ಪ್ರಕಾಶ್ ರೈದ್ದು ಮಾತ್ರ ಶ್ರಮ, ಉಳಿದವರಿಗೆಲ್ಲ ಪುಕ್ಕಟೆ ಸಿಕ್ಕಿದ್ದಾ?
ಪ್ರಶಸ್ತಿಗಳು ನನ್ನ ಶ್ರಮಕ್ಕೆ ದೊರೆತ ಪ್ರತಿಫಲ. ಅದನ್ನು ಮರಳಿ ನೀಡಲು ನಾನು ದಡ್ಡನಲ್ಲ ಎಂದು ಹೇಳುವ ಮೂಲಕ ಪ್ರಕಾಶ್ ರೈ ಪ್ಲೇಟು ಬದಲಿಸಿದ್ದಾರೆ.
ಹಾಗಾದರೆ ಪ್ರಕಾಶ್ ರೈಗೆ ಬಂದ ಪ್ರಶಸ್ತಿ ಅವರ ಶ್ರಮಕ್ಕೆ ದೊರೆತ ಫಲವಾದರೆ ಉಳಿದವರಿಗೆಲ್ಲ ಹೇಗೆ ಪ್ರಶಸ್ತಿಗಳು ದೊರೆತಿದ್ದು? ಎರಡು ವರ್ಷದ ಹಿಂದೆ ಸಾಕಷ್ಟು ಜನ ತಮ್ಮ ಪ್ರಶಸ್ತಿಗಳನ್ನು ಮರಳಿಸಿದರಲ್ಲ. ಅವರಿಗೆಲ್ಲ ಪುಕ್ಕಟೆ ದೊರೆತಿತ್ತೇ? ಈ ಹೇಳಿಕೆ ಮೂಲಕ ಹಿಂದೆ ಪ್ರಶಸ್ತಿ ಮರಳಿಸಿದವರನ್ನೆಲ್ಲ ಪ್ರಕಾಶ್ ರೈ ನಿವಾಳಿಸಿ ಎಸೆದಂತಾಗಿದೆ. ಅವರಿಗೆಲ್ಲ ಶ್ರಮ ಪಡದೆ ಪ್ರಶಸ್ತಿ ಲಭಿಸಿತ್ತು. ಅದಕ್ಕೆ ಹಿಂತಿರಿಗಿಸಿದ್ದಾರೆ. ಆದರೆ ನಾನು ಶ್ರಮಪಟ್ಟು ಪ್ರಶಸ್ತಿ ಪಡೆದವನು. ಹಾಗಾಗಿ ಹಿಂತಿರಿಗಿಸುವುದಿಲ್ಲ ಎಂದರ್ಥವೇ?
ಪ್ರಕಾಶ್ ರೈ ಪಕ್ಕಾ ನಟ ಎಂಬುದಕ್ಕೆ ಇದಕ್ಕಿಂತ ಒಳ್ಳೆ ಉದಾಹರಣೆ ಬೇಕೆ?
ಪ್ರಧಾನಿ ಮೋದಿ ವಿರುದ್ಧ ಮಾತನಾಡುವುದರಿಂದ ಸಿಗುವ ಪ್ರಚಾರ, ಅದಕ್ಕಾಗಿ ಸಿಗುವ ಪ್ರಾಮುಖ್ಯಗಳೆಲ್ಲ ಬೇಕು. ಆದರೆ ಪ್ರಶಸ್ತಿ ಹಿಂತಿರುಗಿಸುವ ಗೋಜಿಗೆ ಮಾತ್ರ ಅವರು ಹೋಗುವುದಿಲ್ಲ. ಯಾಕೆಂದರೆ ಪ್ರಶಸ್ತಿಯೊಟ್ಟಿಗೆ ಅದರ ಹಣವನ್ನೂ ವಾಪಸ್ ನೀಡಬೇಕಾಗುತ್ತದೆ. ಜತೆಗೆ ರಾಷ್ಟ್ರಪ್ರಶಸ್ತಿ ವಿಜೇತ ನಟ ಎಂದು ಹೇಳಿಕೊಳ್ಳುವಂತೆಯೂ ಇರುವುದಿಲ್ಲ. ಅದೆಲ್ಲ ಪ್ರಕಾಶ್ ರೈಗೆ ಬೇಕಾಗಿಲ್ಲ. ಆದರೆ ಅನಗತ್ಯವಾಗಿಯಾದರೂ ಸೈ ಮೋದಿಯನ್ನು ಬಯ್ಯುವುದು ಮಾತ್ರ ಬೇಕು.
ಒಂದು ವರ್ಷದ ಹಿಂದೆ ಕಾವೇರಿ ಸಮಸ್ಯೆ ಸಂದರ್ಭ, ಚಾನಲ್ ಒಂದಕ್ಕೆ ಸಂದರ್ಶನ ನೀಡುವಾಗ ನಾನ್ಯಾಕ್ರಿ ಕಾವೇರಿ ಬಗ್ಗೆ ಮಾತನಾಡಬೇಕು? ನಾನೊಬ್ಬ ನಟ. ನನಗೆ ಗಡಿ, ಭಾಷೆಗಳ ಬಂಧವಿಲ್ಲ ಎಂದು ಮುಖ ಸಿಂಡರಿಸಿಕೊಂಡು ಎದ್ದು ಹೋಗಿದ್ದರು. ಕೇವಲ ನಟನಾಗಿ ಇರಬಯಸುವ ವ್ಯಕ್ತಿ ಹಾಗೆ ಹೇಳಿದ್ದನ್ನು ನಾವು ಒಪ್ಪಲೇಬೇಕು. ಆದರೆ ಪ್ರಕಾಶ್ ರೈ ಈಗ ರಾಜಕೀಯದ ಮಾತನಾಡಿದ್ದಾರೆ. ಈಗ ಪ್ರೀತಿಯ ಗೌರಿ ಸಾವಿನ ಬಗ್ಗೆ ಮೋದಿಯನ್ನು ಪ್ರಕಾಶ್ ರೈ ದೂರಬಹುದು ಎಂದಾದರೆ, ಅವರು ಕಾವೇರಿ ಸಮಸ್ಯೆ ಬಗ್ಗೆಯೂ ಖಂಡಿತ ಮಾತನಾಡಬೇಕು. ತನಗೆ ಬೇಕಾದಾಗ, ಬೇಕಾದ ವಿಷಯದ ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂಬುದು ಅನುಕೂಲಸಿಂಧು ವಾದವಾಗುತ್ತದೆ.
ಕಾವೇರಿ ಸಮಸ್ಯೆ ಬಗ್ಗೆ ಮಾತನಾಡಿದರೆ, ಕನ್ನಡ- ತಮಿಳು ಭಾಷೆ ತಿಕ್ಕಾಟದ ಬಗ್ಗೆ ಮಾತನಾಡಿದರೆ ಅದು ವಿವಾದಕ್ಕೆ ಕಾರಣವಾಗುತ್ತದೆ. ಆಗ ತಮಿಳು ಚಿತ್ರರಂಗದಲ್ಲಿ ನಟಿಸಲು ಸಮಸ್ಯೆಯಾಗುತ್ತದೆ. ಅದಕ್ಕೆ ಅವರು ಕನ್ನಡ- ತಮಿಳು, ಕಾವೇರಿ ವಿಷಯ ಬಂದಾಗ ಶುದ್ಧ ನಟರಾಗಿರಲು ಇಷ್ಟಪಡುತ್ತಾರೆ. ಅದೇ ಗೌರಿ ಕೊಲೆ ವಿಷಯ ಬಂದಾಗ ಅವರು ಮೋದಿಯನ್ನು ಬಯ್ಯಲು ಮುಂದಾಗುತ್ತಾರೆ. ಯಾಕೆಂದರೆ ಅದರಿಂದ ಅವರಿಗೆ ಪ್ರಚಾರ ದೊರೆಯುತ್ತದೆ. ವಿಚಾರವಾದಿ ನಟ, ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ವ್ಯಕ್ತಿ ಅಂತೆಲ್ಲ ಬಿರುದುಗಳು ಬರುತ್ತವೆ. ಸಹಜವಾಗಿ ನಟನೆಯಲ್ಲಿ ಬೇಡಿಕೆ ಹೆಚ್ಚುತ್ತದೆ. ನಟನೆ ಜತೆಗೆ ಬೇರೆ ರೀತಿಯ ಪ್ರಚಾರವೂ ದೊರೆಯುತ್ತದೆ. ಇದರಿಂದ ಸಿನೆಮಾಗಳು ಕಡಿಮೆಯಾಗುವ ಯಾವ ಅಪಾಯವೂ ಇಲ್ಲ.
ಇದೆಲ್ಲ ಲೆಕ್ಕ ಹಾಕಿಯೇ ಪ್ರಕಾಶ್ ರೈ ಮೋದಿ ವಿರುದ್ಧ ಮಾತನಾಡಿರುತ್ತಾರೆ. ಅದೇ ಲೆಕ್ಕಾಚಾರದ ಕಾರಣಕ್ಕೆ ಅವರು ಕಾವೇರಿ ವಿವಾದದ ವಿಷಯದಲ್ಲಿ ಮಾತನಾಡುವುದಿಲ್ಲ. ಪ್ರಕಾಶ್ ರೈ ನಟರಷ್ಟೇ ಅಲ್ಲ, ಚಾಲಾಕಿ ಕೂಡ.
ಸಂದರ್ಶನದ ಸಮಯದಲ್ಲಿ “ಒಬ್ಬ ನಟನಿಂದ ರಾಜಕೀಯ ಮಾತನಾಡಿಸಿ ವಿವಾದ ಮಾಡೋ ಕೆಟ್ಟಬುದ್ಧಿ ನಿಮಗ್ಯಾಕೆ?’ ಎಂದು ರೈ ಪ್ರಶ್ನಿಸಿದ್ದರು. ಆದರೆ ಗೌರಿ ಲಂಕೇಶ್ ಕೊಲೆ ವಿಷಯದಲ್ಲಿ ಮೋದಿಯನ್ನು ಎಳೆದುತರುವ ಕೆಟ್ಟಬುದ್ಧಿ ನಿಮಗ್ಯಾಕೆ ಎಂದು ಈಗ ಜನ ಕೇಳುವಂತಾಗಿದೆ. ಮಾಧ್ಯಮದವರು ಜವಾಬ್ದಾರಿಯಿಂದ ಇರಬೇಕು ಎಂದು ಹೇಳುವ ಪ್ರಕಾಶ್ ರೈಗೆ ಜವಾಬ್ದಾರಿ ಇಲ್ಲವೇ? ಯಾವ ಸಂದರ್ಭದಲ್ಲಿ ಯಾವ ಪ್ರಶ್ನೆಕೇಳಬೇಕು ಎಂಬ ಬೇಸಿಕ್ ಜ್ಞಾನ ಇಲ್ಲವೇ? ನಾನೇನು ಪಾಪ ಮಾಡಿದ್ದೇನೆ ನಿಮಗೆ? ಎಂದು ಪತ್ರಕರ್ತರನ್ನು ರೈ ಪ್ರಶ್ನಿಸುತ್ತಾರೆ. ಹಾಗಾದರೆ ಈಗ ಪ್ರಕಾಶ್ ರೈಗೆ ಕೆಟ್ಟ ಬುದ್ಧಿ ಬಂದಿದ್ಯಾಕೆ? ಮಾಧ್ಯಮದವರು ಜವಾಬ್ದಾರಿಯಿಂದ ಇರಬೇಕು ಎಂದು ಪಾಠ ಮಾಡುವ, ಇದನ್ನು ಪ್ರಸಾರ ಮಾಡಿ ಎಂದೂ ಹೇಳುವ ಪ್ರಕಾಶ್ ರೈಗೆ ಜವಾಬ್ದಾರಿ ಇಲ್ಲವೇ? ಆಗಿರುವ ಒಂದು ಕೊಲೆಗೆ ಪ್ರಧಾನಿಯನ್ನೇ ಹೊಣೆಯೆಂದು ಹೇಳುವುದು ಪ್ರಜ್ಞಾವಂತೆ ವರ್ತಿಸುವ ರೈಗೆ ಶೋಭೆಯೇ? ಯಾವ ಸಂದರ್ಭದಲ್ಲಿ ಯಾವ ಪ್ರಶ್ನೆ ಕೇಳಬೇಕು ಎಂಬುದನ್ನೇ ಹೇಳಿಕೊಡುವಷ್ಟು ಬುದ್ಧಿ ಇರುವ ಪ್ರಕಾಶ್ ರೈಗೆ ಎಲ್ಲಿ ಏನನ್ನು ಮಾತನಾಡಬೇಕು ಎಂಬುದರ ಅರಿವಿಲ್ಲದಂತಾಯಿತೇ? ರೈ ಉದ್ದೇಶ ಸರಿಯಾಗಿದ್ದರೆ ಯಾಕೆ ಬರುತ್ತಿತ್ತು ಮೋದಿಯ ಬಗ್ಗೆ ಆರೋಪ? ಮೋದಿ ಅತ್ಯುತ್ತಮ ನಟ ಎಂಬ ಆರೋಪ ಮಾಡಬೇಕಾದರೆ ಪತ್ರಕರ್ತೆಗೆ ಪಾಠ ಮಾಡುವಾಗಿದ್ದಷ್ಟೇ ಜವಾಬ್ದಾರಿ ರೈಗಿತ್ತೇ? ಇಷ್ಟಕ್ಕೂ ಮೋದಿ ಪ್ರಕಾಶ್ ರೈಗೇನು ಮಾಡಿದ್ದರು? ಎಲ್ಲರೂ ಮನುಷ್ಯರೇ, ಸಮಸ್ಯೆ ಬೇರೆ ಇದೆ ಎಂಬ ಅವರ ಮಾತನ್ನೇ ಅವರು ಮರೆತರೇ?
ಪ್ರಕಾಶ್ ರೈ ತನಗೆ ಲಭಿಸಿದ್ದೆಲ್ಲ ಶ್ರಮದಿಂದ, ಬೇರೆಯವರಿಗೆ ಎಲ್ಲವೂ ಶ್ರಮವಿಲ್ಲದೇ ಸಿಕ್ಕದ್ದು ಅಂದುಕೊಂಡಿದ್ದಾರಾ? ಸ್ವಾಮಿ ಪ್ರಕಾಶ್ ರೈ ಅವರೇ, ಮೋದಿಯವರು ಇಂದು ಪ್ರಧಾನಿಯಾಗಿದ್ದರೆ ಅದು ಕೂಡ ಶ್ರಮದ ಫಲವೇ ಎಂಬುದನ್ನು ತಿಳಿದುಕೊಳ್ಳಿ. ಮೋದಿ ಸುಲಭಕ್ಕೆ ಗುಜರಾತ್ ಮುಖ್ಯಮಂತ್ರಿಯಾಗಿ ಮೂರು ಬಾರಿ ಆಯ್ಕೆಯಾಗಿಲ್ಲ. ಅವರನ್ನು ಪ್ರಧಾನಿಯಾಗಿ ಆರಿಸಿದ ದೇಶದ ಜನ ಮೂರ್ಖರಲ್ಲ ಎಂಬುದನ್ನು ರೈ ಅರ್ಥಮಾಡಿಕೊಳ್ಳಬೇಕು. ಗುಜರಾತ್‌ನಲ್ಲಿ ಅವರು ಮಾಡಿದ ಕೆಲಸಗಳನ್ನು ಜನ ಗುರುತಿಸಿದ್ದಾರೆ. ಅವರು ಅದಕ್ಕಾಗಿ ಕಷ್ಟಪಟ್ಟಿದ್ದಾರೆ. ಮುಖ್ಯಮಂತ್ರಿಯಾಗಿ ಹಾಗೂ ಪ್ರಧಾನಿಯಾಗಿ ಅವರು ದೇಶ, ರಾಜ್ಯಗಳನ್ನು ಗಮನದಲ್ಲಿರಿಸಿಕೊಂಡು ಕೆಲಸಮಾಡಿದ್ದಾರೆ. ದುಡ್ಡು ಮಾಡುವ ಗೋಜಿಗೆ ಹೋಗಿಲ್ಲ. ಸ್ವಾರ್ಥಕ್ಕೆ ಬಲಯಾಗಿಲ್ಲ. ರಾಷ್ಟ್ರವೇ ಮೊದಲು ಎಂಬುದನ್ನು ಇತರರಿಗೂ ಮಾದರಿಯಾಗುವಂತೆ ತೋರಿಸಿಕೊಟ್ಟಿದ್ದಾರೆ. ಸ್ವಚ್ಛ ಭಾರತದಂತ ಒಳ್ಳೆಯ ಕನಸೊಂದನ್ನು ದೆಶದ ಜನರಲ್ಲಿ ಬಿತ್ತಿದ್ದಾರೆ. ಮೋದಿಯೇ ಆದರೂ ಎಲ್ಲರನ್ನೂ ಸಮಾಧಾನ ಪಡಿಸಲು ಸಾಧ್ಯವಿಲ್ಲ. ಹಾಗೆಯೇ ಪ್ರಕಾಶ್ ರೈ ಕೂಡ ನಟನೆಯಿಂದ ಎಲ್ಲರನ್ನೂ ಖುಷಿಪಡಿಸಲು ಸಾಧ್ಯವಿಲ್ಲ. ಇದನ್ನು ಬಹುಶಃ ಪ್ರಕಾಶ್ ರೈ ಮರೆತಿದ್ದಾರೆ.
ಇಲ್ಲವಾದಲ್ಲಿ ಮೋದಿಯನ್ನು ನಟನೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಎಂದು ಭ್ರಮಿಸಿಕೊಂಡಿದ್ದಾರೆ. ಅದಕ್ಕೇ ಅವರು ಮೋದಿ ತನ್ನನ್ನೂ ಮೀರಿಸುವ ನಟ ಎಂದು ಆರೋಪಿಸಿ, ತಾವು ಅವರೊಂದಿಗೆ ಪೈಪೋಟಿಗೆ ಇಳಿದಿದ್ದೇನೆ ಭಾವಿಸಿಕೊಂಡಿದ್ದಾರೆ. ಅದಕ್ಕೇ ಅವರಿಗೆ ಮೋದಿ ಅವರ ವಿರೋಧಿಯಂತೆ ಕಾಣುತ್ತಿದ್ದಾರೆ. ಈ ಭ್ರಮೆಯನ್ನು ಆದಷ್ಟು ಬೇಗ ನಿವಾರಿಸಿಕೊಳ್ಳುವ ಶಕ್ತಿಯನ್ನು ದಯಾಳುವಾದ ಪರಮಾತ್ಮನು ಪ್ರಕಾಶ್ ರೈಗೆ ನೀಡಲಿ.
Leave A Reply