ಸೈರನ್ ಬೇಡಾ ಎಂದ ಶಾಸ್ತ್ರಿಜಿ ಎದುರು ಎಸ್ ಪಿಗೆ ಬೈದ ಸಿದ್ದು ಹೇಗೆ ಕಾಣಿಸ್ತಾರೆ!
ಇವತ್ತು ಯಾಕೆ ರಜೆ ಎಂದು ಮಕ್ಕಳಿಗೆ ಅಥವಾ ಸರಕಾರಿ ಉದ್ಯೋಗಿಗಳಿಗೆ ಕೇಳಿದರೆ ಗಾಂಧೀ ಜಯಂತಿ ಎಂದು ಹೇಳುತ್ತಾರೆ. ಆದರೆ ಇವತ್ತೆ ನಮ್ಮ ದೇಶ ಕಂಡ ಅತ್ಯಂತ ಸಜ್ಜನಿಕೆಯ, ಸರಳ ಜೀವನದ, ಸೌಮ್ಯ ವ್ಯಕ್ತಿತ್ವದ ಮತ್ತು ದೇಶದ ಗೌರವದ ಪ್ರಶ್ನೆ ಬಂದಾಗ ದೊಡ್ಡ ಹೋರಾಟಗಾರರಾಗಿದ್ದ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜನ್ಮದಿನವೂ ಹೌದು. ಅವರೇಕೆ ಅಷ್ಟು ಸರಳ ಮತ್ತು ಒಂದು ಚೂರು ಕೂಡ ಪ್ರಧಾನಿ ಎನ್ನುವ ಹೆಗ್ಗಳಿಕೆ ಇರಲಿಲ್ಲ ಎನ್ನುವುದಕ್ಕೆ ಅನೇಕ ದೃಷ್ಣಾಂತಗಳಿವೆ. ಅದರಲ್ಲಿ ಒಂದನ್ನು ನೋಡೋಣ.
ಅವರು ರಾಷ್ಟ್ರದ ಗೃಹ ಮಂತ್ರಿಯಾಗಿದ್ದಾಗ ಒಮ್ಮೆ ಕೋಲ್ಕತ್ತಾಕ್ಕೆ ಭೇಟಿ ಕೊಟ್ಟಿದ್ದರು. ಭೇಟಿಯ ನಂತರ ಅವರು ದೆಹಲಿಗೆ ವಿಮಾನದಲ್ಲಿ ತೆರಳಬೇಕಿತ್ತು. ಆದರೆ ಕಲ್ಕತ್ತಾದ ಬಿಝಿ ಟ್ರಾಫಿಕ್ ಮತ್ತು ಇಕ್ಕಟ್ಟಾದ ರಸ್ತೆಗಳಿಂದ ಅವರು ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣ ತಲುಪುವುದು ಕಷ್ಟವಾಗಿತ್ತು. ಆಗ ಅಲ್ಲಿನ ಪೊಲೀಸ್ ಕಮೀಷನರ್ ಒಂದು ಸಲಹೆ ಕೊಡುತ್ತಾರೆ. ನಿಮ್ಮ ವಾಹನದ ಮುಂದೆ ಒಂದು ಸೈರನ್ ಅಳವಡಿಸಿದ ಪೊಲೀಸ್ ಜೀಪನ್ನು ಕಳುಹಿಸುತ್ತೇವೆ. ಅದರ ಸೈರನ್ ನಿಂದ ರಸ್ತೆಯಲ್ಲಿರುವ ಬೇರೆ ವಾಹನಗಳು ದಾರಿ ಬಿಟ್ಟುಕೊಡುತ್ತವೆ. ಅದರಿಂದ ನಿಮಗೆ ವಿಮಾನ ನಿಲ್ದಾಣವನ್ನು ಬೇಗನೆ ತಲುಪಬಹುದು. ಅದಕ್ಕೆ ಶಾಸ್ತ್ರೀಜಿ ಏನು ಹೇಳಿದರು ಗೊತ್ತೆ ” ಹಾಗೆ ಸೈರನ್ ಹಾಕಿ ಹೋಗುವುದರಿಂದ ಯಾರೋ ದೊಡ್ಡ ಮನುಷ್ಯ ಹೋಗುತ್ತಿದ್ದಾನೆ ಎನ್ನುವ ಭಾವನೆ ಜನರಿಗೆ ಬರುತ್ತದೆ, ನನಗೆ ಆ ಸೌಲಭ್ಯ ಬೇಡಾ” ಎಂದು ಬಿಟ್ಟರು.
ನೀವು ಅದನ್ನು ಈಗಿನ ರಾಜಕಾರಣಕ್ಕೆ ಹೋಲಿಸಿ ನೋಡಿ, ನರೇಂದ್ರ ಮೋದಿಯವರು ಒಂದು ಸೂಚನೆ ಕೊಟ್ಟು ಸಚಿವರು ತಮ್ಮ ವಾಹನದ ಮೇಲಿನ ಕೆಂಪು ದೀಪವನ್ನು ತೆಗೆಯಬೇಕು ಎಂದು ಹೇಳಿದಾಗ ಜನಪ್ರತಿನಿಧಿಗಳು ತೆಗೆಯಲು ಎಷ್ಟು ಹಟ ಮಾಡಿದ್ರು ಎಂದು ಎಲ್ಲರಿಗೂ ಗೊತ್ತೆ ಇದೆ. ಅದರೊಂದಿಗೆ ನಮ್ಮ ಕರ್ನಾಟಕದ ಮುಖ್ಯಮಂತ್ರಿಯವರು ಒಂದು ರಸ್ತೆಯಲ್ಲಿ ಹೋಗುತ್ತಾರೆ ಎಂದರೆ ಆ ರಸ್ತೆಯನ್ನು ಅರ್ಧ ಗಂಟೆ ಮೊದಲೇ ರಸ್ತೆ ಬಂದ್ ಮಾಡಲಾಗುತ್ತದೆ. ಯಾವುದೇ ಸಾರ್ವಜನಿಕ ವಾಹನ ಆ ರಸ್ತೆಯಲ್ಲಿ ಮುಖ್ಯಮಂತ್ರಿಯವರು ಬಂದು ಹೋಗುವ ತನಕ ಹೋಗುವಂತಿಲ್ಲ. ಸಂಪೂರ್ಣ ನಿರ್ಭಂದಿಸಲಾಗುತ್ತದೆ. ಒಂದು ವೇಳೆ ತುಂಬು ಗರ್ಭಿಣಿಯೊಬ್ಬಳು ಅಂಬ್ಯುಲೆನ್ಸ್ ನಲ್ಲಿ ನೋವಿನಿಂದ ನರಳುತ್ತಿದ್ದರೂ ಪೊಲೀಸರಾಗಲಿ, ಅಧಿಕಾರಿಗಳಾಗಲಿ, ರಾಜಕಾರಣಿಗಳಾಗಲಿ ಕನಿಕರ ತೋರುವುದಿಲ್ಲ. ಇದರಿಂದ ಗರ್ಭಿಣಿಯ ಜೀವ ಹೋದರೂ ಯಾರೂ ಕೇರ್ ಮಾಡುವುದಿಲ್ಲ. ಯಾಕೆಂದರೆ ಮುಖ್ಯಮಂತ್ರಿಯವರು ಆ ರಸ್ತೆಯಲ್ಲಿ ಹೋಗುವುದು ಅವರಿಗೆ ಮುಖ್ಯವಾಗಿರುತ್ತದೆ.
ಇನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಂತೂ ತಾವು ಹೋಗುವ ರಸ್ತೆಯಲ್ಲಿ ಯಾರಾದರೂ ಪ್ರತಿಭಟನೆ ಮಾಡುತ್ತಿದ್ದರೆ, ಅದು ತಮ್ಮ ಕಣ್ಣಿಗೆ ಬಿದ್ದರೆ ನಂತರ ಆ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿಯನ್ನೇ ಎಲ್ಲರ ಎದುರು ಗದರಿಸಿ ಅವಮಾನ ಮಾಡುತ್ತಾರೆ. ಹಾಗಿರುವಾಗ ಸೈರನ್ ಹಾಕಿದರೆ ಜನರಿಗೆ ಏನು ಅನಿಸುತ್ತದೆಯೋ ಎಂದು ಬೇಡಾ ಎಂದರಲ್ಲ ಶಾಸ್ತ್ರಿಜಿ, ಅವರನ್ನು ಇವತ್ತಿನ ರಾಜಕಾರಣಿಗಳು ಎಷ್ಟು ನೆನಪಿಸಿಕೊಳ್ಳುತ್ತಾರೋ!
Leave A Reply