ಅರ್ಧ ಸರ್ಜರಿ ಮಾಡಿ ವೈದ್ಯ ಎದ್ದು ಹೋದ ಹಾಗಿದೆ ಮಂಗಳೂರು!!
ಮುಂದಿನ ಎರಡು ವರ್ಷಗಳೊಳಗೆ ಪಚ್ಚನಾಡಿಯ ಡಂಪಿಂಗ್ ಯಾರ್ಡಿಗೆ ಒಂದು ಕಾಯಕಲ್ಪ ನೀಡಿ ಆ ಸಮಸ್ಯೆಯನ್ನು ಪರಿಹರಿಸಲು ನಮ್ಮ ಜನಪ್ರತಿನಿಧಿಗಳು ವಿಫಲರಾದರೆ ಸಂಶಯವೇ ಬೇಡಾ, ಕಾಂಗ್ರೆಸ್ ಆ ಒಂದೇ ವಿಷಯ ಇಟ್ಟುಕೊಂಡು ಎರಡು ಕ್ಷೇತ್ರಗಳಲ್ಲಿ ಭಯಂಕರ ಆಟ ಆಡಲಿದೆ. ಆ ಮುಂಜಾಗ್ರತೆ ಮಂಗಳೂರು ಮಹಾನಗರ ಪಾಲಿಕೆ, ಶಾಸಕದ್ವಯರಿಗೆ ಇದ್ದರೆ ಸಾಕು. ಗುಜರಾತ್, ತಮಿಳುನಾಡು ಸಹಿತ ಎಲ್ಲೆಲ್ಲಿಂದ ತಜ್ಞರು ಬಂದು ನೋಡಿ, ಮೀಟಿಂಗ್ ಮಾಡಿ ಹೋಗಿ ಆಯಿತು, ಪಚ್ಚನಾಡಿಯ ಒಂದು ಲೋಡ್ ತ್ಯಾಜ್ಯ ಅಲ್ಲಾಡಿದಂತೆ ಕಾಣುವುದಿಲ್ಲ. ಹಾಗಿರುವಾಗ ಸಾಗರದಂತಿರುವ ಆ ತ್ಯಾಜ್ಯವನ್ನು ಸರಿಪಡಿಸುವುದು ಸದ್ಯ ದೂರದ ಮಾತು ಎಂದು ಅನಿಸುತ್ತದೆ. ಮೊನ್ನೆ ಆ ಬಗ್ಗೆ ಕೇಸ್ ಇತ್ತು. ವಿಡಿಯೋ ಕಾನ್ಸರೆನ್ಸ್ ಮೂಲಕ ಕೇಸ್ ನಡೆದಿತ್ತು. ಪಾಲಿಕೆಯ ಕಮೀಷನರ್ ಹಾಗೂ ಸ್ಮಾರ್ಟ್ ಸಿಟಿ ಎಂಡಿಯೂ ಆಗಿರುವ ಅಕ್ಷಯ್ ಶ್ರೀಧರ್ ಭಾಗವಹಿಸಿದ್ದರು. ಪರಿಸರ ಇಲಾಖೆಯಿಂದಲೂ ಅಧಿಕಾರಿಗಳು ಉಪಸ್ಥಿತರಿದ್ದರು. ಆಗ ನ್ಯಾಯಾಧೀಶರು ಒಂದು ಪ್ರಶ್ನೆ ಕೇಳಿಬಿಟ್ಟರು. ಮಂಗಳೂರಿನಲ್ಲಿ ಈ ಪ್ರಮಾಣದಲ್ಲಿ ಸ್ಮಾರ್ಟ್ ಸಿಟಿಯ ಕಾಮಗಾರಿಗಳು ನಡೆಯುತ್ತಿದೆಯಲ್ಲ, ಅಲ್ಲಿ ಉತ್ಪತ್ತಿಯಾಗುವ ಕಟ್ಟಡ ತ್ಯಾಜ್ಯಗಳನ್ನು ಎಲ್ಲಿ ಹಾಕುತ್ತೀರಿ?
ಸಾಮಾನ್ಯವಾಗಿ ಒಂದು ಕಟ್ಟಡ ನಿರ್ಮಾಣವಾಗುವಾಗ ಅಥವಾ ಹಳೆ ಕಟ್ಟಡ ಕೆಡವಿ ಹೊಸ ಕಟ್ಟಡ ಕಟ್ಟಲ್ಪಡುವಾಗ ಆ ಪ್ರದೇಶದಲ್ಲಿ ಕಟ್ಟಡದ ತ್ಯಾಜ್ಯಗಳ ರಾಶಿ ಬಿದ್ದಿರುತ್ತದೆ. ಈ ಸ್ಮಾರ್ಟ್ ಸಿಟಿ ಕಾಮಗಾರಿ ನಡೆಯುವಾಗ ಹಳೆ ಡಾಮರ್ ರಸ್ತೆಗಳನ್ನು ಅಗೆದು ಅಲ್ಲಿ ಕಾಂಕ್ರೀಟ್ ಹಾಕುವಾಗ ಕಟ್ಟಡ ತ್ಯಾಜ್ಯ ನಿರ್ಮಾಣವಾಗುತ್ತದೆ. ಹಳೆ ಡಾಮರ್ ತ್ಯಾಜ್ಯ ಮಾತ್ರವಲ್ಲ ಹಾಗೆ ಫುಟ್ ಪಾತ್, ಒಳಚರಂಡಿ ಕಾಮಗಾರಿ ನಡೆಯುವಾಗ ನಿರ್ಮಾಣ ಹಂತದ ಡೆಬ್ರಿಸ್ ಗಳ ರಾಶಿಯನ್ನು ಎಲ್ಲಿಯಾದರೂ ಹಾಕಬೇಕಲ್ಲ. ಆದರೆ ಈ ಬಗ್ಗೆ ನಮ್ಮ ಪಾಲಿಕೆಗೆ ಆಗಲಿ, ನಮ್ಮ ಪರಿಸರ ಇಲಾಖೆಗೆ ಆಗಲಿ ಸರಿಯಾದ ಮಾಹಿತಿ ಇಲ್ಲ. ಯಾಕೆಂದರೆ ಇಲ್ಲಿಯ ತನಕ ಆ ಸಮಸ್ಯೆಗಳೇ ಉದ್ಭವವಾಗಿರಲಿಲ್ಲ. ಈ ಬಗ್ಗೆ ಉತ್ತರ ನೀಡಲು ಅಕ್ಷಯ್ ಶ್ರೀಧರ್ ಅವರು ಕೆಲವು ದಿನಗಳ ಕಾಲಾವಕಾಶ ಕೇಳಿದರು. ಆಗ ನ್ಯಾಯಾಲಯ ಮೂರು ವಾರಗಳ ಸಮಯ ಕೊಟ್ಟು ಅಲ್ಲಿಯ ತನಕ ಸ್ಮಾರ್ಟ್ ಸಿಟಿಯ ಕಾಮಗಾರಿ ನಿಲ್ಲಿಸಲು ಸೂಚಿಸಿದೆ. ಈಗ ಸಮಸ್ಯೆ ಆರಂಭವಾಗಿರುವುದೇ ಇಲ್ಲಿ.
ನಮ್ಮದು ಹೇಳಿ ಕೇಳಿ ಬುದ್ಧಿವಂತರ ಊರು. ಆದರಿಂದ ನಮಗೆ ಸ್ಮಾರ್ಟ್ ಸಿಟಿಯ ಪ್ರಗತಿಯ ಕೆಲಸದ ಪಟ್ಟಿಯಲ್ಲಿ ಕೊನೆಯ ಸ್ಥಾನ ಬಂದಿದೆ. ಆರಂಭದಲ್ಲಿ ಸ್ಮಾರ್ಟ್ ಸಿಟಿ ಮಂಡಳಿ ಕಂಬಳಿ ಹೊದ್ದು ಮಲಗಿತ್ತು. ಇನ್ನೇನೂ ಸ್ಮಾರ್ಟ್ ಸಿಟಿಯ ಅನುದಾನ ಹಿಂದಕ್ಕೆ ಹೋಗುತ್ತದೆ ಎಂದು ಗೊತ್ತಾದಾಗ ಕೊನೆಯ ಕ್ಷಣದಲ್ಲಿ ಎದ್ದು ಕೆಲಸ ಆರಂಭಿಸಲಾಯಿತು. ಮಂಗಳೂರಿನಲ್ಲಿ ಸಿಕ್ಕಿದ ಕಡೆಗಳಲ್ಲಿ ರಸ್ತೆಗಳನ್ನು ಅಗೆಯಲಾಯಿತು. ರಥಬೀದಿಯಿಂದ ಬಂದರು ಪ್ರದೇಶವನ್ನು ಸೇರಿಸಿಕೊಂಡು ಹಂಪನಕಟ್ಟೆಯ ತನಕ ಇದ್ದಬದ್ದ ಪ್ರದೇಶಗಳನ್ನು ಅಗೆಯಲಾಗಿದೆ. ಒಂದು ರೀತಿಯಲ್ಲಿ ಮಂಗಳೂರು ಹೃದಯ ಭಾಗ ಎಂದರೆ ಒಪನ್ ಹಾರ್ಟ್ ಸರ್ಜರಿಯ ಹಾಗೆ ಕಾಣುತ್ತಿದೆ. ಇನ್ನೇನೂ ಆಪರೇಶನ್ ಮುಗಿದು ವೈದ್ಯರು ಹೊಲಿಗೆ ಹಾಕಬೇಕು ಎನ್ನುವಷ್ಟರಲ್ಲಿ ಆಪರೇಶನ್ ನಿಂತು ಹೋಗಿದೆ. ಆಪರೇಶನ್ ಅರ್ಧಕ್ಕೆ ನಿಲ್ಲಿಸಿ ವೈದ್ಯರು ಆರಾಮವಾಗಿ ಚಾ ಕುಡಿಯಲು ಹೋದರೆ ಅರಿವಳಿಕೆಯ ಡೋಸ್ ಮುಗಿದ ರೋಗಿ ಸಡನ್ನಾಗಿ ಎದ್ದರೆ ಅವನ ಪರಿಸ್ಥಿತಿ ಹೇಗಿರಬೇಡಾ ಎಂದು ಊಹಿಸಿ. ಹಾಗೆ ಆಗಿದೆ ಮಂಗಳೂರು ಹೃದಯಭಾಗ. ಮುಂದಿನ ತಿಂಗಳು ಮಂಗಳೂರು ರಥೋತ್ಸವ ಇದೆ. ಹೀಗೆ ಕಾಮಗಾರಿ ಅರ್ಧಕ್ಕೆ ನಿಂತರೆ ಜಾತ್ರೆ ನಡೆಯುವುದು ಹೇಗೆ? ಆದರೆ ಇದೆಲ್ಲ ಕೋರ್ಟಿಗೆ ಗೊತ್ತಾಗುತ್ತಾ? ಅವರಿಗೆ ಇದನ್ನು ಹೇಳಲು ಜನಸಾಮಾನ್ಯರಿಗೆ ಆಗುತ್ತಾ? ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕಾದವರು ವಿಫಲ ಆದರೆ ಅದಕ್ಕೆ ನಾವು ತೆರಿಗೆದಾರ ಪ್ರಜೆಗಳು ಜವಾಬ್ದಾರರಾ? ಸ್ಮಾರ್ಟ್ ಸಿಟಿ ಮಂಡಳಿ, ಪಾಲಿಕೆ, ಪರಿಸರ ಇಲಾಖೆಯ ವೈಫಲ್ಯಕ್ಕೆ ನಮ್ಮನ್ನು ಯಾಕೆ ಬಲಿ ಕೊಡುತ್ತಿದ್ದೀರಿ?
ಅಷ್ಟಕ್ಕೂ ಕಟ್ಟಡ ತ್ಯಾಜ್ಯಗಳನ್ನು ತಂದು ಬಿಸಾಡಲು ಮಂಗಳೂರಿನಲ್ಲಿ ಸರಕಾರಿ ಜಾಗ ಇಲ್ಲವೇ? ಇದೆ. ಸರಿಯಾಗಿ ನೋಡಿದರೆ ಕುಂಜತ್ತಬೈಲ್ ಪ್ರದೇಶದಲ್ಲಿ ಅಂತಹ ಜಾಗ ಇದೆ. ಆದರೆ ಪಾಲಿಕೆಯ ಇತಿಹಾಸದಲ್ಲಿ ಆ ಪರಿಸ್ಥಿತಿಯೇ ಬಂದಿರಲಿಲ್ಲವಾದ್ದರಿಂದ ಅಧಿಕಾರಿಗಳು ಈ ಕುರಿತು ಸಜ್ಜಾಗಿರಲೇ ಇಲ್ಲ. ಯಾಕೆಂದರೆ ಮಂಗಳೂರು ಭೌಗೋಳಿಕವಾಗಿ ವಿಭಿನ್ನ ಆಕಾರವನ್ನು ಹೊಂದಿದೆ. ಇದು ಮಲೆನಾಡಿನಂತೆ ಸಂಪೂರ್ಣ ಗುಡ್ಡಪ್ರದೇಶ ಅಲ್ಲ. ಬಯಲು ಸೀಮೆಯಂತೆ ಮಟ್ಟಸವಾದ ಪ್ರದೇಶವೂ ಅಲ್ಲ. ಉತ್ತರ ಕರ್ನಾಟಕದಂತೆ ಬಂಜರು ಭೂಮಿಯೂ ಅಲ್ಲ. ಇದು ಎಲ್ಲ ಪ್ರದೇಶಗಳ ಮಿಶ್ರಣ. ಇಲ್ಲಿ ಒಂದು ಕಾಲದಲ್ಲಿ ಹೇರಳವಾದ ಕೃಷಿಭೂಮಿಗಳು ನಗರದ ಮಧ್ಯಭಾಗದಲ್ಲಿಯೇ ಇದ್ದವು. ಅಲ್ಲಿ ಮಣ್ಣು ಹಾಕಿ ಸಮ ಮಾಡಿ ಕಟ್ಟಡಗಳನ್ನು ಕಟ್ಟಲಾಗಿತ್ತು. ಲ್ಯಾಂಡ್ ಫಿಲ್ಲಿಂಗ್ ಮಾಡುವುದು ನಮಗೆ ಸಾಮಾನ್ಯ ಚಟುವಟಿಕೆ. ಹೀಗಿರುವಾಗಲೇ ಪಚ್ಚನಾಡಿಯ ಸಮಸ್ಯೆ ಎದುರು ಸವಾಲಾಗಿ ಕಾಣಿಸಿರುವುದು. ಇಚ್ಚಾಶಕ್ತಿಯ ಕೊರತೆಯಿಂದ ಮಂಗಳೂರು ಮಹಾನಗರ ಪಾಲಿಕೆ ಮೇಲೆ ಬರಬೇಕು. ಈಗ ಸದ್ಯ ನ್ಯಾಯಾಲಯ ಸರಿಯಾದ ಚಾಟಿ ಬೀಸಿದೆ. ಆದರೆ ಅನುಭವಿಸಬೇಕಾಗಿರುವುದು ಮಾತ್ರ ಜನಸಾಮಾನ್ಯರು!
Leave A Reply