ನ್ಯಾಯಮೂರ್ತಿಗಳೇ ಸಮಸ್ಯೆ ಬಗೆಹರಿಸಿಕೊಂಡ ಮೇಲೆ ದೋಷಾರೋಪಣ ಮಂಡನೆ ಏಕೆ?
ಭಾರತದಲ್ಲಿ ಮಾತ್ರ ಹೀಗೆ ಆಗಲು ಸಾಧ್ಯವೇನೋ? ಅತ್ತ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಿಡ್ಜರ್ ಲೆಂಡಿನಲ್ಲಿ ನಡೆಯುತ್ತಿರುವ ವಿಶ್ವ ಎಕನಾಮಿಕ್ ಫೋರಂನಲ್ಲಿ ಭಾರತದ ಘನತೆಯನ್ನು ಎತ್ತಿ ಹಿಡಿಯುತ್ತಿದ್ದರೆ, ಭಾರತದಲ್ಲಿ ಮಾತ್ರ ಪ್ರತಿಪಕ್ಷಗಳು, ನರೇಂದ್ರ ಮೋದಿ ವಿರೋಧಿಗಳು, ಬುದ್ಧಿಜೀವಿಗಳು ಮಾತ್ರ ಪ್ರತಿಯೊಂದು ವಿಷಯದಲ್ಲೂ ರಾಜಕೀಯ ಮಾಡುತ್ತಾರೆ ಹಾಗೂ ಯಾವ ವಿಷಯದಲ್ಲಿ ರಾಜಕೀಯ ಮಾಡಬೇಕು ಎಂದು ಹವಣಿಸುತ್ತಿರುತ್ತಾರೆ?
ಮೊನ್ನೆಯ ನ್ಯಾಯಮೂರ್ತಿಗಳ ಪ್ರಕರಣವನ್ನೇ ತೆಗೆದುಕೊಳ್ಳಿ, ಇಡೀ ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸುದ್ದಿಗೋಷ್ಠಿ ನಡೆಸಿ, ಮುಖ್ಯ ನ್ಯಾಯಮೂರ್ತಿಗಳ ವಿರುದ್ಧ ಆರೋಪ ಮಾಡಿದರು.
ಆದರೆ, ಇಷ್ಟಕ್ಕೇ ಧುತ್ತನೆ ಎದ್ದ ಪ್ರತಿಪಕ್ಷಗಳು ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ ಎಂದು ಆರೋಪಿಸಿದರು. ಮಮತಾ ಬ್ಯಾನರ್ಜಿಯವರು “ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿದ ಕಾರಣಕ್ಕೇ ಹೀಗಾಗಿದೆ” ಎಂದರೆ, ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿದ್ದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರಂತೂ “ಭಾರತದ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ” ಎಂದುಬಿಟ್ಟರು.
ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಸಿಪಿಎಂ ಮುಂಬರುವ ಬಜೆಟ್ ಅಧಿವೇಶನದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ವಿರುದ್ಧ ದೋಷಾರೋಪಣ ಪ್ರಕಟಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ದೋಷಾರೋಪಣ ಸಲ್ಲಿಸಿ, ನ್ಯಾಯಮೂರ್ತಿಗಳನ್ನು ಕೆಳಗಿಳಿಸುವ ಹುನ್ನಾರ ಸಿಪಿಎಂನದ್ದು.
ಆದರೆ, ದೀಪಕ್ ಮಿಶ್ರಾ ವಿರುದ್ಧ ದೀಪಕ್ ಮಿಶ್ರಾ ವಿರುದ್ಧ ದೋಷಾರೋಪಣ ಸಲ್ಲಿಸಲು ಅವರು ಮಾಡಿರುವ ತಪ್ಪಾದರೂ ಏನು? ಸುಪ್ರೀಂ ನ್ಯಾಯಮೂರ್ತಿಗಳು ಆರೋಪ ಮಾಡಿದ ಮಾತ್ರಕ್ಕೆ ದೀಪಕ್ ಮಿಶ್ರಾ ಅಪರಾಧಿಯೇ? ಅವರ ವಿರುದ್ಧ ಏಕೆ ದೋಷಾರೋಪಣ ಸಲ್ಲಿಸಬೇಕು?
ಖಂಡಿತವಾಗಿಯೂ ದೀಪಕ್ ಮಿಶ್ರಾ ವಿರುದ್ಧ ದೋಷಾರೋಪಣ ಮಂಡಿಸಲು ಸಿಪಿಎಂ ಸೇರಿ ಎಲ್ಲ ಪಕ್ಷಗಳಿಗೂ ಇದೆ. ಸಂಸತ್ತಿನಲ್ಲಿ ಅಂಥಾದ್ದೊಂದು ಅವಕಾಶವಿದೆ. ಆದರೆ ಏಕೆ ಎಂಬುದೇ ಯಾರಿಗೂ ತಿಳಿಯುತ್ತಿಲ್ಲ.
ಹೌದು, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಮಾಡಿದ ಆರೋಪ ಗಂಭೀರವಾಗಿದೆ. ಹಾಗಾಗಿ ಇದನ್ನು ಯಾರೂ ನಿರ್ಲಕ್ಷಿಸುವಂತಿಲ್ಲ. ಹಾಗಂತ ದೋಷಾರೋಪಣ ಹೊರಡಿಸಿ ಮುಖ್ಯ ನ್ಯಾಯಮೂರ್ತಿಗಳನ್ನು ಕೆಳಗಿಳಿಸುವ ಹಂತ ತಲುಪಿಲ್ಲ.
ಅಷ್ಟಕ್ಕೂ ಪ್ರಸ್ತುತ ಬಾರ್ ಕೌನ್ಸಿಲ್ ಅಧ್ಯಕ್ಷರ ಮಧ್ಯಸ್ಥಿಕೆಯಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ನ್ಯಾಯಮೂರ್ತಿಗಳು ಒಂದಾಗಿ ಸಮಸ್ಯೆ ಬಗೆಹರಿಸಿದ್ದಾರೆ. ಪಕ್ಷಪಾತದ ಆರೋಪ ಸಹ ಈಗ ಸುಮ್ಮನಾಗಿವೆ.
ಹಾಗೆ ನೋಡಿದರೆ ದೋಷಾರೋಪಣ ಸಲ್ಲಿಸಲು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ಭ್ರಷ್ಟಾಚಾರ, ಲಂಚ, ತಪ್ಪು ತೀರ್ಪು ಪ್ರಕಟಿಸಿದ ಯಾವುದೇ ಉದಾಹರಣೆ ಇಲ್ಲ. ಈಗ ಎಲ್ಲವೂ ತಿಳಿಯಾಗಿದ್ದು, ಸಾಮಾನ್ಯ ಕುಟುಂಬದಲ್ಲಿ ಇದ್ದ ಮುನಿಸು ಬಗೆಹರಿದಂತಹ ವಾತಾವರಣವಿದೆ. ಹೀಗಿರುವಾಗ ಸುಖಾಸುಮ್ಮನೆ ದೋಷಾರೋಪಣ ಹೊರಡಿಸಿದರೆ ದೇಶದ ಮರ್ಯಾದೆ, ನ್ಯಾಯಾಂಗದ ಮೇಲೆ ಜನ ಇಟ್ಟಿರುವ ನಂಬಿಕೆಯೇ ಹೊರಟುಹೋಗುವುದಿಲ್ಲವೇ? ಬರೀ ರಾಜಕಾರಣಕ್ಕಾಗಿ ಎಂಥ ಮಟ್ಟಕ್ಕೂ ಇಳಿಯುವುದು ಎಂದರೆ ಇದೇ ಅಲ್ಲವೇ? ಯಾಕೆ ಸೀತಾರಾಂ ಯೆಚೂರಿ ಎಲ್ಲದರಲ್ಲೂ ರಾಜಕಾರಣ ಹುಡುಕುತ್ತಾರೆ? ಅಸ್ತಿತ್ವಕ್ಕಾಗಿಯಾ?
Leave A Reply