ಮಂಗಳೂರಿನಲ್ಲಿ ದಸರಾ ರಜೆ ಕಡಿಮೆ ಮಾಡುವುದು ಸರಿಯಲ್ಲ- ಶಾಸಕ ಕಾಮತ್
ಮಂಗಳೂರಿನ ಶಾಲಾ ಮಕ್ಕಳಿಗೆ ಕೊಡುವ ದಸರಾ ರಜೆಯನ್ನು ಯಾವುದೇ ಕಾರಣಕ್ಕೂ ಕಡಿಮೆಗೊಳಿಸಬಾರದು ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಸರಕಾರಕ್ಕೆ ಮನವಿ ಮಾಡಿದ್ದಾರೆ.
ಮಂಗಳೂರಿನಲ್ಲಿ ದಸರಾ ಹಬ್ಬಕ್ಕೆ ತನ್ನದೇ ಆದ ವೈಶಿಷ್ಯವಿದೆ.ಮೈಸೂರು ದಸರಾದಂತೆ ಮಂಗಳೂರು ದಸರಾ ಕೂಡ ರಾಷ್ಟ್ರಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ. ಮಂಗಳೂರಿನಲ್ಲಿರುವ ಪುರಾತನ ದೇವಿ ದೇವಾಲಯಗಳಾದ ಕಟೀಲು ದುರ್ಗಾಪರಮೇಶ್ವರಿ, ಪೊಳಲಿ ರಾಜರಾಜೇಶ್ವರಿ,ಮಂಗಳಾದೇವಿ ಸನ್ನಿದ್ಧಿಗೆ ಭಕ್ತಸಾಗರ ಹರಿದು ಬರುತ್ತದೆ. ಹೀಗಿರುವಾಗ ಆ ಸಮಯದಲ್ಲಿ ಮಕ್ಕಳಿಗೆ ರಜೆ ನೀಡುವುದು ಹಿಂದಿನ ಕಾಲದಿಂದ ನಡೆಸಿಕೊಂಡು ಬಂದ ಪ್ರತೀತಿಯಾಗಿದೆ. ಮಳೆಗಾಲದಲ್ಲಿ ಉಂಟಾದ ಪ್ರಕೃತಿ ವಿಕೋಪದಿಂದಾಗಿ ಜಿಲ್ಲಾಧಿಕಾರಿಗಳು ತುರ್ತು ಶಾಲೆ,ಕಾಲೇಜುಗಳಿಗೆ ರಜೆ ಘೋಷಿಸಿದ ಕಾರಣಕ್ಕಾಗಿ ಅದನ್ನು ಸರಿದೂಗಿಸಲು ದಸರಾ ರಜೆ ಕಡಿಮೆ ಮಾಡಲು ಶಿಕ್ಷಣ ಇಲಾಖೆಯು ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸುತ್ತೋಲೆ ಕಳುಹಿಸಿದೆ.
ಅಕ್ಟೋಬರ್ 7 ರಿಂದ 21 ರವರೆಗೆ ನೀಡಲಾಗುವ ರಜೆಯನ್ನು ಅಕ್ಟೋಬರ್ 14 ರಿಂದ 21 ರ ತನಕ ಸೀಮಿತಗೊಳಿಸಲಾಗಿದೆ. ಇದು ಸರಿಯಲ್ಲ. ಮಕ್ಕಳಿಗೆ ನವರಾತ್ರಿಯ ಸಮಯದಲ್ಲಿ ನೀಡಲಾಗುವ ರಜೆಯನ್ನು ಯಾವ ಕಾರಣಕ್ಕೂ ಕಡಿಮೆ ಮಾಡಬಾರದು,ಪಕೃತಿ ವಿಕೋಪದ ಸಂಧರ್ಭದಲ್ಲಿ ನೀಡಿರುವ ರಜೆಯನ್ನು ಶನಿವಾದ ದಿವಸ ಹೆಚ್ಚುವರಿ ತರಗತಿಗಳನ್ನು ನಡೆಸಿ ಸರಿದೂಗಿಸಬಹುದು ಎಂದು ಶಾಸಕರು ಮನವಿ ಮಾಡಿದ್ದಾರೆ.
ಕ್ರಿಸ್ಮಸ್ ಹಬ್ಬದ ರಜೆ ನೀಡುವ ವಿಚಾರದಲ್ಲಿ ಆಯಾಯ ಶಾಲಾ ಕಾಲೇಜುಗಳ ವಿವೇಚನೆಗೆ ಬಿಟ್ಟ ನಿರ್ಣಯ ಎಂದಿರುವ ಸರಕಾರ, ದಸರಾ ರಜೆಯನ್ನು ನೀಡುವ ವಿಚಾರವನ್ನು ಕೂಡ ಆಯಾಯ ಶಾಲಾ ಕಾಲೇಜುಗಳ ವಿವೇಚನೆಗೆ ಬಿಡಬೇಕಿತ್ತು.ಆದರೆ ದಸರಾ ರಜೆ ಕಡಿಮೆ ಮಾಡುವ ಸುತ್ತೋಲೆಯನ್ನು ಸ್ವತಃ ರಾಜ್ಯ ಸರಕಾರವೇ ಹೊರಡಿಸಿರುವುದು ರಾಜ್ಯ ಸರಕಾರದ ಇಬ್ಬಗೆ ನೀತಿಯನ್ನು ಎತ್ತಿ ತೋರಿಸುತ್ತದೆ ಎಂದು ಶಾಸಕ ಕಾಮತ್ ಅವರು ಹೇಳಿದ್ದಾರೆ.
Leave A Reply