ಬ್ಯಾಂಕಿನವರನ್ನು ಇಲ್ಲಿ ತನಕ ತಲೆ ಮೇಲೆ ಹೊತ್ತುಕೊಂಡದ್ದೇ ತಪ್ಪು!
ಬ್ಯಾಂಕಿಗೆ ಸಾಲು ಸಾಲು ರಜೆ ಇದೆ. ನಿಮ್ಮ ಕೆಲಸ ನೀವು ಬೇಗ ಮಾಡಿಕೊಳ್ಳಿ ಎನ್ನುವ ವಾಕ್ಯವನ್ನು ಇತ್ತೀಚೆಗೆ ಅನೇಕ ಬಾರಿ ಸಾಮಾಜಿಕ ತಾಣಗಳಲ್ಲಿ, ಪತ್ರಿಕೆಗಳಲ್ಲಿ ಓದುತ್ತಿದ್ದೇನೆ. ಇದು ಆಗಾಗ ಮರುಕಳಿಸುತ್ತಿರುವುದರಿಂದ ಇದೀಗ ಜನ ಈ ಬಗ್ಗೆ ಆಕ್ರೋಶಿತರಾಗಿ ಗೊಣಗುತ್ತಿರುವುದು ಕೇಳಿ ಬರುತ್ತದೆ. ಇವತ್ತು ಬ್ಯಾಂಕಿನವರದ್ದು ಪ್ರತಿಭಟನಾರ್ಥವಾಗಿ ಬಂದ್ ಅಂತೆ. ನಾಳೆ ನಾಲ್ಕನೇ ಶನಿವಾರ. ನಾಡಿದ್ದು ಭಾನುವಾರ. ಮಂಗಳವಾರ ಕ್ರಿಸ್ ಮಸ್. ಸೋಮವಾರ ಒಂದು ದಿನ ರಜೆ ಹಾಕಿದರೆ ಗಮ್ಮತ್ ಜಾಲಿ ಮಾಡಬಹುದು. ಸೋಮವಾರ ರಜೆ ಹಾಕಿದ್ರೆ ಎನ್ನುವ ಸಂಶಯವೇ ಬೇಡಾ. ಸೋಮವಾರ ಅರ್ಧಕರ್ಧ ಸಿಬ್ಬಂದಿಗಳು ಬ್ಯಾಂಕಿನಲ್ಲಿ ಇರುವುದೇ ಇಲ್ಲ. ಹೀಗೆ ಆದರೆ ಹೇಗೆ? ಅಷ್ಟಕ್ಕೂ ಇವರ ಹೋರಾಟ ಯಾವ ಕಾರಣಕ್ಕೆ ಎಂದರೆ ಸಂಬಳ ಮತ್ತು ಸೌಲಭ್ಯಕ್ಕಾಗಿ ಮತ್ತು ಬ್ಯಾಂಕುಗಳನ್ನು ಮರ್ಜ್ ಮಾಡಬಾರದು ಎನ್ನುವ ವಿಷಯದ ಮೇಲೆ.
ಮೊದಲಿಗೆ ಇವರ ಮೊದಲ ಬೇಡಿಕೆ ತೆಗೆದುಕೊಳ್ಳೋಣ. ಇವರು ಹೋರಾಟ ಮಾಡುತ್ತಿರುವುದು ಸಂಬಳ ಮತ್ತು ಸೌಲಭ್ಯ ಹೆಚ್ಚಳ ಮಾಡುವುದಕ್ಕಾಗಿಯೇ ಎಂದಾದರೆ ಅದು ಶುದ್ಧ ಅನಗತ್ಯ ಪ್ರತಿಭಟನೆ. ಬ್ಯಾಂಕಿನವರೇ, ಒಂದು ವೇಳೆ ನಿಮಗೆ ಈಗ ಸಿಗುತ್ತಿರುವ ಸಂಬಳ ಮತ್ತು ಸೌಲಭ್ಯ ಕಡಿಮೆ ಆಗಿದೆ ಎಂದು ಅನಿಸಿದರೆ ನೀವು ದಯವಿಟ್ಟು ಕೆಲಸವನ್ನು ಬಿಟ್ಟು ಹೋಗಲು ಸ್ವತಂತ್ರರಾಗಿದ್ದಿರಿ. ನಿಮಗಿಂತ ಕಡಿಮೆ ಸಂಬಳದಲ್ಲಿ ನಿಮಗಿಂತ ಹೆಚ್ಚು ಸಮರ್ಥರಾಗಿ ಕೆಲಸ ಮಾಡಲು ನಮ್ಮಲ್ಲಿ ಯುವಕರಿಗೇನೂ ಕೊರತೆ ಇಲ್ಲ. ಇವತ್ತಿನ ದಿನಗಳಲ್ಲಿ ಬ್ಯಾಂಕಿನಲ್ಲಿ ಅದರಲ್ಲಿಯೂ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಉದ್ಯೋಗ ಸಿಗುವುದೆಂದರೆ ಅದೊಂದು ಅದೃಷ್ಟ ಎಂದೇ ಹೇಳಲಾಗುತ್ತದೆ.
ಬ್ಯಾಂಕಿನವರ ಬ್ಲ್ಯಾಕ್ ಮೇಲ್ ಗೆ ಕೇಂದ್ರ ಸರಕಾರ ಬಲಿಯಾಗಲೇಬಾರದು!!
ಯಾವಾಗ ಇಂದಿರಾಗಾಂಧಿ ಬ್ಯಾಂಕುಗಳನ್ನು ರಾಷ್ಟ್ರೀಕರಣ ಮಾಡಿದ್ರೋ ಅದರ ನಂತರ ಬ್ಯಾಂಕಿನವರ ಸಂಬಳ ಮತ್ತು ನೆಮ್ಮದಿ ಕಾಲದಿಂದ ಕಾಲಕ್ಕೆ ಏರುತ್ತಾ ಹೋಗಿದೆ. ಅದರ ಮೊದಲು ಬ್ಯಾಂಕಿನಲ್ಲಿ ಉದ್ಯೋಗ ಎಂದರೆ ಅದು ಬೇರೆ ಉದ್ಯೋಗದ ಹಾಗೆ ಇತ್ತು. ಎಲ್ಲಿಯ ತನಕ ಎಂದರೆ ಬ್ಯಾಂಕ್ ರಾಷ್ಟ್ರೀಕರಣ ಆಗುವ ಮೊದಲು ಅದರಲ್ಲಿ ಕೆಲಸಕ್ಕೆ ಇದ್ದವರಿಗೆ ಸಂಬಳ ಸಾಕಾಗದೆ ಬ್ಯಾಂಕ್ ಕೆಲಸ ಬಿಟ್ಟು ಬೀಡಿ ಬ್ರಾಂಚಿಗೆ ಸೇರಿದವರು ಇದ್ದಾರೆ. ಆದರೆ ಯಾವಾಗ ಬ್ಯಾಂಕ್ ಗಳು ರಾಷ್ಟ್ರೀಕರಣ ಆಯಿತೋ ಅದರ ನಂತರ ಆಗಿನ ಬ್ಯಾಂಕ್ ಮುಖ್ಯಸ್ಥರ ಕೈ ಕಾಲು ಹಿಡಿದು ಮಗನಿಗೊಂದು ಕೆಲಸ ಕೊಡಿ ಎಂದು ಬೇಡಿ ಕೆಲಸ ದೊರಕಿಸಿಕೊಂಡವರೂ ಇದ್ದಾರೆ. ಒಂದರ್ಥದಲ್ಲಿ ಬ್ಯಾಂಕ್ ಕೆಲಸ ಎಂದರೆ ಅಷ್ಟು ಸುಭದ್ರ ಜೀವನ ಎನ್ನುವಂತಹ ವಾತಾವರಣ ಇದೆ. ಕೆಲವರು ಬ್ಯಾಂಕಿನವರು ಅವಧಿಪೂರ್ವ ಸ್ವಯಂ ನಿವೃತ್ತಿ ಪಡೆದು ಬ್ಯಾಂಕಿನಿಂದ ಲಕ್ಷ ಲಕ್ಷ ಎಣಿಸುತ್ತಾ ಬೇರೆ ಕಡೆ ಪಾರ್ಟ್ ಟೈಂ, ಫುಲ್ ಟೈಮ್ ಕೆಲಸಕ್ಕೆ ಸೇರಿಕೊಂಡು ನಿರುದ್ಯೋಗಿ ಯುವಕರ ಹೊಟ್ಟೆಗೆ ಕಲ್ಲು ಹಾಕಿದ್ದಾರೆ. ಇನ್ನು ಕೆಲವರು ಪಿಂಚಣಿ ಪಡೆಯುತ್ತಾ ಕಾಲ ಮೇಲೆ ಕಾಲು ಹಾಕಿ ಕಟ್ಟೆ ಮೇಲೆ ಕುಳಿತು ಪಂಚಾತಿಕೆ ಮಾಡಿದ್ದು ಬಿಟ್ಟರೆ ನಾಲ್ಕು ಜನರಿಗೆ ಉಪಕಾರ ಆಗುವ ಸಮಾಜ ಸೇವೆ ಮಾಡಿದ್ದು ಎಲ್ಲಿ ಎಂದು ಹುಡುಕಬೇಕಾಗುತ್ತದೆ. ವರ್ಷಕ್ಕೊಂದು ಟ್ರಿಪ್, ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆದುಕೊಂಡು ಜೀವನದಲ್ಲಿ ಸೆಟಲ್ ಆಗಿ ಕೊನೆಗೆ ಕೆಲವರು ದೊಡ್ಡ ದೊಡ್ಡ ಉದ್ಯಮಿಗಳಿಗೆ ಸಾಲ ಕೊಟ್ಟು ಅದರಲ್ಲಿಯೂ ಸಮ್ ಥಿಂಗ್ ತೆಗೆದುಕೊಂಡು ಸೆಟಲ್ ಆದರೆ ಹೊರತು ಬೇರೆ ಏನು ಮಾಡಿದ್ದಾರೆ. ಒಬ್ಬ ಪಾಪದವ ಬ್ಯಾಂಕಿಗೆ ಹೋದರೆ ಎಷ್ಟು ಜನ ಬ್ಯಾಂಕ್ ಮ್ಯಾನೇಜರುಗಳು ಮುಖ ಕೊಟ್ಟು ಮಾತನಾಡುತ್ತಾರೆ? ಒಬ್ಬ ಮಧ್ಯಮ ವರ್ಗದ ವ್ಯಕ್ತಿ ಮನೆ ಕಟ್ಟುತ್ತೇನೆ, ಸಾಲ ಕೊಡಿ ಎಂದು ಕೇಳಲು ಹೋದರೆ ಎಷ್ಟು ಜನ ಬ್ಯಾಂಕ್ ಮ್ಯಾನೇಜರುಗಳು ಅವನಿಗೆ ಸಲಹೆ, ಸಹಕಾರ ಕೊಡುತ್ತಾರೆ.
ಮೋದಿ ಜನಧನ ತಂದ ಬಳಿಕ ಬದಲಾವಣೆ….
ಇತ್ತೀಚೆಗೆ ನರೇಂದ್ರ ಮೋದಿಯವರು ಜನಧನ್ ಯೋಜನೆ ತರುವ ತನಕ ಪಾಪದವರು ಬ್ಯಾಂಕ್ ಮೆಟ್ಟಿಲು ಹತ್ತಲು ಹೆದರುತ್ತಿದ್ದರು. ಬ್ಯಾಂಕುಗಳು ಬಡವರ ಪಾಲಿಗೆ ತೆರೆದದ್ದು ಬಹುತೇಕ ಇತ್ತೀಚಿನ ಕೆಲವು ದಿನಗಳಲ್ಲಿ ಎಂದರೆ ಅದರಲ್ಲಿ ಯಾವ ಅತಿಶಯೋಕ್ತಿ ಕೂಡ ಇಲ್ಲ. ಮೆಡಿಕಲ್ ಸೌಲಭ್ಯದಿಂದ ಹಿಡಿದು ಪಿಂಚಣಿ ತನಕ ಬ್ಯಾಂಕಿನವರಿಗೆ ಸರಕಾರ ಯಾವುದರಲ್ಲಿ ಕಡಿಮೆ ಮಾಡಿದೆ. ಇಷ್ಟೆಲ್ಲ ಆದರೂ ಇವರಿಗೆ ಇರುವಷ್ಟು ರಜೆ, ಡ್ಯೂಟಿ ಅವಧಿ ಬೇರೆಯವರಿಗೆ ಎಲ್ಲಿದೆ. ಬೆಳಿಗ್ಗೆ ಹತ್ತು ಗಂಟೆಗೆ ಬಂದರೆ ಕೆಲವರು ಹನ್ನೊಂದು ಘಂಟೆಗೆ ಚಾಗೆ ಹೋಗಿ ಸಿಗರೇಟು ಸೇದಿ ಹನ್ನೊಂದುವರೆಗೆ ಬಂದು ಒಂದೂವರೆಗೆ ಊಟಕ್ಕೆ ಹೋಗಿ ಮೂರು ಗಂಟೆಗೆ ಬಂದು ಐದು ಗಂಟೆಗೆ ಹೊರಗೆ ಬಿದ್ದಾಗಿರುತ್ತದೆ. ಇದೆಲ್ಲ ನೋಡಿಯೇ ಗ್ರಾಹಕ ಖಾಸಗಿ ಬ್ಯಾಂಕುಗಳ ಮೊರೆ ಹೋಗಲು ಶುರುವಾದದ್ದು ಮತ್ತು ಅನೇಕ ಹೊಸ ಖಾಸಗಿ ಬ್ಯಾಂಕುಗಳ ಉಗಮವಾದದ್ದು.
ಇನ್ನು ಬ್ಯಾಂಕುಗಳನ್ನು ವಿಲೀನ ಮಾಡುವುದಕ್ಕೆ ವಿರೋಧ ಮಾಡುವುದು ಯಾಕೆ? ವಿಲೀನ ಮಾಡುವುದರಿಂದ ಬ್ಯಾಂಕು ಸಿಬ್ಬಂದಿಗಳು ಎದುರಿಸುವ ತೊಂದರೆ ಏನು? ನನ್ನ ಪ್ರಕಾರ ಅಲ್ಲಿ ಎಸಿಯಲ್ಲಿ ಕುಳಿತು ಟೈಮ್ ಪಾಸ್ ಮಾಡುವ ಬ್ಯಾಂಕಿನವರಿಗೆ ತಮ್ಮ ಮೇಲೆ ಹೆಚ್ಚಿನ ಕೆಲಸದ ಒತ್ತಡ ಬೀಳುತ್ತದೆ ಎನ್ನುವ ಆತಂಕದಿಂದ ಹೀಗೆ ಮಾಡುತ್ತಿದ್ದಾರೆ. ಇವರೆಲ್ಲ ನಾಲ್ಕು ದಿನ ನಮ್ಮ ಸೈನಿಕರ ಸ್ಥಾನದಲ್ಲಿ ನಿಂತು ಕೆಲಸ ಮಾಡಬೇಕು. ಆಗ ಬುದ್ಧಿ ಬರುತ್ತದೆ. ಸುಮ್ಮನೆ ರಜೆ ಹಾಕುವುದು. ಮಜಾ ಮಾಡುವುದು. ವರ್ಷಾಂತ್ಯಕ್ಕೆ ಜಾಲಿ ರೈಡ್ ಹೋಗಲು ಕಾರಣ ಬೇಕಾದ್ರೆ ಹೇಳಿ. ಸಂಬಳ ಜಾಸ್ತಿ ಮಾಡಬೇಕಾದರೆ ನೀವು ಏನು ಕೆಲಸ ಜಾಸ್ತಿ ಮಾಡಿದ್ದಿರಿ ಎಂದು ತೋರಿಸಿ!
Leave A Reply