ಉಳ್ಳಾಲ, ಸೋಮೇಶ್ವರಕ್ಕೆ ಬಂದ ಕಡಲ್ಕೊರೆತ ಅನುದಾನದ ಸಣ್ಣ ಲೆಕ್ಕ ಇಲ್ಲಿದೆ, ಓದಿ ಖಾದರ್!!
ಕಡಲ್ಕೊರೆತ ಎನ್ನುವ ಶಬ್ದ ಜನಪ್ರತಿನಿಧಿಗಳ ಮಟ್ಟಿಗೆ ಬಂಗಾರದ ವೀಣೆಯಲ್ಲಿ ನುಡಿಸುವ ಸಂಗೀತದಂತೆ ಕೇಳುತ್ತದೆ. ನಾನು ಉಸ್ತುವಾರಿ ಸಚಿವನಾಗಿ ಮೂರು ವರ್ಷ ಇದ್ದೆ. ಈ ವಿಷಯದಲ್ಲಿ ಏನೆಲ್ಲಾ ಮಾಡಿದ್ದೇನೆ. ಕೋಟಾ ಶ್ರೀನಿವಾಸ ಪೂಜಾರಿಯವರು ಉಸ್ತುವಾರಿ ಸಚಿವರಾಗಿ ಏನೂ ಮಾಡಿಲ್ಲ ಎಂದು ಮಾನ್ಯ ಶಾಸಕರೂ, ಮಾಜಿ ಆರೋಗ್ಯ ಸಚಿವರೂ ಆಗಿರುವ ಯು.ಟಿ.ಖಾದರ್ ಅವರು ಆರೋಪ ಮಾಡಿದ್ದಾರೆ. ಇವತ್ತು ಖಾದರ್ ಅವರ ಎದುರಿಗೆ ನಾನು ಅಂಕಿಅಂಶಗಳನ್ನು ಇಡಲಿದ್ದೇನೆ. ಇದು ಅವರು “ಮಾಡಿರುವ” ಅಭಿವೃದ್ಧಿಯ ಸ್ಥೂಲ ನೋಟವನ್ನು ನಮ್ಮ ಜಾಗೃತ ಅಂಕಣದ ಓದುಗರಿಗೆ ನೀಡುತ್ತದೆ. ನನಗೆ ಸಿಕ್ಕಿರುವ ದಾಖಲೆಯ ಮೊದಲ ವಾಕ್ಯವೇ ದಕ್ಷಿಣ ಕನ್ನಡ ಜಿಲ್ಲೆಯ ಸಮುದ್ರ ಕೊರೆತ ಪ್ರತಿಬಂಧಕ ಕಾಮಗಾರಿಗಳು. ಅದರ ಕೆಳಗೆ ಎಡಿಬಿ ಯೋಜನೆಯಡಿಯ ಕಾಮಗಾರಿಗಳು ಎಂದು ಬರೆಯಲಾಗಿದೆ. ಹಣ ಬಿಡುಗಡೆಯಾದದ್ದನ್ನು ವಿಭಾಗಿಸಲಾಗಿದೆ. ಎ) ಟ್ರಾಂಚ್-1 ರಲ್ಲಿ ಪೂರ್ಣಗೊಂಡಿರುವ ಕಾಮಗಾರಿಗಳು. ಅ) ಉಳ್ಳಾಲ ಪ್ರದೇಶದಲ್ಲಿ 08 ಇನ್ ಶೋರ್ ಬರ್ಮ್ ಗಳ ನಿರ್ಮಾಣ ಯೋಜನೆಯ ಮೊತ್ತ: ರೂ. 38.89 ಕೋಟಿಗಳು (ಪರಿಷ್ಕೃತ ವಿನ್ಯಾಸದಂತೆ)(ಮೂಲ ಮಂಜೂರಾದ ಮೊತ್ತ: ರೂಪಾಯಿ 26 ಕೋಟಿಗಳು) ಆ) ಉಳ್ಳಾಲ ಪ್ರದೇಶದಲ್ಲಿ 02 ಆಫ್ ಶೋರ್ ರಿಫ್ ಗಳ ನಿರ್ಮಾಣ. ಯೋಜನೆಯ ಮೊತ್ತ : ರೂಪಾಯಿ 107.83 ಕೋಟಿಗಳು. ರೀಫ್ ಗಳ ಉದ್ದ: 250 ಮೀಗಳು, 350ಮೀಗಳು. ಇ) ರಿಹ್ಯಾಬಿಲಿಟ್ಯಾಶನ್ ಆಫ್ ಬ್ರ್ಯಾಕ್ ವಾಟರ್ ಎಟ್ ಉಳ್ಳಾಲ್ ಯೋಜನೆಯ ಮೊತ್ತ : ರೂಪಾಯಿ 58.32 ಕೋಟಿಗಳು. ಒಟ್ಟು ಟ್ರಾಕ್-1 ರ ಮೊತ್ತ: ರೂಪಾಯಿ 204.64 ಕೋಟಿಗಳು.
ಬಿ) ಟ್ರಾಚ್ -2 ಕಾಮಗಾರಿಗಳು: 1) ಸೋಮೇಶ್ವರ ಪ್ರದೇಶ: 10 ಇನ್ ಶೋರ್ ಬರ್ಮ್ ಗಳ ನಿರ್ಮಾಣ. ( ಸರಪಳಿ 0.000 ಕಿ.ಮೀ ನಿಂದ 3.500 ಕಿ.ಮೀ ವರೆಗೆ} ಯೋಜನೆಯ ಮೊತ್ತ: ರೂಪಾಯಿ 26 ಕೋಟಿಗಳು. 02. ಆಫ್ ಶೋರ್ ರೀಫ್ ಗಳ ನಿರ್ಮಾಣ. ಯೋಜನೆಯ ಮೊತ್ತ: ರೂಪಾಯಿ 109.00 ಕೋಟಿಗಳು. ರೀಫ್ ಗಳ ಉದ್ದ : 250 ಮೀ ( ತೀರದಿಂದ 600ಮೀ ಒಳಕ್ಕೆ} 2} ಉಳ್ಳಾಲ ಪ್ರದೇಶದ ಮುಕ್ಕಚೇರಿ ಬಳಿ ತಡೆಗೋಡೆ ( ಸರಪಳಿ 6.200 ಕಿ.ಮೀ ನಿಂದ 6.950 ಕಿ.ಮೀ ವರೆಗೆ) ಯೋಜನೆಯ ಮೊತ್ತ: ರೂಪಾಯಿ 24.00 ಕೋಟಿಗಳು. ಯೋಜನೆಯ ಉದ್ದ: 610 ಮೀಗಳು. ಸಮ್ಮರ್ ಸ್ಟ್ಯಾಂಡ್ ಬಳಿ 125 ಮೀ ಉದ್ದದ ಬರಿಡ್ ಸೀ ವಾಲ್. ಉಳ್ಳಾಲ ಪ್ರದೇಶ ಒಟ್ಟು ಯೋಜನೆಯ ಮೊತ್ತ- ರೂಪಾಯಿ 230 ಕೋಟಿಗಳು. ಸೋಮೇಶ್ವರ ಪ್ರದೇಶ ಒಟ್ಟು ಯೋಜನೆಯ ಮೊತ್ತ – ರೂಪಾಯಿ 135 ಕೋಟಿಗಳು. ಈ ಅಂಕಿ ಅಂಶಗಳನ್ನು ನೋಡುವಾಗ ನನಗೆ ಅನಿಸುವುದು ಇನ್ನು ಕೂಡ ಕಡಲ್ಕೊರೆತ ಎನ್ನುವುದು ಇದೆಯಾ?
ಪ್ರತಿ ವರ್ಷ ಕಡಲ್ಕೊರೆತದ ಹೆಸರಿನಲ್ಲಿ ನಮ್ಮ ಜಿಲ್ಲೆಯ ಸೋಮೇಶ್ವರದಿಂದ ಬಪ್ಪನಾಡು ಪ್ರದೇಶದ ತನಕ ಕಾಮಗಾರಿಗೆ 400-500 ಕೋಟಿಯಷ್ಟು ಹಣ ಬಿಡುಗಡೆಯಾಗುತ್ತದೆ. ಆದರೂ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಅದಕ್ಕೆ ಕಾರಣ ಏನು ಗೊತ್ತೆ. ಯಾರಿಗೂ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಆಗಬೇಕು ಎನ್ನುವ ಇಚ್ಚೆ ಇಲ್ಲವೇ ಇಲ್ಲ. ಹಾಗಂತ ನಮ್ಮ ಜನಪ್ರತಿನಿಧಿಗಳು ಸುಮ್ಮನೆ ಕುಳಿತಿಲ್ಲ. ಈ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಲೈಬ್ರರಿಯಲ್ಲಿ ಕುಳಿತಲ್ಲ. ಜಪಾನ್, ಜರ್ಮನಿಗೆ ಹೋಗಿ ಅಲ್ಲಿ ಕಡಲ್ಕೊರೆತ ಹೇಗಾಗುತ್ತೆ, ಅವರು ಏನು ಮಾಡಿದ್ದಾರೆ, ಅಲ್ಲಿ ಏನು ಪರಿಹಾರ ಕಂಡುಕೊಂಡಿದ್ದಾರೆ ಎಂದು ಸಿಕ್ಕಾಪಟ್ಟೆ ಸ್ಟಡಿ ಮಾಡಿ ಬಂದಿದ್ದಾರೆ. ಇಲ್ಲಿಗೆ ಬಂದು ವರದಿ ಕೂಡ ಕೊಟ್ಟಿದ್ದಾರೆ. ಆದರೆ ನಂತರ ಏನಾಗುತ್ತದೆ. ಮತ್ತೆ ಹಣ ಬಿಡುಗಡೆಯಾಗುತ್ತದೆ. ವಿದೇಶಕ್ಕೆ ಹೋಗಿ ಬಂದ ಮಂತ್ರಿಗೆ ಇಲ್ಲಿ ಬಂದ ನಂತರ ಕಡಲ್ಕೊರೆತ ಮರೆತು ಹೋಗಿರುತ್ತದೆ. ಕೆಲವು ಸಮಯದ ನಂತರ ಆ ಮಂತ್ರಿ ಆ ಪಕ್ಷದಿಂದ ಬೇರೆ ಪಕ್ಷಕ್ಕೆ ಹೋಗಿರುತ್ತಾನೆ. ಅವನ ಖಾತೆ ಬದಲಾಗಿರುತ್ತದೆ. ರಾಜಕೀಯ ಅವನನ್ನು ಆವರಿಸಿಕೊಂಡು ಬಿಟ್ಟಿರುತ್ತದೆ. ಸಮುದ್ರ ಎಲ್ಲಿದೆ ಎಂದು ಅವನು ಯೋಚಿಸುವ ಗೋಜಿಗೆ ಹೋಗಲ್ಲ. ಅವನೊಂದಿಗೆ ಹೋಗಿ ಮಜಾ ಮಾಡಿ ಬಂದ ಅಧಿಕಾರಿಗಳು ಬೇರೆ ಇಲಾಖೆಗೆ ವರ್ಗವಾಗಿ ಹೋಗಿರುತ್ತಾರೆ. ಅವರು ಕೊಟ್ಟ ವರದಿಯನ್ನು ಓದಲು ಯಾರಿಗೂ ಪುರುಸೊತ್ತು ಇರುವುದಿಲ್ಲ. ಹೆಚ್ಚಿನ ಮಂತ್ರಿಗಳಿಗೆ ಅಧಿಕಾರಿಗಳು ಬರೆದಿರುವುದು ತಲೆಗೆ ಹತ್ತಿರುವುದಿಲ್ಲ. ಈ ನಡುವೆ ಎಷ್ಟೋ ಮಳೆಗಾಲಗಳು ಬಂದು ಹೋಗುತ್ತವೆ. ಪತ್ರಿಕೆಗಳು ವರದಿ ಮಾಡುತ್ತವೆ. ಹೊಸ ಮಂತ್ರಿಗಳು ಮತ್ತೆ ಕಡಲು ನೋಡಲು ಬರುತ್ತಾರೆ. ಛೇ ಛೇ ಎನ್ನುತ್ತಾರೆ. ಸ್ಥಳೀಯ ಶಾಸಕರು ಮನವಿ ಕೊಡುತ್ತಾರೆ. ಹಣ ಬಿಡುಗಡೆಯಾಗುತ್ತದೆ. ಮನೆ ಕಟ್ಟುವ ಕಲ್ಲುಗಳನ್ನು ಸಮುದ್ರಕ್ಕೆ ಹಾಕುತ್ತಾರೆ. ಅಲ್ಲಿದ್ದೇ ಮರಳನ್ನು ಗೋಣಿಯಲ್ಲಿ ತುಂಬಿ ಅಲ್ಲಿ ಮೆಟ್ಟಿಲಿನಂತೆ ಇಡುತ್ತಾರೆ. ಮಳೆಗಾಲ ಮುಗಿದಿರುತ್ತದೆ. ಮುಂದಿನ ವರ್ಷ ಮತ್ತೆ ಕಡಲ್ಕೊರೆತ ಬಂದಿರುತ್ತದೆ. ಹಾಗಾದರೆ ಇದಕ್ಕೆ ಪರಿಹಾರ ಇಲ್ಲವೇ? ಇದೆ. ಅದಕ್ಕಾಗಿ ವಿದೇಶಕ್ಕೆ ಹೋಗಬೇಕಾಗಿಲ್ಲ. ಅದನ್ನು ನಾಳೆ ಹೇಳುತ್ತೇನೆ. ನಿಮಗೆ ಶಾಕ್ ಆಗಲಿದೆ!!
Leave A Reply