ಭ್ರಷ್ಟರಿಗೆ ಟಿಎ, ಡಿಎ, ನಾನು ಖರ್ಚು ಮಾಡಿ ಬೆಂಗಳೂರಿಗೆ ಹೋಗಬೇಕಾ!
ಇಂತಹುದೊಂದು ಸಭೆ ಪ್ರತಿ ಜಿಲ್ಲೆಯಲ್ಲಿಯೂ ನಡೆಯುತ್ತಿದೆ. ಅಕ್ಟೋಬರ್ 3 ರಂದು ಮಂಗಳೂರಿನಲ್ಲಿ ನಡೆಯಿತು. ನಿನ್ನೆ ಉಡುಪಿಯಲ್ಲಿ ನಡೆಯಿತು. ರಾಜ್ಯದ ಮುಖ್ಯಮಂತ್ರಿಯವರ ಕಾರ್ಯದರ್ಶಿ ತುಷಾರ್ ರಂಗನಾಥ್ ಅವರ ಉಪಸ್ಥಿತಿಯಲ್ಲಿ ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರ ನೇತೃತ್ವದಲ್ಲಿ, ಅಲ್ಲಿನ ಜಿಲ್ಲಾಧಿಕಾರಿಗಳ ಮಾರ್ಗದಶ್ಯನದಲ್ಲಿ ಸಭೆಗಳು ನಡೆಯುತ್ತಿವೆ. ಬೆಳಿಗ್ಗೆ 10.30 ರಿಂದ ಸಂಜೆ 5.30 ರ ತನಕ ನಡೆಯುವ ಸಭೆ ಅದು. ಮುಂದಿನ ಏಳು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಹೇಗೆ ಸರ್ವತೋಮುಖವಾಗಿ ಅಭಿವೃದ್ಧಿಯಾಗಬೇಕು ಎಂದು ರೂಪುರೇಶೆ ಸಿದ್ಧಪಡಿಸುವ ಸಭೆಯದು. ಸಭೆ ಅಧಿಕೃತವಾಗಿ ಪ್ರಾರಂಭವಾಗುವ ಮೊದಲು ಜಿಲ್ಲಾಧಿಕಾರಿಗಳು ಯಾವೆಲ್ಲ ವಿಷಯಗಳ ಬಗ್ಗೆ ಚರ್ಚೆಯಾಗಲಿದೆ ಎಂದು ಹೇಳಿದರು.
ಒಟ್ಟು ಅಭಿವೃದ್ಧಿಯಾಗಬೇಕಾದ ಕ್ಷೇತ್ರಗಳನ್ನು ಐದು ವಿಭಾಗಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಒಂದು ಆಡಳಿತ ಮತ್ತು ಕಾನೂನು. ಎರಡನೇಯದು ಕೈಗಾರಿಕೆ ಮತ್ತು ಕೌಶಲ್ಯ ಅಭಿವೃದ್ಧಿ. ಮೂರನೇಯದು ನಗರಾಭಿವೃದ್ಧಿ ಮತ್ತು ಸ್ಮಾರ್ಟ್ ಸಿಟಿ. ನಾಲ್ಕನೇಯದ್ದು ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ. ಐದನೇಯದ್ದು ಸಾಮಾಜಿಕ ನ್ಯಾಯ ಮತ್ತು ಆರೋಗ್ಯ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ವಿಷನ್-2025 ಪ್ರಾರಂಭವಾದದ್ದೇ ಹಾಗೆ. ಆಯಾ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಅಧಿಕಾರಿಗಳು ಇದ್ದರು. ಸರಕಾರೇತರ ಸಂಸ್ಥೆಗಳನ್ನು ಕರೆಯಲಾಗಿತ್ತು. ಆದ್ದರಿಂದ ನಾನು ಕೂಡ ಭಾಗವಹಿಸಿದ್ದೆ. ಆ ಐದು ಕ್ಷೇತ್ರಗಳು ನನಗೆ ಪ್ರಿಯವಾದರೂ ಅದರಲ್ಲಿ ಆಡಳಿತ ಮತ್ತು ಕಾನೂನು ವಿಭಾಗ ನನಗೆ ಅಚ್ಚುಮೆಚ್ಚು. ಜಿಲ್ಲಾಧಿಕಾರಿಯವರು 20 ಜನರಂತೆ ಐದು ತಂಡಗಳನ್ನು ಮಾಡಿದರು. ಯಾರಿಗೆ ಯಾವ ವಿಭಾಗದಲ್ಲಿ ಆಸಕ್ತಿ ಇದೆಯೋ ಅದರಲ್ಲಿ ಸೇರಬಹುದಾಗಿತ್ತು. ನಾನು ಆಡಳಿತ ಮತ್ತು ಕಾನೂನು ವಿಭಾಗದಲ್ಲಿ ಇದ್ದೆ. ಬೆಳಿಗ್ಗೆಯಿಂದ ಮಧ್ಯಾಹ್ನದ ತನಕ ನಾವು ನಮ್ಮ ಗುಂಪಿನಲ್ಲಿ ಕುಳಿತು ಚರ್ಚೆ ಮಾಡಿ ಒಂದು ಔಟ್ ಲೈನ್ ಸಿದ್ಧಪಡಿಸಬೇಕಿತ್ತು. ಅದಕ್ಕೆ ನಂತರ ರೂಪುರೇಶೆ ಕೊಟ್ಟು ಒಂದು ವರದಿಯನ್ನು ತಯಾರು ಮಾಡಬೇಕಿತ್ತು. ಮಧ್ಯಾಹ್ನ ಊಟವಾದ ನಂತರ ಆಯಾ ತಂಡದಿಂದ ಒಬ್ಬರು ಅದನ್ನು ಮಂಡಿಸಬೇಕಿತ್ತು. ನಮ್ಮ ತಂಡದಲ್ಲಿದ್ದವರು ಒಳ್ಳೊಳ್ಳೆ ಸಲಹೆಗಳನ್ನು ಕೊಟ್ಟರು. ಅಭಿಪ್ರಾಯಗಳನ್ನು ಕಲೆ ಹಾಕಿ ಪ್ರಬಂಧದ ರೀತಿಯಲ್ಲಿ ಮಾಹಿತಿಗಳನ್ನು ಒಟ್ಟು ಮಾಡುವ ಕೆಲಸ ಮಾಡಿದೆವು. ಜಿಲ್ಲಾಧಿಕಾರಿ ಡಾ|ಜಗದೀಶ್ ಹಾಗೂ ಅಪರ ಜಿಲ್ಲಾಧಿಕಾರಿ ಕುಮಾರ್ ಎಲ್ಲಾ ತಂಡಗಳಲ್ಲಿ ಹೇಗೆ ಚಿಂತನೆ ನಡೆಯುತ್ತಿದೆ ಎಂದು ಮೇಲ್ವಿಚಾರಣೆ ನಡೆಸುತ್ತಿದ್ದರು. ಪ್ರತಿ ಟೇಬಲ್ ಬಳಿ ಹೋಗಿ ಭಾಗವಹಿಸಿದವರ ಮಾತುಗಳಿಗೆ ಕಿವಿ ಕೊಡುತ್ತಿದ್ದರು. ನಮ್ಮ ಟೇಬಲ್ ಬಂದವರಿಗೆ ನಾವು ನಡೆಸುತ್ತಿದ್ದ ಚಿಂತನಾ-ಮಂಥನ ನೋಡಿ ಎಷ್ಟು ಖುಷಿಯಾಯಿತು ಎಂದರೆ ಅಲ್ಲಿಯೇ ಒಂದು ಕುರ್ಚಿ ಹಾಕಿ ಕುಳಿತೇಬಿಟ್ಟರು.
ನಾವು ಆಡಳಿತ ಮತ್ತು ಕಾನೂನು ತಂಡದಿಂದ ಮಂಡಿಸಿದ ಪ್ರಬಂಧದಲ್ಲಿ ಇದ್ದ ಪ್ರಮುಖ ವಿಷಯಗಳು ಏನೆಂದರೆ “ಸಕಾಲ”. ಡಿವಿ ಸದಾನಂದ ಗೌಡರು ಮುಖ್ಯಮಂತ್ರಿಯಾಗಿದ್ದಾಗ ಇದನ್ನು ಅನುಷ್ಟಾನಕ್ಕೆ ತಂದಿದ್ದರು. ಇದು ಒಳ್ಳೆಯ ಯೋಜನೆ. ಸರಕಾರಿ ಕೆಲಸ, ಸೌಲಭ್ಯಗಳು ಶೀಘ್ರದಲ್ಲಿ ಜನಸಾಮಾನ್ಯರಿಗೆ ಸಿಗಬೇಕು ಎನ್ನುವ ಯೋಜನೆ ಅದು. ಆದರೆ ದುರಾದೃಷ್ಟವಶಾತ್ ಅದರಡಿಯಲ್ಲಿ ಸರಕಾರದ ಎಲ್ಲಾ ಸೇವೆಗಳು ಬರುತ್ತಿಲ್ಲ. ಕೆಲವೇ ಕೆಲವು ಅಂಶಗಳು ಮಾತ್ರ ಸಕಾಲದಡಿಯಲ್ಲಿ ಬರುತ್ತದೆ. ಅದರಿಂದ ಜನಸಾಮಾನ್ಯರಿಗೆ ತುಂಬಾ ಉಪಯೋಗ ಆಗುವುದಿಲ್ಲ. ಅದಕ್ಕೆ ಬದಲಾವಣೆ ತಂದು ಎಲ್ಲ ಸರಕಾರಿ ಸೌಲಭ್ಯಗಳನ್ನು ಸಕಾಲದಡಿಯಲ್ಲಿ ತರಬೇಕು. ಇನ್ನು ಅನೇಕ ವಿಷಯಗಳು ಸಕಾಲದಡಿ ಬಂದರೂ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಾರೆ ಎಂದರೆ ಕೆಲವನ್ನು ಜನರಲ್ ಕ್ಯಾಟಗರಿಯಲ್ಲಿ ತೆಗೆದುಕೊಳ್ಳುತ್ತಾರೆ. ಇದರಿಂದ ಕೆಲಸ ವಿಳಂಬವಾಗುತ್ತದೆ. ಇದರಿಂದ ಜನರಿಗೆ ಏನೂ ಉಪಯೋಗವಿಲ್ಲ. ಸಕಾಲದ ಉದ್ದೇಶವೂ ಅದರಲ್ಲಿ ವಿಫಲತೆಯನ್ನು ಕಾಣುತ್ತದೆ. ಅದರ ಬದಲಿಗೆ ಎಲ್ಲಾ ಸೌಲಭ್ಯವನ್ನು ಸಕಾಲದಡಿಯಲ್ಲಿ ತರಬೇಕು ಮತ್ತು ಯಾವ ಅಧಿಕಾರಿ ಸಕಾಲದ ಅಡಿಯಲ್ಲಿ ಕೆಲಸ ಮಾಡಿ ಕೊಡದೆ ಅದನ್ನು ಜನರಲ್ ಕೆಟಗರಿಯಲ್ಲಿ ಮಾಡುತ್ತಾನೋ ಆತನ ಮೇಲೆ ದಂಡ ಹಾಕಬೇಕು ಎಂದೆವು.
ಇದರೊಂದಿಗೆ ಒಂದು ಕ್ರಾಂತಿಕಾರಕ ಬದಲಾವಣೆ ಆಗಬೇಕು ಎನ್ನುವ ನನ್ನ ಅಂಶವನ್ನು ಆ ಪ್ರಬಂಧದಲ್ಲಿ ಸೇರಿಸಲಾಗಿತ್ತು. ಅದೆನೆಂದರೆ ಈ ಭ್ರಷ್ಟ ಅಧಿಕಾರಿಗಳು ಇರುತ್ತಾರಲ್ಲ, ಅವರ ವಿರುದ್ಧ ನನ್ನಂತವರು ಲೋಕಾಯುಕ್ತಕ್ಕೆ ದೂರು ಕೊಟ್ಟರೆ ನಮಗಾಗುವ ಸಂಕಷ್ಟವನ್ನು ವಿವರಿಸಿದೆ. ನಾವು ದೂರು ಕೊಟ್ಟ ನಂತರ ಲೋಕಾಯುಕ್ತದಲ್ಲಿ ಅದರ ವಿಚಾರಣೆ ಆರಂಭವಾಗುತ್ತದೆಯೇನೋ ಸರಿ. ಆದರೆ ಹಿಯರಿಂಗ್ ಇರುವುದು ಬೆಂಗಳೂರಿನ ಲೋಕಾಯುಕ್ತ ಕಚೇರಿಯಲ್ಲಿ. ನಾವು ನಮಗೆ ಕರೆದಾಗಲೆಲ್ಲ ನಮ್ಮದೇ ಖರ್ಚಿನಲ್ಲಿ ಬೆಂಗಳೂರಿಗೆ ಹೋಗಿ, ಅಲ್ಲಿ ನಿಂತು, ಲೋಕಾಯುಕ್ತ ಕಚೇರಿಗೆ ಹೋಗಿ, ಅಲ್ಲಿ ವಿಚಾರಣೆ ಮುಗಿಸಿ ನಂತರ ಮತ್ತೆ ಮಂಗಳೂರಿಗೆ ಬರಬೇಕು. ಒಮ್ಮೆ ಬೆಂಗಳೂರಿಗೆ ಹೋಗಿ ಬರುವುದೆಂದರೆ ಎಷ್ಟು ಖರ್ಚು ಎನ್ನುವುದು ನಿಮಗೆ ಗೊತ್ತು. ಹಾಗಂತ ನಾವು ಯಾವ ಭ್ರಷ್ಟರ ಮೇಲೆ ದೂರು ಕೊಡುತ್ತೇವೆ ನೋಡಿ, ಅವರಿಗೆ ಬೆಂಗಳೂರಿಗೆ ಹೋಗಿ ಬರಲು ಟಿಎ, ಡಿಎ ಎಲ್ಲಾ ಸಿಗುತ್ತವೆ. ಇದರತ್ಥ ಏನು? ದೂರು ಕೊಟ್ಟವ ಕೋಡಂಗಿ, ಇಸ್ಕೊಂಡವ ಈರಭದ್ರನಾ! ನಾನು ಈ ವಿಷಯದಲ್ಲಿ ನನಗಾದ ಕಹಿ ಅನುಭವ ಹೇಳಿಕೊಂಡೆ!
Leave A Reply