ಮಾಂಸಾಹಾರಿಯಲ್ಲ ಎನ್ನಲು ಇಲ್ಲಿ ಪ್ರಮಾಣವಿದೆ. ಹೌದು ಎನ್ನಲು ನಿಮ್ಮಲ್ಲೇನಿದೆ..
ಜಟಾಯುವಂತಹ ಪಕ್ಷಿಗೂ ಕೂಡ ಸಂಸ್ಕಾರವನ್ನು ಮಾಡಿ ಮೋಕ್ಷವನ್ನು ಕರುಣಿಸಿದ ರಾಮ,ತನ್ನ ಹೊಟ್ಟೆಪಾಡಿಗಾಗಿ ಹಾಗೂ ತನ್ನ ಭೋಗಕ್ಕಾಗಿ ಮಾಂಸವನ್ನು ತಿನ್ನುತ್ತಿದ್ದನೆಂದರೆ ರಾಮಭಕ್ತರಾದ ನಾವು ನಂಬಲು ಸಾಧ್ಯವೇ?. ಆದರೆ ನಮ್ಮಲ್ಲಿ ಯಾವುದನ್ನು ಕೂಡ ಸುಲಭದಲ್ಲಿ ನಂಬುತ್ತೇವೆ.ಹಾಗೆಯೇ ನಮ್ಮ ಸಮಾಜದಲ್ಲಿ ಮಾತ್ರ ಮಹಾಪುರುಷರಿಗೆ ಬಿಡಿ,ದೇವರಿಗೂ ಕೂಡ ಏನು ಬೇಕಾದರೂ ಬಾಯಿಗೆ ಬಂದಂತೆ ಹೇಳುವ ಅವಕಾಶ ಕೂಡ ಇರುವುದು. ಏನೇ ಇರಲಿ ರಾಮ ಮಾಂಸಾಹಾರಿ ಹೌದೋ,ಅಲ್ಲವೋ ಎನ್ನುವುದನ್ನು ಕಾಣೋಣ.
ರಾಮ ತಂದೆಯವರನ್ನು ಕಾಣಲು ಬರುವಾಗ, ತಂದೆ ದಶರಥ ನೆಲದಲ್ಲಿ ಬಿದ್ದಿದ್ದಾನೆ. ಬಳಿಯಲ್ಲಿ ಚಿಕ್ಕಮ್ಮ ಕೈಕೇಯಿ ನಿಂತಿದ್ದಾಳೆ. ಅಲ್ಲಿ ರಾಮನ ಮಾತು. ತಾಯಿ!, ತಂದೆಯವರ ಅಭೀಷ್ಠವನ್ನು ನನಗೆ ತಿಳಿಸಿಕೊಡಿ. ತಂದೆಗೋಸ್ಕರ ನಾನು ಏನು ಬೇಕಾದರೂ ಸಮರ್ಪಿಸಬಲ್ಲೆ. ಈ ಬಗ್ಗೆ ಸಂಶಯ ಬೇಡ. ನಾನು ಯಾವತ್ತೂ ಕೂಡ ಎರಡು ಮಾತನಾಡುವುದಿಲ್ಲ. ಏನಿದ್ದರೂ ಒಂದು ಮಾತು. ಅದು ಕೊನೆಯ ಮಾತೇ ಆಗಿರುತ್ತದೆ.
ಕರಿಷ್ಯೇ ಪ್ರತಿಜಾನೇ ಚ ರಾಮೋ ದ್ವಿರ್ನಾಭಿಭಾಷತೇ.
(ಅಯೋಧ್ಯಾ ಕಾಂಡ 18-30)
ಇದು ರಾಮನ ಅತ್ಯಂತ ದೊಡ್ಡ ಪ್ರತಿಜ್ಞೆ. ಇದೇ ಮರ್ಯಾದಾ ಪುರುಷೋತ್ತಮನಾದ ಶ್ರೀ ರಾಮನ ಬಗ್ಗೆ ಇರುವ ಅತ್ಯಂತ ದೊಡ್ಡ ಹೆಗ್ಗಳಿಕೆಯ ಮಾತು.ರಾಮನ ನಡೆಯಲ್ಲಿ ಹಾಗೂ ನುಡಿಯಲ್ಲಿ ಎಲ್ಲಿಯೂ ಬಿನ್ನಾಭಿಪ್ರಾಯವಿಲ್ಲ ಎನ್ನುವುದಕ್ಕೆ ವಾಲ್ಮೀಕಿಗಳು ದಾಖಲಿಸಿಕೊಟ್ಟ ದೊಡ್ಡ ದಾಖಲೆ.ಈ ಮಾತನ್ನು ಮುಂದಿಟ್ಟುಕೊಂಡು ರಾಮನನ್ನು ಕಾಣಬೇಕು.
ವನವಾಸಕ್ಕೆ ಹೊರಟು ನಿಂತಾಗ ತಾಯಿ ಕೌಸಲ್ಯೆಯ ಅಪ್ಪಣೆಗಾಗಿ ಅವಳ ಅರಮನೆಗೆ ಬರುತ್ತಾನೆ. ಆಗ ತನ್ನ ಮುಂದಿನ ಜೀವನಕ್ರಮದ ಬಗ್ಗೆ ಹೇಳಿಕೊಳ್ಳುತ್ತಾನೆ.
ಚತುರ್ದಶ ಹಿ ವರ್ಷಾಣಿ ವತ್ಸ್ಯಾಮಿ ವಿಜನೇ ವನೇ
ಕಂದಮೂಲಫಲೈರ್ಜೀವನ್ ಹಿತ್ವಾ ಮುನಿವದಾಮಿಷಮ್. (ಅಯೋಧ್ಯಾ ಕಾಂಡ 20-29)
ನಾನು ಮುಂದಿನ 14 ವರ್ಷ ರಾಜಭೋಗಗಳನ್ನೆಲ್ಲ ತ್ಯಜಿಸಿ ಮುನಿಗಳಂತೆ ಕಂದ-ಮೂಲ ಫಲಗಳಿಂದ ಜೀವನ ನಿರ್ವಹಣೆ ಮಾಡುತ್ತೇನೆ. ಹೀಗೆ ತಾಯಿಯ ಮುಂದೆ ಹೇಳಿಕೊಂಡ ರಾಮ ಮಾಂಸಾಹಾರ ಭಕ್ಷಣೆಯನ್ನು ಮಾಡಲು ಸಾಧ್ಯವೇ ಇಲ್ಲ. ಒಂದು ವೇಳೆ ಮಾಂಸಾಹಾರ ಭಕ್ಷಣೆಯನ್ನು ಮಾಡಿದ ಎಂದರೆ ಆತನ ಮಾತಿಗೆ ಆತನೇ ತಪ್ಪಿ ಹೋಗುತ್ತಾನೆ. ಮಾತ್ರವಲ್ಲ ತಾಯಿಯ ಮುಂದೆ ಸುಳ್ಳು ಹೇಳಿದ ಮಹಾಪಾಪಕ್ಕೆ ಗುರಿಯಾಗುತ್ತಾನೆ.
ಧರ್ಮಜ್ಞನಾದ, ಪಿತೃವಾಕ್ಯ ಪರಿಪಾಲಕನಾದ ಶ್ರೀರಾಮನಿಂದ ಇಂತಹ ಮಹಾಪಾಪವನ್ನು ನಿರೀಕ್ಷೆ ಮಾಡಲು ಸಾಧ್ಯವೇ?. ಒಂದು ವೇಳೆ ಇಂತಹ ಸಣ್ಣ ಬುದ್ಧಿ ರಾಮನಲ್ಲಿದ್ದಿದ್ದರೆ ಸಾವಿರ ವರ್ಷ ಕಳೆದರೂ ಕೂಡ ಈ ರೀತಿಯ ಚೈತನ್ಯವನ್ನು ಈ ದೇಶದಲ್ಲಿ ಉಳಿಸಿಕೊಳ್ಳಲು ಸಾಧ್ಯವಿಲ್ಲವಿತ್ತೇ?. ವ್ಯಕ್ತಿತ್ವ ಶಾಶ್ವತವಾಗಿ ಉಳಿಯುತ್ತದೆ ಎನ್ನುವುದಕ್ಕೆ ಇವತ್ತಿಗೂ ರಾಮ ಸಾಕ್ಷಿಯಾಗಿದ್ದಾನೆ. ಆತ ತನ್ನ ಜೀವನದಲ್ಲಿ ವ್ಯಕ್ತಿತ್ವಕ್ಕೆ ಕೊಟ್ಟಷ್ಟು ಮಹತ್ವ ಮತ್ತ್ಯಾವುದಕ್ಕೂ ಕೊಟ್ಟಿರಲಿಲ್ಲ ಎನ್ನುವುದನ್ನು ವಾಲ್ಮೀಕಿಗಳು ಬೇಕಾದಷ್ಟು ಬಾರಿ ಉಲ್ಲೇಖಿಸಿದ್ದಾರೆ.
ಇಷ್ಟು ಮಾತ್ರವಲ್ಲ ಮುಂದೆ ಸುಂದರಕಾಂಡದಲ್ಲೂ ಕೂಡ ರಾಮನ ಬಗ್ಗೆ ಹನುಮಂತ ಒಂದು ಮಾತನ್ನು ಸೀತೆಯ ಮುಂದೆ ಹೇಳುತ್ತಾನೆ.
ನ ಮಾಂಸಂ ರಾಘವೋ ಭುಂಕ್ತೇ ನ ಚಾಪಿ ಮಧು ಸೇವತೇ
ವನ್ಯಂ ಸುವಿಹಿತಂ ನಿತ್ಯಂ ಭಕ್ತಮಶ್ನಾತಿ ಪಂಚಮಮ್. (ಸುಂದರ ಕಾಂಡ 36-41)
ರಾಮನು ಮಾಂಸವನ್ನು ಎಂದೂ ತಿನ್ನುವುದಿಲ್ಲ. ಹಾಗೆಯೇ ಮಧುವನ್ನು ಕೂಡ ಕುಡಿಯುವುದಿಲ್ಲ. ವಾನಪ್ರಸ್ಥರಿಗೆ ವಿಹಿತವಾದ ಆಹಾರದ ಐದು ಭಾಗದಲ್ಲಿ, ಕೇವಲ ಒಂದು ಭಾಗವನ್ನು ತಿನ್ನುತ್ತಿದ್ದಾನೆ. ಕೇವಲ ಒಂದು ಹೊತ್ತಿನ ಆಹಾರ ಮಾತ್ರವಲ್ಲದೆ, ಅದರಲ್ಲೂ ಐದು ಭಾಗ ಮಾಡಿ ನಿಯಮಿತವಾದ ಒಂದು ಭಾಗವನ್ನಷ್ಟೇ ರಾಮ ತಿನ್ನುತ್ತಿದ್ದದ್ದನ್ನು ಈ ಮೂಲಕ ತಿಳಿದುಕೊಳ್ಳಬಹುದು.
ಆಹಾರವನ್ನು ಐದು ಭಾಗ ಮಾಡಿ ಮೊದಲ ನಾಲ್ಕು ಭಾಗವನ್ನು ಕ್ರಮವಾಗಿ ದೇವತೆಗಳಿಗೆ- ಪಿತೃಗಳಿಗೆ- ಅತಿಥಿಗಳಿಗೆ -ಭೂತ ಪ್ರೇತಗಳಿಗೆ ,ಸಮರ್ಪಿಸಬೇಕು. ಕೊನೆಯ ಭಾಗವನ್ನು ತಾನು ಉಣ್ಣಬೇಕು. ಇದು ವಾನಪ್ರಸ್ಥದ ನಿಯಮ. ಇದು ಈ ದೇಶದ ಸಂನ್ಯಾಸ ಹಾಗೂ ವಾನಪ್ರಸ್ಥದವರ ಜೀವನ ಪದ್ಧತಿ. ಅದನ್ನು ನಡೆಸಿ ತೋರಿಸಿಕೊಟ್ಟವ ಶ್ರೀ ರಾಮ. ತನ್ನ ಪ್ರತಿ ನಡಿ ನುಡಿಯಲು ಆದರ್ಶವನ್ನು ಇಟ್ಟುಕೊಂಡದ್ದು ರಾಮನಲ್ಲಿ ಎದ್ದು ಕಾಣುತ್ತದೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ರಾಮನು ಯಾವ ಪ್ರಕಾರದಲ್ಲಿ ತನ್ನ ಆಶ್ರಮ ಧರ್ಮವನ್ನು ಆಚರಿಸುತ್ತಿದ್ದಾನೆಂದರೆ ಇದರ ಅನಂತರದ ಶ್ಲೋಕವನ್ನು ಕಾಣಬೇಕು.
ನೈವ ದಂಶಾನ್ನ ಮಶಕಾನ್ನ ಕೀಟಾನ್ನ ಸರೀಸೃಪಾನ್ (ಸು.36-42)
ತನ್ನ ಮೈ ಮೇಲೆ ಕುಳಿತಿರುವ ಸೊಳ್ಳೆಗಳನ್ನಾಗಲಿ, ನೊಣಗಳನ್ನಾಗಲಿ, ಕ್ರಿಮಿ ಕೀಟಗಳನ್ನಾಗಲಿ ಆತ ಕೊಲ್ಲುವುದು ಬಿಡಿ ಓಡಿಸುತ್ತಲೂ ಇರಲಿಲ್ಲ. ದೇಹದ ಮೇಲೆ ಒಂದಿನಿತು ಮಮಕಾರವಿಲ್ಲದೆ ಸಂನ್ಯಾಸಾಶ್ರಮದ ಉತ್ತುಂಗ ಶಿಖರದಲ್ಲಿ ಬದುಕುತ್ತಿದ್ದಾನೆ ಎಂಬುವುದನ್ನು ಕೂಡ ಹೇಳಲು ಹನುಮಂತ ಮರೆಯುವುದಿಲ್ಲ.
ರಾಮನ ಬಗ್ಗೆ ರಾಮನೇ ಹೇಳಿಕೊಂಡಿದ್ದಾನೆ. ಅಲ್ಲದೆ ಹನುಮಂತ ಕೂಡ ಹೇಳಿದ್ದಾನೆ. ಎಲ್ಲವನ್ನೂ ವಾಲ್ಮೀಕಿಗಳು ಸ್ಪಷ್ಟವಾಗಿ ದಾಖಲಿಸಿಟ್ಟಿದ್ದಾರೆ. ಅದೆಲ್ಲಾ ಬಿಟ್ಟು ಯಾರ್ಯಾರು ಹೇಳಿದ್ದನ್ನು ನಾವೇಕೆ ನಂಬಬೇಕು. ಸಾತ್ವಿಕ ಜೀವನ ಪದ್ಧತಿ ಹಾಗೂ ಏಕಪತ್ನಿ ವ್ರತಸ್ಥನಾಗಿರುವುದೇ ರಾಮನಿಗಿರುವ ಎಲ್ಲಕ್ಕಿಂತಲೂ ಮಿಗಿಲಾದ ವ್ಯಕ್ತಿತ್ವ. ಇದರಿಂದ ರಾಮನನ್ನು ಹೊರಗಿಟ್ಟರೆ ರಾಮನ ಅಸ್ತಿತ್ವಕ್ಕೆ ಪ್ರಶ್ನೆ ಬರುವುದಿಲ್ಲವೇ. ಶಬರಿಯ ಹಣ್ಣಿನಿಂದ ತೃಪ್ತನಾಗಿ ಮೋಕ್ಷ ಕರುಣಿಸಿದ ರಾಮ ಮಾಂಸದಿಂದ ತೃಪ್ತನಾಗಬಹುದು ಎಂದರೆ ಹೇಗೆ ನಂಬಲು ಸಾಧ್ಯ.
ನಾನು ಮಾಡಿದ ತಪ್ಪನ್ನು ಅವನೂ ಮಾಡಿದ್ದಾನೆ ಎಂದು ಬೆರಳು ತೋರಿಸುವುದು ಕೆಟ್ಟ ಮಕ್ಕಳ ಚಾಳಿ.ಹಾಗೆಯೇ ನಾವು ಮಾಂಸ ತಿನ್ನುತ್ತೇವೆ ಎನ್ನುವ ಕಾರಣಕ್ಕಾಗಿ ರಾಮನನ್ನು ಕೂಡ ನಮ್ಮ ದಾರಿಗೆ ಸೇರಿಸುವುದು ಅದೇ ಚಾಳಿಯಷ್ಟೇ. ಈ ಚಾಳಿಯವರೇ ನಮ್ಮಲ್ಲಿ ತುಂಬಿರುವಾಗ ಸುಳ್ಳು ಸತ್ಯವಾಗುವುದರಲ್ಲಿ ಆಶ್ಚರ್ಯವಿಲ್ಲ. ಒಂದು ವೇಳೆ ರಾಮನೇ ಸ್ವಯಂ ಬಂದು ಹೇಳಿದರು ಕೂಡ ನಂಬದ ವಾತಾವರಣಕ್ಕೆ ನಮ್ಮ ಸಮಾಜ ಬಂದು ನಿಂತಿದೆ . ಸುಳ್ಳನ್ನು ಸಾವಿರ ಬಾರಿ ಹೇಳಿ ಸತ್ಯದ ಸ್ಥಿತಿಗೆ ತಂದು ನಿಲ್ಲಿಸುವುದು ಈ ದೇಶದ ಹಲವು ದುರಂತಗಳಲ್ಲಿ ಒಂದು.
Leave A Reply