ಸಿದ್ಧರಾಮಯ್ಯನವರೇ “ಅರ್ಚಕರ ಭಾಗ್ಯ” ತರುವುದು ಯಾವಾಗ?
ನೀವು ಯಾವುದಾದರೂ ಪಕ್ಷದ ಸಕ್ರಿಯ ಕಾರ್ಯಕತ್ಥರಾಗಿದ್ದಲ್ಲಿ, ಸಚಿವರ ಕಟ್ಟಾ ಬೆಂಬಲಿಗರಾಗಿದ್ದಲ್ಲಿ, ಶಾಸಕರ ಪಕ್ಕಾ ಹಿಂಬಾಲಕರಾಗಿದ್ದಲ್ಲಿ ನಿಮ್ಮ ಪಕ್ಷದ ಸರಕಾರ ಅಧಿಕಾರಕ್ಕೆ ಬಂದ ಕೂಡಲೇ ನೀವು ನಿಮ್ಮ ನಾಯಕರ ಬಳಿ ಹೋಗಿ ನಾನು ಇಷ್ಟು ವರ್ಷ ಪಕ್ಷಕ್ಕಾಗಿ ಸೇವೆ ಸಲ್ಲಿಸಿದ್ದೇನೆ. ನನಗೆ ಏನಾದರೂ ಗೌರವಯುತವಾದ ಹುದ್ದೆ ಕೊಡಿ ಎಂದು ಕೇಳಿದರೆ ನಿಮ್ಮನ್ನು ಅವರು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ಯಾವುದಾದರೂ ದೇವಸ್ಥಾನದ ಟ್ರಸ್ಟಿಯನ್ನಾಗಿ ಮಾಡುವ ಚಾನ್ಸ್ ಇರುತ್ತದೆ. ಅದು ಬೇಡಾ ಸರ್, ನನಗೆ ಅದರಲ್ಲಿ ಅಷ್ಟೂ ಆಸಕ್ತಿ ಇಲ್ಲ ಎಂದು ನೀವು ಹೇಳುತ್ತಿರೋ, ಬಿಡ್ತಿರೋ ಅವರು ಮಾತ್ರ ” ಒಳ್ಳೆಯ ಪೋಸ್ಟ್ ಕಣಯ್ಯ, ದೊಡ್ಡ ದೊಡ್ಡ ವಿಐಪಿಗಳು ದೇವಸ್ಥಾನಕ್ಕೆ ಬರುತ್ತಿರುತ್ತಾರೆ, ಅವರನ್ನು ಸ್ವಾಗತಿಸುವುದು, ಅವರಿಗೆ ಶಾಲು ಹೊದೆಸುವುದು, ಅದರ ಫೋಟೋ ತೆಗೆಯುವುದು, ಅವರನ್ನು ಕರೆದುಕೊಂಡು ದೇವಸ್ಥಾನದ ಪ್ರದಕ್ಷಿಣೆ ಹಾಕುವುದು, ಇಷ್ಟು ಮಾಡಿದರೆ ಏನೂ ಟೆನ್ಷನ್ ಇಲ್ಲದೆ ಆರಾಮವಾಗಿ ಇದ್ದುಬಿಡಬಹುದು” ಎಂದು ಹೇಳಿಬಿಡುತ್ತಾರೆ. ನೀವು ಅದಾದರೆ ಅದು, ಧರ್ಮಕ್ಕೆ ಸಿಕ್ಕಿದ ದೊಡ್ಡ ಪೋಸ್ಟ್ ಎಂದು ಅಂದುಕೊಂಡು ಹೋಗುತ್ತೀರಿ. ಅದರ ನಂತರ ನೀವು ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ದೊಡ್ಡ ಜರತಾರಿ ಶಾಲು ಹಾಕಿ ಅರ್ಚಕರ ಹತ್ತಿರ ನಿಂತು ವಿಡಿಯೋ, ಫೋಟೋಗೆ ಫೋಸ್ ಕೊಡುವುದಷ್ಟೇ ಕೆಲಸ ಎಂದು ಅಂದುಬಿಟ್ಟಿರುತ್ತೀರಿ. ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಹೆಚ್ಚಿನ ಎ ಗ್ರೇಡ್ ದೇವಸ್ಥಾನಗಳಲ್ಲಿ ಹೀಗೆ ಆಗುವುದು. ಇನ್ನು ಇಂತಹ ದೇವಸ್ಥಾನಗಳಲ್ಲಿ ಆಡಳಿತಾಧಿಕಾರಿಯನ್ನಾಗಿ ಯಾವುದಾದರೂ ಇಲಾಖೆಯ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಅವರಿಗೆ ತಮ್ಮ ಮಾತೃ ಇಲಾಖೆಯ ಕೆಲಸವನ್ನೇ ಸರಿಯಾಗಿ ಮಾಡಲು ಸಮಯ ಇರುವುದಿಲ್ಲ. ಹಾಗಿರುವಾಗ ಅವರು ಅಲ್ಲಿಂದ ಎಷ್ಟೋ ದೂರದಲ್ಲಿರುವ ದೇವಸ್ಥಾನಕ್ಕೆ ಸರಕಾರ ಹೇಳಿದೆ ಎನ್ನುವ ಕಾರಣಕ್ಕೆ ಕಾಟಾಚಾರಕ್ಕೆ ಬಂದು ಸ್ವಲ್ಪ ಹೊತ್ತು ಇದ್ದು ಹೋದರೆ ಅದರಿಂದ ಸಾಧಿಸುವಂತದ್ದು ಏನೂ ಇಲ್ಲ.
ಈ ಕತೆ ಇಲ್ಲಿ ಮಾತ್ರ ಅಲ್ಲ, ನೆರೆಯ ಆಂಧ್ರಪ್ರದೇಶದಲ್ಲಿಯೂ ಇದೆ ಅವ್ಯಸ್ಥೆ. ಅಲ್ಲಿ ಇರುವ ತಿರುಪತಿ ತಿರುಮಲ ದೇವಸ್ಥಾನದ ವೆಲ್ ಫೇರ್ ವಿಭಾಗದಲ್ಲಿ ಅಲ್ಲಿನ ಸರಕಾರ ಕ್ರಿಶ್ಚಿಯನ್ ಮಹಿಳೆಯೊಬ್ಬರನ್ನು ಏಕ್ಸಿಕ್ಯೂಟಿವ್ ಆಫೀಸರ್ ಆಗಿ ನೇಮಿಸಿದೆ. ಆ ಅಧಿಕಾರಿ ಅಪ್ಪಿತಪ್ಪಿ ಕೂಡ ದೇವಸ್ಥಾನದ ಪ್ರಸಾದವನ್ನು ಮುಟ್ಟಲು ಹೋಗುವುದಿಲ್ಲ. ಹಾಗಂತ ದೇವಸ್ಥಾನದಲ್ಲಿ ಬ್ರಹ್ಮೋತ್ಸವ ಎಂದು ನಡೆಯುತ್ತದೆಯಲ್ಲ, ಆ ಸಂದರ್ಭದಲ್ಲಿ ದೇವಳದ ಎಲ್ಲ ಸಿಬ್ಬಂದಿಗಳಿಗೂ, ಅಧಿಕಾರಿಗಳಿಗೂ ಬೆಲೆಬಾಳುವ ದೊಡ್ಡ ದೊಡ್ಡ ಉಡುಗೊರೆಗಳನ್ನು ಕೊಡುವ ಕ್ರಮ ಇದೆ. ಅದನ್ನು ಮಾತ್ರ ಆ ಹೆಂಗಸು ಯಾವ ಕಾರಣಕ್ಕೂ ತಪ್ಪಿಸುವುದಿಲ್ಲ. ಅಷ್ಟೇ ಅಲ್ಲ ತಾನು ಚರ್ಚ್ ಗೆ ಹೋಗಬೇಕಾದಾಗಲೂ ಆಕೆ ಬಳಸುವುದು ದೇವಸ್ಥಾನದ ಕಾರನ್ನು. ಅಂದರೆ ಕಾಸ್ಟ್ಲಿ ಗಿಫ್ಟ್ ತೆಗೆದುಕೊಳ್ಳಲು ತಿರುಪತಿ ದೇವಸ್ಥಾನ ಬೇಕು, ಓಡಾಡಲು ಕಾರು ಬೇಕು, ಆದರೆ ಅಲ್ಲಿ ಅಭಿವೃದ್ಧಿ ಮಾಡುವ ವಿಷಯ ಬಂದಾಗ ಯಾಕೋ ಎಲ್ಲಾ ಸರಕಾರಿ ಕಚೇರಿಗಳಂತೆ ಅಲ್ಲಿಯೂ ಇಚ್ಚಾಶಕ್ತಿಯ ಕೊರತೆ. ಇದು ಮೊದಲು ನಿಲ್ಲಬೇಕು. ಹಾಗಾದರೆ ವರ್ಷಕ್ಕೆ ಕೋಟ್ಯಾಂತರ ರೂಪಾಯಿ ವರಮಾನ ಬರುವ ದೇವಸ್ಥಾನಗಳು ಕೇವಲ ರಾಜಕಾರಣಿಗಳ ಹಿಂಬಾಲಕರಿಗೆ ಟ್ರಸ್ಟಿಗಳನ್ನಾಗಿ ಮಾಡಿ ಫ್ರೀ ಇದ್ದಾಗ ಎಸಿ ಹಾಕಿ, ಮೆತ್ತನೆಯ ಸೋಫಾದಲ್ಲಿ ಕುಳಿತು ಹರಟೆ ಹೊಡೆಯಲು ಇರುವ ಅಡ್ಡೆಗಳಾಗಿ ಹೋದರೆ ಏನು ಉಪಯೋಗ? ಅಧಿಕಾರಿಗಳು ಅನಿವಾರ್ಯ ಎನ್ನುವ ಕಾರಣಕ್ಕೆ ಕಾಟಾಚಾರಕ್ಕೆ ಬಂದು ಹೋಗುವುದು ಮಾಡಿದರೆ ಅದರಿಂದ ಆಗುವುದಾದರೂ ಏನು? ಈಗ ಕರಾವಳಿಯಲ್ಲಿಯೇ ಸುಬ್ರಹ್ಮಣ್ಯ, ಕಟೀಲು, ಕೊಲ್ಲೂರು ದೇವಸ್ಥಾನಗಳು “ಎ” ಗ್ರೇಡ್ ದೇವಸ್ಥಾನಗಳ ಲಿಸ್ಟ್ ನಲ್ಲಿ ಬರುತ್ತದೆ. ಅಲ್ಲಿ ಕಾಣಿಕೆ ಡಬ್ಬಿ ಲೆಕ್ಕ ಮಾಡುವ ಸಂದರ್ಭದಲ್ಲಿ ಮಾತ್ರ ಟ್ರಸ್ಟಿ ಅಥವಾ ಆಡಳಿತಾಧಿಕಾರಿಯ ಜವಾಬ್ದಾರಿ ಇರುತ್ತದೆ ಎಂದಲ್ಲ. ತಮ್ಮ ಕಾರಿಗೆ ಇಂತಿಂತಹ ದೇವಸ್ಥಾನದ ಟ್ರಸ್ಟಿ ಎಂದು ಬೋರ್ಡ್ ಹಾಕಿ ಓಡಾಡಿದರೆ ಅವರಿಗೆ ಸಿಕ್ಕ ಅವಕಾಶ ಸದ್ಭಳಕೆಯಾಗುವುದಿಲ್ಲ.
ಇನ್ನು ಎ, ಬಿ ಗ್ರೇಡಿನ ದೇವಸ್ಥಾನಗಳು ಶ್ರೀಮಂತ ಸಹೋದರರಂತೆ ಇದ್ದರೆ ಸಿ ಗ್ರೇಡ್ ದೇವಸ್ಥಾನಗಳು ಒಂದೇ ತಾಯಿಯ ಗರ್ಭದಲ್ಲಿ ಹುಟ್ಟಿದರೂ ಆದಾಯದ ವಿಷಯದಲ್ಲಿ ಬಡವಾಗಿರುವ ಕಾರಣ ಸರಕಾರಗಳು ಈ ಕುರಿತು ಏನಾದರೂ ಯೋಚಿಸಬೇಕು. ಹೇಗೂ ಎ ಗ್ರೇಡಿನ ದೇವಸ್ಥಾನಗಳ ಆದಾಯ ಕೋಟಿಗಟ್ಟಲೆ ಇರುವುದರಿಂದ ಅದರಲ್ಲಿ 50% ಆದಾಯ ಸಿ ಗ್ರೇಡಿನ ದೇವಸ್ಥಾನಗಳಿಗೆ ಕೊಡಬೇಕು ಎಂದು ನಾನು ಹೇಳುತ್ತಿಲ್ಲ. ಆದರೆ ಕನಿಷ್ಟ ಅರ್ಚಕರಿಗೆ ಒಳ್ಳೆಯ ಸಂಬಳವನ್ನಾದರೂ ಕೊಡಲು ಒಂದಿಷ್ಟು ಹಣವನ್ನು ಅಲ್ಲಿಂದ ತಂದು ವಿನಿಯೋಗಿಸಿದರೆ ಅದರಲ್ಲಿ ಏನೂ ತಪ್ಪಿಲ್ಲ. ಯಾಕೆಂದರೆ ಎಷ್ಟೋ ಸಿ ಗ್ರೇಡಿನ ದೇವಸ್ಥಾನಗಳು ತಮ್ಮ ದೇವಳದ ಅರ್ಚಕರಿಗೆ ಸರಿಯಾದ ಸಂಬಳವನ್ನು ಕೊಡಲಾಗದೇ ತೊಂದರೆ ಅನುಭವಿಸುತ್ತವೆ. ಹಾಗಿರುವಾಗ ಎ ಗ್ರೇಡಿನ ಶ್ರೀಮಂತ ದೇವಾಲಯಗಳ ಹಣ ಈ ರೀತಿಯಲ್ಲಾದರೂ ಬಳಕೆಯಾದರೆ ಅದರಿಂದ ಬೇರೆ ದೇವಾಲಯಗಳು ಕೂಡ ಉದ್ಧಾರವಾಗುತ್ತವೆ. ಆದ್ದರಿಂದ ಕರ್ನಾಟಕ ರಾಜ್ಯದಲ್ಲಿ ಸಿದ್ಧರಾಮಯ್ಯ ಅವರ ಸರಕಾರ ಅರ್ಚಕ ಭಾಗ್ಯ ಎನ್ನುವ ಹೊಸ ಯೋಜನೆಯನ್ನು ಪ್ರಾರಂಭಿಸಬೇಕು. ಎಷ್ಟೋ ಭಾಗ್ಯಗಳನ್ನು ನೀವು ಕರುಣಿಸಿದ್ದಿರಿ, ಅವು ಎಷ್ಟು ಸರಿಯಾಗಿ ಬಳಕೆಯಾಗುತ್ತಿವೆ ಎನ್ನುವುದು ಬೇರೆ ವಿಷಯ. ಆದ್ರೆ ಅರ್ಚಕರ ಭಾಗ್ಯ ತಂದರೆ ಅದರಿಂದ ನೀವು ಕಳೆದುಕೊಳ್ಳುವಂತದ್ದು ಏನೂ ಇಲ್ಲ. ನಮ್ಮ ದೇವಸ್ಥಾನಗಳ ಹಣ ನಮ್ಮದೇ ಬೇರೆ ದೇವಸ್ಥಾನಗಳಿಗೆ ಹೋಗುತ್ತದೆ ಅಷ್ಟೇ. ಸರಕಾರದ ತಿಜೋರಿಗೆ ಏನೂ ತೊಂದರೆಯಾಗಲ್ಲ!
Leave A Reply