ದಕ್ಷಿಣ ಕನ್ನಡದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ನೆಲ ಕಚ್ಚಿದ ಅಡಿಕೆ ಬೆಳೆ, ಸಂಕಷ್ಟಕ್ಕೊಳಗಾದ ರೈತರು
ಮಂಗಳೂರು: ಕರಾವಳಿಯಲ್ಲಿ ಸುರಿಯುತ್ತಿರುವ ಭಾರಿ ಮಳೆ ಈ ಬಾರಿ ಅಡಿಕೆ ಬೆಳೆಗಾರರನ್ನು ಸಾಕಷ್ಟು ಕಾಡಿದೆ. ಮೇ ತಿಂಗಳ ಅಂತ್ಯದಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಅಡಿಕೆ ಬೆಳೆಗೆ ಕೊಳೆ ರೋಗ ಬಾಧಿಸಿದ್ದು, ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು ಶೇಕಡ 70 ರಷ್ಟು ಅಡಿಕೆ ಬೆಳೆ ಹಾನಿಗೊಂಡಿದೆ. ದಕ್ಷಿಣಕನ್ನಡ ಜಿಲ್ಲೆಯಲ್ಲೂ ಶೇಕಡ 80 ರಷ್ಟು ಅಡಿಕೆ ಬೆಳೆ ನೆಲಕಚ್ಚಿದ್ದು, ಅಡಿಕೆ ಬೆಳೆಗಾರರು ಈ ಬಾರಿ ಕೊಳೆ ರೋಗದಿಂದ ಜರ್ಜರಿತರಾಗಿದ್ದಾರೆ. ತೋಟಗಾರಿಕೆ ಇಲಾಖೆಯ ಬೋರ್ಡೋ ದ್ರಾವಣಕ್ಕೂ ಈ ಬಾರಿ ರೋಗ ಜಗ್ಗುತ್ತಿಲ್ಲ.
ಪ್ರತಿವರ್ಷ ಮಳೆಗಾಲದಲ್ಲಿ ಅಡಿಕೆ ಬೆಳೆಗಾರರು ಅಡಿಕೆಗೆ 2 ರಿಂದ 3 ಬಾರಿ ಬೋರ್ಡೋ ದ್ರಾವಣ ಸಿಂಪಡಿಸುವ ಮೂಲಕ ಅಡಿಕೆಗೆ ಕೊಳೆ ರೋಗ ಬಾರದಂತೆ ತಡೆಯುತ್ತಿದ್ದರು. ಆದರೆ ಈ ಬಾರಿಯ ಮಳೆ ಬೋರ್ಡೋ ದ್ರಾವಣ ಸಿಂಪಡಿಸುವುದಕ್ಕೂ ಅವಕಾಶ ನೀಡಲೇ ಇಲ್ಲ. ಆದರೂ ಕೆಲವು ಮಳೆಯ ನಡುವೆಯೂ ಬೋರ್ಡೋ ದ್ರಾವಣ ಸಿಂಪಡಿಸಿದ್ದರು. ಆದರೆ ಅದು ಫಲಕಾರಿಯಾಗಲಿಲ್ಲ. ಪರಿಣಾಮ ಎಳೆ ಅಡಿಕೆಗಳು ಉದುರಿ ಬೀಳುತ್ತಿದ್ದು, ಅಡಿಕೆಯನ್ನೇ ನಂಬಿದ್ದ ಕೃಷಿಕರು ಕಂಗಾಲಾಗಿದ್ದಾರೆ.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುಮಾರು 34,977 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಸುಮಾರು 45,000 ಮೆಟ್ರಿಕ್ ಟನ್‌ನಷ್ಟು ಅಡಿಕೆ ಉತ್ಪಾದನೆಯಾಗುತ್ತಿದೆ. ಆದರೆ ಈ ಬಾರಿಯ ನಿರಂತರ ಮಳೆಯಿಂದಾಗಿ ಶೇಕಡ 80 ರಷ್ಟು ಅಡಿಕೆ ಬೆಳೆಗೆ ಕೊಳೆ ರೋಗ ಬಾಧೆ ತಗುಲಿದೆ. ಬೆಳ್ತಂಗಡಿ ತಾಲೂಕಿನ 81 ಗ್ರಾಮಗಳಲ್ಲಿ 8000 ಹೆಕ್ಟೇರ್ ಅಡಿಕೆ ಬೆಳೆಯಲಾಗುತ್ತಿದ್ದು, ತೋಟಗಾರಿಕಾ ಇಲಾಖೆಯ ಪ್ರಕಾರ 4,150 ಹೆಕ್ಟೇರ್ ಪ್ರದೇಶದಲ್ಲಿ ಕೊಳೆ ರೋಗ ಬಾಧಿಸಿದೆ. ಪುತ್ತೂರು, ಬೆಳ್ತಂಗಡಿ, ಬಂಟ್ವಾಳ ಸಹಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ 17 ಸಾವಿರಕ್ಕೂ ಅಧಿಕ ಹೆಕ್ಟೇರ್ ತೋಟ ಕೊಳೆ ರೋಗಕ್ಕೆ ಒಳಗಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಉಡುಪಿ ಜಿಲ್ಲೆಯಲ್ಲೂ ಸುಮಾರು 8,100 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದ್ದು, ಸುಮಾರು 5600 ಹೆಕ್ಟೇರ್ ಪ್ರದೇಶದಲ್ಲಿ ಅಡಿಕೆಗೆ ಕೊಳೆರೋಗ ಬಂದು ನಾಶವಾಗಿದೆ. ಅಡಿಕೆ ಸೇರಿದಂತೆ ಎಲ್ಲಾ ರೀತಿಯ ಕೃಷಿ ಉತ್ಪನ್ನಗಳು ಪ್ರಾಕೃತಿಕ ವಿಕೋಪದಿಂದ ಹಾನಿಗೀಡಾದಾಗ ಸರಕಾರ ನೀಡುವ ಪರಿಹಾರ ಧನವು ಅತ್ಯಲ್ಪವಾಗಿದ್ದು, ಇದು ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ಇರುತ್ತದೆ. ಈ ಹಿಂದೆ 2013-14ನೇ ಸಾಲಿನಲ್ಲಿ ಅಡಿಕೆಗೆ ಕೊಳೆರೋಗ ಬಂದಾಗ ಹೆಕ್ಟೇರಿಗೆ ಕೇವಲ 12 ಸಾವಿರ ರೂಪಾಯಿ ಪರಿಹಾರ ಧನ ವಿತರಿಸಲಾಗಿತ್ತು. ಈಗ ಅದನ್ನು 18 ಸಾವಿರ ರೂಪಾಯಿಗೆ ಏರಿಸಲಾಗಿದೆ. ಆದರೆ ಅದು ಅಡಿಕೆ ಬೆಳೆಯ ಮೌಲ್ಯಕ್ಕಿಂತ ತೀರಾ ಕನಿಷ್ಠ ಪರಿಹಾರ. ಒಂದು ಹೆಕ್ಟೇರ್ ಗೆ ವರ್ಷಕ್ಕೆ ಸುಮಾರು 25 ಕ್ವಿಂಟಾಲ್ ಅಡಿಕೆ ಬೆಳೆ ತೆಗೆಯಲಾಗುತ್ತದೆ.
ಅದರ ಮಾರುಕಟ್ಟೆ ಬೆಲೆಯೇ ಸುಮಾರು 5 ಲಕ್ಷ ಇರುತ್ತದೆ. ಸರಕಾರ ನೀಡುವ 18 ಸಾವಿರ ರೂಪಾಯಿ ಪರಿಹಾರ ಯಾವ ಲೆಕ್ಕಕ್ಕೂ ಬರುವುದಿಲ್ಲ. ರೈತರ ರಕ್ಷಣೆಗೆ ಕೇಂದ್ರ ಸರಕಾರ ಬೆಳೆ ವಿಮೆ ಜಾರಿಗೆ ತಂದಿದ್ದರೂ ಮಾಹಿತಿಯ ಕೊರೆತೆಯಿಂದಾಗಿ ಮತ್ತು ಅಡಿಕೆ ಬೆಳೆಗಾರರು ಮನಸ್ಸು ಮಾಡದೇ ಇರುವುದರಿಂದ ಅಪಾರ ನಷ್ಟ ತಂದುಕೊಳ್ಳುತ್ತಿದ್ದಾರೆ. ಬೆಳೆ ವಿಮೆ ಮಾಡಿಸಿದ್ದಲ್ಲಿ ಪ್ರಕೃತಿ ವಿಕೋಪಗಳ ಸಂದರ್ಭ ಸಹಾಯಕ್ಕೆ ಬರುತ್ತದೆ. ಆದರೆ ಅಡಿಕೆ ಬೆಳೆಗಾರರು ಬೆಳೆ ವಿಮೆಯತ್ತ ಮನಸ್ಸು ಮಾಡದೇ ಇರುವುದರಿಂದ ಬೆಳೆ ಸಂಪೂರ್ಣ ನಾಶವಾದಾಗ ಯಾವುದೇ ಪರಿಹಾರ ಸಿಗದೆ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.
Leave A Reply