ಈ ಬಾರಿಯ ಗಣರಾಜ್ಯೋತ್ಸವಕ್ಕೆ ಆಸಿಯಾನ್ ದೇಶಗಳ 10 ಮುಖಂಡರು ಅತಿಥಿಗಳು: ಮನ್ ಕೀ ಬಾತ್ ನಲ್ಲಿ ಮೋದಿ
ದೆಹಲಿ: ಈ ಬಾರಿಯ ಗಣರಾಜ್ಯೋತ್ಸವ ದಿನದಂದು ಆಸಿಯಾನ್ ರಾಷ್ಟ್ರಗಳ 10 ಪ್ರಮುಖ ನಾಯಕರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಮನ್ ಕೀ ಬಾತ್ ಸರಣಿಯ ವರ್ಷದ ಕೊನೆಯ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಣರಾಜ್ಯೋತ್ಸವ ನಮ್ಮ ದೇಶದ ಪಾಲಿಗೆ ಐತಿಹಾಸಿಕ. ಈ ಬಾರಿಯ ಆಚರಣೆ ವೇಳೆ ಆಸಿಯಾನ್ ದೇಶಗಳ ನಾಯಕರು ಪಾಲ್ಗೊಳ್ಳಲಿದ್ದಾರೆ. ದೇಶದ ಇತಿಹಾಸದಲ್ಲೇ ಆಸಿಯಾನ್ ನಾಯಕರು ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿಲ್ಲ. ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲಿದ್ದು ಭಾರತದ ಪಾಲಿಗೆ ಐತಿಹಾಸಿಕವಾಗಲಿದೆ ಎಂದಿದ್ದಾರೆ.
ಭಾರತದ ಅಭಿವೃದ್ಧಿ ಕುರಿತು ಸಹ ಮಾತನಾಡಿದ ಅವರು, ನವ ಭಾರತದ ನಿರ್ಮಾಣವೇ ನಮ್ಮ ಉದ್ದೇಶವಾಗಿದ್ದು, ಜಾತಿ, ಕೋಮುವಾದ, ಭ್ರಷ್ಟಾಚಾರ ಹಾಗೂ ಬಡತನದಿಂದ ಮುಕ್ತಗೊಳಿಸುವುದೇ ಆಗಿದೆ. ನವ ಭಾರತ ಎಂದರೆ ಅಲ್ಲಿ, ಶಾಂತಿ, ಏಕತೆ, ಸದ್ಭಾವನೆ ಸ್ಥಾಪಿಸುವುದೇ ಆಗಿದೆ ಎಂದು ಘೋಷಿಸಿದ್ದಾರೆ.
ನವ ಭಾರತದ ಕಲ್ಪನೆಯಲ್ಲೇ ಮಾತನಾಡುತ್ತ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜನರ ಒಂದು ಮತವೂ ಅಂತಿಮ ಪಾತ್ರ ನಿರ್ವಹಿಸಲಿದ್ದು, ಆ ಒಂದು ಮತವೇ ದೇಶದ ರೂಪಾಂತರಕ್ಕೆ ಸಾಕ್ಷಿಯಾಗುತ್ತದೆ. ನವಭಾರತದ ಯುವಕರು ಈ ದಿಸೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದು, ಎಲ್ಲರೂ ಮತ ಹಾಕಬೇಕು ಎಂದರು.
ನಾಳೆಯ ಜನವರಿ 1 ವಿಶೇಷ ದಿನವಾಗಿದೆ. 2000ನೇ ಇಸವಿಯಲ್ಲಿ ಜನಿಸಿದವರೆಲ್ಲರೂ ಈ ಹೊಸ ವರ್ಷಕ್ಕೆ 18 ವರ್ಷದವರಾಗಲಿದ್ದು, ಎಲ್ಲರೂ ಮತ ಹಾಕುವ ಹಕ್ಕು ಪಡೆದುಕೊಳ್ಳುತ್ತಾರೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವರೆಲ್ಲರನ್ನೂ ನಾವು ಸ್ವಾಗತಿಸುತ್ತೇವೆ ಎಂದು ಹೇಳಿದ್ದಾರೆ.
Leave A Reply