ಸ್ಟೇಟ್ ಬ್ಯಾಂಕಿನಿಂದ ಲೇಡಿಹಿಲ್ ಗೆ ಬರಲು ಒಬ್ಬ ಅಧಿಕಾರಿಗೆ ಹಿಡಿಯಿತು ಒಂದೂವರೆ ತಿಂಗಳು!
ಜಿಲ್ಲಾಧಿಕಾರಿ ಕಚೇರಿಯಿಂದ ಲೇಡಿಹಿಲ್ ಗೆ ಬರಲು ಎಷ್ಟು ಹೊತ್ತಾಗುತ್ತದೆ? ಬಸ್ ಆದರೆ 20 ನಿಮಿಷ, ಬೈಕ್ ಆದರೆ 8 ನಿಮಿಷ, ಕಾರು ಆದರೆ 10 ನಿಮಿಷ, ಒಂದು ವೇಳೆ ರೋಡ್ ಬ್ಲಾಕ್ ಆದರೆ ಹತ್ತು ಅಥವಾ ಇಪ್ಪತ್ತು ನಿಮಿಷ ಆಚೀಚೆ. ಅದೇ ನಡೆದುಕೊಂಡು ಬರುವುದಾದರೆ ಹೆಚ್ಚೆಂದರೆ ಒಂದು ಗಂಟೆ ಹಿಡಿಯಬಹುದು. ತೆವಳಿಕೊಂಡು ಬರುವುದಾದರೆ ಸ್ಪಲ್ಪ ಹೆಚ್ಚು ಹೊತ್ತು ಬೇಕಾಗಬಹುದು, ಮಡಸ್ನಾನ ಹಾಕಿ ಬರುವುದಾದರೆ ಇನ್ನೊಂದಿಷ್ಟು ಹೊತ್ತು ಹಿಡಿಯಬಹುದು, ಓಡಿ ಬರುವುದಾದರೆ ಇನ್ನು ಸ್ವಲ್ಪ ಕಡಿಮೆ ಸಮಯ ಸಾಕಾಗಬಹುದು, ಇನ್ನು ಜಾಗಿಂಗ್ ಮಾಡಿ ಬರುವುದಾದರೆ ನನಗೆ ಕರೆಕ್ಟಾಗಿ ಗೊತ್ತಿಲ್ಲ, ಆದರೆ ಯಾವ ರೀತಿಯಲ್ಲಿ ಬಂದರೂ ಒಂದು ದಿನದ ಒಳಗೆ ತಲುಪಬಹುದು. ಆದರೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಅಧಿಕಾರಿಯೊಬ್ಬರಿಗೆ ಬರೋಬ್ಬರಿ ಒಂದೂವರೆ ತಿಂಗಳು ಹಿಡಿದಿದೆ.
ಈ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹೆಚ್ಚಿನ ಕಾಮಗಾರಿಗಳು ಹುಚ್ಚು ಮುಂಡೆ ಮದುವೆ ತರಹವೇ ಆಗುವುದು. ಇಲ್ಲಿ ಉಂಡವನೇ ಜಾಣ ಎನ್ನುವುದು ಎಲ್ಲರಿಗೂ ಗೊತ್ತಿರುವಂತಹ ವಿಷಯ. ಕೆಲವರು ಉಂಡು ಕೈ ತೊಳೆಯುವಾಗ ಸಿಕ್ಕಿಬೀಳುತ್ತಾರೆ. ಅವರನ್ನು ಹಿಡಿದು, ಅವರ ಮುಖಕ್ಕೆ ಮೆತ್ತಿದ ಅನ್ನದ ಅಗುಳನ್ನು ಲೆಕ್ಕ ಹಾಕಿ, ಊದಿದ ಹೊಟ್ಟೆಯನ್ನು ನೋಡಿ ಇವನು ತಿಂದದ್ದು ಹೊಲಸು ಎಂದು ನನ್ನಂತಹ ಪೀನ ಮಸೂರದ ಕಣ್ಣಿನವರಿಗೆ ಗೊತ್ತೆ ಆಗುತ್ತದೆ. ಅದನ್ನು ಪಾಲಿಕೆಯಲ್ಲಿ ಕೇಳೋಣ ಎಂದು ಹೊರಟರೆ ಎಲ್ಲರೂ ಮುಖದ ಮೇಲೆ ಶಾಲು ಹಾಕಿ ತಿನ್ನುವ ಭರದಲ್ಲಿ ಮೇಲೆನೆ ನೋಡುವುದಿಲ್ಲ. ಅದಕ್ಕೆ ನಾನು ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜಗದೀಶ್ ಅವರ ಮೊರೆ ಹೋಗಿದ್ದೆ. ಸರ್, ಲೇಡಿಹಿಲ್ ನಿಂದ ಪಬ್ಬಾಸ್ ವರೆಗಿನ ರಸ್ತೆ ಮತ್ತು ಡೊಂಗರಕೇರಿ ವೆಂಕಟರಮಣ ದೇವಸ್ಥಾನದ ಎದುರು ಕಾಂಕ್ರೀಟ್ ರಸ್ತೆ ಬದಿ ಹೊಸದಾಗಿ ನಿರ್ಮಿಸಿರುವ ಕಾಂಕ್ರೀಟ್ ಚರಂಡಿ ಮತ್ತು ಫುಟ್ ಪಾತ್ ಕಾಮಗಾರಿಯ ಟೆಂಡರ್ ಕರೆಯದೇ ಕೆಲಸ ಒಟ್ರಾಶಿ ಆಗುತ್ತದೆ ಎಂದು ದೂರು ಕೊಟ್ಟೆ. ಪಾಲಿಕೆ ಸರಿಯಾಗಿ ನನ್ನ ಪ್ರಶ್ನೆಗೆ ಸ್ಪಂದಿಸಿದ್ದರೆ ನಾನು ಜಿಲ್ಲಾಧಿಕಾರಿ ಕಚೇರಿಯ ತನಕ ಹೋಗಬೇಕಾಗಿರಲಿಲ್ಲ. ನನ್ನ ಮಾತನ್ನು ಕೇಳಿದ ನಂತರ ಜಿಲ್ಲಾಧಿಕಾರಿಯವರು ತಮ್ಮ ಕಚೇರಿಯ ಭದ್ರತಾಕೋಶದ ಕೆಎಎಸ್ ಅಧಿಕಾರಿ ಪ್ರಸನ್ನ ಅವರನ್ನು ಕರೆದು ಈ ಬಗ್ಗೆ ತನಿಖೆ ಮಾಡಿ ವರದಿ ಕೊಡಲು ಹೇಳಿದ್ರು.
ನಾನು ಜಿಲ್ಲಾಧಿಕಾರಿಯವರೇ ಸೂಚನೆ ಕೊಟ್ಟ ಕಾರಣ ಅವರ ಅಧೀನ ಅಧಿಕಾರಿ ಆದಷ್ಟು ಬೇಗ ಬಂದು ಪರೀಕ್ಷಿಸಬಹುದು ಎಂದುಕೊಂಡೆ. ಆದರೆ ನನ್ನ ಊಹೆ ತಪ್ಪಾಗಿತ್ತು. ಪ್ರಸನ್ನ ಅವರು ಬರಲೇ ಇಲ್ಲ. ಒಂದು ವಾರ ಆಯಿತು, 15 ದಿನ ಆಯಿತು, ಒಂದು ತಿಂಗಳಾಯಿತು, ಕೊನೆಗೆ ಒಂದೂವರೆ ತಿಂಗಳು. ಈ ನಡುವೆ ನಾನು ಕಡಿಮೆ ಎಂದರೆ 25 ಸಲ ಅವರಿಗೆ ಫೋನ್ ಮಾಡಿರಬಹುದು. ನಾನೇನೂ ಶಿಮ್ಲಾ, ಡಾರ್ಜೆಲಿಂಗ್ ನ ಗುಡ್ಡಗಾಡಿನಲ್ಲಿಯೋ, ಕೋಲಾರದ ಗಣಿಯೊಳಗೆಯೊ ಅಥವಾ ಅಪಾಯಕಾರಿ ಪ್ರಾಣಿಗಳು ವಾಸಿಸುವಂತಹ ಅರಣ್ಯದೊಳಗೆ ಇವರನ್ನು ಕರೆದಿರಲಿಲ್ಲ. ಕರೆದಿದ್ದು ಡೊಂಗರಕೇರಿ ಮತ್ತು ಲೇಡಿಹಿಲ್ ಸ್ಥಳಕ್ಕೆ. ಆ ನಂತರ ಅಧಿಕಾರಿ ಒಂದು ದಿನ ಬಂದ್ರು. ನೋಡಿದರು, ಅದರ ನಂತರ 22 ದಿನಗಳಾಗಿವೆ. ಇನ್ನೂ ವರದಿ ಕೊಟ್ಟಿಲ್ಲ. ನನ್ನ ಬಳಿ ಇರುವ ಮಾಹಿತಿ ಹಕ್ಕಿನ ಅಡಿ ತೆಗೆದ ಮಾಹಿತಿಯ ಪ್ರಕಾರ ಪಾಲಿಕೆ ಟೆಂಡರ್ ಕರೆದಿಲ್ಲ ಎಂದು ಉತ್ತರ ಬಂದಿದೆ. ಇದರ ಅರ್ಥ ಸಿಂಪಲ್. ಇವರು ತಮಗೆ ಬೇಕಾದ ಗುತ್ತಿಗೆದಾರರ ಹತ್ತಿರ ಕೆಲಸ ಮಾಡಿಸುವುದು, ನಂತರ ಟೆಂಡರ್ ಕರೆದ ಹಾಗೆ ಮಾಡುವುದು, ನಂತರ ಈ ಗುತ್ತಿಗೆದಾರರ ಸಿಂಡಿಕೇಟ್ ನಲ್ಲಿ ಕೆಲಸ ಮಾಡಿದವರೇ ಹೆಚ್ಚು ಬೆಲೆಗೆ ಬಿಡ್ ಮಾಡುವುದು, ಬೇರೆಯವರು ಅದಕ್ಕಿಂತ ಹೆಚ್ಚು ಬಿಡ್ ಮಾಡುವುದು. ಕೊನೆಗೆ ಆ ಕೆಲಸ ಮಾಡಿದವನಿಗೆ ಹೆಚ್ಚು ಹಣಕ್ಕೆ ಕೆಲಸ ಕೊಡುವುದು. ಇದರಿಂದ ವೇಸ್ಟ್ ಆಗುವುದು ಜನರ ತೆರಿಗೆಯ ಹಣ.
ನನ್ನ ನಿರೀಕ್ಷೆ ಇಷ್ಟೇ, ಮೇಯರ್ ಕವಿತಾ ಸನಿಲ್ ಅಲ್ಲಲ್ಲಿ ಅತಿಕ್ರಮಣ ಮಾಡಿರುವ ಕಡೆ ದಾಳಿ ಮಾಡಿ ಅವುಗಳನ್ನು ತೆರವು ಮಾಡುತ್ತಿದ್ದಾರೆ. ಒಳ್ಳೆಯ ಕೆಲಸ. ಹಾಗೆ ಈ ಟೆಂಡರ್ ಕರೆಯದೆ ಕೆಲಸ ಮಾಡಿಸುವ ಟ್ರೆಂಡನ್ನು ನಿಲ್ಲಿಸಿ, ಜನರ ತೆರಿಗೆಯ ಹಣವನ್ನು ಉಳಿಸಬೇಕಾಗಿ ನನ್ನ ವಿನಂತಿ ಮತ್ತು ಅಧಿಕಾರಿಗಳು ಬರಿ ನೋಡಲು ಬರುವುದಕ್ಕೆ ತಿಂಗಳುಗಟ್ಟಲೆ ತೆಗೆಯದಿರಲಿ.
Leave A Reply