ಮಂಗಳೂರು ನಗರ ದಕ್ಷಿಣದಲ್ಲಿ ಬಿಜೆಪಿ ಗೆಲ್ಲಬೇಕಾದರೆ!
ಈ ಬಾರಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಾರ್ಟಿಗೆ ಗೆಲ್ಲುವ ಚಾನ್ಸ್ ಜಾಸ್ತಿ ಇದೆ. ಕಳೆದ ಬಾರಿ ಏನಾಗಿತ್ತು ಎಂದರೆ 1994 ರಿಂದ 2013 ರ ತನಕ ಸುಮಾರು ಹತ್ತೊಂಭತ್ತು ವರ್ಷ ಎನ್ ಯೋಗೀಶ್ ಭಟ್ ಅವರನ್ನು ನೋಡಿ ಬರುತ್ತಿದ್ದ ಮತದಾರ ರಾಜ್ಯ ಬಿಜೆಪಿಯಲ್ಲಿ ಆದ ಗೊಂದಲದಿಂದ ಯೋಗೀಶ್ ಭಟ್ಟರನ್ನು ಕೂಡ ಪಕ್ಕಕ್ಕೆ ಇಟ್ಟು ತನಗೆ ಬಿಜೆಪಿಯ ಸಹವಾಸವೇ ಈ ಸಲ ಬೇಡಾ ಎಂದು ಬಿಟ್ಟಿದ್ದ.
ಆ ಮೂಲಕ ಅಜಾತಶತ್ರು ಎಂದೇ ಗುರುತಿಸಿಕೊಂಡಿದ್ದ, ಬಂದರಿನ ಮುಸ್ಲಿಮ್ ವ್ಯಾಪಾರಿಗಳಿಗೂ ಮೆಚ್ಚಿನ ಆಯ್ಕೆಯಾಗಿದ್ದ, ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪ್ರಮುಖರಿಗೂ ಓಕೆಯಾಗಿದ್ದ ಯೋಗೀಶ್ ಭಟ್ ಅವರು ಸೋಲುವ ಸಾಧ್ಯತೆ ಇಲ್ಲದಿದ್ದರೂ ಸೋಲಿನ ಮುಖ ಕಾಣಬೇಕಾಯಿತು. ಅವರ ಬಳಿ ಒಬ್ಬ ಹಿಂದೂವೇ ಹೋಗಿ ತಾನು ಇಂತಿಂತಹ ತಪ್ಪು ಮಾಡಿದ್ದೇನೆ, ಪೊಲೀಸರಿಗೆ ಹೇಳಿ ತಪ್ಪಿಸಿ ಎಂದು ಹೇಳಿದರೂ ಯೋಗೀಶ್ ಭಟ್ ಯಾವತ್ತೂ ಕೂಡ ಪೊಲೀಸ್ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿರಲಿಲ್ಲ. ಅದರ ಬದಲಿಗೆ ಬಂದ ವ್ಯಕ್ತಿಗೆನೆ ಬುದ್ಧಿವಾದ ಹೇಳಿ ಮುಂದೆ ಹೀಗೆ ಮಾಡಬೇಡಾ, ಈ ಬಾರಿ ಕಾನೂನು ಏನು ಹೇಳುತ್ತದೆಯೋ ಅದಕ್ಕೆ ಶಿರಬಾಗಬೇಕಾಗುವುದು ನಮ್ಮ ಕರ್ತವ್ಯ ಎನ್ನುತ್ತಿದ್ದರು. ಒಂದು ವೇಳೆ ಪೊಲೀಸರು ತಮ್ಮ ಹುಡುಗನನ್ನು ಎತ್ತಾಕಿಕೊಂಡು ಹೋಗಿದ್ದಾರೆ ಎಂದು ಯಾರದ್ದಾದರೂ ಮನೆಯವರೇ ಬಂದು ಹೇಳಿದರೂ ಯೋಗೀಶ್ ಭಟ್ ಪೊಲೀಸ್ ಇನ್ಸಪೆಕ್ಟರ್ ಅವರಿಗೆ ಫೋನ್ ಮಾಡಿ ಸತ್ಯಾಸತ್ಯತೆ ಪರೀಕ್ಷಿಸಿ ಕಾನೂನಿನ ಪರಿಮಿತಿಯೊಳಗೆ ಏನಾದರೂ ಮಾಡಲು ಸಾಧ್ಯವಿದ್ದರೆ ಮಾಡಿ, ಕಾನೂನು ಬಿಟ್ಟು ಏನೂ ಮಾಡುವುದು ಬೇಡಾ ಎನ್ನುತ್ತಿದ್ದರೆ ವಿನ: ಯಾವತ್ತೂ ಅವನು ನಮ್ಮ ಹುಡುಗ, ನಮ್ಮ ಪಕ್ಷದವ, ನಮ್ಮ ಧರ್ಮದವ ಎಂದು ಹೇಳಿ ಪೊಲೀಸರ ಮೇಲೆ ಒತ್ತಡ ಹಾಕುತ್ತಿರಲಿಲ್ಲ. ಅವರು ಅಧಿಕಾರದಿಂದ ಇಳಿದ ಬಳಿಕ ಜೆ ಆರ್ ಲೋಬೋ ಅವರು ಶಾಸಕರಾದರು. ಈಗ ನೀವು ಯಾವುದಾದರೂ ಹಿಂದೂ ಸಂಘಟನೆಯ ಹುಡುಗರತ್ರ ಕೇಳಿ ನೋಡಿ, ಹೇಗೆ ನಮ್ಮ ಶಾಸಕರು ಅಂತ. ಯೋಗೀಶ್ ಭಟ್ಟರೇ ಎಷ್ಟೋ ಪಾಲು ಬೆಟರ್ ಎನ್ನುತ್ತಾರೆ. ಶಾಸಕ ಜೆ ಆರ್ ಲೋಬೋ ಅವರು ಅನೇಕ ಪ್ರಕರಣಗಳಲ್ಲಿ ವರ್ತಿಸಿದ ಶೈಲಿಯಿಂದ ಈ ಬಾರಿ ನಮ್ಮ ಪಕ್ಷದ ಶಾಸಕರೇ ಗೆಲ್ಲಬೇಕು ಎನ್ನುವ ಹುಮ್ಮಸ್ಸು ಬಿಜೆಪಿಯ ಪ್ರತಿಯೊಬ್ಬ ತಳಮಟ್ಟದ ಕಾರ್ಯಕರ್ತರಿಗೆ ಇದೆ. ಅವರಿಗೆ ತಾರತಮ್ಯ ಅನುಭವಿಸಿ ಸಾಕಾಗಿ ಹೋಗಿದೆ.
ಮಂಗಳೂರು ದಕ್ಷಿಣ ಬಿಜೆಪಿಯಲ್ಲಿ ಆಕಾಂಕ್ಷಿಗಳ ಪಟ್ಟಿ ಎಟೆಂಡೆನ್ಸ್ ಬುಕ್ ನಷ್ಟಿದೆ.
ಶಾಸಕ ಜೆ ಆರ್ ಲೋಬೋ ಅವರ ವಿರುದ್ಧ ಹೋರಾಡಿ ಪಕ್ಷವನ್ನು ಗೆಲ್ಲಿಸುವ ಸಾಮರ್ತ್ಯಕ್ಕಿಂತ ತಾನು ಶಾಸಕನಾಗಬೇಕು ಎಂದುಕೊಳ್ಳುವವರ ಸಂಖ್ಯೆ ಮಂಗಳೂರು ನಗರ ದಕ್ಷಿಣ ಬಿಜೆಪಿಯಲ್ಲಿ ದಿನ ಹೋದಹಾಗೆ ಹನುಮಂತನ ಬಾಲದಂತೆ ಬೆಳೆಯುತ್ತಿದೆ. ಮೊದಲಿಗೆ ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ಡಿ ವೇದವ್ಯಾಸ ಕಾಮತ್ ಹಾಗೂ ಮಾಜಿ ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿಯವರ ಹೆಸರು ಮಾತ್ರ ಇತ್ತು. ಕೆಲವು ದಿನಗಳ ಬಳಿಕ ಬದ್ರಿನಾಥ್ ಕಾಮತ್ ಅವರ ಹೆಸರನ್ನು ಅವರ ಹಿಂಬಾಲಕರು ಪ್ರಚಾರ ಮಾಡಿದರು. ಅದಕ್ಕೆ ಕೆಲವು ದಿನಗಳ ಬಳಿಕ ಬ್ರಿಜೇಶ್ ಚೌಟ ಅವರಿಗೆ ಕೊಡಬೇಕು ಎಂದು ಅವರ ಆಪ್ತರು ಗುಸುಗುಸು ಮಾತನಾಡಲು ಶುರು ಮಾಡಿದರು. ಅಷ್ಟಿರುವಾಗ ಪಕ್ಷ ತನಗೆ ಟಿಕೇಟ್ ಕೊಟ್ಟರೆ ತಾನು ರೆಡಿ ಎಂದು ಸತೀಶ್ ಪ್ರಭು ಕೂಡ ತಯಾರಾದರು.
ಕಥೆ ಹೀಗೆ ಇರುವಾಗ ಕಳೆದ ವಾರ ಬಜ್ಪೆ ಠಾಣೆಯ ಸಬ್ ಇನ್ಸಪೆಕ್ಟರ್ ಮದನ್ ಅವರು ಪೊಲೀಸ್ ಇಲಾಖೆಗೆ ರಾಜೀನಾಮೆ ನೀಡಿ ಚುನಾವಣಾ ಕಣಕ್ಕೆ ಇಳಿಯುವ ಮುನ್ಸೂಚನೆ ನೀಡಿದ್ದಾರೆ. ಅವರು ದಕ್ಷಿಣದ ಬಿಜೆಪಿ ಅಭ್ಯರ್ಥಿ ಎಂದು ಪ್ರಚಾರ ಮಾಡಲಾಗುತ್ತಿದೆ. ಈಗ ಲೇಟೆಸ್ಟ್ ನ್ಯೂಸ್ ಎಂದರೆ ಎಂ ಬಿ ಪುರಾಣಿಕ್ ಅವರನ್ನು ಪಕ್ಷ ಆಯ್ಕೆ ಮಾಡಿದೆ, ಅವರಿಗೆ ಎಲ್ಲರೂ ಬೆಂಬಲಿಸಿ ಎಂದು ಕೆಲವರು ತಾವೇ ಅಮಿತ್ ಶಾ ಎನ್ನುವಂತೆ ಫೋಸ್ ಕೊಟ್ಟು ಸಾಮಾಜಿಕ ತಾಣಗಳಲ್ಲಿ ಸುದ್ದಿ ಮಾಡುತ್ತಿದ್ದಾರೆ. ಇನ್ನೋಂದು ತಿಂಗಳಲ್ಲಿ ಈ ಪಟ್ಟಿಗೆ ಇನ್ನೇರಡು ಮೂರು ಹೆಸರುಗಳು ಸೇರಿದರೆ ಅಶ್ಚರ್ಯವಿಲ್ಲ. ಇದರಿಂದ ಏನಾಗುತ್ತೆ ಎಂದರೆ ಪಕ್ಷ ಕಟ್ಟುವುದಕ್ಕಿಂತ, ಕಾಂಗ್ರೆಸ್ಸಿನ ವೈಫಲ್ಯಗಳ ಚಾರ್ಜ್ ಶೀಟ್ ತಯಾರು ಮಾಡುವುದಕ್ಕಿಂತ, ಕೇಂದ್ರ ಸರಕಾರದ ಒಳ್ಳೋಳ್ಳೆಯ ಕಾರ್ಯಗಳ ಪ್ರಯೋಜನವನ್ನು ಜನರಿಗೆ ತಲುಪಿಸುವುದಕ್ಕಿಂತ ಎಲ್ಲಾ ಮುಖಂಡರಿಗೆ ಮತ್ತು ಅವರ ಹಿಂಬಾಲಕರಿಗೆ ತಮ್ಮ ನಾಯಕನ ಪಕ್ಷದೊಳಗಿನ ಎದುರಾಳಿಗೆ ಹೇಗೆ ಹಸಿ ಮೆಣಸು ತಿನ್ನಿಸುವುದು ಎನ್ನುವುದೇ ರಣತಂತ್ರವಾಗಿದೆ. ಎದುರಾಳಿ ಜೆ ಆರ್ ಲೋಬೋ ಎನ್ನುವುದು ಬಿಜೆಪಿಯ ಟಿಕೆಟ್ ಅಕಾಂಕ್ಷಿಗಳಿಗೆ ಮರೆತು ಹೋಗಿದೆಯೇನೋ ಎಂದು ಅನಿಸುತ್ತದೆ. ಇದು ಜೆ ಆರ್ ಲೋಬೋ ಅವರಿಗೆ ವರದಾನ ಆಗುವ ಚಾನ್ಸ್ ಇದೆ. ಇದು ಹೀಗೆ ಮುಂದುವರೆದರೆ ಇಲೆಕ್ಷನ್ ಬಂದು ಹೋದರೂ ಇವರು ಪರಸ್ಪರ ಕತ್ತಿ ಮಸೆಯುವುದರಲ್ಲಿಯೇ ಮೈಮರೆಯುತ್ತಾರೆನೋ ಎಂದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಹಿಂದೆ ನಿಲ್ಲಿ ಎಂದರೆ ನನಗೆ ಬೇಡಾ ಎಂದವರೇ ಜಾಸ್ತಿ.
ಹಿಂದೆ ಬಿಜೆಪಿಯಲ್ಲಿ ಹೀಗಿರಲಿಲ್ಲ. ಯಾವುದಾದರೂ ಚುನಾವಣೆಗೆ ಪಕ್ಷದಿಂದ ಅಭ್ಯರ್ಥಿಗಳನ್ನು ನಿಲ್ಲಿಸಲು ಮುಖಂಡರು ದುರ್ಬಿನ್ ಹಿಡಿದು ಹುಡುಕಬೇಕಿತ್ತು. ಎಂಎಲ್ ಎ ಆಗುವುದು, ಎಂಪಿ ಆಗುವುದತ್ತ ಬಿಜೆಪಿಯ ಕಾರ್ಯಕರ್ತರಿಗೆ ಆಸಕ್ತಿಯೇ ಇರಲಿಲ್ಲ. ಪಕ್ಷ ಗೆಲ್ಲುವುದು ಮುಖ್ಯ, ಯಾರು ನಿಂತರೂ ನಮಗೇನು ಎನ್ನುವಂತಹ ಭಾವನೆ ಇತ್ತು. ಎಂಎಲ್ ಎ ಇಲೆಕ್ಷನ್ ಗೆ ಸಿಜಿ ಕಾಮತ್ ಅವರಿಗೆ ಟಿಕೇಟ್ ಕೊಟ್ಟರೆ ಬಳಿಕ ಎಂಪಿ ಇಲೆಕ್ಷನ್ ಬಂದಾಗ ನಿಲ್ಲುವ ಆಸಕ್ತಿ ಯಾರಿಗೂ ಇಲ್ಲದೆ ಕೊನೆಗೆ ಸಿಜಿ ಕಾಮತರೇ ನಿಲ್ಲಬೇಕಾಯಿತು. ನಾವು ಬೇಕಾದರೆ ಇಡೀ ದಿನ ಚುನಾವಣಾ ಪ್ರಚಾರ ಮಾಡುತ್ತೇವೆ, ನಮಗೆ ಎಂಎಲ್ ಎ, ಎಂಪಿ ಸ್ಥಾನಕ್ಕೆ ನಿಲ್ಲಲು ಹೇಳಬೇಡಿ ಎಂದೇ ನೂರಕ್ಕೆ ತೊಂಭತ್ತೈದು ಕಾರ್ಯಕರ್ತರ ಅನಿಸಿಕೆಯಾಗಿತ್ತು. ತಿಂಗಳಿಡಿ ಕೇವಲ ಅವಲಕ್ಕಿ, ಸಜ್ಜಿಗೆ ತಿಂದು ಪ್ರಚಾರ ಮಾಡಿ ಮೊದಲ ಬಾರಿಗೆ ಧನಂಜಯ್ ಕುಮಾರ್ ಎಂಎಲ್ ಎ ಆದಾಗ ಆ ಖುಷಿ ಕಾರ್ಯಕರ್ತರಲ್ಲಿ ನೋಡಬೇಕಿತ್ತು. ಮತ್ತೆ ಧನಂಜಯ್ ಕುಮಾರ್ ಎಂಪಿ ಸ್ಥಾನಕ್ಕೂ ನಿಲ್ಲಬೇಕಾಯಿತು. ಆಗಲೂ ಪಕ್ಷದಲ್ಲಿ ಸ್ಪರ್ಧೆಗಳಿರಲಿಲ್ಲ. ಆದರೆ ಪ್ರತಿಯೊಬ್ಬ ಕಾರ್ಯಕರ್ತ, ಮುಖಂಡ ಕೂಡ ತಾನೇ ಎಂಎಲ್ ಎ ಅಥವಾ ಎಂಪಿ ಎಂದೇ ಕೆಲಸ ಮಾಡಿದರು.
ಈ ಬಾರಿ ಕಾಂಗ್ರೆಸ್ ಗೆದ್ದರೆ ಅದು ಬಿಜೆಪಿಯ ಆಂತರಿಕ ವಿಷಯ.
ಆದರೆ ಈಗ ಹಾಗಿಲ್ಲ. ಪಕ್ಷಕ್ಕೆ ಮತ್ತೆ ಕೆಲಸ ಮಾಡುತ್ತೇನೆ, ಮೊದಲು ಟಿಕೆಟ್ ಕನ್ ಫರ್ಮ್ ಮಾಡಿ ಎನ್ನುತ್ತಾನೆ. ಅಂತಿಮವಾಗಿ ಒಂದು ಕ್ಷೇತ್ರಕ್ಕೆ ಒಬ್ಬ ವ್ಯಕ್ತಿಗೆ ಮಾತ್ರ ಸಿಗುವುದು. ಉಳಿದವರು ತಾವು ಕೂಡ ಅಭ್ಯರ್ಥಿ ಎಂದು ಕೆಲಸ ಮಾಡಿದರೆ ಬಿಜೆಪಿ ಗೆಲ್ಲುತ್ತದೆ, ಒಂದು ವೇಳೆ ತಮಗೆ ಸಿಗಲಿಲ್ಲ ಎಂದು ಮಲಗಿದರೆ ಪಕ್ಷ ಕೂಡ ಇಲ್ಲಿ ಮಲಗಲಿದೆ. ಲೋಬೋ ಮತ್ತೆ ಮಲಗಿಕೊಂಡೇ ಚುನಾವಣೆ ಗೆಲ್ಲುವ ಚಾನ್ಸ್ ಇದೆ!
Leave A Reply