ಬಿಜೆಪಿ ಅಶ್ವಮೇಧ ಕಟ್ಟಿಹಾಕಲು ಕಾಂಗ್ರೆಸ್ 2024ರವರೆಗೆ ಕಾಯಬೇಕು: ಪ್ರಕಾಶ್ ಅಂಬೇಡ್ಕರ್
ದೆಹಲಿ: ಕಾಂಗ್ರೆಸ್ ಮುಕ್ತ ಭಾರತ ಎಂದು ಬಿಜೆಪಿ ರಾಷ್ಟ್ರಾಧ್ಯಂತ ಜಯಭೇರಿ ಭಾರಿಸುತ್ತಿದೆ. ಅದಕ್ಕೆ ಪೂರಕವಾಗಿ ಕಾಂಗ್ರೆಸ್ ಇನ್ನಷ್ಟು ಹೀನಾಯ ಸ್ಥಿತಿಗೆ ಇಳಿಯುತ್ತದೆ. 2024ರವರೆಗೆ ಕಾಂಗ್ರೆಸ್ ಅಧಿಕಾರಕ್ಕೇರುವುದು ಕಷ್ಟ. ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್ ಗೆ ಆಗುವುದಿಲ್ಲ ಎಂದು ಹೇಳಿದವರು ಪ್ರಧಾನಿ ನರೇಂದ್ರ ಅವರ ಕೆಲವು ನಿರ್ಧಾರಗಳ ಕಟು ಟೀಕಿಸುತ್ತಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಮೊಮ್ಮಗ, ದಲಿತ ಮುಖಂಡ ಪ್ರಕಾಶ್ ಅಂಬೇಡ್ಕರ್.
ಮುಂಬೈ ಮರಾಠಿ ಪತ್ರಕರ್ತರ ಸಂಘ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ರಹಿತ, ಸ್ವಚ್ಛ ವ್ಯಕ್ತಿತ್ವ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಲಿದೆ. ಮಧ್ಯಪ್ರದೇಶ, ರಾಜಸ್ಥಾನ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳ ಜೊತೆಗೆ ಲೋಕಸಭೆ ಚುನಾವಣೆಯನ್ನು ಬಿಜೆಪಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಕೆಲವು ತಪ್ಪು ಮಾಡಿರಬಹುದು. ಆದರೆ ಭ್ರಷ್ಟಾಚಾರ ರಹಿತ ವ್ಯಕ್ತಿತ್ವ ಹೊಂದಿದ್ದಾರೆ. ಮೋದಿ ತಮ್ಮ ಭಾಷಣದಲ್ಲಿ ಕಾಂಗ್ರೆಸ್’ನ ಹುಳುಕು ಎತ್ತಿತೋರಿಸುತ್ತಾರೆ. ಅದನ್ನು ಎದುರಿಸುವುದು ಕಾಂಗ್ರೆಸ್’ಗೆ ಸಾಧ್ಯವಿಲ್ಲ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉತ್ತಮ ನಡತೆ ಹೊಂದಿದ್ದಾರೆ. ಆದರೆ, ಕಾಂಗ್ರೆಸ್’ನ ಇತರ ನಾಯಕರಿಗೆ ಅಂತಹ ವ್ಯಕ್ತಿತ್ವ ಇಲ್ಲ. ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್’ಗೆ ಸಾಧ್ಯವಾಗುತ್ತಿಲ್ಲ. 2024ರ ವರೆಗೂ ಕಾಂಗ್ರೆಸ್ ಬಿಜೆಪಿಯನ್ನು ಮಣಿಸಿ ಅಧಿಕಾರ ಹಿಡಿಯಲಾರದು ಎಂದು ಅಂಬೇಡ್ಕರ್ ಹೇಳಿದ್ದಾರೆ.
2019 ಲೋಕಸಭೆ ಚುನಾವಣೆಯಲ್ಲಿ ಪ್ರತಿ ಪಕ್ಷಗಳು ಬಿಜೆಪಿ ವಿರುದ್ಧ ಮಹಾಮೈತ್ರಿ ಮಾಡಿಕೊಂಡು ಒಗ್ಗಟ್ಟಾಗಿ ಹೋರಾಡಿದರೆ ರಾಜಕೀಯ ಚಿತ್ರಣ ಬದಲಾಗಬಹುದು. ಎಡಪಕ್ಷಗಳು ಮೋದಿ ಅವರ ಭ್ರಷ್ಟಾಚಾರ ರಹಿತ ವ್ಯಕ್ತಿತ್ವಕ್ಕೆ ಪೈಪೋಟಿ ನೀಡಬಲ್ಲವು.ಮಹಾಮೈತ್ರಿಯಾದರೆ ಬಿಜೆಪಿ ಸಂಖ್ಯೆ ಕುಸಿಯಬಹುದು. ಕರ್ನಾಟಕ ಚುನಾವಣಾ ಭವಿಷ್ಯ ದೆಹಲಿಯಲ್ಲಿ ಮುಂದಿನ ಸರ್ಕಾರವನ್ನು ನಿರ್ಧರಿಸುತ್ತದೆ ಎಂದು ಪ್ರಕಾಶ್ ಅಂಬೇಡ್ಕರ್ ಅಭಿಪ್ರಾಯಪಟ್ಟಿದ್ದಾರೆ.
ಮೋದಿ ನಿಯಮಗಳ ವಿರೋಧಿ ಪ್ರಕಾಶ್ ಅಂಬೇಡ್ಕರ್: ಪ್ರಧಾನಿ ನರೇಂದ್ರ ಮೋದಿ ದಲಿತರನ್ನು ಓಲೈಸುವ ಯತ್ನವನ್ನು ಅಸ್ಪಷ್ಟ ಬೂಟಾಟಿಕೆ ಎಂದು ಪ್ರಕಾಶ್ ಅಂಬೇಡ್ಕರ್ ಟೀಕಿಸಿದ್ದರು. ಇತ್ತೀಚೆಗೆ ಭೀಮಾ-ಕೋರೆಗಾಂವ್ ಹಿಂಸಾಚಾರ ಖಂಡಿಸಿ ಮಹಾರಾಷ್ಟ್ರ ಬಂದ್’ಗೆ ಕರೆ ನೀಡಿದ್ದರು.
Leave A Reply