ಕಾಂಗ್ರೆಸ್ ಹಿರಿಯ ನಾಯಕರು ಪೀಡಕರಾಗಬಾರದು ಎಂದ ಕಾಂಗ್ರೆಸ್ಸಿನದ್ದೇ ನಾಯಕ!
ಕೋಲ್ಕತ್ತಾ: ರಾಹುಲ್ ಗಾಂಧಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗುತ್ತಲೇ ಕಾಂಗ್ರೆಸ್ಸಿನಲ್ಲಿ ಹಿರಿಯರ ಅಸಮಾಧಾನ ಜಾಸ್ತಿಗುತ್ತಿದೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ ಪಕ್ಷದ ಹಿರಿಯ ನಾಯಕರು ಪೀಡಕರಾಗಬಾರದು ಎಂದು ಕೈ ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಜೈರಾಮ್ ರಮೇಶ್ ಹೇಳಿದ್ದಾರೆ.
2019ರ ಮೇಲೆ ಕಾಂಗ್ರೆಸ್ ಕಣ್ಣಿಟ್ಟಿದ್ದು, ಪಕ್ಷದ ಹಿರಿಯ ನಾಯಕರು ಟಿಕೆಟ್ ಗಾಗಿ ಲಾಬಿ ನಡೆಸುವುದು, ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುವ ಮೂಲಕ ಭಿನ್ನಮತ ಸೃಷ್ಟಿಸದೆ ಸುಮ್ಮನಿರಬೇಕು ಎಂದು ಹಿರಿಯ ನಾಯಕರಿಗೆ ಪರೋಕ್ಷವಾಗಿ ಎಚ್ಚರಿಸಿದೆ ಎಂದಿದ್ದಾರೆ.
ಗುಜರಾತಿನಲ್ಲಿ ಕಾಂಗ್ರೆಸ್ ಕಳೆದ ಬಾರಿಗಿಂತ ಉತ್ತಮ ಪ್ರದರ್ಶನ ನೀಡಿದ್ದು, ಇದು ಪಕ್ಷಕ್ಕೆ ಬಲ ಬಂದಂತಾಗಿದೆ. ಹಾಗಂತ ಪಕ್ಷದಲ್ಲಿ ಹಿರಿಯ ನಾಯಕರು ಮೂಲೆಗೆ ಸರಿಯಬೇಕು ಎಂದಲ್ಲ. ಆದರೆ ಅವರು ರಾಜಕೀಯದಲ್ಲಿ ಎಲ್ಲ ಆಯಾಮ ನೋಡಿದ್ದಾರೆ, ಅಧಿಕಾರ ಅನುಭವಿಸಿದ್ದಾರೆ. ಹಾಗಾಗಿ ಇನ್ನುಮುಂದೆ ಯುವಕರಿಗೆ ಪ್ರಾಧಾನ್ಯ ಮತ್ತು ಪ್ರೋತ್ಸಾಹ ನೀಡಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ಸಿನ ಯುವ ನಾಯಕರಾದ ಜ್ಯೋತಿರಾಧ್ಯ ಸಿಂಧ್ಯಾ, ಸುಶ್ಮಿತಾ ದೇವ್, ಗೌರವ್ ಗೊಗೊಯ್ ಹಾಗೂ ಸಚಿನ್ ಪೈಲಟ್ ಅವರಂತಹ ನಾಯಕರಿಗೆ ಪ್ರೋತ್ಸಾಹ ನೀಡಬೇಕು ಎಂದು ತಿಳಿಸಿದ್ದಾರೆ.
ಒಟ್ಟಿನಲ್ಲಿ ರಾಹುಲ್ ಗಾಂಧಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಹಿರಿಯರ ಅಸಮಾಧಾನದ ಹೊರತಾಗಿಯೂ 2019ರ ಲೋಕಸಭೆ ಚುನಾವಣೆಯ ಮೇಲೆ ಕಣ್ಣಿಟ್ಟಿದ್ದು, ಯುವ ನಾಯಕರನ್ನು ಮುನ್ನೆಲೆಗೆ ತರಲು ಹವಣಿಸುತ್ತಿದೆ. ಆದರೆ ಮುಂದಿನ ಲೋಕಸಭೆ ಚುನಾವಣಾ ಪೂರ್ವ ನಡೆಸಿದ ಎಲ್ಲ ಸಮೀಕ್ಷೆಗಳಲ್ಲೂ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿದುಬಂದಿದೆ.
Leave A Reply