿ ಎಷ್ಟು ಚೆನ್ನಾಗಿ ಕೆಲಸ ಮಾಡುತ್ತದೆ ನೋಡಿ. ಇತ್ತೀಚೆಗೆ ಮೈಸೂರು ಬ್ರಾಹ್ಮಣ ಸಂಘದಲ್ಲಿ ಒಡಕುಂಟಾಗಿದೆ. ಡಿ.ಟಿ. ಪ್ರಕಾಶ್ ಎಂಬವರು ಬ್ರಾಹ್ಮಣ ಘಟಕದ ಜಿಲ್ಲಾಧ್ಯಕ್ಷರಾಗಿದ್ದಾರೆ. ಅಂದಿನಿಂದ ಭಾನುಪ್ರಕಾಶ ಶರ್ಮಾ ಅವರು ಇನ್ನೊಂದು ಘಟಕ ಕಟ್ಟಿಕೊಂಡಿದ್ದಾರೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಬ್ರಾಹ್ಮಣರಾದ ದಿನೇಶ್ ಗುಂಡೂರಾವ್ ಹಾಗೂ ಭಾನುಪ್ರಕಾಶ್ ಆಪ್ತರು. ಈಗ ನಿಮಗೆ ಮೈಸೂರಿನಲ್ಲಿ ಬ್ರಾಹ್ಮಣರು ಮುಖ್ಯಮಂತ್ರಿಗೆ ಸನ್ಮಾನ ಮಾಡಿದ್ದೇಕೆ ಎಂಬುದು ಗೊತ್ತಾಗಿರಬಹುದು.
ಆದರೆ ಬುದ್ಧಿ ಇರುವ ಯಾವ ಬ್ರಾಹ್ಮಣನೂ ಮುಖ್ಯಮಂತ್ರಿಯನ್ನು ಸನ್ಮಾನಿಸುವ ಕಲಸಕ್ಕೆ ಖಂಡಿತ ಮುಂದಾಗಲಾರ ಎಂಬುದು ಎಲ್ಲ ಬ್ರಾಹ್ಮಣರಿಗೂ ಗೊತ್ತು. ಯಾಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ರಾಹ್ಮಣರಿಗೆ ಏನೂ ಮಾಡಿಲ್ಲ. ಮಾಡಬೇಕೆಂದು ಯಾರೂ ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ. ಆದರೆ ಅವರು ಸಮಾಜದಲ್ಲಿ ಬ್ರಾಹ್ಮಣ ದ್ವೇಷ ಹೆಚ್ಚುವಂತೆ ಮಾಡಿದ್ದಾರೆ. ಜಾತ್ಯತೀತ ಎಂದು ಹೇಳಿಕೊಂಡು ಜಾತಿ ವ್ಯವಸ್ಥೆ ಇನ್ನಷ್ಟು ಗಟ್ಟಿಯಾಗುವಂತೆ ಮಾಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಲಿಂಗಾತ ಧರ್ಮದಲ್ಲಿ ಒಡಕುಂಟು ಮಾಡಿದ್ದಾರೆ. ಅದೇ ರಾಜಕೀಯ ಲಾಭಕ್ಕಾಗಿ ಜಾತಿವ್ಯವಸ್ಥೆಯನ್ನು ಗಟ್ಟಿಗೊಳಿಸಿದ್ದಾರೆ. ಬ್ರಾಹ್ಮಣರ ಸ್ವಾಮೀಜಿ ಎಂಬ ಕಾರಣಕ್ಕೆ ಶ್ರೀ ರಾಘವೇಶ್ವರ ಸ್ವಾಮೀಜಿಗೆ ಇನ್ನಿಲ್ಲದಂತೆ ತೊಂದರೆ, ಕಾಟಕೊಟ್ಟಿದ್ದಾರೆ. ಮಠಕ್ಕೆ ಆಡಳಿತಾಧಿಕಾರಿ ನೇಮಿಸಲು ಹವಣಿಸಿದ್ದಾರೆ.
ಇನ್ನೇನು ಮಾಡಬೇಕು ಅವರು ಬ್ರಾಹ್ಮಣರಿಗೆ? ಇದಕ್ಕೇ ಅವರನ್ನು ಕರೆದು ಸನ್ಮಾನಿಸಿದ್ದಾ?
ಅಧಿಕಾರಕ್ಕೆ ಬಂದು ಇಷ್ಟು ದಿನ ಬ್ರಾಹ್ಮಣರನ್ನು ನೆನಪೂ ಮಾಡಿಕೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಬ್ರಾಹ್ಮಣರಿಂದ ಸನ್ಮಾನ ಸ್ವೀಕರಿಸಿದ ನಂತರ, ದಿಢೀರ್ ಬ್ರಾಹ್ಮಣ ಪ್ರೀತಿ ಉದ್ಭವಿಸಿಬಿಟ್ಟಿದೆ. ಅಲ್ಲಿಂದ ಬಂದ ನಂತರ ಈ ಬಗ್ಗೆ ಅರು ಟ್ವೀಟ್ ಮಾಡಿದ್ದಾರೆ.
ಒಂದು ಟ್ವೀಟ್‌ನಲ್ಲಿ “ಬ್ರಾಹ್ಮಣ ಸಮುದಾಯದ ಬಡವರ ಉದ್ಯೋಗ, ಶಿಕ್ಷಣ, ಮತ್ತು ಆರ್ಥಿಕ ಅಭಿವೃದ್ಧಿಗೆ ಕ್ರಮ. ಎಲ್ಲ ಜಾತಿ ಮತ್ತು ಧರ್ಮದ ಬಡವರ ಅಭಿವೃದ್ಧಿಯಿಂದ ಸಮ ಸಮಾಜ ನಿರ್ಮಾಣ’ ಎಂದಿದ್ದಾರೆ. ಆದರೆ ಬ್ರಾಹ್ಮಣರಲ್ಲೂ ಇರುವ ಬಡವರ ಅಭಿವೃದ್ಧಿಗೆ ಯಾವ ಕ್ರಮ ಕೈಗೊಂಡಿದ್ದಾರೆ? ಅದನ್ನು ಅವರು ಹೇಳಿಲ್ಲ. ಮಾಡಿದ್ದರೆ ತಾನೇ ಹೇಳೋಕೆ? ನಾಲ್ಕು ವರ್ಷದ ಆಡಳಿತದಲ್ಲಿ ಯಾವ ಯೋಜನೆ ಘೋಷಣೆ ಮಾಡಿದ್ದಾರೆ? ನಾಲ್ಕು ಬಜೆಟ್‌ನಲ್ಲಿ ಒಂದು ಬಾರಿಯಾದರೂ ಬ್ರಾಹ್ಮಣರಲ್ಲೂ ಬಡವರಿದ್ದಾರೆ ಎಂಬ ಒಂದು ಮಾತನ್ನಾದರೂ ಹೇಳಿದ್ದೀರಾ ಸಿದ್ದರಾಮಯ್ಯನವರೇ?
ಇನ್ನೊಂದು ಟ್ವೀಟ್‌ನಲ್ಲಿ “ನಾನು ಯಾವ ಜಾತಿ- ಧರ್ಮದ ವಿರೋಧಿಯೂ ಅಲ್ಲ. ಅರ್ಚಕರ ಗೌರವ ಧನ ೨೦೦೦-೪೦೦೦ ರೂ.ಗೆ ಹೆಚ್ಚಿಸಿದ್ದೇನೆ. ಬ್ರಾಹ್ಮಣ ಸಮುದಾಯ ಭವನಗಳ ಅಭಿವೃದ್ಧಿಗೆ ಅನುದಾನ ನೀಡಿದ್ದೇನೆ’ ಎಂದಿದ್ದಾರೆ. ಪೂಜಾರಿಗಳ ಗೌರವಧನವನ್ನು ೨೦೦೦ ರು. ಹೆಚ್ಚಿಸಿದ್ದೇ ಬ್ರಾಹ್ಮಣ ಸಮುದಾಯಕ್ಕೆ ಮಾಡಿದ ಮಹಾ ಉಪಕಾರ ಎಂಬ ಧಾಟಿಯಲ್ಲಿ ಮಾತನಾಡಿದ್ದಾರೆ. ಅದು ದೊಡ್ಡ ಉಪಕಾರವೇ? ದೇವಸ್ಥಾನಗಳನ್ನು ಸ್ವಾಧೀನಕ್ಕೆ ಪಡೆದ ಸರಕಾರಕ್ಕೆ, ಅಲ್ಲಿನ ಕಾಣಿಕೆ ಹಣ ನುಂಗುವ ಸರಕಾರಕ್ಕೆ, ಪೂಜಾರಿಗಳಿಗೆ ತಿಂಗಳಿಗೆ ೨೦೦೦ ಕೊಡಲು ನಾಚಿಕೆ ಆಗುವುದಿಲ್ಲವೇ? ಕನಿಷ್ಠ ವೇತನ ಎಂದೆಲ್ಲ ಪುಂಗುವ ಸರಕಾರಕ್ಕೆ, ಸಮಾಜವಾದಿಗಳಿಗೆ ಇದು ಗೌರವ ಕೊಡುವ ಸಂಗತಿಯೇ? ಸರ್ಕಾರ ತನ್ನ ಮರ್ಯಾದೆ ಉಳಿಸಿಕೊಳ್ಳಲು ೨೦೦೦ ರು. ಗೌರವ ಧನ ಹೆಚ್ಚಿಸಿದೆ. ಅದನ್ನೇ ಬ್ರಾಹ್ಮಣರಿಗೆ ಕೊಟ್ಟ ದೊಡ್ಡ ಭಿಕ್ಷೆ ಎಂಬಂತೆ ಟ್ವೀಟ್ ಮಾಡುತ್ತಾರೆ. ಸಿದ್ದರಾಮಯ್ಯನವರೇ ಹೇಳಿ, ಕೇವಲ ೪೦೦೦ ರು.ಗಳಲ್ಲಿ ಯಾರಾದರೂ ಜೀವನ ಮಾಡಲು ಸಾಧ್ಯವೇ? ದೇವಸ್ಥಾನಗಳನ್ನು ಸ್ವಾಧೀನಕ್ಕೆ ಪಡೆದ ಸರ್ಕಾರ ಪೂಜಾರಿಗಳನ್ನು ನಡೆಸಿಕೊಳ್ಳುವ ರೀತಿಯೇ ಇದು?
ದೇವಸ್ಥಾನದ ಪೂಜಾರಿಗಳಿಗೆ ಗೌರವಧನ ಹೆಚ್ಚಿಸಿದ್ದನ್ನೇ ಮಹಾಸಾಧನೆ ಎಂಬಂತೆ ಹೇಳುವ ಮುಖ್ಯಮಂತ್ರಿಗಳು, ಇದೇ ಸರ್ಕಾರ ದಲಿತರನ್ನು ದೇವಸ್ಥಾನದ ಪೂಜಾರಿಗಳಾಗಿ ನೇಮಿಸಲು ಯೋಜನೆ ರೂಪಿಸಿದ್ದನ್ನು ಮರೆತುಬಿಟ್ಟಿರಬೇಕು. ಅದು ಬ್ರಾಹ್ಮಣರ ಮೇಲಿನ ಪ್ರೀತಿಯಿಂದಲೇ ರೂಪಿಸಿದ ಯೋಜನೆಯೇ ಮುಖ್ಯಮಂತ್ರಿಗಳೇ? ಗೌರವಧನ ಹೆಚ್ಚಿಸಿದ್ದೇ ಮಹಾಉಪಕಾರ ಎನ್ನುವ ನೀವು ದಲಿತ ಪೂಜಾರಿಗಳ ನೇಮಕ ಯೋಜನೆ ಯಾವ ಉದ್ದೇಶದ್ದು ಎಂಬುದನ್ನೂ ವಿವರಿಸಬೇಕಲ್ಲವೇ?
ಇನ್ನೊಂದು ಟ್ವೀಟ್ನಲ್ಲಿ “ಎಲ್ಲ ಜಾತಿ-ಧರ್ಮಗಳನ್ನು ಗೌರವಿಸುತ್ತೇನೆ. ಜಾತಿ- ಧರ್ಮ ನೋಡಿ ಕಾರ್ಯಕ್ರಮ ರೂಪಿಸಿಲ್ಲ. ಬಡವರ ನೋಡಿ ಕಾರ್ಯಕ್ರಮ ರೂಪಿಸಿ, ಅನುಷ್ಠಾನಗೊಳಿಸಿದ್ದೇನೆ’ ಎಂದಿದ್ದಾರೆ. ಯಾವ ಮುಖ ಇಟ್ಟುಕೊಂಡು ಹೀಗೆ ಹೇಳುತ್ತೀರಿ ಮುಖ್ಯಮಂತ್ರಿಗಳೇ?
ಪ್ರಾಥಮಿಕ ಶಾಲೆಯಲ್ಲಿ ‘ಕೇವಲ ದಲಿತ ಮಕ್ಕಳಿಗೆ ಮಾತ್ರ ಪ್ರವಾಸ’ ಯೋಜನೆ ರೂಪಿಸಿದ್ದು ಮರೆತುಹೋಯಿತೇ? ಎಲ್ಲ ಜಾತಿ- ದರ್ಮದ ಮಕ್ಕಳಿಗೂ ಪ್ರವಾಸ ಹೋಗುವ ಆಸೆ ಇರುತ್ತದೆ ಎಂಬುದು ನಿಮ್ಮ ತಲೆಗೆ ಬರಲಿಲ್ಲವೇ? ಬ್ರಾಹ್ಮಣರಲ್ಲೂ ಬಡವರಿದ್ದಾರೆ ಎಂದು ಈಗ ಹೇಳುವ ನಿಮಗೆ, ಪ್ರವಾಸ ಯೋಜನೆ ರೂಪಿಸುವಾಗ ಶಾಲೆಯಲ್ಲಿ ಬೇರೆ ಬೇರೆ ಜಾತಿಯ ಬಡವರ ಮಕ್ಕಳೂ ಕಲಿಯುತ್ತಿದ್ದಾರೆ ಎಂಬುದು ಗೊತ್ತಿರಲಿಲ್ಲವೇ? ಅಷ್ಟು ಸಣ್ಣ ಮಕ್ಕಳ ಮನಸಲ್ಲೂ ಜಾತಿಯ ವಿಷ ಬೀಜ ಬಿತ್ತಿ, ಎಕ್ಕುಟ್ಟಿಸಿಬಿಡೋಣ ಎಂದು ಯೋಜನೆ ರೂಪಿಸಿದಿರಾ? ಆಗ ಎಲ್ಲಿ ಹೋಗಿತ್ತು ನಿಮ್ಮ ಈ “ಎಲ್ಲ ಜಾತಿ-ಧರ್ಮಗಳ’ ಪರವಾದ ನಿಲುವು?
ಒಂದು ಜಾತಿಯ ಗುತ್ತಿಗೆದಾರರಿಗೆ ೫೦ ಸಾವಿರ ರು. ಕೆಳಗಿನ ಕಾಮಗಾರಿಯಲ್ಲಿ ಮೀಸಲು ಕಲ್ಪಿಸಿದ್ದು ನಿಮ್ಮದೇ ಸರಕಾರವಲ್ಲವೇ? ಹಾಗೊಂದು ಯೋಜನೆ ರೂಪಿಸಿದ್ದು ನಿಮಗೆ ಮರೆತೇ ಹೋಗಿದೆಯೇ? ದಲಿತರು ತರುವ ಹಾಲಿಗೆ ೨ ರು. ಹೆಚ್ಚು ನೀಡುವುದಾಗಿ ಹೇಳಿದ್ದು ನಿಮ್ಮದೇ ಸರಕಾರವಲ್ಲವೇ? ಹಾಲಿನಲ್ಲೂ ಜಾತಿ ಹುಡುಕಿ ಕೀಳುಮಟ್ಟದ ರಾಜಕಾರಣಕ್ಕಿಳಿದಿದ್ದು ನೀವೇ ಅಲ್ಲವೇ? ನಿಮ್ಮ ದೃಷ್ಟಿಯಲ್ಲಿ ಅದೂ “ಎಲ್ಲ ಜಾತಿ- ಧರ್ಮವನ್ನು ಗೌರವಿಸುವ’ ವ್ಯಕ್ತಿ ಕೈಗೊಳ್ಳಬಹುದಾದ ತೀರ್ಮಾನವೇ? ಬಹುಶಃ ಜಗತ್ತಿನಲ್ಲಿಯೇ ದಲಿತರು ತಂದ ಹಾಲು, ಬೇರೆ ಜಾತಿಯವರು ತಂದ ಹಾಲು ಎಂದು ನೋಡಹೊರಟ ಕುತ್ಸಿತ ಮನಸ್ಸು ನಿಮಗೆ ಮಾತ್ರ ಸಾಧ್ಯವೇನೊ.
ಈ ಎಲ್ಲ ಯೋಜನೆಗಳು ಜಾತ್ಯತೀತ ಸರಕಾರವೊಂದು ರೂಪಿಸಬಹುದಾದ ಯೋಜನೆಗಳೇ? ಯಾಕೆ ಸುಮ್ಮನೆ ಜಾತ್ಯತೀತ ಎಂದು ಹೇಳಿಕೊಳ್ಳುತ್ತೀರಿ? ಎಲ್ಲ- ಜಾತಿ ಧರ್ಮಗಳ ಪರ ಎಂದು ಹೇಳಿಕೊಳ್ಳುತ್ತೀರಿ? ಅದರ ಬದಲು ಜಾತಿ ಅತಿ ಸರಕಾರ ಎಂದು ಹೇಳಿಕೊಳ್ಳಿ. ಯಾರೂ ಬೇಸರ ಮಾಡಿಕೊಳ್ಳುವುದಿಲ್ಲ. ಅಧಿಕಾರದಲ್ಲಿದ್ದಷ್ಟೂ ದಿನ ಜಾತಿ, ಜಾತಿ ಎಂದು ಸಾಯುತ್ತಿದ್ದ ನೀವು ಈಗ ಚುನಾವಣೆ ಹತ್ತಿರಬರುತ್ತಿದ್ದಂತೆ “ನಾನು ಯಾವುದೇ ಜಾತಿ-ಧರ್ಮದ ವಿರೋಧಿಯಲ್ಲ’ ಎನ್ನುತ್ತಿದ್ದಿರಿ. ಒಬ್ಬ ಮುಖ್ಯಮಂತ್ರಿಗೆ “ನಾನು ಯಾವುದೇ ಜಾತಿ- ಧರ್ಮದ’ ವಿರೋಧಿಯಲ್ಲ ಎಂದು ಸ್ಪಷ್ಟೀಕರಣ ಕೊಡುವ ಸ್ಥಿತಿ ಬಂದಿದ್ದೇಕೆ? ಅದನ್ನು ನೀವು ಯೋಚಿಸಿದ್ದೀರಾ? ಹಾಗೆ ಹೇಳಿಕೊಳ್ಳುವ ಸ್ಥಿತಿ ಬಂದಿದೆ ಎಂದರೆ ನೀವು ಹಾಗೆ ವರ್ತಿಸಿದ್ದೀರಿ ಎಂಬುದು ನಿಮ್ಮ ಅರಿವಿಗೆ ಎಂದಾಗಲಿಲ್ಲವೇ?
ಸಾರ್ವಜನಿಕರ ನೆನಪಿನ ಅವಧಿ ತುಂಬ ಕಡಿಮೆ ಎಂಬ ಮಾತಿದೆ. ಅದು ಸುಳ್ಳು ಮುಖ್ಯಮಂತ್ರಿಗಳೇ. ಜನ ಎಲ್ಲವನ್ನೂ ನೆನಪಿನಲ್ಲಿಟ್ಟಿರುತ್ತಾರೆ. ಆದರೆ ಮರೆತಂತೆ ಜೀವಿಸುತ್ತಾರೆ. ಆದರೆ ಯಾವಾಗ ಅದು ನೆನಪಾಗಬೇಕೊ ಆಗ ನೆನಪಾಗೇ ಆಗುತ್ತದೆ. ನೀವು ಅಧಿಕಾರದ ಕೊನೆಯ ಅವಧಿಯಲ್ಲಿ ಬ್ರಾಹ್ಮಣರ ಮೇಲೆ ಪ್ರೀತಿ ತೋರಿಬಿಟ್ಟರೆ ಹಿಂದಿನದ್ದೆಲ್ಲ ಬ್ರಾಹ್ಮಣರು ಅಥವಾ ಬೇರೆ ಬೇರೆ ಜಾತಿಯವರು ಮರೆತುಬಿಡುತ್ತಾರೆ ಎಂದು ಭಾವಿಸಬೇಡಿ. ಯಾರೋ ಕೆಲವು ಬ್ರಾಹ್ಮಣರಿಂದ ಸನ್ಮಾನಿಸಿಕೊಂಡುಬಿಟ್ಟರೆ ಬ್ರಾಹ್ಮಣರೆಲ್ಲ ನಿಮ್ಮ ಕೊಂಡಾಡಿ ಕುಣಿಯುತ್ತಾರೆ ಎಂದೂ ಭಾವಿಸಬೇಡಿ.
ಢೋಂಗಿ ಪ್ರೀತಿ ಬಹಳ ದಿನ ಬಾಳಿಕೆಗೆ ಬರುವುದಿಲ್ಲ ಮುಖ್ಯಮಂತ್ರಿಗಳೇ. ಕೊನೆಯ ಕ್ಷಣದಲ್ಲಿ ಬ್ರಾಹ್ಮಣರ ಮೂಗಿಗೆ ತುಪ್ಪ ಬಳಿಯುವ ಕೆಲಸ ಬಿಟ್ಟುಬಿಡಿ.
Leave A Reply