ಹೃದಯವನ್ನು ಅಗೆಯುವಾಗ ದೇಹದ ಉಳಿದ ಭಾಗಗಳ ಎಚ್ಚರಿಕೆ ಅಗತ್ಯ!!
ಸ್ಮಾರ್ಟ್ ಸಿಟಿ ಮಂಗಳೂರಿಗೆ ಬರುವ ತನಕ ಇದ್ದ ಕಾತರ ಅದು ಬಂದ ನಂತರ ಎಲ್ಲಿಗೆ ಹೋಗಿ ಮಾಯವಾಯಿತು ಎಂದು ಗೊತ್ತೆ ಆಗಲಿಲ್ಲ. ನಮ್ಮ ಸ್ಮಾರ್ಟ್ ಸಿಟಿ ಮಂಡಳಿ ಕೂಡ ಮೌನವಾಗಿ ಮಲಗಿ ಒಂದು ಕ್ಲಾರ್ಕ್ ಟವರ್ ನಿರ್ಮಿಸಿದ್ದು ಬಿಟ್ಟರೆ ಬೇರೆ ಹೇಳುವಂತದ್ದು ಏನೂ ಮಾಡಲೇ ಇಲ್ಲ. ಇವರು ಹೀಗೆ ನಿದ್ರೆಯಲ್ಲಿ ಬಿದ್ದವರಂತೆ ಇದ್ದಾಗ ಕೇಂದ್ರದಿಂದ ಒಂದು ಬಾಣ ಮಂಗಳೂರಿಗೆ ತೂರಿ ಬಂತು. ಆ ಬಾಣದ ತುದಿಯಲ್ಲಿ ಒಂದು ಪತ್ರ ಇತ್ತು. ಆ ಪತ್ರದಲ್ಲಿ ಸ್ಮಾರ್ಟ್ ಸಿಟಿಯ ರ್ಯಾಂಕ್ ಪಡೆದ ನಗರಗಳ ಪಟ್ಟಿ ಇತ್ತು. ಮಂಗಳೂರಿನ ಹೆಸರು ಕೆಳಗಿನಿಂದ ನೋಡಿದಾಗ ಮೊದಲಿಗೆ ಕಾಣುತ್ತಿತ್ತು. ಅದರ ನಂತರ ಇನ್ನೊಂದು ಪತ್ರ ಮೇಲ್ ನಲ್ಲಿ ಬಂತು. ನೀವು ಆದಷ್ಟು ಬೇಗ ಸ್ಮಾರ್ಟ್ ಸಿಟಿ ಅಭಿವೃದ್ಧಿಗೆ ನಾವು ಕೇಂದ್ರ ಮತ್ತು ರಾಜ್ಯದಿಂದ ಕಳುಹಿಸಿಕೊಟ್ಟ ಹಣವನ್ನು ಉಪಯೋಗಿಸದೇ ಇದ್ದರೆ ಆ ಹಣವನ್ನು ಮರಳಿ ತೆಗೆದುಕೊಳ್ಳಲಾಗುವುದು. ಆಗ ಮಂಗಳೂರಿನ ಸ್ಮಾರ್ಟ್ ಸಿಟಿ ಮಂಡಳಿಯವರು ಎಚ್ಚೆತ್ತುಕೊಂಡರು. ತಕ್ಷಣ ಎಲ್ಲಾ ರಸ್ತೆಗಳನ್ನು ಅಗೆಯಲಾಯಿತು. ಬಂದರು ಪ್ರದೇಶದಲ್ಲಿ ಒಳಚರಂಡಿ ಕಾಮಗಾರಿಗಳನ್ನು ನಡೆಸುವುದಕ್ಕೆ ಕೆಲಸ ಶುರುವಾಯಿತು. ಆ ಕೆಲಸ ಒಂದು ಹಂತಕ್ಕೆ ಬರುತ್ತಿದ್ದಂತೆ ಕೊರೊನಾ ಪ್ರಾರಂಭವಾಯಿತು. ನಂತರ ಯಾವ ಕಾಮಗಾರಿಯೂ ಮಾಡುವಂತಿರಲಿಲ್ಲ. ಬಳಿಕ ಮಳೆಗಾಲ ಬಂತು. ಎಲ್ಲವೂ ಸರಿಯಾಗಿ ಮತ್ತೆ ಕೆಲಸ ಆರಂಭವಾಗುವಾಗುತ್ತಿದ್ದಂತೆ ರಥಬೀದಿ, ಹಂಪನಕಟ್ಟೆಯಲ್ಲಿ ಸ್ಮಾರ್ಟ್ ಸಿಟಿ ಕೆಲಸ ಶುರುವಾಗಿದೆ. “ನಾವು ಸ್ಮಾರ್ಟ್ ಸಿಟಿ ಕೆಲಸ ಶುರು ಮಾಡುತ್ತಿದ್ದೇವೆ. ನಮಗೆ ವಾಹನಗಳು ಆ ಭಾಗದಲ್ಲಿ ಸಂಚರಿಸದಂತೆ ವ್ಯವಸ್ಥೆ ಮಾಡಿಕೊಡಿ” ಎಂದು ಸ್ಮಾರ್ಟ್ ಸಿಟಿ ಮಂಡಳಿಯಿಂದ ಪೊಲೀಸ್ ಕಮೀಷನರೇಟ್ ಕಚೇರಿಗೆ ಮನವಿ ಹೋಗುತ್ತಿದ್ದಂತೆ ಪೊಲೀಸ್ ಅಧಿಕಾರಿಗಳು ಆ ಕಾಮಗಾರಿ ನಡೆಯುವ ಪ್ರದೇಶಕ್ಕೆ ಹೋಗುವ ರಸ್ತೆಗಳನ್ನು ಬಂದ್ ಮಾಡಿಬಿಟ್ಟರು. ಇದರಿಂದ ಮಂಗಳೂರು ನಗರಭಾಗ ದ್ವೀಪವಾಯಿತು. ಮಂಗಳೂರಿನ ಜನ ಅಭಿವೃದ್ಧಿಗೆ ವಿರೋಧಿಗಳಲ್ಲ. ಆದರೆ ನಟ್ಟನಡು ಭಾಗದಲ್ಲಿ ಅಭಿವೃದ್ಧಿ ಮಾಡುವಾಗ ಬೇರೆ ಬೇರೆ ಇಲಾಖೆಯ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲೇಬೇಕು. ಇಲಾಖೆಗಳ ನಡುವೆ ಸಮನ್ವಯ ಇರಲೇಬೇಕು. ಅದರ ಬಳಿಕ ಸ್ಥಳೀಯ ಜನಪ್ರತಿನಿಧಿಗಳ ಜೊತೆಗೆ ಸಮಾಲೋಚನೆ ಮಾಡಲೇಬೇಕು. ಯಾವುದೂ ಇಲ್ಲದೇ ಇದ್ದಾಗ ಸೋಮವಾರ ಮಂಗಳೂರಿಗೆ ಆದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಪಿವಿಎಸ್ ನಿಂದ ಕೆಎಸ್ ರಾವ್ ರಸ್ತೆ, ಶಾರದ ವಿದ್ಯಾಲಯ, ಡೊಂಗರಕೇರಿ, ರಥಬೀದಿ, ಬಜಿಲಕೇರಿ, ಬಂದರು ಹೀಗೆ ಎಲ್ಲಾ ಕಡೆ ಹೋಗಲು ವಾಹನ ಸವಾರರು ಪಡಬಾರದ ಶ್ರಮ ಪಟ್ಟರು. ವಿರೋಧ ಪಕ್ಷಗಳಿಗೆ ಮಾತನಾಡಲು ವಿಷಯ ಸಿಕ್ಕಿದಂತೆ ಆಯಿತು. ಈ ಸಮಸ್ಯೆಗೆ ಸ್ಮಾರ್ಟ್ ಸಿಟಿಯ ಅಧಿಕಾರಿಗಳೇ ನೇರ ಹೊಣೆ ಎನ್ನುವುದು ಸತ್ಯವಾದರೂ ಎಲ್ಲರಿಗೂ ಎದುರಿಗೆ ಕಾಣುವುದು ಜನಪ್ರತಿನಿಧಿಗಳು ಅಂದರೆ ಮಂಗಳೂರು ನಗರ ದಕ್ಷಿಣ ಶಾಸಕರು. ಸಮಸ್ಯೆಯನ್ನು ತಕ್ಷಣ ಪರಿಹರಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾದ ಶಾಸಕ ವೇದವ್ಯಾಸ ಕಾಮತ್ ವಿವಿಧ ಅಧಿಕಾರಿಗಳನ್ನು ಕರೆಸಿಕೊಂಡು ತಕ್ಷಣ ಸಭೆ ನಡೆಸಿದರು. ಯಾವ ರಸ್ತೆಯಲ್ಲಿ ಹೋದರೆ ಎಲ್ಲಿ ತಲುಪುತ್ತೇವೆ, ಆ ರಸ್ತೆಯ ಅಗಲ, ಉದ್ದ, ವಾಹನಗಳು ಹೋಗಿ ಬರಬಹುದಾದ ವ್ಯವಸ್ಥೆ ಎಲ್ಲವೂ ವೇದವ್ಯಾಸ ಕಾಮತ್ ಮಸ್ತಕದಲ್ಲಿ ಅಚ್ಚೊತ್ತಿರುವುದರಿಂದ ಅವರು ಅಧಿಕಾರಿಗಳಿಗೆ ಏನು ಮಾಡಬೇಕು ಎಂದು ಹೇಳುತ್ತಾ ಹೋದರು. ಅದನ್ನು ಯಥಾವತ್ತಾಗಿ ಪಾಲಿಸಿದ ಕಾರಣ ಮಂಗಳವಾರ ಬೆಳಿಗ್ಗೆಯ ಹೊತ್ತಿಗೆ ಸಮಸ್ಯೆ ಪರಿಹಾರವಾಗಿದೆ. ಈ ಮೂಲಕ ಮಂಗಳೂರಿಗರು ಹಿಂದೆ ಮುಂಬೈ, ಬೆಂಗಳೂರು, ದೆಹಲಿಯಲ್ಲಿ ಟ್ರಾಫಿಕ್ ಜಾಮ್ ಹೇಗಿರುತ್ತೆ ಎಂದು ಕೇಳಿ, ಟಿವಿಯಲ್ಲಿ ನೋಡಿ ಮಾತ್ರ ತಿಳಿದುಕೊಂಡಿದ್ದರು. ಅದನ್ನು ಈಗ ಸಾಕ್ಷಾತ್ ಅನುಭವಿಸಿ ಬಿಟ್ಟರು.
ಇದು ಮಂಗಳೂರಿನ ಎಲ್ಲರಿಗೂ ಒಂದು ಪಾಠ. ಮೊದಲನೇಯದಾಗಿ ಸ್ಮಾರ್ಟ್ ಸಿಟಿ ಮಂಡಳಿಯವರು ಇದರಿಂದ ಕಲಿಯುವಂತದ್ದು ತುಂಬಾ ಇದೆ. ಮೊತ್ತ ಮೊದಲಾಗಿ ಇದು ಲಾಕ್ ಡೌನ್ ಅವಧಿ ಅಲ್ಲ. ಎಪ್ರಿಲ್ ನಲ್ಲಿ ಹೀಗೆ ಇದ್ದಬದ್ದ ರಸ್ತೆ ಅಗೆದಿದ್ದರೆ ಯಾರೂ ಕೇಳುತ್ತಿರಲಿಲ್ಲ. ಆದರೆ ಈಗ ಹಬ್ಬಗಳ ಸಮಯ. ಅದರ ಜೊತೆ ಜನ ಮುಕ್ತವಾಗಿ ಓಡಾಡಲು ಶುರು ಮಾಡಿದ್ದಾರೆ. ಹಾಗಿರುವಾಗ ನಾವು ಏನೂ ಮಾಡಿದರೂ ಜನ ಸುಮ್ಮನೆ ಕೂರುತ್ತಾರೆ ಎನ್ನುವ ಭ್ರಮೆ ಅಧಿಕಾರಿಗಳು ಬಿಡಬೇಕು. ಇದರೊಂದಿಗೆ ಪೊಲೀಸ್ ಇಲಾಖೆ ಕೂಡ ಕಲಿಯುವಂತದ್ದು ಇದೆ. ಸ್ಮಾರ್ಟ್ ಸಿಟಿ ಮಂಡಳಿಯವರು ಆ ರಸ್ತೆ ಬಂದ್ ಮಾಡಿ, ಈ ರಸ್ತೆ ಬಂದ್ ಮಾಡಿ ಎಂದಾಗ ಅದನ್ನು ಕಣ್ಣು ಮುಚ್ಚಿ ಮಾಡುವುದಲ್ಲ. ಬದಲಿಗೆ ಆ ರಸ್ತೆಗಳನ್ನು ಮುಚ್ಚಿದರೆ ಪರ್ಯಾಯ ರಸ್ತೆ ಯಾವುದು, ಅದು ಎಲ್ಲಿ ಹೋಗುತ್ತದೆ, ಎಲ್ಲಿಂದ ಹೊರಗೆ ಬರುತ್ತದೆ ಎನ್ನುವುದನ್ನು ಸರಿಯಾಗಿ ಅರ್ಥ ಮಾಡಿ ಹಾಗೆ ಜಾರಿ ಮಾಡಬೇಕು. ಇನ್ನು ಜನಪ್ರತಿನಿಧಿಗಳು ಕೂಡ ಕಲಿಯುವಂತದ್ದು ಇದೆ. ಅದೇನೆಂದರೆ ಮಂಗಳೂರಿನಲ್ಲಿ ಒಂದು ಕಡ್ಡಿ ಅಲುಗಾಡಿದರೂ ಗೊತ್ತಾಗುವಷ್ಟು ಎಚ್ಚರಿಕೆ ಅಗತ್ಯವಿಲ್ಲದಿದ್ದರೂ ಹಂಪನಕಟ್ಟೆಯನ್ನು ಅಗೆಯಲು ಶುರುವಾದಾಗ ಮುಂದೆ ಏನಾಗಬಹುದು ಎನ್ನುವಷ್ಟು ಎಚ್ಚರಿಕೆ ಇದ್ದೇ ಇರಬೇಕು. ಇಲ್ಲದಿದ್ದರೆ ಸೋಮವಾರದ ಪರಿಸ್ಥಿತಿಯೇ ಮುಂದೆನೂ ಬರಬಹುದು!
Leave A Reply