ಚಾಮರಾಜಪೇಟೆ ಗಣಪತಿ ವಿಷಯದಲ್ಲಿ ಸರಕಾರ ಆಸಕ್ತಿ ತೋರಿಸಿಲ್ವಾ?
ಒಂದೇ ರಾಜ್ಯದಲ್ಲಿರುವ ಎರಡು ಪ್ರದೇಶಗಳಲ್ಲಿ ಒಂದೇ ರೀತಿಯ ಸವಾಲುಗಳು ಇದ್ದಾಗ ನ್ಯಾಯಾಲಯಗಳು ಬೇರೆ ಬೇರೆ ರೀತಿಯ ಆದೇಶವನ್ನು ಕೊಟ್ಟರೆ ಆಗ ಜನಸಾಮಾನ್ಯರಲ್ಲಿ ಉದ್ಭವಿಸುವ ಪ್ರಶ್ನೆ ಹೀಗೆಕೆ ಆಯಿತು? ಗಣಪತಿಯನ್ನು ಪ್ರತಿಷ್ಟಾಪಿಸಲು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಮತ್ತು ಚಾಮರಾಜಪೇಟೆಯ ಈದ್ಗಾ ಗ್ರೌಂಡಿನಲ್ಲಿ ಇಡಲು ಅಲ್ಲಿನ ಸ್ಥಳೀಯ ಸಂಘಟನೆಗಳು ನಿರ್ಧರಿಸಿದ್ದವು. ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಇಡಲು ಅವಕಾಶ ಸಿಕ್ಕಿ ಅವರು ಅಲ್ಲಿ ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಿ ಸಂಭ್ರಮಿಸಿದ್ದಾರೆ. ಅದೇ ಚಾಮರಾಜಪೇಟೆಯ ಸಂಘಟನೆಗಳಿಗೆ ಅನುಮತಿ ಸಿಗದೇ ಅವರು ನಿರಾಶೆಗೊಂಡಿದ್ದಾರೆ. ಮುಂದಿನ ವರ್ಷ ಮತ್ತೆ ಹೋರಾಟ ಮಾಡುವುದಾಗಿ ನ್ಯಾಯ ಪಡೆಯುವುದಾಗಿ ಹೇಳಿದ್ದಾರೆ. ಹಾಗಾದರೆ ಆಗಿರುವುದಾದರೂ ಏನು? ಹುಬ್ಬಳ್ಳಿಯ ಈದ್ಗಾ ಮೈದಾನ ವಕ್ಫ್ ಬೋರ್ಡ್ ಆಸ್ತಿ ಅಲ್ಲ ಎನ್ನುವುನ್ನು ಕರ್ನಾಟಕ ಹೈಕೋರ್ಟ್ ಹೇಳಿದೆ. ಅದನ್ನು ಮುಸ್ಲಿಮರು ಈದ್ಗಾ ಮೈದಾನ ಎಂದು ಕರೆದರೆ ಹಿಂದುಗಳು ಚೆನ್ನಮ್ಮ ಮೈದಾನ ಎಂದು ಹೇಳುತ್ತಾರೆ. ಅಲ್ಲಿ ನಾವು ಈ ಬಾರಿ ಚೌತಿಗೆ ಗಣಪತಿ ಮೂರ್ತಿಯನ್ನು ಇಟ್ಟು ಪೂಜಿಸುತ್ತೇವೆ, ಅನುಮತಿ ಕೊಡಿ ಎಂದು ಸ್ಥಳೀಯ ಹಿಂದೂಪರ ಸಂಘಟನೆಗಳು ಸ್ಥಳೀಯ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗೆ ಅನುಮತಿ ಕೇಳಿದ್ದರು. ಪಾಲಿಕೆ ವ್ಯಾಪ್ತಿಯ ಯಾವುದೇ ಮೈದಾನದಲ್ಲಿ ಯಾರು ಏನೇ ಕಾರ್ಯಕ್ರಮ ಆಯೋಜನೆ ಮಾಡುವುದಾಗಿದ್ದರೆ ಪಾಲಿಕೆಗೆ ಅನುಮತಿ ಕೇಳಬೇಕು. ಅನುಮತಿ ಕೊಡುವುದು ಅಥವಾ ನಿರಾಕರಿಸುವುದು ಪಾಲಿಕೆಯ ಅಧಿಕಾರದ ವ್ಯಾಪ್ತಿಯಲ್ಲಿ ಬರುತ್ತದೆ. ಕೆಲವೊಮ್ಮೆ ಷರತ್ತುಗಳೊಂದಿಗೆ ಅನುಮತಿಯನ್ನು ನೀಡಲಾಗುತ್ತದೆ. ಹಾಗೆ ಹುಬ್ಬಳ್ಳಿಯಲ್ಲಿ ಕೂಡ ಈದ್ಗಾ ಮೈದಾನದಲ್ಲಿ ಗಣಪತಿ ಇಡುತ್ತೇವೆ ಎಂದು ಸಂಘಟನೆಗಳು ಅನುಮತಿ ಕೇಳಿದಾಗ ಅನುಮತಿ ಸಿಕ್ಕಿದೆ. ಹಾಗೆ ಚಾಮರಜಪೇಟೆಯಲ್ಲಿರುವ ಈದ್ಗಾ ಮೈದಾನದಲ್ಲಿಯೂ ಗಣಪತಿ ಇಡಲು ಸಂಘಟನೆಗಳು ಹೊರಟಿದ್ದವು. ಈ ನಡುವೆ ಅದು ನಮ್ಮ ವಕ್ಫ್ ಬೋರ್ಡಿಗೆ ಸಂಬಂಧಿಸಿದ ಭೂಮಿ ಎಂದು ಮುಸ್ಲಿಂ ಸಂಘಟನೆಗಳು ಕೋರ್ಟ್ ಮೆಟ್ಟಿಲು ಏರಿದ್ದವು. ಆರ್ ಟಿಸಿಯಲ್ಲಿ ಅದನ್ನು ವಕ್ಫ್ ಬೋರ್ಡ್ ಜಮೀನು ಎಂದು ಮಾಡಿಕೊಡಿ ಎಂದು ವಿನಂತಿ ಮಾಡಿದ್ದವು. ಆದರೆ ಅದು ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ. ಯಾಕೆಂದರೆ ಅದು ವಕ್ಫ್ ಭೂಮಿ ಎನ್ನುವುದಕ್ಕೆ ಯಾವುದೇ ಆಧಾರ ಇರಲಿಲ್ಲ. ಒಂದು ಕಾಲದಲ್ಲಿ ಚಾಮರಾಜಪೇಟೆ ಮೈಸೂರು ಅರಸು ಮನೆತನದ ಸಾಂಸ್ಕೃತಿಕ ಕಾರ್ಯಕ್ರಮಗಳ ತಾಣವಾಗಿತ್ತು. ಅಲ್ಲಿ ಮಧ್ಯದಲ್ಲಿರುವ ಮೈದಾನದಲ್ಲಿ ಕಲಾವಿದರುಗಳಿಗೆ ತಮ್ಮ ಕಲೆ ಪ್ರದರ್ಶಿಸಲು ಒಡೆಯರು ಅವಕಾಶ ಮಾಡಿಕೊಟ್ಟಿದ್ದರು. ರಾಜಾಶ್ರಯದಲ್ಲಿ ಕಲಾವಿದರು ಬೆಳೆಯುವುದಕ್ಕೆ ಶತಮಾನದ ಪರಂಪರೆ ಇದೆ. ಅಂತಹ ಸಮಯದಲ್ಲಿ ವರ್ಷಕ್ಕೆ ಎರಡು ಸಲ ನಮಗೆ ಹಬ್ಬದ ದಿನದಂದು ಸಾಮೂಹಿಕವಾಗಿ ನಮಾಜ್ ಮಾಡಲು ಅವಕಾಶ ಕೊಡಿ ಎಂದು ಯಾವುದೋ ಒಂದು ಕಾಲದಲ್ಲಿ ರಾಜರ ಕೈಕಾಲು ಹಿಡಿದು ಅನುಮತಿ ತೆಗೆದುಕೊಂಡ ಮುಸ್ಲಿಮರು ಕ್ರಮೇಣ ಅದು ನಮ್ಮದೇ ಎಂದು ವಾದಿಸಲು ಶುರು ಮಾಡಿದರು. ವಿಷಯ ಹೀಗೆ ಇರುವಾಗಲೇ ಹುಬ್ಬಳ್ಳಿಯ ವಿಷಯದಲ್ಲಿ ಅಲ್ಲಿನ ಧಾರವಾಡ ಮುನ್ಸಿಪಾಲಿಟಿ ನಿರ್ಧಾರ ತೆಗೆದುಕೊಳ್ಳಲು ಹಕ್ಕುಭಾದ್ಯವಾಗಿದೆ ಎಂದು ಹೈಕೋರ್ಟ್ ಹೇಳಿದರೆ, ಚಾಮರಾಜಪೇಟೆಯಲ್ಲಿ ಯಥಾಸ್ಥಿತಿಯನ್ನು ಕಾಪಾಡುವಂತೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಹಾಗಾದರೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಗೆ ಬರುವ ಚಾಮರಾಜಪೇಟೆಯ ಮೈದಾನದಲ್ಲಿ ಗಣಪತಿ ಇಡುವ ಕಾರ್ಯಕ್ರಮ ನಡೆಯಲು ಸಾಧ್ಯವಾಗಿಲ್ಲ, ಯಾಕೆ? ಯಾಕೆಂದರೆ ಚಾಮರಾಜಪೇಟೆಯ ವಿಷಯದಲ್ಲಿ ಸರಕಾರ ಅಷ್ಟು ಆಸಕ್ತಿಯನ್ನು ತೋರಿಸಲಿಲ್ಲ. ನೀರಸವಾಗಿ ಕಾಟಾಚಾರಕ್ಕೆ ಎನ್ನುವಂತೆ ವಾದಿಸಿತು. ಸುಪ್ರೀಂಕೋರ್ಟ್ ವಕೀಲರಿಗೆ ವಾದಿಸಿ ಗೆಲ್ಲಲು ಸೂಕ್ತ ಇನ್ ಪುಟ್ ಕೊಟ್ಟೇ ಇರಲಿಲ್ಲ. ಅದೇ ಇನ್ನೊಂದು ಕಡೆಯಲ್ಲಿ ವಕ್ಫ್ ಬೋರ್ಡ್ ಮತ್ತು ಶಾಸಕ ಜಮೀರ್ ಅಹ್ಮದ್ ಪರವಾಗಿ ಕಪಿಲ್ ಸಿಬಲ್ ವಾದಿಸಿದರು. ಜಮೀರ್ ತಮ್ಮ ಮತಾಂಧತೆಗೆ ತಕ್ಕಂತೆ ಸಿಬಲ್ ಅವರಿಗೆ ಎಲ್ಲಾ ರೀತಿಯ ಮಾಹಿತಿಯನ್ನು ನೀಡಿದರು. ರಾಜ್ಯ ಸರಕಾರದಿಂದ ನೇಮಿಸಲ್ಪಟ್ಟಿರುವ ಮಂಗಳೂರು ಮೂಲದ ವಕ್ಫ್ ಬೋರ್ಡ್ ಅಧ್ಯಕ್ಷರು ಕೂಡ ಮುಸ್ಲಿಮರ ಗೆಲುವಿಗೆ ಟೊಂಕ ಕಟ್ಟಿ ನಿಂತಿದ್ದರು. ಆದರೆ ಸರಕಾರಿ ವಕೀಲರಿಗೆ ವಾದ ಮಾಡಿ ಗೆಲ್ಲುವಷ್ಟು ಮ್ಯಾಟರ್ ಇರಲಿಲ್ಲ. ಇನ್ನು ಚಾಮರಾಜಪೇಟೆಯ ಮೈದಾನದ ಮಾಲೀಕತ್ವದ ವಿಷಯ ಇನ್ನೂ ಅಂತಿಮ ತೀರ್ಪು ಬರದೇ ಇರುವುದರಿಂದ ಅಲ್ಲಿ ಯಥಾಸ್ಥಿತಿ ಇರಲಿ ಎಂದು ಸುಪ್ರೀಂಕೋರ್ಟ್ ಹೇಳಿತು. ಅದೇ ಹುಬ್ಬಳ್ಳಿಯಲ್ಲಿ ಚೆನ್ನಮ್ಮ ಮೈದಾನ ಪಾಲಿಕೆಯ ಸ್ವತ್ತು ಎಂದು ಸಾಬೀತಾಗಿರುವುದರಿಂದ ಪಾಲಿಕೆ ಹೇಳಿದಂತೆ ಮಾಡಿ ಎಂದು ಹೇಳಲಾಗಿದೆ. ಚಾಮರಾಜಪೇಟೆಯ ಮೈದಾನದಲ್ಲಿ ಸರಕಾರ ಸೂಕ್ತ ಮಾಹಿತಿ ಕಲೆ ಹಾಕಿ ಮುಂದಿನ ವರ್ಷವಾದರೂ ಅಲ್ಲಿ ಗಣಪತಿ ಪೂಜೆಗೆ ಅನುಮತಿ ಸಿಗುವಂತೆ ಮಾಡಲಿ ಎನ್ನುವುದು ನಮ್ಮ ಹಾರೈಕೆ.
Leave A Reply