ಕಾಶ್ಮೀರದಲ್ಲಿ ಕಾಂಗ್ರೆಸ್ -ಎನ್ ಸಿ ಫ್ರೆಂಡ್ಲಿ ಫೈಟ್ ಮತ್ತು ಮೈತ್ರಿ ಒಟ್ಟಿಗೆ!
ರಾಜಕೀಯ ಗೊತ್ತಿರುವವರಿಗೆ ಇದು ವಿಚಿತ್ರ ಎನಿಸಬಹುದು. ರಾಜಕೀಯದಲ್ಲಿ ಏನೂ ಆಗಬಹುದು ಎನ್ನುವವರಿಗೆ ಇದು ಇನ್ನೊಂದು ಚರ್ಚೆಯ ವಿಷಯವಾಗಬಹುದು. ಅದಕ್ಕೆ ಜಮ್ಮು – ಕಾಶ್ಮೀರ ಸದ್ಯದ ಉದಾಹರಣೆ. ಚುನಾವಣೆಯ ಹೊಸ್ತಿಲಲ್ಲಿ ಕಣಿವೆ ರಾಜ್ಯ ಇದೆ. ವಿವಿಧ ರಾಜಕೀಯ ಸಮೀಕರಣಗಳು ನಡೆಯುತ್ತಿವೆ. ಬಹಳ ವಿಚಿತ್ರ ರೀತಿಯ ಮೈತ್ರಿಯನ್ನು ಜಮ್ಮು ಮತ್ತು ಕಾಶ್ಮೀರದ ಚುನಾವಣೆಯಲ್ಲಿ ನಾವು ಕಾಣಬಹುದಾಗಿದೆ. ಎರಡು ಪಕ್ಷಗಳು ಒಟ್ಟಾಗಿ ಮೈತ್ರಿ ಮಾಡಿಕೊಂಡಿದ್ದೇವೆ ಎಂದರೆ ಅಲ್ಲೊಂದು ತಾರ್ಕಿಕ ಒಪ್ಪಂದ ಆಗಿ ಹೊಂದಾಣಿಕೆ ಸೃಷ್ಟಿಯಾಗಬೇಕು. ಪರಸ್ಪರ ಅರ್ಥ ಮಾಡಿಕೊಂಡು ನಮ್ಮ ಎಲ್ಲಾ ಮನಸ್ತಾಪಗಳನ್ನು ಬದಿಗೊತ್ತಿ, ಒಂದೇ ಮನಸ್ಥಿತಿಯಲ್ಲಿ ಚುನಾವಣೆಯನ್ನು ಎದುರಿಸಲು ಸಜ್ಜಾಗಿದ್ದೇವೆ ಎನ್ನುವುದನ್ನೇ ರಾಜಕೀಯದಲ್ಲಿ ಮೈತ್ರಿ ಎನ್ನಲಾಗುತ್ತದೆ. ಆದರೆ ಇಲ್ಲಿ ನೋಡಿ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ ಚುನಾವಣೆ ಘೋಷಣೆ ಆಗಿದೆ. ಕಾಂಗ್ರೆಸ್ ಮತ್ತು ನ್ಯಾಶನಲ್ ಕಾನ್ಫರೆನ್ಸ್ ಪಕ್ಷಗಳು ಒಟ್ಟಾಗಿ ಚುನಾವಣೆಯನ್ನು ಎದುರಿಸುವ ನಿರ್ಧಾರಕ್ಕೆ ಬಂದಿವೆ. ಹಾಗಾದರೆ ಸೀಟು ಹಂಚಿಕೆ ಆಗಬೇಕಲ್ಲ. ಇಲ್ಲಿಯೇ ಸಮಸ್ಯೆಯಾಗಿರುವುದು. ಹೇಳಿ, ಕೇಳಿ ಕಾಂಗ್ರೆಸ್ ಮತ್ತು ನ್ಯಾಶನಲ್ ಕಾನ್ಪರೆನ್ಸ್ ಜೆಕೆಯಲ್ಲಿ ಪರಸ್ಪರ ವಿರೋಧಿಗಳು. ಆದರೆ ಭಾರತೀಯ ಜನತಾ ಪಾರ್ಟಿಯನ್ನು ಸೋಲಿಸಬೇಕಾದರೆ ಮೈತ್ರಿ ಅನಿವಾರ್ಯ. ಅದರೊಂದಿಗೆ ಇತ್ತೀಚಿನ ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕ ಕಾಂಗ್ರೆಸ್ಸಿಗೂ ರಾಷ್ಟ್ರದಲ್ಲಿ ಅಲ್ಲಲ್ಲಿ ಒಂದಿಷ್ಟು ಮರ್ಯಾದೆ ಸಿಗುತ್ತಿದೆ. ಯಾಕೆಂದರೆ ಹತ್ತು ವರ್ಷಗಳ ಬಳಿಕ ಈಗ ಪ್ರತಿಪಕ್ಷದ ಸ್ಥಾನವೂ ಸಿಕ್ಕಿದೆ.
ಈಗ ಲೋಕಸಭೆಯಲ್ಲಿ ಅಧಿಕೃತ ಪ್ರತಿಪಕ್ಷವಾಗಿರುವ ಕಾಂಗ್ರೆಸ್ಸಿಗೆ ಅಳೆದು ತೂಗಿ 32 ಸ್ಥಾನಗಳನ್ನು ಎನ್ ಸಿ ಬಿಟ್ಟುಕೊಟ್ಟಿದೆ. ಇನ್ನು 51 ಸ್ಥಾನಗಳನ್ನು ತಾನು ಇಷ್ಟುಕೊಂಡಿದೆ. ಒಂದು ಸ್ಥಾನ ಕಮ್ಯೂನಿಸ್ಟರಿಗೆ ಹಾಗೂ ಇನ್ನೊಂದು ಸ್ಥಳೀಯ ಪ್ಯಾಂಥರ್ಸ್ ಪಕ್ಷಕ್ಕೆ ನೀಡಿದೆ. ಇಷ್ಟೇ ಆಗಿದ್ರೆ ಅಲ್ಲಿಗೆ ವಿಷಯ ಮುಗಿಯುತ್ತಿತ್ತು. ಆದರೆ ಕುತೂಹಲ ಆರಂಭವಾಗುವುದೇ ಅಲ್ಲಿ. ಒಟ್ಟು 90 ಸ್ಥಾನಗಳಿರುವ ಜೆ ಅಂಡ್ ಕೆಯಲ್ಲಿ ಇನ್ನು ಐದು ಸ್ಥಾನಗಳ ಕಥೆ ಏನು ಎಂದು ನಿಮಗೆ ಅನಿಸಬಹುದು. ಐದು ಸ್ಥಾನಗಳಲ್ಲಿ ಕಾಂಗ್ರೆಸ್ ಮತ್ತು ಎನ್ ಸಿ ಪರಸ್ಪರ ಕಾದಾಡುತ್ತಿವೆ. ಇದನ್ನು ಅವರು ಚೆಂದದ ಭಾಷೆಯಲ್ಲಿ ಫ್ರೆಂಡ್ಲಿ ಫೈಟ್ ಎನ್ನುತ್ತಿದ್ದಾರೆ. ಒಂದು ರಾಜ್ಯದ ಒಳಗೆ ಮೈತ್ರಿಯೂ ಆಗಿ, ಪರಸ್ಪರ ಹೋರಾಟವೂ ಆಗಿ, ಕೊನೆಗೆ ಫಲಿತಾಂಶ ಬಂದಾಗ ಅತಂತ್ರವೂ ನಿರ್ಮಾಣವಾದರೆ ಜೆಕೆಯ ಮುಂದಿನ ಭವಿಷ್ಯ ಏನಾಗಲಿದೆ ಎನ್ನುವುದೇ ಈಗ ಇರುವ ಕುತೂಹಲ. ಹಾಗಾದರೆ ಐದು ಸ್ಥಾನಗಳಲ್ಲಿ ಇವರು ಪರಸ್ಪರ ವಿರೋಧಿಗಳಾಗಿ ಕಣಕ್ಕೆ ಇಳಿದರೆ ರಾಜ್ಯದ ಉಳಿದ ಕ್ಷೇತ್ರಗಳ ಕಾರ್ಯಕರ್ತರಿಗೆ ಹೋಗುವ ಸಂದೇಶ ಏನು? ಎಲ್ಲರೂ ಪರಸ್ಪರ ಭಿನ್ನ ಅಭಿಪ್ರಾಯ ಬಿಟ್ಟು ಮೈತ್ರಿ ಧರ್ಮ ಪಾಲಿಸುತ್ತಾರಾ ಎನ್ನುವುದು ಈಗ ಉಳಿದಿರುವ ಪ್ರಶ್ನೆ.
Leave A Reply