ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸಿಸುವ ಜನರ ಮೇಲೆ ಕುಡಿಯುವ ನೀರಿನ ದರವನ್ನು ಹೆಚ್ಚಳ ಮಾಡುವ ಮೂಲಕ ಕಾಂಗ್ರೆಸ್ ಪಾಲಿಕೆಗೆ ಆದಾಯ ಹೆಚ್ಚಿಸಿದೆ ಎಂದು ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿರಬಹುದು. ಆದರೆ ನೆನಪಿಡಿ. ನೀರಿನ ಬಿಲ್ ವಿಷಯದಲ್ಲಿ ಈ ಬಾರಿ ಕಾಂಗ್ರೆಸ್ಸಿಗೆ ಅತೀ ದೊಡ್ಡ ಮೈನಸ್ ಆಗಲಿದೆ. ಈ ವಾಕ್ಯವನ್ನು ಓದುತ್ತಿದ್ದ ಹಾಗೆ ಕಾಂಗ್ರೆಸ್ಸಿಗರು ನನ್ನ ಮೇಲೆ ಕೋಪಗೊಳ್ಳಬಹುದು. ಹೆಚ್ಚಿಸಿದ್ದು ನಾವು ಅಧಿಕಾರದಲ್ಲಿ ಇದ್ದಾಗ ಅಲ್ಲ ಎಂದು ಹೇಳಬಹುದು. ಪಾಲಿಕೆಯಲ್ಲಿ ನಮ್ಮ ಆಡಳಿತ ಮುಗಿದ ಮೇಲೆ ಹೆಚ್ಚಳ ಆಗಿದ್ದು ಎನ್ನಬಹುದು. ಆದರೆ ಕಾಂಗ್ರೆಸ್ಸಿಗರೇ, ಪಾಲಿಕೆಯಲ್ಲಿ ಆಗ ಆಡಳಿತಾಧಿಕಾರಿ ದರ ಹೆಚ್ಚಳ ಮಾಡಿರಬಹುದು. ಆದರೆ ರಾಜ್ಯದಲ್ಲಿ ಇದ್ದ ಸರಕಾರ ಯಾರದ್ದು ನಿಮ್ಮದು ತಾನೆ. ನಗರಾಭಿವೃದ್ಧಿ ಸಚಿವರು ಕಾಂಗ್ರೆಸ್ಸಿನವರು ಇದ್ರು ತಾನೆ. ಯುಟಿ ಖಾದರ್ ನಿಮ್ಮವರೇ ತಾನೆ. ಈಗ ಹೇಳಿ, ನೀರಿನ ದರ ಹೆಚ್ಚಳ ಮಾಡಿದ್ದು ಯಾರು?
ಅಷ್ಟಕ್ಕೂ ನೀರಿನ ದರ ಹೆಚ್ಚಳ ಮಾಡುವ ಬದಲು ನಿತ್ಯ ಪೋಲಾಗುತ್ತಿರುವ ಮೂರು ಎಂಜಿಡಿಯಷ್ಟು ನೀರನ್ನು ಉಳಿಸುವುದು ಹೇಗೆ ಎಂದು ಯೋಚಿಸಿದ್ದೀರಾ? ಇಲ್ಲ. ನಿತ್ಯ ತುಂಬೆಯಲ್ಲಿ 21 ಎಂಜಿಡಿ ನೀರು ಪಂಪ್ ಆಗುತ್ತದೆ. ಅದರಲ್ಲಿ ಇಡೀ ಮಂಗಳೂರಿಗೆ ಹೆಚ್ಚೆಂದರೆ 18 ಎಂಜಿಡಿ ಸಾಕು. ಇವರು ಕಳುಹಿಸುವ ನೀರು ನಮ್ಮ ಮನೆಗಳಿಗೆ ಮಾತ್ರವಲ್ಲ, ವ್ಯವಹಾರಿಕ ಕಟ್ಟಡಗಳಿಗೆ, ವ್ಯಾಪಾರಿ ಉದ್ದೇಶಕ್ಕೆ, ಕೈಗಾರಿಕಾ ಪ್ರದೇಶಕ್ಕೆ, ಎಂಸಿಎಫ್, ಎಂಆರ್ ಪಿಎಲ್, ಎನ್ ಎಂಪಿಟಿ ಗೂ ಹೋಗುತ್ತದೆ.
ಈಗ ಎಪ್ರಿಲ್ ನಿಂದ ನೀವು ಹೆಚ್ಚು ಮಾಡಿರುವ ನೀರಿನ ದರ ಹೇಗೆ ಜನಸಾಮಾನ್ಯರ ಕುತ್ತಿಗೆಗೆ ಬಂದಿದೆ ಎಂದು ವಿವರಿಸುತ್ತೇನೆ, ಕೇಳಿ. ಒಬ್ಬ ವ್ಯಕ್ತಿಗೆ ದಿನಕ್ಕೆ ಸರಾಸರಿ 120 ಲೀಟರ್ ನೀರು ಅವಶ್ಯಕತೆ ಇರುತ್ತದೆ. ಒಂದು ಮನೆಯಲ್ಲಿ 5-6 ಜನ ಇದ್ದರೆ ದಿನಕ್ಕೆ 500 ಲೀಟರ್ ನಂತೆ ತಿಂಗಳಿಗೆ 15000 ಲೀಟರ್ ನೀರು ಬೇಕಾಗುತ್ತದೆ. ಒಂದು ತಿಂಗಳಿಗೆ 24000 ತನಕ ನೀರು ಖರ್ಚು ಮಾಡಿದರೆ ನಮಗೆ ಬರುತ್ತಿದ್ದದ್ದು 65 ರೂಪಾಯಿ. ಈಗ ಇವರು ಬೇರೆ ಲೆಕ್ಕಾಚಾರ ಹಾಕಿ 8000 ಲೀಟರ್ ತನಕ 56 ರೂಪಾಯಿ ನಿಗದಿಗೊಳಿಸಿದ್ದಾರೆ. ಅದರ ನಂತರ 8000 ದಿಂದ 17000 ತನಕ ಸಾವಿರ ಲೀಟರ್ ಗೆ 9 ರೂಪಾಯಿಯಂತೆ, 17000 ರಿಂದ 25000 ತನಕ ಸಾವಿರ ಲೀಟರ್ ಗೆ 11 ರೂಪಾಯಿ, 25000 ಲೀಟರ್ ಮೇಲೆ 13 ರೂಪಾಯಿ ದರ ನಿಗದಿಗೊಳಿಸಿದ್ದಾರೆ.
ಈಗ ವಿಷಯ ಎಂದರೆ ಎಪ್ರಿಲ್ ನಲ್ಲಿ ನೀರಿನ ರೇಟ್ ಹೆಚ್ಚಳ ಮಾಡಿದ್ದರೂ ಮೂರು ತಿಂಗಳ ತನಕ ಪಾಲಿಕೆ ಕಡೆಯಿಂದ ಬಿಲ್ ಕೊಡಲಿಕ್ಕೆ ಯಾರು ಬರಲೇ ಇಲ್ಲ. ಈಗ ಸಡನ್ನಾಗಿ ಬಂದಿದ್ದಾರೆ. ಇದರಿಂದ ಇಲ್ಲಿಯ ತನಕ 300 ರೂಪಾಯಿ ಬರುತ್ತಿದ್ದ ಕಡೆ 3000 ರೂಪಾಯಿ ಬಂದಿದೆ. ಈಗ ಒಮ್ಮೆಲ್ಲೆ ಹೀಗಾದರೆ ಜನಸಾಮಾನ್ಯರು ಎಲ್ಲಿಗೆ ಹೋಗುವುದು. ನಿಮಗೆ ಜನಸಾಮಾನ್ಯರ ಮೇಲೆ ಅಷ್ಟು ಕನಿಕರ ಇದ್ದಲ್ಲಿ ನೀವು ನೀರಿನ ದರ ಹೆಚ್ಚಿಸುವ ಬದಲು ಪಾಲಿಕೆ ವ್ಯಾಪ್ತಿಯಲ್ಲಿ ಇರುವ ಅಷ್ಟೂ ಹೋರ್ಡಿಂಗ್ ಗಳ ಮೇಲಿನ ಶುಲ್ಕವನ್ನು ಹೆಚ್ಚಿಸುತ್ತಿದ್ದಿರಿ. ಆದರೆ ನೀವು ಹೆಚ್ಚಿಸಿಲ್ಲ. ಹೋರ್ಡಿಂಗ್ ನವರು ವರ್ಷಕ್ಕೆ ಪಾಲಿಕೆಗೆ 20 ಸಾವಿರ ಕೊಡುವವರು ಅದೇ ವರ್ಷಕ್ಕೆ 2 ಲಕ್ಷ ನಿವ್ವಳ ದುಡಿಯುತ್ತಾರೆ. ನೀವು ಅಂತವರ ಮೇಲೆ ಶುಲ್ಕ ಹೆಚ್ಚಿಸಿಲ್ಲ. ಅದೇ ಜನರು ತಮ್ಮ ಮನೆಗೆ ಬಳಸುವ ನೀರು ನಿಮ್ಮ ಕಣ್ಣಿಗೆ ಬಿತ್ತಲ್ಲ ಕಾಂಗ್ರೆಸ್ಸಿಗರೇ!
Leave A Reply