ಖಾದರ್ ಅವರೇ, ಮಧ್ಯಮ ವರ್ಗದವರಿಗೆ ಅಕ್ಕಿ, ಗೋಧಿ ನಿಲ್ಲಿಸಿದ್ದು ಯಾಕೆ?
ಕರ್ನಾಟಕದ ಆಹಾರ ಸಚಿವರಾಗಿರುವ ಯು.ಟಿ.ಖಾದರ್ ಅವರಿಗೆ ನಮಸ್ಕಾರಗಳು. ಆಹಾರಕ್ಕೆ ಸಂಬಂಧಪಟ್ಟ ವಿಷಯವಾಗಿರುವುದರಿಂದ ಮತ್ತು ನೀವು ಆ ಇಲಾಖೆಯ ಸಚಿವರಾಗಿರುವುದರಿಂದ ಮತ್ತು ಅದರೊಂದಿಗೆ ನಮ್ಮ ಜಿಲ್ಲೆಯಲ್ಲಿ ಬರುವ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರು ನೀವಾಗಿರುವುದರಿಂದ ನಿಮ್ಮ ಗಮನಕ್ಕೆ ಈ ವಿಷಯವನ್ನು ತರಲೇಬೇಕಾಗಿದೆ. ನೀವು ಆಗಾಗ ನಿಮ್ಮ ಇಲಾಖೆಯಲ್ಲಿ ಆಗಿರುವ ಅಭಿವೃದ್ಧಿಯ ಬಗ್ಗೆ ಮಾಧ್ಯಮಗಳಲ್ಲಿ ಹೇಳುತ್ತಲೇ ಇರುತ್ತೀರಿ. ಅದರಿಂದ ನಿಮ್ಮನ್ನು ಮಾಧ್ಯಮಗಳಲ್ಲಿ ಹೆಚ್ಚಾಗಿ ನಾವು ಕಾಣುತ್ತೇವೆ ಮತ್ತು ನಿಮ್ಮ ಹೇಳಿಕೆಯನ್ನು ಪತ್ರಿಕೆಗಳಲ್ಲಿ ಓದುತ್ತಾ ಇರುತ್ತೇವೆ. ಆದರೆ ಇವತ್ತು ಹೇಳುವ ಒಂದು ವಿಷಯ ಮಾತ್ರ ನಿಮ್ಮ ಗಮನಕ್ಕೆ ಬಂದಿಲ್ಲ ಎಂದು ಅಂದುಕೊಳ್ಳುತ್ತೇನೆ. ಒಂದು ವೇಳೆ ಬಂದಿದ್ದರೆ ಮತ್ತು ಅದನ್ನು ನೀವು ನಿರ್ಲಕ್ಷಿಸಿದ್ದರೆ ಅದು ನಿಮ್ಮ ರಾಜಕೀಯ ಜೀವನಕ್ಕೆ ಶುಭಸೂಚನೆ ಅಲ್ಲ ಎಂದು ಜನರೇ ಹೇಳುತ್ತಿದ್ದಾರೆ. ಈಗ ವಿಷಯಕ್ಕೆ ಬರೋಣ.
ರೇಶನ್ ಕಾರ್ಡ್ ಇರುವವರಲ್ಲಿ ಬಿಪಿಎಲ್ ಕಾರ್ಡ್ ನವರಿಗೆ ಪ್ರತಿ ತಿಂಗಳು ಅಕ್ಕಿ ಮತ್ತು ಗೋಧಿಯನ್ನು ಆಹಾರ ಮತ್ತು ಪಡಿತರ ಇಲಾಖೆ ವಿತರಿಸುತ್ತಿರುವುದು ಎಲ್ಲರಿಗೆ ಗೊತ್ತಿದೆ. ಅದೇ ರೀತಿಯಲ್ಲಿ ಎಪಿಎಲ್ ಕಾರ್ಡ್ ಹೊಂದಿರುವವರಿಗೂ ಐದು ಕಿಲೋ ಅಕ್ಕಿ ಮತ್ತು ಐದು ಕಿಲೋ ಗೋಧಿಯನ್ನು ಸರಕಾರ ನೀಡುತ್ತಾ ಬಂದಿದೆ. ಯಾವ ತಿಂಗಳು ಗೋಧಿ ವಿತರಿಸಲು ಸಾಧ್ಯವಾಗುವುದಿಲ್ಲವೋ ಆ ತಿಂಗಳು ಐದು ಕಿಲೋ ಇದ್ದ ಅಕ್ಕಿಯ ಬದಲಾಗಿ ಹತ್ತು ಕಿಲೋ ಅಕ್ಕಿಯನ್ನು ಕೊಡಲಾಗುತ್ತದೆ. ಅಕ್ಕಿ ಪ್ರತಿ ಕಿಲೋಗೆ ಹದಿನೈದು ರೂಪಾಯಿಯಂತೆ ಸಿಗುವುದರಿಂದ ಮತ್ತು ಗೋಧಿ ಪ್ರತಿ ಕಿಲೋಗೆ ಹತ್ತು ರೂಪಾಯಿಯಂತೆ ದೊರಕುತ್ತಿದ್ದ ಕಾರಣ ಇದರಿಂದ ತುಂಬಾ ಜನರಿಗೆ ಅನುಕೂಲವಾಗುತ್ತಿತ್ತು. ಹೊರಗೆ ಒಂದು ಕಿಲೋ ಅಕ್ಕಿಗೆ ನಲ್ವತ್ತು, ನಲ್ವತ್ತೆರಡು, ನಲ್ವತ್ತ ನಾಲ್ಕು ರೂಪಾಯಿ ಬೆಲೆ ಇರುವುದರಿಂದ ಹದಿನೈದು ರೂಪಾಯಿಗೆ ಅಕ್ಕಿ ಸಿಗುವಾಗ ಇದರಿಂದ ಮಧ್ಯಮ ವರ್ಗದ ಜನರಿಗೆ ಉಪಯೋಗವಾಗುತ್ತಿದ್ದದ್ದು ಸುಳ್ಳಲ್ಲ.
ಆದರೆ ಕಳೆದ ನಾಲ್ಕು ತಿಂಗಳುಗಳಿಂದ ಎಪಿಎಲ್ ಕಾರ್ಡಿನವರಿಗೆ ಕೊಡುತ್ತಿದ್ದ ಅಕ್ಕಿ, ಗೋಧಿಯನ್ನು ಹಠಾತ್ತನೆ ರಾಜ್ಯ ಸರಕಾರ ನಿಲ್ಲಿಸಿದೆ. ಇದಕ್ಕೆ ಕಾರಣ ಏನು ಎನ್ನುವುದೇ ಬಹಳ ಮುಖ್ಯವಾದ ಪ್ರಶ್ನೆ. ಒಂದು ವೇಳೆ ಎಪಿಎಲ್ ಕಾರ್ಡ್ ನವರಿಗೆ ಅಕ್ಕಿ, ಗೋಧಿಯನ್ನು ಕೊಡದೇ ಇದ್ದರೆ ಅವರಿಗೆನೂ ಕಷ್ಟವಾಗುವುದಿಲ್ಲ ಎಂದು ಯುಟಿ ಖಾದರ್ ಅವರು ಅಂದುಕೊಂಡಿದ್ದರೆ ಅದು ಶುದ್ಧ ತಪ್ಪು ಎಂದು ಮೊದಲೇ ಹೇಳಿಬಿಡುತ್ತೇನೆ. ಸಚಿವರೇ, ಒಂದು ಕುಟುಂಬ ಎಪಿಎಲ್ ಕಾರ್ಡ್ ಹೊಂದಿದೆ ಎಂದ ಮಾತ್ರಕ್ಕೆ ಅವರು ಶ್ರೀಮಂತರು ಅಥವಾ ಅನುಕೂಲಸ್ಥರು ಎಂದು ನೀವು ಅಂದುಕೊಳ್ಳಬಾರದು. ಇದು ಒಂದು ರೀತಿಯಲ್ಲಿ ಬ್ರಾಹ್ಮಣ ಕುಲದಲ್ಲಿ ಹುಟ್ಟಿದವರೆಲ್ಲರೂ ಶ್ರೀಮಂತರು, ಬೇರೆ ಕುಲದಲ್ಲಿ ಹುಟ್ಟಿದವರು ಬಡವರು ಎಂದು ಬಹಳ ಹಿಂದೆ ಸರಕಾರಗಳು ಅಂದುಕೊಂಡಿದ್ದ ಕಾರಣ ಇವತ್ತಿಗೂ ಮೀಸಲಾತಿ ಎನ್ನುವುದು ಕೆಲವು ಜಾತಿಗಳಿಗೆ ಮಾತ್ರ ಸೀಮಿತವಾಗಿದೆ. ಹೇಗೆ ಬ್ರಾಹ್ಮಣ ಕುಲದಲ್ಲಿ ಹುಟ್ಟಿದವರೆಲ್ಲರೂ ಸಿರಿವಂತರು ಅಲ್ಲವೋ ಅದೇ ರೀತಿಯಲ್ಲಿ ಎಪಿಎಲ್ ಕಾರ್ಡ್ ಹೊಂದಿದವರಿಗೆಲ್ಲ ಪಡಿತರ ಬೇಡಾ ಎಂದು ಸಚಿವರು ಅಂದುಕೊಳ್ಳಬಾರದು. ಅನೇಕ ಎಪಿಎಲ್ ಕಾರ್ಡ್ ಹೊಂದಿರುವವರಿಗೆ ಸರಿಯಾಗಿ ನೋಡಿದರೆ ನೀವು ಕೊಡುವ ಐದು ಕಿಲೋ ಅಕ್ಕಿ, ಐದು ಕಿಲೋ ಗೋಧಿ ಇಡೀ ತಿಂಗಳಿಗೆ ಸಾಕಾಗುವುದಿಲ್ಲ. ಅನೇಕ ಕುಟುಂಬಗಳು ಈ ಅಕ್ಕಿ, ಗೋಧಿಯನ್ನು ಬೆಳಗಿನ ತಿಂಡಿಗಳಾದ ದೋಸೆ, ಇಡ್ಲಿ ಸಹಿತ ಬೇರೆ ತಿಂಡಿಗಳಿಗೆ ಉಪಯೋಗಿಸುತ್ತಾರೆ. ಏಕೆಂದರೆ ದೋಸೆಯ ಅಕ್ಕಿಗೆ ಮಾರುಕಟ್ಟೆಯಲ್ಲಿ ಕಿಲೋಗೆ ಮೂವತ್ತು ರೂಪಾಯಿ ಇದೆ. ಹಾಗಿರುವಾಗ ಇದು ನಿಜಕ್ಕೂ ಮಧ್ಯಮ ವರ್ಗದವರಿಗೆ ಅನುಕೂಲಕರವಾಗುತ್ತಿತ್ತು. ಆದರೆ ಈಗ ನಾಲ್ಕು ತಿಂಗಳುಗಳಿಂದ ಎಪಿಎಲ್ ನವರು ಪಡಿತರ ಅಕ್ಕಿ, ಗೋಧಿಯ ಮುಖ ನೋಡಿಲ್ಲ. ಯಾವುದೇ ಸೂಚನೆ ನೀಡದೆ ಅದನ್ನು ನಿಲ್ಲಿಸಲಾಗಿದೆ. ರೇಶನ್ ಅಂಗಡಿಯಲ್ಲಿ ಕೇಳಿದರೆ ಎಪಿಎಲ್ ಕಾರ್ಡ್ ನವರಿಗೆ ಕೊಡಲು ಅಕ್ಕಿ, ಗೋಧಿ ಬಂದಿಲ್ಲ ಎನ್ನುವ ಉತ್ತರ. ಆಹಾರ ಮತ್ತು ಪಡಿತರ ಇಲಾಖೆಯ ಕಚೇರಿಗೆ ಹೋಗಿ ಕೇಳಿದರೆ ಎಲೋಟ್ ಮೆಂಟ್ ಆಗಿಲ್ಲ ಎನ್ನುವ ಸಮಜಾಯಿಷಿಕೆ.
ಹಾಗಾದರೆ ಎಪಿಎಲ್ ಕಾರ್ಡ್ ನವರಿಗೆ ಅಕ್ಕಿ, ಗೋಧಿ ಕೊಡುವುದು ಅಗತ್ಯ ಇಲ್ಲ ಎಂದು ಸಚಿವರು ತೀರ್ಮಾನಿಸಿಬಿಟ್ಟಿದ್ದಾರಾ? ಯಾರಾದರೂ ರೇಶನ್ ಕಾರ್ಡ್ ಮಾಡಿಸುತ್ತಾರೆ ಎಂದರೆ ಅದು ಶೋಕಿಗಾಗಿ ಅಲ್ಲ. ಶ್ರೀಮಂತರು ರೇಶನ್ ಕಾರ್ಡ್ ಮಾಡಿಸಲು ಹೋಗುವುದೇ ಇಲ್ಲ. ಒಂದು ತಿಂಗಳಲ್ಲಿ ಸರಿಯಾಗುತ್ತೆ, ಎರಡು ತಿಂಗಳಲ್ಲಿ ಸರಿಯಾಗುತ್ತೆ ಎಂದು ಅಂದುಕೊಂಡು ಕಾಯುತ್ತಾ ಇದ್ದ ಕಾರಣ ಈ ಸಮಸ್ಯೆಯನ್ನು ಸಚಿವರ ಗಮನಕ್ಕೆ ತರುವ ಅಗತ್ಯ ಕಂಡು ಬಂದಿರಲಿಲ್ಲ. ಯಾಕೆಂದರೆ ಒಂದು ವೇಳೆ ಹೇಳಿದ್ದರೂ ಒಂದು ತಿಂಗಳು ಪ್ರಾಬ್ಲಂ ಇದೆ ಎಂದು ಅವರು ನುಣುಚಿಕೊಳ್ಳುವ ಸಾಧ್ಯತೆ ಇತ್ತು. ಆದರೆ ಈಗ ನಾಲ್ಕು ತಿಂಗಳು ಆಗಿದೆ. ಇನ್ನು ಕೂಡ ಹೇಳದಿದ್ದರೆ ಎಪಿಎಲ್ ಕಾರ್ಡ್ ನವರಿಗೆ ಆಗುವ ಅನ್ಯಾಯದ ವಿರುದ್ಧ ಧ್ವನಿ ಎತ್ತದಂತೆ ಆಗುತ್ತದೆ ಎಂದು ಅಂದುಕೊಂಡು ಸಚಿವರ ಗಮನಕ್ಕೆ ಇದನ್ನು ತರಲೇಬೇಕಿದೆ. ಚುನಾವಣೆ ಹತ್ತಿರದಲ್ಲಿರುವುದರಿಂದ ಅವರು ಇನ್ನು ತಡ ಮಾಡಲಾರರು ಎಂದು ಬಾವಿಸುತ್ತೇನೆ.
Leave A Reply