ಕಾಶ್ಮೀರದಲ್ಲಿ ಸೈನಿಕರು ಹತ್ಯೆ ಮಾಡಿದ್ದ ಆ ಮೂರನೇ ಉಗ್ರನ ಬಳಿ ಸಿಕ್ಕ ಚೀಟಿಯಲ್ಲಿ ಏನಿತ್ತು ಗೊತ್ತಾ?
ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೈನಿಕರು ಬರೋಬ್ಬರಿ 37 ತಾಸು ಕೈಗೊಂಡ ಕಾರ್ಯಾಚರಣೆ ಫಲ ನೀಡಿದ್ದು, ಮೂವರು ಉಗ್ರರನ್ನು ಹೊಡೆದುರುಳಿಸಲಾಗಿದೆ. ಈ ಉಗ್ರರಲ್ಲಿ ಮೂರನೇಯದಾಗಿ ಹೊಡೆದುರುಳಿಸಿದ ಉಗ್ರ ಮಾತ್ರ ಭಯಂಕರವಾಗಿದ್ದು, ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂದು ತಿಳಿದುಬಂದಿದೆ.
ಈ ಮೂರನೇ ಉಗ್ರ ಸಂಸತ್ ಮೇಲಿನ ದಾಳಿಯ ರೂವಾರಿ ಅಫ್ಜಲ್ ಗುರುವಿನ ಸಹಚರ ಎಂದು ತಿಳಿದುಬಂದಿದ್ದು, ಆತನ ಬಳಿ “ಅಫ್ಜಲ್ ಗುರು ಕಾ ಬದ್ಲಾ, (ಅಫ್ಜಲ್ ಗುರು ಗಲ್ಲಿಗೇರಿಸಿದ್ದಕ್ಕೆ ಸೇಡು)” ಎಂದು ಬರೆಯಲಾದ ಚೀಟಿಯೊಂದು ಸಿಕ್ಕಿದೆ ಎಂದು ಸಿಆರ್ ಪಿಎಫ್ ಮೂಲಗಳು ತಿಳಿಸಿವೆ.
2013ರಲ್ಲಿ ಉಗ್ರ ಅಫ್ಜಲ್ ಗುರುವನ್ನು ಗಲ್ಲಿಗೇರಿಸಿದ ಬಳಿಕ, ಅಂದರೆ 2014-15ರ ಅವಧಿಯಲ್ಲಿ ಜಮ್ಮು-ಕಾಶ್ಮೀರದಲ್ಲಾದ ಸರಣಿ ದಾಳಿಗಳಲ್ಲೂ ಚೀಟಿಗಳು ಸಿಕ್ಕಿದ್ದು, ಬಹುತೇಕ ಚೀಟಿಗಳ ಮೇಲೆ “ಅಫ್ಜಲ್ ಗುರು ನೇಣಿಗೇರಿಸಿದ್ದಕ್ಕೆ ಸೇಡು” ಎಂಬ ಒಕ್ಕಣೆ ಇರುವುದು ಪತ್ತೆಯಾಗಿದೆ. ಹಾಗಾಗಿ ಈ ಮೂರನೇ ಉಗ್ರನನ್ನು ಹತ್ಯೆ ಮಾಡಿರುವುದು ಮುನ್ನಡೆಯಾಗಿದೆ ಎಂದು ತಿಳಿದುಬಂದಿದೆ.
2016ರಲ್ಲಿ ಉಗ್ರರು ನಡೆಸಿದ ಪಠಾಣ್ ಕೋಟ್ ದಾಳಿ ವೇಳೆಯಲ್ಲೂ ಚೀಟಿಯೊಂದು ಪತ್ತೆಯಾಗಿತ್ತು ಹಾಗೂ ಅದರಲ್ಲಿ ನಾವು ಅಫ್ಜಲ್ ಗುರು ತಂಡದವರು ಎಂದು ಉಲ್ಲೇಖಿಸಲಾಗಿತ್ತು. ಈ ಅಂಶಗಳನ್ನು ಗಮನಿಸಿದರೆ ಅಫ್ಜಲ್ ಗುರು ಸಹಚರರೇ ಈ ಕೃತ್ಯ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಸೇನೆ ಮತ್ತಷ್ಟು ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಹೊಡೆದುರುಳಿಸಲಿ ಎನ್ನುವುದೇ ಆಶಯ.
Leave A Reply