ಹಜ್ ಸಬ್ಸಿಡಿ ಹಿಂಪಡೆದುದರ ಹಿಂದೆ ಯಾವ ಕೆಟ್ಟ ಉದ್ದೇಶವಿದೆ ಎಂದು ಹೇಳುವಿರಾ ಓಲೈಕೆ ರಾಜಕಾರಣಿಗಳೇ?
ಯಾರೇ ಆಗಲಿ, ಎಷ್ಟೇ ಬಡತನವಿರಲಿ ಹಾಗೂ ಅವರ ಸಂಬಂಧಿಕರು ಹಾಗೂ ಸ್ನೇಹಿತರ ನಡುವೆ ಬಾಂಧವ್ಯವಿರಲಿ. ದೇವಸ್ಥಾನ, ಯಾತ್ರೆಗೆ ತೆರಳಿದಾಗ ತೆಂಗಿನಕಾಯಿಯಿಂದ ಹಿಡಿದು ದೇವರ ಹುಂಡಿಗೆ ಹಣ ಹಾಕುವವರೆಗೂ ಅವರದ್ದೇ ಸ್ವಂತ ಹಣ ಬಳಸುತ್ತಾರೆ. ಬೇರೆಯವರ ಹಣ ಪಡೆಯುವುದಿಲ್ಲ. ಏಕೆಂದರೆ ತಮ್ಮ ಹಣದಲ್ಲಿ ದೇವರಿಗೆ ಭಕ್ತಿ ಸಂದಾಯವಾದರೆ ಮಾತ್ರ ಅದು ನಿಜವಾದ ಭಕ್ತಿ ಎಂದು ನಂಬಲಾಗುತ್ತದೆ ಹಾಗೂ ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ ಸಹ.
ಕೇಂದ್ರ ಸರ್ಕಾರ ಮುಸ್ಲಿಮರ ಪವಿತ್ರ “ಹಜ್ ಯಾತ್ರೆ”ಯ ಸಬ್ಸಿಡಿ ಹಣವನ್ನು ಇನ್ನು ಮುಂದೆ ನೀಡಲ್ಲ ಎಂದು ಹೇಳುವ ಮೂಲಕ ಓಲೈಕೆಯ ರಾಜಕಾರಣಕ್ಕೆ ಪೂರ್ಣವಿರಾಮ ನೀಡಿದೆ. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು, ಮುಸ್ಲಿಮರ ಏಳಿಗೆಯೊಂದನ್ನು ಬಿಟ್ಟು, ಅವರ ಓಲೈಕೆಯಲ್ಲೇ ಜೀವನಸಾಗಿಸುತ್ತಿರುವ ಓಲೈಕೆ ರಾಜಕಾರಣಿಗಳು, ಕೇಂದ್ರ ಸರ್ಕಾರದ ನಿರ್ಧಾರವನ್ನು ಟೀಕಿಸಲೇಬೇಕು ಎಂದು ಹೊರಟಿರುವ ಕುತ್ಸಿತ ರಾಜಕಾರಣಿಗಳು ಮಾತ್ರ ಹಜ್ ಯಾತ್ರೆ ಸಬ್ಸಿಡಿ ಹಿಂಪಡೆದುದಕ್ಕೆ ವಿರೋಧ ವ್ಯಕ್ತಪಡಿಸುತ್ತಾರೆ.
ಹೌದು, ಕೇಂದ್ರ ಸರ್ಕಾರ ಹಜ್ ಯಾತ್ರೆಯ ಸಬ್ಸಿಡಿ ಹಣ ವಾಪಸು ಪಡೆದ ತಕ್ಷಣವೇ ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೂ ಒಂದು ಹೆಜ್ಜೆ ಮುಂದೆ ಹೋದ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್, ಬಿಜೆಪಿಯ ಮುಸ್ಲಿಂ ದ್ವೇಷದ ಮನೋಭಾವನೆಯೇ ಸಬ್ಸಿಡಿ ರದ್ದುಗೊಳಿಸಲು ಕಾರಣ ಎಂದು ಟೀಕಿಸಿದ್ದಾರೆ.
ಹಾಗಾದರೆ ನಿಜವಾಗಿಯೂ ಕೇಂದ್ರ ಸರ್ಕಾರ ಮುಸ್ಲಿಮರ ವಿರೋಧ ಮನೋಭಾವನೆಯಿಂದಲೇ ಸಬ್ಸಿಡಿ ಹಿಂಪಡೆದಿದೆಯೇ? ಈ ರಾಜಕಾರಣಿಗಳು ಹೇಳುವ ಮಾತಿನಲ್ಲಿ ಹುರುಳಿದೆಯೇ? ಯಾವ ಕಾರಣಕ್ಕಾಗಿ ಕೇಂದ್ರ ಸರ್ಕಾರ ಸಬ್ಸಿಡಿ ರದ್ದುಪಡಿಸಿತು?
ಹಾಗೆ ಸುಮ್ಮನೆ ಯೋಚಿಸಿ ನೋಡಿ, ಕೇಂದ್ರ ಸರ್ಕಾರ ಹಜ್ ಯಾತ್ರೆ ಸಬ್ಸಿಡಿ ವಾಪಸು ಪಡೆದು ಸುಮ್ಮನಾಗಲಿಲ್ಲ. ಬದಲಾಗಿ ಆ ಹಣವನ್ನು ಮುಸ್ಲಿಂ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಮೀಸಲಿಡುವುದಾಗಿ ಘೋಷಣೆ ಮಾಡಿದೆ. ಹಾಗೊಂದು ವೇಳೆ ಕೇಂದ್ರ ಸರ್ಕಾರಕ್ಕೆ ಮುಸ್ಲಿಮರ ವಿರುದ್ಧ ದ್ವೇಷವಿದ್ದರೆ ಸುಮಾರು 700 ಕೋಟಿ ರೂಪಾಯಿಯನ್ನು ಏಕೆ ಮುಸ್ಲಿಮರ ಶಿಕ್ಷಣಕ್ಕೆ ಬಳಸುತ್ತಿತ್ತು? ಏಕೆ ಮುಸ್ಲಿಮರ ಸಬಲೀಕರಣಕ್ಕೆ ಹಣ ನೀಡುತ್ತೇನೆ ಎನ್ನುತ್ತಿತ್ತು? ಮುಸ್ಲಿಮರು ಸರ್ಕಾರದ ದುಡ್ಡಲ್ಲಿ ಹಜ್ ಯಾತ್ರೆ ಮಾಡಿದರೆ ಯಾವ ಸಾರ್ಥಕ್ಯ ಇದೆ? ಅದೇ ಮುಸ್ಲಿಮರು ಶಿಕ್ಷಣ ಹೊಂದಿ, ಭವಿಷ್ಯ ರೂಪಿಸಿಕೊಂಡು ಸ್ವಂತ ಹಣದಲ್ಲಿ ಹಜ್ ಯಾತ್ರೆ ಕೈಗೊಂಡರೆ ಅದು ಸ್ವಾವಲಂಬನೆಯ ಸಂಕೇತವಲ್ಲವೇ?
ಇನ್ನು ಹಜ್ ಯಾತ್ರೆಯ ಸಬ್ಸಿಡಿ ಹಣವನ್ನು ಹಂತ ಹಂತವಾಗಿ ಹಿಂಪಡೆಯಬೇಕು ಎಂದು 2012ರಲ್ಲಿಯೇ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆದರೆ ಮುಸ್ಲಿಮರ ಅಭಿವೃದ್ಧಿ ಬಿಟ್ಟು ಇನ್ನೆಲ್ಲ ಓಲೈಕೆ ಮಾಡಿದ ಕಾಂಗ್ರೆಸ್ ಸಬ್ಸಿಡಿ ರದ್ದುಪಡಿಸಿರಲಿಲ್ಲ. ಆದರೆ ಈಗ ಕೇಂದ್ರ ಸರ್ಕಾರ ಸುಪ್ರೀಂ ನಿರ್ದೇಶನದಂತೆ ಸಬ್ಸಿಡಿ ರದ್ದುಗೊಳಿಸಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಈ ಕ್ರಮ ಕೈಗೊಂಡಿದ್ದು ತಪ್ಪೇ?
ಹಾಗೊಂದು ವೇಳೆ ಮುಸ್ಲಿಮರ ಮೇಲೆ ದ್ವೇಷ ಇಟ್ಟುಕೊಂಡೇ ಕೇಂದ್ರ ಸರ್ಕಾರ ಸಬ್ಸಿಡಿಗೊಳಿಸಿದ್ದರೆ ಕರ್ನಾಟಕದ ಸಚಿವರಾದ ರೋಷನ್ ಬೇಗ್ ಹಾಗೂ ಯು.ಟಿ.ಖಾದರ್ ಅವರೇ ಕೇಂದ್ರದ ನಿರ್ಧಾರವನ್ನು ಸ್ವಾಗತಿಸುತ್ತಿದ್ದರೇ? ಓಲೈಕೆಯನ್ನೇ ರಾಜಕಾರಣವನ್ನಾಗಿ ಮಾಡಿಕೊಂಡಿರುವ ಇವರಿಂದ ಮತ್ತಿನ್ನೇನನ್ನು ನಿರೀಕ್ಷಿಸುವುದು ಸಾಧ್ಯ ಬಿಡಿ!
Leave A Reply