ಜಾತಿ, ಭೇದ ಮರೆತು ಜನ್ಮಭೂಮಿಗಾಗಿ ಒಗ್ಗೂಡಿ: ಭಾಗವತ್ ಸಲಹೆ
ಉಜ್ಜಯಿನಿ: ಭಾರತದ ನಿವಾಸಿಗಳು ಜಾತಿ, ಧರ್ಮಗಳನ್ನು ಮರೆತು ಜನ್ಮಭೂಮಿಯ ಅಭ್ಯುದ್ಯಯಕ್ಕಾಗಿ ಹೋರಾಡಲು ಒಂದುಗೂಡಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘ ಚಾಲಕ ಮೋಹನ್ ಭಾಗವತ್ ಹೇಳಿದರು.
ಉಜ್ಜಯಿನಿಯಲ್ಲಿ ನಡೆದ ಭಾರತ ಮಾತೆಯ 16 ಅಡಿಯ ಪ್ರತಿಮೆ ಉದ್ಘಾಟನೆ ಕಾರ್ಯಕ್ರಮದಲ್ಲಿ, ಪ್ರತಿಮೆ ಉದ್ಘಾಟಿಸಿ ಮಾತನಾಡಿ, ಭಾರತ ಕೇವಲ ಭೂಮಿಯ ಒಂದು ಭಾಗವಲ್ಲ, ಇದು ಭಾವನೆಗಳನ್ನು, ಸಂಸ್ಕೃತಿಯನ್ನು, ದಿವ್ಯ ಸಂದೇಶವನ್ನು ನೀಡುವುದು ಸೇರಿ ಎಲ್ಲವನ್ನು ಮೀರಿದ್ದು ಎಂದು ಹೇಳಿದ್ದಾರೆ.
ಭಾರತವಾಸಿಗಳ ಮೂಲ ಗುರಿ ಜನ್ಮಭೂಮಿ ರಕ್ಷಿಸುವುದೇ ಆಗಿರಬೇಕು. ಜನರು ಜಾತಿವಾದ ದ್ವೇಷ, ಮತ್ಸರಗಳಿಂದ ಹೊರಬರಬೇಕು. ಆಗ ಜನ್ಮಭೂಮಿಯ ರಕ್ಷಣೆ ಆಗುತ್ತದೆ ಎಂದು ಹೇಳಿದರು.
ಅಣ್ಣಾದೊರೈ ಸ್ಮರಿಸಿದ ಭಾಗವತ್: ತಮಿಳುನಾಡಿನ್ ಖಟರ್ ದ್ರಾವಿಡವಾದಿ, ಡಿಎಂಕೆ ಪಕ್ಷದ ಸಂಸ್ಥಾಪಕ ಅಣ್ಣಾದೊರೈ ಅವರ ರಾಷ್ಟ್ರೀಯತೆಯನ್ನು ಮೋಹನ್ ಭಾಗವತ್ ಸ್ಮರಿಸಿದರು. ಹಿಂದೆ ಅಣ್ಣಾದೊರೈ ತಮಿಳುನಾಡನ್ನು ಪ್ರತ್ಯೇಕ ದೇಶ ಎಂದು ಘೋಷಿಸಿದ್ದರು. ಆದರೆ 1962ರಲ್ಲಿ ನಡೆದ ಚೀನಾ ಭಾರತದ ಯುದ್ಧದ ವೇಳೆ ತಮ್ಮ ನಿಲುವು ಬದಲಾಯಿಸಿ, ಅಖಂಡ ಭಾರತದ ಬೆಂಬಲಕ್ಕೆ ಅಣ್ಣಾದೊರೈ ನಿಂತಿದ್ದರು. ಅದೇ ವಾಸ್ತವದಲ್ಲಿ ರಾಷ್ಟ್ರೀಯತೆ ಎಂದು ಹೇಳಿದರು.
ಮಹಾರಾಷ್ಟ್ರದಲ್ಲಿ ಭೀಮಾ ಕೋರೆಗಾಂವ್ ವಿಜಯೋತ್ಸವದ ವೇಳೆ ಜಾತಿ ಹೆಸರಲ್ಲಿ ನಡೆದ ಗಲಭೆ ವೇಳೆಯೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಅವರ ಈ ಹೇಳಿಕೆ ತೀವ್ರ ಮಹತ್ವ ಪಡೆದುಕೊಂಡಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮತ್ತು ವಿಶ್ವಹಿಂದೂ ಪರಿಷತ್ ಸೇರಿ ಹಲವು ಹಿಂದೂಪರ ಸಂಘಟನೆಗಳು ದೇಶದಲ್ಲಿ ಜಾತಿ ವ್ಯವಸ್ಥೆ ತೊಡೆದು ಹಾಕಬೇಕು ಎಂದು ಶ್ರಮಿಸುತ್ತಿರುವುದು ಗಮನಾರ್ಹ.
Leave A Reply