ಹೋರ್ಡಿಂಗ್ ಗುತ್ತಿಗೆದಾರರ ಅಕೌಂಟಿಗೂ ಪಾಲಿಕೆ ಅಕೌಂಟಿಗೂ ಲಿಂಕ್ ಮಾಡಿಬಿಡಿ!!
ತುಂಬೆ ವೆಂಟೆಂಡ್ ಡ್ಯಾಂನ ಬಳಿ ಮತ್ತೊಂದು ಕಿರು ಅಣೆಕಟ್ಟು ನಿರ್ಮಾಣಗೊಳ್ಳುತ್ತಿದೆ. ಅದು ಉಳ್ಳಾಲ, ಕೊಣಾಜೆ ಸಹಿತ ಆ ಭಾಗದ ಜನರಿಗೆ ಕುಡಿಯುವ ನೀರನ್ನು ಪೂರೈಸಲಿದೆ. ಆದರೆ ಸದ್ಯ ಮತ್ತು ಇಷ್ಟು ವರ್ಷದ ತನಕ ಮಂಗಳೂರು ಮಹಾನಗರ ಪಾಲಿಕೆಯ ಹೊರಗಿರುವ ಈ ಭಾಗಗಳಿಗೆ ನೀರು ಪೂರೈಕೆಯಾಗುತ್ತಿದ್ದದ್ದು ತುಂಬೆ ವೆಂಟೆಂಡ್ ಡ್ಯಾಂನಿಂದಲೇ. ಅಲ್ಲಿಂದಲೇ ನೀರು ಹೋಗುತ್ತಿತ್ತು. ಅದಕ್ಕಾಗಿ ಉಳ್ಳಾಲ ನಗರಸಭೆ ಸಹಿತ ಆಸುಪಾಸಿನ ನೀರು ಬಳಸುವ ಪಂಚಾಯತ್ ಗಳು ಪಾಲಿಕೆಗೆ ಹಣ ಪಾವತಿಸಬೇಕಾಗಿತ್ತು. ಆದರೆ ಅವರು ಸರಿಯಾಗಿ ಪಾವತಿ ಮಾಡದೇ ಕೋಟಿಗಟ್ಟಲೆ ಹಣ ಬಾಕಿ ಇದೆ. ಅದನ್ನು ಪಾಲಿಕೆ ಕಟ್ಟುನಿಟ್ಟಾಗಿ ವಸೂಲಿ ಮಾಡಿದರೆ ಪಾಲಿಕೆಯ ಆದಾಯ ಹೆಚ್ಚಾಗುತ್ತಿತ್ತು. ಇನ್ನು ಮುಂದೆ ಪ್ರತ್ಯೇಕ ಕಿರು ಅಣೆಕಟ್ಟು ಆಗಿ ಅವರ ಪಾಡಿಗೆ ಅವರು ನೀರು ಬಳಸಲು ಶುರು ಮಾಡಿದರೆ ನಂತರ ಅಲ್ಲಿನ ನಗರಸಭೆಯವರು ಪಾಲಿಕೆಗೆ ಬಿಲ್ ಪಾವತಿಸುವ ಅಗತ್ಯ ಬೀಳುವುದಿಲ್ಲ. ಆಗ ಏನಾಗುತ್ತದೆ? ಈ ಬಾಕಿ ಇರುವ ಹಣವನ್ನು ಹಾಗೆ ಕೊಡದೇ ಬಾಕಿ ಇಟ್ಟರೆ ನಂತರ ಅದನ್ನು ಕೇಳುವವರೇ ಇರುವುದಿಲ್ಲ. ಎಲ್ಲವೂ ಹೀಗೆ ಆದರೆ ಪಾಲಿಕೆಗೆ ಆದಾಯ ಎಲ್ಲಿಂದ ಬರುವುದು? ಅಭಿವೃದ್ಧಿಗೆ ಹಣ ಇಲ್ಲ ಎನ್ನುವುದಕ್ಕಿಂತ ಹೀಗೆ ಬರುವ ಹಣ ತರಿಸಬಹುದಲ್ಲ? ಹಿಂದೆ ಕೂಡ ಹೀಗೆ ಆಗಿದೆ. ಮುಂಚೆ ಕಣ್ಣೂರು ಮತ್ತು ಬಜಾಲ್ ಪಾಲಿಕೆಯ ಹೊರಗೆ ಇತ್ತು. ನೀರಿನ ಬಿಲ್ ಅನ್ನು ಆಗ ಗ್ರಾಮ ಪಂಚಾಯತ್ ಆಗಿದ್ದ ಕಣ್ಣೂರು, ಬಜಾಲ್ ಬಾಕಿ ಇಟ್ಟಿತ್ತು. ನಂತರ ಮಹಾನಗರ ಪಾಲಿಕೆಗೆ ಅವು ಸೇರ್ಪಡೆಗೊಂಡವು. ಆ ಬಾಕಿ ಇದ್ದ ಬಿಲ್ ಗಳು ಹಾಗೆ ಉಳಿದಿವೆ. ಅದನ್ನು ಇನ್ನು ಯಾರು ಕಟ್ಟುತ್ತಾರೆ.
ಅದರೊಂದಿಗೆ ಇನ್ನೊಂದು ಬಹಳ ದೊಡ್ಡ ಅಪಾಯವನ್ನು ಪಾಲಿಕೆಯ ವ್ಯಾಪ್ತಿಯ ಜನ ಎದುರಿಸಲಿದ್ದಾರೆ. ಅದೇನೆಂದರೆ ಹೊಸ ಕಿರು ಅಣೆಕಟ್ಟು ತುಂಬೆ ವೆಂಟೆಂಡ್ ಡ್ಯಾಂ ಮುಂದೆ ಕಟ್ಟಲಾಗುತ್ತದೆ. ಅಂದರೆ ಆ ಕಿರು ಅಣೆಕಟ್ಟು ಸಂಪೂರ್ಣಗೊಂಡು ಅಲ್ಲಿ ಮಳೆಗಾಲ ಮುಗಿದ ಬಳಿಕ ಅಣೆಕಟ್ಟಿನ ಗೇಟ್ ಹಾಕಿದರೆ ಆಗ ಈಗಿನ ವೆಂಟೆಂಡ್ ಡ್ಯಾಂಗೆ ಬರುವ ನೀರು ನಿಂತು ಹೋಗುತ್ತದೆ. ಈಗ ಪ್ರಸ್ತುತ ತುಂಬೆಯ ಏಳು ಮೀಟರ್ ಡ್ಯಾಂನಲ್ಲಿ ಆರು ಮೀಟರ್ ನೀರನ್ನು ಮಾತ್ರ ನಿಲ್ಲಿಸಲಾಗುತ್ತದೆ. ಅಲ್ಲಿ ಏಳು ಮೀಟರ್ ನೀರು ನಿಲ್ಲಿಸದಿದ್ದರೆ ಭವಿಷ್ಯದಲ್ಲಿ ಕುಡಿಯುವ ನೀರಿಗೆ ಪಾಲಿಕೆ ವ್ಯಾಪ್ತಿಯಲ್ಲಿ ಹಾಹಾಕಾರ ಏಳಲಿದೆ. ಹಾಗಂತ ಏಳು ಮೀಟರ್ ನೀರು ನಿಲ್ಲಿಸಿದರೆ ಅಕ್ಕಪಕ್ಕದ ಭೂಪ್ರದೇಶ ಮುಳುಗಡೆಯಾಗಲಿದೆ. ಭೂ ಮಾಲೀಕರಿಗೆ ಪರಿಹಾರ ನೀಡಬೇಕಾದರೆ ಕನಿಷ್ಟ 145 ಕೋಟಿ ರೂಪಾಯಿ ಬೇಕು. ಅದನ್ನು ರಾಜ್ಯ ಸರಕಾರವೇ ನಮಗೆ ನೀಡಬೇಕು. ಆ ಹಣವನ್ನು ತರುತ್ತೇವೆ ಮತ್ತು ಆ ಸಮಸ್ಯೆಗೆ ಅಂತಿಮ ಪರಿಹಾರ ನೀಡುತ್ತೇವೆ ಎಂದು ಭಾರತೀಯ ಜನತಾ ಪಾರ್ಟಿಯ ಮುಖಂಡರು ಹೇಳುತ್ತಲೇ ಬಂದಿದ್ದಾರೆ. ಆದರೆ ಬಿಜೆಪಿ ಸರಕಾರ ಬಂದು ಒಂದೂವರೆ ವರ್ಷ ಆಯಿತು. ಇಲ್ಲಿಯ ತನಕ ಆಗಿಲ್ಲ. ಇನ್ನು ಎರಡು ವರ್ಷ ಇದೆ. ಅದರ ನಂತರ ಚುನಾವಣೆಯ ಕಾವು ಶುರುವಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಏಪ್ರಿಲ್ ಬರುವ ಮೊದಲೇ ಮಂಗಳೂರಿನಲ್ಲಿ ನೀರಿನ ಸಮಸ್ಯೆ ಶುರುವಾಗುತ್ತದೆ. ಹೊಸ ಕಿರು ಅಣೆಕಟ್ಟು ಆದ ಮೇಲೆಯೂ ಆರೇ ಮೀಟರ್ ನೀರು ತುಂಬೆಯಲ್ಲಿ ನಿಂತರೆ ಸಮಸ್ಯೆ ಶುರುವಾಯಿತು ಎಂದೇ ಅರ್ಥ. ಉಳ್ಳಾಲ ಶಾಸಕರು ತಮ್ಮ ಕ್ಷೇತ್ರದ ಜನರಿಗಾಗಿ ಕಿರು ಅಣೆಕಟ್ಟು ತಮ್ಮ ಸರಕಾರ ಇದ್ದಾಗ ಮಂಜೂರು ಮಾಡಿಸಿ ಸೇಫ್ ಆಗಿದ್ದಾರೆ. ಈಗ ಮಂಗಳೂರು ನಗರ ದಕ್ಷಿಣ, ಉತ್ತರ, ಬಂಟ್ವಾಳ ಶಾಸಕರು ತಮ್ಮದೇ ಸರಕಾರ ರಾಜ್ಯದಲ್ಲಿ ಇರುವುದರಿಂದ ಒತ್ತಡ ಹಾಕಿ ಹಣ ಬಿಡುಗಡೆ ಮಾಡಿಸಬೇಕಿದೆ.
ಇನ್ನು ಪಾಲಿಕೆಗೆ ಆದಾಯ ಬರುವ ಇನ್ನೊಂದು ಮಾರ್ಗ ಇದೆ. ಪಚ್ಚನಾಡಿಯಲ್ಲಿ ಒಂದು ಏಕರೆ ಜಾಗವನ್ನು ಕೇವಲ ಐದು ಸಾವಿರ ರೂಪಾಯಿ ಬಾಡಿಗೆಗೆ ಒಂದು ವರ್ಷಕ್ಕೆ ಒಬ್ಬರಿಗೆ ಲೀಸಿಗೆ ಕೊಡಲಾಗಿದೆ. ಇದು ಓಬಿರಾಯನ ಕಾಲದ ಬಾಡಿಗೆ ಆಗಿದೆ. ಇವತ್ತಿನ ದಿನದಲ್ಲಿ ಒಂದು ಏಕರೆಗೆ ಒಂದು ವರ್ಷಕ್ಕೆ ಐದು ಸಾವಿರ ಬಾಡಿಗೆ ಬಂದರೆ ಹೇಗೆ? ಈ ದರವನ್ನು ಮುಂದಿನ ಬಜೆಟಿನಲ್ಲಿ ಪರಿಷ್ಕರಣೆ ಮಾಡಬೇಕು. ಐದು ಸಾವಿರದಿಂದ ಬೇಕಾದರೆ ಐವತ್ತು ಸಾವಿರಕ್ಕೆ ಮಾಡಿ. ಸಾಧ್ಯವಾದವರು ಹಣ ಕೊಟ್ಟು ಲೀಸ್ ಪಡೆದುಕೊಳ್ಳಿ. ಹೀಗೆ ಪಾಲಿಕೆಯ ವ್ಯಾಪ್ತಿಯಲ್ಲಿ ಅನೇಕ ಜಾಗಗಳನ್ನು ಕಡ್ಲೆಕಾಯಿ ರೇಟಿಗೆ ಲೀಸಿಗೆ ಕೊಡಲಾಗಿದೆ. ಅದನ್ನೆಲ್ಲಾ ಪರಿಷ್ಕರಣೆ ಮಾಡಿದರೆ ಖಂಡಿತ ಪಾಲಿಕೆಗೆ ಆದಾಯ ಬಂದೇ ಬರುತ್ತದೆ.
ಇನ್ನು ಪಾಲಿಕೆಯ ಬಜೆಟ್ ಪೂರ್ವಭಾವಿ ಸಭೆಯಲ್ಲಿ ನಾನು ಹೇಳಿದ್ದ ಇನ್ನೊಂದು ಅಂಶವೇನೆಂದರೆ ಪಾಲಿಕೆಯ ವ್ಯಾಪ್ತಿಯಲ್ಲಿ ಜಾಹೀರಾತು ಗುತ್ತಿಗೆದಾರರು ಹಾಕುವ ಹೋರ್ಡಿಂಗ್ಸ್, ಪಾಲಿಕೆಯ ಕಟ್ಟಡದಲ್ಲಿರುವ ಅಂಗಡಿಗಳು, ಮಾರ್ಕೆಟ್ ನಲ್ಲಿರುವ ಅಂಗಡಿಗಳ ಬಾಡಿಗೆಗಳನ್ನು ಎಪ್ರಿಲ್ 1 ರಿಂದ ಹೊಸ ಒಡಂಬಡಿಕೆಯಲ್ಲಿ ಪರಿಷ್ಕರಣೆ ಮಾಡಿ ಬಾಡಿಗೆದಾರರ ಹಾಗೂ ಪಾಲಿಕೆಯ ಬ್ಯಾಂಕ್ ಖಾತೆಯನ್ನು ಪರಸ್ಪರ ಲಿಂಕ್ ಮಾಡಬೇಕು. ಆಗ ಪ್ರತಿ ತಿಂಗಳು ನಿಗದಿಪಡಿಸಿದ ಬಾಡಿಗೆ ನೇರವಾಗಿ ಪಾಲಿಕೆಯ ಬ್ಯಾಂಕ್ ಅಕೌಂಟಿಗೆ ಬಂದು ಬೀಳುತ್ತದೆ. ಅದರಿಂದ ಯಾವುದೂ ಬಾಕಿ ಆಗುವುದಿಲ್ಲ. ಒಂದು ವೇಳೆ ಬಾಡಿಗೆದಾರರ ಅಕೌಂಟಿನಲ್ಲಿ ಹಣ ಇಲ್ಲದಿದ್ದರೆ ಅದಕ್ಕೆ ಒಂದಿಷ್ಟು ದಂಡವನ್ನು ಮೊದಲೇ ಫಿಕ್ಸ್ ಮಾಡಿದರೆ ನಂತರ ಹಣ ಅಕೌಂಟಿಗೆ ಬಂದಾಗ ದಂಡ ಸಹಿತ ಕಟ್ ಆಗಬೇಕು. ಹೀಗೆ ಮಾಡಿದರೆ ಯಾಕೆ ಒಳ್ಳೆಯದು ಎಂದರೆ ಈ ವ್ಯವಸ್ಥೆಯಲ್ಲಿ ಯಾವುದೇ ಭ್ರಷ್ಟಾಚಾರ ಇರುವುದಿಲ್ಲ. ಇಲ್ಲದಿದ್ದರೆ ಹೋರ್ಡಿಂಗ್ಸ್ ಗುತ್ತಿಗೆದಾರರು ನೀಡುವ ಪುಡಿಕಾಸಿಗೆ ಪಾಲಿಕೆಗೆ ಬರುವ ದೊಡ್ಡ ಆದಾಯವನ್ನು ಕೆಲವು ಅಧಿಕಾರಿಗಳು ತಪ್ಪಿಸಲಿದ್ದಾರೆ .
Leave A Reply