• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಧನ್ಯೆ ಪದ್ಮಿನಿ! ನೀನು ಸತ್ತಾದರೂ ಕಾಮಾಂಧನೊಬ್ಬನಿಗೆ ನರಕದ ರುಚಿ ತೋರಿಸುವಲ್ಲಿ ಗೆದ್ದುಬಿಟ್ಟೆ!!

ಚಕ್ರವರ್ತಿ ಸೂಲಿಬೆಲೆ Posted On November 27, 2017
0


0
Shares
  • Share On Facebook
  • Tweet It

ಅಲ್ಲಾವುದ್ದಿನ್ ಖಿಲ್ಜಿ ಮೇವಾಡದ ಗಡಿಗೆ ಸೈನ್ಯ ಸಮೇತ ಬಂದುಬಿಟ್ಟ. ತಾನು ಬರುವ ಸುದ್ದಿ ರಜಪೂತ ದೊರೆ ಭೀಮ ದೇವ ಸಿಂಹನಿಗೆ ತಿಳಿಯದಿರಲೆಂದು ಸಾಕಷ್ಟು ಪಾಡುಪಟ್ಟ. ಸಾಧ್ಯವಾಗಲಿಲ್ಲ. ರಾಜನಿಗೆ ಗೂಡಚಾರರು ಸುದ್ದಿ ಮುಟ್ಟಿಸಿದರು. ಭೀಮದೇವ ಸರ್ವ ಸನ್ನದ್ಧನಾದ. ಅಲ್ಲಾವುದ್ದಿನ್ ಹೆಜ್ಜೆ ಇಡುವ ಮುನ್ನವೇ ಮುಗಿಬೀಳಲು ಯೋಜನೆ ಹಾಕಿದ. ಯುದ್ಧವೆಂದರೇನೇ ಕಳೆಗಟ್ಟುವ ಕುಲ ರಜಪೂತರದು. ಕದನವೇ ಇಲ್ಲದೆ ಒರೆಯೊಳಗಿಟ್ಟಿದ್ದ ಕತ್ತಿಯನ್ನು ಹೊರಗೆಳದರು ಸೈನಿಕರು. ರಣೋತ್ಸಾಹ ಮೈಮೇಲೇರಿತು.

ಇತ್ತ ಖಿಲ್ಜಿ ಹಗಲಿರುಳು ಪದ್ಮಿನಿ… ಪದ್ಮಿನಿ ಎನ್ನುತ್ತ ಮೈಮರೆತಿದ್ದ. ಭುವನದೊಳಗಿನ ಅಪ್ರತಿಮ ಸುಂದರಿ ಪದ್ಮಿನಿಯನ್ನು ಭೋಗಿಸಬೇಕೆನ್ನುವ ಬಯಕೆ ಅವನನ್ನು ಮೇವಾಡದ ಗಡಿಗೆ ಕರೆತಂದಿತ್ತು. ಗುರ್ಜರದ ರಾಣಿ ಕಮಲಾ ದೇವಿಯನ್ನು ಅಪಹರಿಸಿ ಅವಳ ಸೌಂದರ್ಯ ಸೂರೆಗೊಂಡಿದ್ದ ಅವನಿಗೆ ಪದ್ಮಿನಿ ಇಲ್ಲದ ತನ್ನ ಜನಾನಾ ಮೌಲ್ವಿಯಿಲ್ಲದ ಮಸೀದಿ ಎನಿಸುತ್ತಿತ್ತಂತೆ! ಈಗ ಅವನು ಅಲ್ಲಿಗೆ ಬಂದಿದ್ದು ಅದೇ ಕಾರಣಕ್ಕೆ. ಮೋಸದಿಂದ ಪದ್ಮಿನಿಯನ್ನು ತನ್ನ ಜನಾನಾಗೆ ಒಯ್ಯುವುದಕ್ಕೆ!

ರಜಪೂತರೇನೂ ಬಾಯಿಗೆ ಬೆಟ್ಟು ಹಾಕಿ ಕುಳಿತಿರಲಿಲ್ಲ. ಈ ಬಾರಿ ಅಲ್ಲಾವುದ್ದೀನನ ಎದೆ ಝಲ್ಲೆನ್ನುವಂತೆ ಹೋರಾಡಿದರು. ಕತ್ತಿಗೆ ಕತ್ತಿಯ ಉತ್ತರ ಕೊಟ್ಟರು. ಬೆಂಕಿಯ ಚೆಂಡಿಗೆ ಬೆಂಕಿಯೇ ಪ್ರತಿಕ್ರಿಯೆಯಾಯ್ತು. ರಜಪೂತರ ಕದನದ ಕಾವಿಗೆ ಖಿಲ್ಜಿಯ ಸೇನೆ ಭಸ್ಮವಾಯ್ತು. ಕಂಡು ಕೇಳರಿಯದ ಸೋಲು ಖಿಲ್ಜಿಗೆ! ಅವನನ್ನು ಬಂಧಿಸಿ ರಾಜನೆದುರು ನಿಲ್ಲಿಸಿದರೆ, ನಾಚಿಕೆ ಬಿಟ್ಟು ಗೋಗರೆದ; “ಪ್ರಭೂ, ದೇವರ ದೇವ… ನನ್ನ ಬಿಟ್ಟುಬಿಡು ತಂದೆ. ತಪ್ಪಿ ನಿನ್ನೆದುರು ಕಾಳಾಗಕ್ಕೆ ನಿಂತೆ” ಎಂದ!
ಶರಣಾಗತರನ್ನು ಕ್ಷಮಿಸುವುದು ನಮ್ಮ ಧರ್ಮವಲ್ಲವೆ? ಭೀಮದೇವನ ಮನ ಕರಗಿತು. ಧರ್ಮದ ಮಾತಿಗೆ ಬೆಲೆ ಕೊಟ್ಟು ಅಧರ್ಮಿಯನ್ನು ಬಿಟ್ಟುಬಿಟ್ಟ!

 

ಜೀವವೇನೋ ಉಳಿಯಿತು. ಆದರೆ ಪದ್ಮಿನಿ!? ಖಿಲ್ಜಿ ಚಡಪಡಿಸಿದ. ಅವನ ಅಂಗಾಂಗಗಳೆಲ್ಲ ಸೋತವು. ಪದ್ಮಿನಿಯನ್ನು ಕಾಣದೇ ಬದುಕುವುದು ದುಸ್ತರವೆಂದು ಕೂಗಾಡಿದ. ಕಾಮೋದ್ರೇಕದಿಂದ ಮತ್ತನಾದ ಒಡೆಯನನ್ನು ರಕ್ಷಿಸಲು ಅವನ ಭಂಟ ಮಲ್ಲಿಕಾಫರ್ ಸಂಚು ಹೂಡಿದ. ‘ರಾಣಿಯನ್ನು ದೂರದಿಂದಲಾದರೂ ನೋಡಲು ಅವಕಾಶ ಕೊಡಿ’ ಎಂದು ಬಿನ್ನಯಿಸಿ ಖಿಲ್ಜಿಯಿಂದ ಭೀಮದೇವನಿಗೆ ಪತ್ರ ಬರೆಸಿದ. ಭೀಮದೇವನಿಗೆ ಅದೇನು ಮಂಕು ಕವಿದಿತ್ತೋ? ಇದೊಂದು ನಿರುಪದ್ರವ ಕೋರಿಕೆ ಎಂದು ಪರಿಗಣಿಸಿದ. ಪದ್ಮಿನಿಯ ವಿರೋಧದ ನಡುವೆಯೂ ಆಗಲೆಂದು ತನ್ನ ಸಮ್ಮತಿಪತ್ರ ಕಳಿಸಿಕೊಟ್ಟ.

ರಾಣಿ ಪದ್ಮಿನಿಯ ಚೆಲುವಿಗಿಂತ ಆಕೆಯ ಬುದ್ಧಿ ಒಂದು ಗುಲಗಂಜಿ ತೂಕದಷ್ಟು ಹೆಚ್ಚು. ತಾನು ಕಳುಹಿಸುವ ರಾಖಿ ಕಟ್ಟಿಸಿಕೊಂಡು ‘ಅಣ್ಣ’ನಾದರೆ ಮಾತ್ರ ಮುಖ ತೋರುವೆನೆಂದಳು. ಆಸ್ಥಾನಕ್ಕೆ ಬಂದ ಕಾಮುಕ ಖಿಲ್ಜಿಗೆ ತನ್ನ ಮುಖವನ್ನು ಕನ್ನಡಿಯ ಬಿಂಬದಲ್ಲಿ ತೋರಿಸಿ ಮಾತು- ಮಾನಗಳನ್ನು ಉಳಿಸಿಕೊಂಡಳು!

ಅಷ್ಟಕ್ಕೇ ಖಿಲ್ಜಿಯ ಎದೆಬಡಿತ ಏರುಪೇರಾಗಿಹೋಯ್ತು. ತನ್ನ ಜನಾನಾದ ಎಲ್ಲ ಹೆಂಗಸರನ್ನು ಇವಳ ಪಾದಸೇವೆಗಿಟ್ಟರೂ ಕಡಿಮೆಯೇ ಎಂದುಕೊಂಡ. ಅವನ ಚಡಪಡಿಕೆಯ ಹೊತ್ತಿಗೆ ಅವನ ಸೇವಕರು ಕೋಟೆಯ ಉದ್ದಗಲಗಳನ್ನು ಅಳೆದುಸುರಿದಿದ್ದರು. ಮನೆಗೆ ಬಂದ ಅತಿಥಿಯನ್ನು ಬೀಳ್ಕೊಡುವ ಸಂಪ್ರದಾಯ ಪಾಲಿಸಲು ಭೀಮದೇವ ಖಿಲ್ಜಿಯ ಡೇರೆವರೆಗೂ ನಡೆದ. ಖಿಲ್ಜಿಯ ಹುಟ್ಟುಬುದ್ಧಿ ಎಲ್ಲಿಹೋಗಬೇಕು? ತನ್ನ ಭಂಟರಿಗೆ ಸನ್ನೆ ಮಾಡಿ ರಾಜನನ್ನು ಬಂಧಿಸಿಬಿಟ್ಟ! ‘ನಿನ್ನ ಬಿಡುಗಡೆಯಾಗಬೇಕು ಅಂದರೆ, ನಿನ್ನ ರಾಣಿ ನನ್ನ ತೊಡೆಯ ಮೇಲೆ ಕೂರಬೇಕು’ ಎಂದು ಷರತ್ತು ಹಾಕಿದ. ರಜಪೂತರ ರಕ್ತ ಕುದಿಯಿತು. ಪರಸ್ತ್ರೀ ತಾಯಿ ಸಮಾನ ಎನ್ನುವ ಧರ್ಮ ನಮ್ಮದು. ರಾಣಿಯಂತೂ ಸಾಕ್ಷಾತ್ ದೇವಿಯೇ ಸರಿ. ಚಿತ್ತೋಡ ಮತ್ತೊಂದು ಕದನಕ್ಕೆ ಸಜ್ಜಾಯಿತು. ಈ ಬಾರಿ ಬಲು ಎಚ್ಚರಿಕೆಯ ಕದನ ನಡೆಯಬೇಕು. ರಾಜನ ಪ್ರಾಣ ಎದುರಾಳಿಯ ಕೈಲಿದೆ. ರಾಣಿಯ ಮಾನವೂ ಉಳಿಯಬೇಕಿದೆ!

ಮುನ್ನೂರಕ್ಕೂ ಹೆಚ್ಚು ಪಲ್ಲಕ್ಕಿಗಳು ಖಿಲ್ಜಿಯ ಕಡೆ ಹೊರಟವು. “ಬರಿ ರಾಣಿಯೊಬ್ಬಳೇಕೆ? ಜನಾನಾ ಅಲಂಕರಿಸಲು ರಾಣೀವಾಸದ ಹೆಂಗಸರೆಲ್ಲ ಬರುತ್ತಿದ್ದಾರೆ” ಎಂಬ ಮಾತು ಕೇಳಿಕೇಳಿಯೇ ಖಿಲ್ಜಿ ನಿದ್ದೆ ಕಳೆದುಕೊಂಡ. ಕಾಮುಕತೆಯಿಂದ ಹಸಿದ ನಾಯಿಗಿಂತಲೂ ಕಡೆ ಅವನು!

 

ಇತ್ತ ಡೇರೆ ಸಮೀಪಿಸಿದ ಪಲ್ಲಕ್ಕಿಗಳಲ್ಲೊಂದು ರಾಜ ಭೀಮದೇವನನ್ನು ಮಾತನಾಡಿಸಿತು. ಹಾಗೇ ಅವನನ್ನು ಹತ್ತಿಸಿಕೊಂಡು ಪಾರುಗಾಣಿಸಿಬಿಟ್ಟಿತು!
ಅಷ್ಟೇ, ಪಲ್ಲಕ್ಕಿಯೊಳಗಿಂದ ಸುಂದರ ಹೆಣ್ಣುಗಳು ಹರಿದಾಡುವುದನ್ನು, ರಾಣಿ ಪದ್ಮಿನಿಯ ಕಾಣ್ಕೆಯ ತುಣುಕನ್ನು ಕಾಯುತ್ತ ಕುಳಿತಿದ್ದ ಖಿಲ್ಜಿ ಬಸವಳಿದು ಬಿದ್ದ!
ಪಲ್ಲಕ್ಕಿಯಿಂದ ಶಸ್ತ್ರ ಸಜ್ಜಿತರಾದ ರಜಪೂತ ಯೋಧರು! ಕದನಿಕಲಿಗಳಂತೆ ಮೈಮೇಲರಗಿದವರ ದಾಳಿಗೆ ತತ್ತರಿಸಿಹೋಯ್ತು ಖಿಲ್ಜಿಯ ತಂಡ. ಸುಂದರ ಮೈಕಟ್ಟಿನ ಬಾದಲ್ ಪದ್ಮಿನಿಯ ವೇಷ ಧರಿಸಿದ್ದರೆ, ಉಳಿದ ಯೋಧರು ಸಖಿಯರ ವೇಷ ತೊಟ್ಟಿದ್ದರು. ಅಂತೂ ತಮ್ಮ ರಾಜನ ಪ್ರಾಣ, ರಾಣಿಯ ಮಾನ ಕಾಪಾಡುವಲ್ಲಿ ಯಶಸ್ವಿಯಾದರು. ಖಿಲ್ಜಿ, ಕಾಫರರನ್ನು ಬಂಧಿಸಿದರು. ಆದರೇನು? ಧರ್ಮ ಬುದ್ಧಿ ಬಿಡಬೇಕಲ್ಲ? ರಣರಂಗದಲ್ಲಲ್ಲದೆ ಇಲ್ಲಿ ಕೊಲ್ಲುವುದು ಬೇಡವೆಂದು ಖಿಲ್ಜಿಗೆ ಜೀವದಾನ ಮಾಡಿಬಂದರು.

ಇತ್ತ ಚಿತ್ತ ಸ್ವಾಸ್ಥ್ಯ ಕಳಕೊಂಡ ಖಿಲ್ಜಿ ತನ್ನೂರಿಗೆ ಪಲಾಯನ ಮಾಡಿದ. ಪದ್ಮಿನಿಯ ಮೋಹದಲ್ಲಿ ಮತ್ತನಾಗಿ ಹೋಗಿದ್ದ. ಪದ್ಮಿನಿಯನ್ನು ಪಡೆಯದೆ ರಾಜನ ಹುಚ್ಚು ಬಿಡದೆಂದು ತೀರ್ಮಾನಿಸಿದ ಮಲ್ಲಿಕಾಫರ್ ದೊಡ್ಡದೊಂದು ಸೇನೆ ಸಜ್ಜುಗೊಳಿಸಿದ. ಕೋಟೆಯ ಆಯಕಟ್ಟಿನ ಜಾಗಗಳನ್ನಂತೂ ಮೊದಲೇ ಗೊತ್ತುಮಾಡಿಕೊಂಡಿದ್ದರು. ಈಗ ಏಕಾಏಕಿ ಚಿತ್ತೋಡಿನ ಮೇಲೆ ದಾಳಿಮಾಡಿಯೇಬಿಟ್ಟ.

ಈ ಬಾರಿ ಭೀಮದೇವ ನಿಜಕ್ಕೂ ಗಲಿಬಿಲಿಗೊಳಗಾಗಿದ್ದ. ಅವನ ಸೇನೆ ಸಿದ್ಧಗೊಳ್ಳುವ ಮುನ್ನವೇ ಕಾಫರನ ಸೇನೆ ಮುಗಿಬಿತ್ತು. ಮೂರ್ನಾಲ್ಕು ದಿನಗಳೊಳಗೆ ರಜಪೂತರ ಸಂಖ್ಯೆ ಕರಗಿತು. ‘ಪ್ರಾಣ ಕೊಟ್ಟೇವು, ಶರಣಾಗೆವು’ ಎನ್ನುತ್ತಲೇ ಅವರು ರಣಾಂಗಣದಲ್ಲಿ ವೀರಮರಣ ಕಂಡರು.

ಇನ್ನು…. ಭೀಮದೇವನ ಸಾವು. ಆನಂತರ ರಾಣಿ ಪದ್ಮಿನಿ, ಖಿಲ್ಜಿಯ ತೊಡೆ ಮೇಲೆ!? ಇದನ್ನು ನೆನೆದಾಗಲೆಲ್ಲ ರಾಣಿಯ ದೇಹ ಕಂಪಿಸುತ್ತಿತ್ತು. ಪರಪುರುಷನನ್ನು ಕಣ್ಣೆತ್ತಿಯೂ ನೋಡದ ಮಹಾತಾಯಿ, ಅವನ ಜನಾನಾದಲ್ಲಿ ಲಲ್ಲೆಗರೆಯುತ್ತಾಳೆನ್ನುವುದು ಊಹೆಗೂ ಸಾಧ್ಯವಿಲ್ಲದ ಸಂಗತಿಯಾಗಿತ್ತು.
ಅಂದು ರಾತ್ರಿ ಪದ್ಮಿನಿ ಭಿಮದೇವನ ಬಳಿಸಾರಿದಳು. ಆತ ಎಂದಿನಂತಿಲ್ಲ. ‘ನಿನ್ನ ರಕ್ಷಿಸಲಾಗಲಿಲ್ಲವಲ್ಲ’ ಎಂಬ ಭಾವದಿಂದ ಸೋತ ಕಣ್ಣುಗಳವು. ಅದನ್ನು ಗುರುತಿಸಿದ ಪದ್ಮಿನಿ, ಪತಿಯನ್ನು ಹಿಂಬದಿಯಿಂದ ಬಳಸಿದಳು. ಇದು ನನ್ನ- ನಿಮ್ಮ ಕೊನೆಯ ರಾತ್ರಿ ಎಂದಳು. ಮಾನಕ್ಕಾಗಿ ಪ್ರಾಣ ತ್ಯಾಗ ಮಾಡುವ ಬಯಕೆ ಹೇಳಿಕೊಂಡಳು. ಭೀಮದೇವನ ಎದೆ ನಡುಗಿತು. ನಿಗಿನಿಗಿ ಉರಿಯುವ ಅಗ್ನಿಕುಂಡದೊಳಗೆ ಹಾರಿ ಆತ್ಮಾಹುತಿ ಮಾಡಿಕೊಳ್ಳುವ ‘ಜೀವಹರ’ (ಜೌಹರ್) ವಿಧಾನವೇ ಅಷ್ಟು ಭಯಂಕರ.
ಆದರೇನು? ಸೈತಾನನ ತೆವಲಿಗೆ ಮಡದಿಯನ್ನು ಒಪ್ಪಿಸುವುದಕ್ಕಿಂತ ಅಗ್ನಿದೇವನ ಮಡಿಲಿಗೆ ಹಾಕುವುದು ಒಳಿತೆನ್ನಿಸಿತವನಿಗೆ. ಅವಳ ತಲೆ ನೇವರಿಸಿ ಬಿಸಿಮುತ್ತನಿಟ್ಟು ಹೊರಟುಬಿಟ್ಟ. ಅದು, ಮುಂದಿನದಕ್ಕೆ ಅನುಮತಿ.

ಅಂತಃಪುರದೆದುರು ವಿಶಾಲವಾದ ಅಗ್ನಿಕುಂಡ ರಚನೆಯಾಯ್ತು. ಕಟ್ಟಿಗೆಗಳನ್ನು ಉರಿಸಲಾಯ್ತು. ಅತ್ತ ರಣಾಂಗಣದಲ್ಲಿ ಭೀಮದೇವನ ಪಡೆ ನೆಲಕಚ್ಚುತ್ತಿದ್ದ ಸುದ್ದಿ ಬಂದೊಡನೆ ರಾಣಿ ಪದ್ಮಿನಿ ಭಗವಂತನನ್ನು ನೆನೆಯುತ್ತ, ಪಾತಿವ್ರತ್ಯದ ಬಲ ರಕ್ಷಿಸಲಿ ಎನ್ನುತ್ತ ಅಗ್ನಿ ಕುಂಡಕ್ಕೆ ಹಾರಿದಳು.

ಬೆಂಕಿಯ ಕೆನ್ನಾಲಗೆ ಅವಳನ್ನು ಆವರಿಸಿತು. ಅಂತಃಪುರದ ಇತರ ಸ್ತ್ರೀಯರೂ ರಾಣಿಯನ್ನನುಸರಿಸಿದರು.
ಕರ್ಪೂರದ ಗೊಂಬೆ, ಕರಗಿಯೇ ಹೋಯ್ತು….
ಖಿಲ್ಜಿ ಧಾವಿಸಿ ಬಂದ. ಪದ್ಮಿನಿಯನ್ನು ಅಪ್ಪುವ ತವಕ ಅವನಲ್ಲಿ ತೀವ್ರವಾಗಿತ್ತು. ಆದರೆ ಅಲ್ಲಿ ನೋಡಿದ್ದೇನು? ರಾಣಿ ವಾಸ ಬಿಕೋ ಎನ್ನುತ್ತಿತ್ತು. ಎದೆ ಬಡಿತ ಹೆಚ್ಚಾಯಿತು. ಪದ್ಮಿನಿ ಸಿಗದಿದ್ದರೆ ತಾನು ಸತ್ತಂತೆಯೇ ಅಂದುಕೊಂಡ. ನಿಜ ಹೇಳಬೇಕೆಂದರೆ ಅವನು ಪ್ರತಿದಿನವೂ ಸತ್ತಿದ್ದ. ಪರ ಸ್ತ್ರೀಯನ್ನು ಬಯಸುವ ದೇಹ ಇದ್ದರೂ ಸತ್ತಂತೆಯೇ ಅಲ್ಲವೆ?

ರಜಪೂತ ಯೋಧನೊಬ್ಬ ಓಡೋಡಿ ಬಂದ. ಅಗ್ನಿ ಕುಂಡದ ಬೂದಿಯನ್ನು ಮುಷ್ಟಿಯಲ್ಲಿ ಹಿಡಿದು, ‘ಇದೋ, ರಾಣಿ ಪದ್ಮಿನಿ!’ ಎಂದ. ಆಕೆಯ ಭಸ್ಮ ಮುಟ್ಟುವ ಯೋಗ್ಯತೆಯೂ ನಿನಗಿಲ್ಲ, ಹೋಗು ಹೋಗೆಂದ.

ಖಿಲ್ಜಿ ಕಾಫಿರರನ್ನು ಹತ್ಯೆ ಮಾಡಲು ಬಂದಿದ್ದ. ಪವಿತ್ರವಲ್ಲದ ಭೂಮಿಯನ್ನು(!) ಅತಿಕ್ರಮಿಸಲು ಬಂದಿದ್ದ. ಆಕ್ರಮಿಸಿಯೂ ಇದ್ದ. ಕಾಫಿರರ ಹೆಂಡತಿಯರನ್ನು ಮಾತ್ರ ತನ್ನ ಜನಾನಾದೊಳಗೆ ಸೇರಿಸಿಕೊಳ್ಳಲಾಗದೆ ಸೋತು ಹೋಗಿದ್ದ.
ಅವನ ಈ ತಪ್ಪಿಗೆ ಖಂಡಿತ ಅವನಿಗೆ ಜನ್ನತ್ ನಲ್ಲಿ ಜಾಗ ಸಿಕ್ಕಿರಲಾರದು. ಎಪ್ಪತ್ತು ಹೆಂಗಸರ ಭೋಗವೂ ದಕ್ಕಿರಲಾರದು!

ಧನ್ಯೆ ಪದ್ಮಿನಿ! ನೀನು ಸತ್ತಾದರೂ ಕಾಮಾಂಧನೊಬ್ಬನಿಗೆ ನರಕದ ರುಚಿ ತೋರಿಸುವಲ್ಲಿ ಗೆದ್ದುಬಿಟ್ಟೆ!!

0
Shares
  • Share On Facebook
  • Tweet It




Trending Now
ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
ಚಕ್ರವರ್ತಿ ಸೂಲಿಬೆಲೆ July 15, 2025
ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
ಚಕ್ರವರ್ತಿ ಸೂಲಿಬೆಲೆ July 15, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
  • Popular Posts

    • 1
      ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • 2
      ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • 3
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 4
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 5
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!

  • Privacy Policy
  • Contact
© Tulunadu Infomedia.

Press enter/return to begin your search