ಉಗ್ರ ಹಫೀಜ್ ಸಯೀದ್ ಆಸ್ತಿ ಮುಟ್ಟುಗೋಲಿಗೆ ಪಾಕ್ ನಿರ್ಧಾರ
ಭಾರತ ಸೇರಿ ವಿಶ್ವದ ನಾನಾ ರಾಷ್ಟ್ರಗಳಿಗೆ ಕಂಟಕವಾಗಿರುವ ಉಗ್ರ ಹಫೀಜ್ ಸಯೀದ್ ವಿರುದ್ಧ ಪಾಕಿಸ್ತಾನಕ್ಕೆ ವಿಶ್ವ ಸಮುದಾಯ ಆಗ್ರಹಿಸಿದರೂ, ಪದೇ ಪದೆ ಆತನ ರಕ್ಷಣೆಗೆ ನಿಲ್ಲುತ್ತಿದ್ದ ಪಾಕ್ ಸರ್ಕಾರ ಸಯೀದ್ ವಿರುದ್ಧ ಕ್ರಮಕ್ಕೆ ಮುಂದಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮುಂಬೈ ದಾಳಿ ಮಾಸ್ಟರ್ ಮೈಂಡ್ ಉಗ್ರ ಹಫೀಜ್ ಸಯೀದ್ ಗೆ ಸಂಬಂಧಿಸಿದ ಸಂಘಟನೆಗಳು, ಸೇವಾ ಸಂಸ್ಥೆಗಳು ಮತ್ತು ಆಸ್ತಿಯನ್ನು ಜಪ್ತಿಮಾಡಲು ಪಾಕ್ ಸರ್ಕಾರ ರಹಸ್ಯ ಸಭೆಯೊಂದರಲ್ಲಿ ನಿರ್ಧರಿಸಿದೆ ಎನ್ನಲಾಗಿದೆ. ಪಾಕಿಸ್ತಾನ ಸರ್ಕಾರ ಉಗ್ರ ಸಂಘಟನೆಗಳನ್ನು ಹತ್ತಿಕ್ಕಲು ಈ ನಿರ್ಧಾರವನ್ನು ಡಿಸೆಂಬರ್ 19 ರಂದು ನಡೆದ ಪ್ರಾಂತಿಯ ಸರ್ಕಾರದ ಪ್ರತಿನಿಧಿಗಳ ರಹಸ್ಯ ಸಭೆಯಲ್ಲಿ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಸಯೀದ್ ಸಂಘಟನೆಗಳಾದ ಜಮಾತ್ ಉದ್ ದಾವಾ ಮತ್ತು ಫಲಾಹ್ ಇ ಇನ್ಸಾನಿಯತ್ ಸಂಘಟನೆಗಳ ಪೂರ್ಣ ಸ್ವತ್ತನ್ನು ವಶಪಡಿಸಿಕೊಳ್ಳಬೇಕು ಎಂದು ಪಾಕಿಸ್ತಾನ ಸರ್ಕಾರ ಡಿಸೆಂಬರ್ 28ರಂದು ಆದೇಶ ಹೊರಡಿಸಿದೆ.
ಸಯೀದ್ ವಿರುದ್ಧ ಕ್ರಮಕ್ಕೆ ಪಾಕಿಸ್ತಾನ ಸರ್ಕಾರ ದಿಟ್ಟ ನಿರ್ಧಾರವನ್ನು ಕೈಗೊಳ್ಳಲು ಮುಂದಾಗಿದ್ದು, ಸಯೀದ್ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಈ ರಹಸ್ಯ ಸಭೆ ನಡೆಸಲಾಗಿದೆ. ಅಲ್ಲದೇ ಹಣಕಾಸು ಮತ್ತು ಕಾನೂನು ಇಲಾಖೆಯಿಂದ ಸೂಕ್ತ ದಾಖಲೆಗಳನ್ನು ಸಿದ್ಧಪಡಿಸಿದ್ದು, ಎಲ್ಲ ಆಸ್ತಿಯನ್ನು ವಶಕ್ಕೆ ಪಡೆಯುವಂತೆ ಸೂಚನೆ ನೀಡಲಾಗಿದೆ.
Leave A Reply