ಧೈರ್ಯವಾಗಿ ಪ್ರಶ್ನಿಸಿ ಯಾವ ಲಾಭ?
“ಜ್ಞಾನ ದೇಗುಲವಿದು ಕೈಮುಗಿದು ಒಳಗೆ ಬಾ” ಇದು ಕುವೆಂಪುರವರ ವಾಕ್ಯ. ಈಗಿನ ನೀತಿಗೆಟ್ಟ ಸರ್ಕಾರ ಈ ನೀತಿ ವಾಕ್ಯವನ್ನು ಬದಲಿಸಿದೆ. ನಾನು ಹಿಂದೊಮ್ಮೆ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಕುವೆಂಪುರವರ ಹೆಸರಿಡುವ ವಿಚಾರದಲ್ಲಿ ಯಾರೋ ಬರೆದ ಒಂದು ಲೇಖನವನ್ನು ನನ್ನ ಮುಖಪುಟದಲ್ಲಿ ಹಂಚಿಕೊಂಡಿದ್ದೆ. ಅವರ ವ್ಯಕ್ತಿತ್ವ ಹಾಗೂ ಬದುಕಿನ ರೀತಿಯನ್ನು ಹಿಡಿದುಕೊಂಡು ಉಳಿದ ಸಾಹಿತಿಗಳೊಂದಿಗೆ ತುಲನೆ ಮಾಡಿ ವಿಮರ್ಶಿಸಿ ಬರೆದ ಲೇಖನ. ಆದರೆ ಅದು ಕುವೆಂಪುವಿನ ಬಗ್ಗೆ ಎನ್ನುವ ಒಂದೇ ಉದ್ದೇಶದಿಂದ ಎಡಪಂಥೀಯ ದುರ್ಬುದ್ಧಿ ಜೀವಿಗಳಿಂದ ಏಕಾಏಕಿ ದಾಳಿಗೊಳಗಾಗಿದ್ದೆ. ಬಾಯಿಗೆ ಬಂದ ಹಾಗೆ ಬೈಸಿಕೊಂಡ ನಾನು ನಡತೆಗೆಟ್ಟವರೊಂದಿಗೆ ವಾದ ಮಾಡಲು ಸಾಧ್ಯವಿಲ್ಲ ಎನ್ನುವ ದೃಷ್ಟಿಯಲ್ಲಿ ಅದನ್ನು ಡಿಲೀಟ್ ಮಾಡಿದ್ದೇನೆ. ಕುವೆಂಪುವಿಗೆ ವಿರೋಧವಾದ ಯಾವುದನ್ನು ಕೂಡ ಈ ನಕಲಿ ಹೋರಾಟಗಾರರು ಸಹಿಸುವುದಿಲ್ಲ. ಆದರೆ ಈಗ ಅವರದೇ ಸರ್ಕಾರ ಕುವೆಂಪುವಿನ ಧ್ಯೇಯ ವಾಕ್ಯವನ್ನು ಮತೀಯವಾದ ಆಧಾರದಲ್ಲಿ ಬದಲಿಸಿದೆ. ಈ ಗಂಜಿ ಗಿರಾಕಿಗಳೆಲ್ಲರೂ ಕೂಡ ಈಗ ಬಾಯಿಗೆ ಬೀಗ ಹಾಕಿಕೊಂಡು ಕೂತಿದ್ದಾರೆ. ಈಗ ಅಪ್ಪಿ ತಪ್ಪಿ ಒಂದು ವೇಳೆ ಬಾಯಿ ಬಿಟ್ಟರೆ ಗಂಜಿ ಸಿಗುವುದಿಲ್ಲ ಎನ್ನುವ ಏಕೈಕ ಉದ್ದೇಶ ಅವರದು. ಆದರೆ ಇದೇ ನಕಲಿಗಳು ನಾಡಗೀತೆಯಲ್ಲಿ ಮಧ್ವರ ಹೆಸರನ್ನು ಸೇರಿಸಿದ ಕಾರಣಕ್ಕೆ ಇವತ್ತಿಗೂ ಬಾಯಿ ಬಡಿದುಕೊಳ್ಳುತ್ತಿವೆ. ಒಟ್ಟಾರೆ ಕುವೆಂಪುವಿನ ಮೇಲೆ ಇವರಿಗೆ ಅಭಿಮಾನವಿಲ್ಲ. ಹಿಂದುತ್ವದಲ್ಲಿ ದೇಷವಷ್ಟೇ ಇವರಿಗೆ ಇರುವುದಕ್ಕೆ ಇಷ್ಟು ಸಾಕು.
ಕೈ ಮುಗಿಯುವ ಪ್ರಕ್ರಿಯೆ ನಮ್ಮ ಭಾವನೆಯನ್ನು ತೋರಿಸುತ್ತದೆ. ಹಿರಿಯರು ಬಂದಾಗ ಎದ್ದು ನಿಲ್ಲುವುದು, ಕೈಮುಗಿಯುವುದು ಗೌರವದ ಪ್ರತೀಕ. ಯಾರಿಗೆ ಗೌರವವನ್ನು ಕೊಡಲು ಬರುವುದಿಲ್ಲವೋ ಅವನಿಗೆ ಗೌರವವನ್ನು ಸ್ವೀಕರಿಸಲು ಕೂಡ ಅರ್ಹತೆ ಇಲ್ಲ. ಗೌರವ ಕೊಟ್ಟು ಗೌರವ ತೆಗೆದುಕೊಳ್ಳಬೇಕು. ಅಂತಹಾ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಕಲಿಸಿಕೊಡಬೇಕು ಎನ್ನುವ ಉದ್ದೇಶದಿಂದ ಕುವೆಂಪುವಿನ ಈ ವಾಕ್ಯವನ್ನು ಎಲ್ಲಾ ಶಾಲೆಯಲ್ಲಿ ಹಾಕಿದ್ದು. ಅದರಲ್ಲೂ ಸರ್ಕಾರಕ್ಕೆ ಸಂಬಂಧ ಪಟ್ಟ ಶಾಲೆಯಲ್ಲಿಯಂತೂ ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎನ್ನುವ ನಿಟ್ಟಿನಲ್ಲಿ ಇವತ್ತಿಗೂ ಉಳಿಸಿಕೊಂಡಿದ್ದಾರೆ. ಅದನ್ನು ತೆಗೆದು ಧೈರ್ಯವಾಗಿ ಪ್ರಶ್ನಿಸಿ ಎನ್ನುವ ಮಾತನ್ನು ಸೇರಿಸಿ ಯಾವ ಲಾಭವನ್ನು ಅಥವಾ ಯಾವ ಸಂಸ್ಕೃತಿಯನ್ನು ಮಕ್ಕಳಿಗೆ ತುಂಬಿಸುತ್ತಾರೆ. ಗೌರವದ ಭಾವನೆಯನ್ನು ಮೂಡಿಸುವ ಈ ವಾಕ್ಯವನ್ನು ತೆಗೆಯುವ ಮೂಲಕ ಗೌರವ ಭಾವನೆಯಿಲ್ಲದ ಧೈರ್ಯದಿಂದ ಪ್ರಶ್ನಿಸುವ ಅಧಿಕಾರವನ್ನು ಮಕ್ಕಳಿಗೆ ಕೊಡುತ್ತಿದ್ದಾರೆ.
ನಿಮ್ಮ ಮನೆಯಲ್ಲಿಯೆ ಒಮ್ಮೆ ಕಲ್ಪಿಸಿಕೊಳ್ಳಿ, ನಿಮ್ಮನ್ನು ಕಂಡ ಕೂಡಲೇ ಮಗನಾದವ ಧೈರ್ಯದಿಂದ ಪ್ರಶ್ನಿಸುವ ರೀತಿಯಲ್ಲಿ ಸೆಟೆದು ನಿಲ್ಲಬೇಕೋ ಅಥವಾ ಅದಕ್ಕಿಂತಲೂ ಮೊದಲು ವಿನಯದಿಂದ ಬಾಗಿ ಕೈ ಮುಗಿದು ನಿಲ್ಲಬೇಕೋ ಎಂದು. ಒಂದೊಮ್ಮೆ ಧೈರ್ಯದಿಂದ ಸೆಟೆದು ನಿಂತು ಪ್ರಶ್ನಿಸುವ ಮಕ್ಕಳು ನಮಗೆ ಬೇಕು ಎಂದು ವಾದಿಸುವವರು ಇದನ್ನು ಸಮರ್ಥಿಸಿಕೊಳ್ಳಿ. ಅವರಿಗೆ ಅಂತಹ ಮಕ್ಕಳೇ ಹುಟ್ಟಲಿ. ಆದರೆ ನಮಗೆ ಅಂತಹ ಮಕ್ಕಳು ಇರುವುದಕ್ಕಿಂತ ಇಲ್ಲದಿರುವುದು ಒಳ್ಳೆಯದು. ಇಂತಹ ಮಕ್ಕಳ ತಂದೆ ತಾಯಿಗಳೆ ಈಗ ಅನಾಥಾಶ್ರಮದಲ್ಲಿ ಇರುವುದು.
ಇಲ್ಲಿ ಮತ್ತೊಂದು ವಿಚಾರವಿದೆ. ಕೈಮುಗಿಯುವುದು ಹಿಂದುವಿನ ಆಚಾರ ಎನ್ನುವ ಕಾರಣಕ್ಕೆ ಆ ಪ್ರಕ್ರಿಯೆಯನ್ನು ತೆಗೆದು, ಪ್ರಶ್ನಿಸುವ ಅಧಿಕಾರವನ್ನು ಕೊಟ್ಟವರ ಅಜ್ಞಾನ ಎದ್ದು ಕಾಣುತ್ತದೆ. ಏಕೆಂದರೆ ಧೈರ್ಯವಾಗಿ ಪ್ರಶ್ನಿಸುವ ಪರಂಪರೆ ಕೇವಲ ಹಿಂದುಗಳಲ್ಲಿ ಮಾತ್ರ ಇದೆ. ಇಲ್ಲಿಯ ಎಲ್ಲಾ ಇತಿಹಾಸ ಪುರಾಣ,ಉಪನಿಷತ್ತುಗಳು ಕೂಡ ತೆರೆದುಕೊಳ್ಳುವುದು ಪರಸ್ಪರ ಪ್ರಶ್ನೆಗಳ ಸಂವಾದದಿಂದ. ಪರಸ್ಪರ ಪ್ರಶ್ನೋತ್ತರಗಳ ಮೂಲಕ ಸೃಷ್ಟಿಯಾದ ಧರ್ಮಗ್ರಂಥಗಳು ಕೇವಲ ಸನಾತನ ಧರ್ಮದಲ್ಲಿ ಮಾತ್ರ. ಧೈರ್ಯದಿಂದ ಪ್ರಶ್ನೆಯನ್ನು ಕೇಳುವ ಅಧಿಕಾರ ಸ್ವಾತಂತ್ರ್ಯ ಇರುವುದು ಕೇವಲ ಸನಾತನ ಧರ್ಮದಲ್ಲಿ.
ಆದರೆ ಪ್ರಶ್ನಿಸುವ ಶಿಷ್ಯನಿಗೆ ಅದಕ್ಕಿಂತ ಮೊದಲು ವಿನಯವಂತಿಕೆ ಇರಬೇಕು. ತಿಳಿದುಕೊಳ್ಳಬೇಕು ಎನ್ನುವ ಜಿಜ್ಞಾಸೆ ಬೇಕು. ಗುರುವಿನ ಮೇಲೆ ಅಭಿಮಾನ ಬೇಕು. ಇಷ್ಟೆಲ್ಲ ಇದ್ದವನಿಗೆ ಧೈರ್ಯದ ಅಗತ್ಯವೇ ಇಲ್ಲ. ಧೈರ್ಯ ಇದ್ದೇ ಇರುತ್ತದೆ. ಆದ್ದರಿಂದಲೇ ನಮ್ಮ ಧರ್ಮದಲ್ಲಿ ಯಾವುದೇ ಪ್ರಶ್ನೆ ಕೇಳುವ ಅಧಿಕಾರವಿರುವುದು.
ಗುರುಗಳ ಮೇಲೆ ಪ್ರೀತಿ ಅಭಿಮಾನ ಹಾಗೂ ಸಲುಗೆ ಇದ್ದರೆ ತನ್ನಿಂದ ತಾನೇ ಮನದೊಳಗೆ ಪ್ರಶ್ನೆಗಳು ಹುಟ್ಟುತ್ತವೆ. ತನಗರಿವಿಲ್ಲದಂತೆಯೆ ಆತ ಗುರುಗಳಲ್ಲಿ ಕೇಳುತ್ತಾನೆ. ಹಾಗಾದರೆ ಧೈರ್ಯದ ಅಗತ್ಯವೇಕೆ. ಮಗು ತಾಯಿಯಲ್ಲಿ ಕೇಳಿದಷ್ಟು ಪ್ರಶ್ನೆಯನ್ನು ತಂದೆಯಲ್ಲಿ ಕೇಳುವುದಿಲ್ಲ. ತಂದೆ ಎಂದರೆ ಮಗುವಿಗೆ ಸ್ವಲ್ಪ ಹೆದರಿಕೆ. ತಾಯಿಯಲ್ಲಿ ಮಗುವಿಗೆ ಪ್ರೀತಿ ಹಾಗೂ ಸಲುಗೆ. ಆದ್ದರಿಂದಲೇ ಮಗು ತಂದೆಯ ಎದುರು ನಿಂತು ಪ್ರಶ್ನೆ ಕೇಳುವ ಧೈರ್ಯವನ್ನೇ ಮಾಡುವುದಿಲ್ಲ. ಪ್ರಶ್ನೆ ಕೇಳಬೇಕೆಂದರೆ ಧೈರ್ಯಕ್ಕಿಂತ ಹೆಚ್ಚು ಬೇಕಾದದ್ದು ಪ್ರೀತಿ ಹಾಗೂ ಸಲುಗೆ. ಅದನ್ನು ಅಧ್ಯಾಪಕರು ಉಳಿಸಿಕೊಂಡರೆ ಈ ವಾಕ್ಯಕ್ಕೆ ಅರ್ಥವೇ ಇಲ್ಲದಂತಾಗುತ್ತದೆ. ಶಾಲೆಯ ಪ್ರವೇಶದ್ವಾರದಲ್ಲಿ ಇಂತಹ ಅರ್ಥಹೀನ ಮಾತುಗಳಿಂದ ಮತಿಹೀನತೆಯನ್ನು ತೋರಿಸಿಕೊಟ್ಟಂತೆ ಆಗುತ್ತದೆಯಷ್ಟೇ.
ಶುಕ್ರವಾರ ಯಾಕೆ ಪರೀಕ್ಷೆಯನ್ನು ಮಧ್ಯಾಹ್ನದ ಮೇಲೆ ಇಟ್ಟಿದ್ದಾರೆ. ಇದರ ಹಿಂದೆ ಮತೀಯವಾದ ಕಾರಣವಿರಬಹುದೇ,ಎಂದು ಹೇಳಿದವರಿಗೆ ಕೇಸ್ ಕೊಡುವಷ್ಟರ ಮಟ್ಟಿಗೆ ಅಧಿಕಾರದ ಅಹಂಕಾರ ತೋರಿಸಿತ್ತು. ಅದೇ ವ್ಯಕ್ತಿಗೆ ಈ ಬದಲಾವಣೆಯನ್ನು ಯಾವ ಆಧಾರದಲ್ಲಿ ಮಾಡಿದ್ದಾರೆ ಎಂದು ಹೇಳುವ ತಾಕತ್ತಿದೆಯೆ. ತಮ್ಮ ಜೀವನವನ್ನು ಹಿಂದು ದ್ವೇಷಕ್ಕಾಗಿ ಮುಡಿಬಾಗಿಟ್ಟವರಲ್ಲಿ ಇಂತಹ ಸಂಸ್ಕೃತಿ ದ್ವೇಷವೇ ಕಾಣಬಹುದೇ ವಿನಹ ಒಳ್ಳೆಯದನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ನಾವಲ್ಲದಿದ್ದರೂ ಅಧಿಕಾರವನ್ನು ಕೊಟ್ಟವರ ಪಾಪಕ್ಕೆ ನಾವು ಕೂಡ ಭಾಗಿಯಾಗಲೇಬೇಕು.
Leave A Reply