ಮೀನಿನ ಸಾರಿನಲ್ಲಿ ಮೀನು ಇಲ್ಲದಿದ್ದರೆ ಹೇಗೋ ಹಾಗೆ ಪಟಾಕಿ ಇಲ್ಲದೆ ದೀಪಾವಳಿ!
ಈ ದೀಪಾವಳಿಗೆ ಯಾರೂ ಕೂಡ ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿಗೆ ಒಳಪಟ್ಟ ಪ್ರದೇಶಗಳಲ್ಲಿ ಪಟಾಕಿ ಮಾರುವಂತಿಲ್ಲ ಎನ್ನುವಂತಹ ಮಹತ್ತರ ಆದೇಶವೊಂದನ್ನು ಸುಪ್ರೀಂ ಕೋರ್ಟ್ ಮೊನ್ನೆ ಸೋಮವಾರ ನೀಡಿದೆ. ಈ ಮೂಲಕ ಈ ಬಾರಿಯ ದೀಪಾವಳಿ ದೆಹಲಿ ಭಾಗಗಳಲ್ಲಿ ಸೂತಕದ ವಾತಾವರಣವನ್ನು ಉಂಟು ಮಾಡಲಿದೆ. ದೀಪಾವಳಿಯ ಸಂಭ್ರಮ ಮುಗಿಲು ಮುಟ್ಟುವುದೇ ಪಟಾಕಿ ಸಿಡಿಸುವ ಮೂಲಕ. ಅದೇ ಇಲ್ಲದಿದ್ದರೆ ಬಟಾಟೆ ಉಪ್ಕರಿಯಲ್ಲಿ ಬಟಾಟೇ ಇಲ್ಲದಿದ್ದರೆ ಹೇಗೋ, ಮೀನಿನ ಸಾರಿಗೆ ಮೀನೆ ಹಾಕದಿದ್ದರೆ ಹೇಗೋ ಹಾಗೆ ಆಗುತ್ತದೆ. ಒಂದು ರೀತಿಯಲ್ಲಿ ಹೋಟೆಲ್ ಗೆ ನೀವು ಹೋದಾಗ ಊಟ ಬೇಕಾದರೆ ಚೆನ್ನಾಗಿ ಮಾಡಿ ಆದರೆ ಅನ್ನದೊಂದಿಗೆ ಪದಾರ್ಥ ಇಲ್ಲ ಎಂದು ಸಪ್ರೈಯರ್ ಹೇಳಿದರೆ ನಿಮಗೆ ಎದ್ದು ಹೋಗಿ ಅವನಿಗೆ ನಾಲ್ಕು ಬಾರಿಸೋಣ ಎಂದು ಆಗಲ್ವಾ? ಪದಾರ್ಥವೇ ಇಲ್ಲದೇ ಊಟ ಹೇಗೆ ಮಾಡುವುದು ಎಂದು ನೀವು ಕೇಳುವುದಿಲ್ಲವಾ?
ಇನ್ನೊಂದು ಆಯಾಮ ಏನೆಂದರೆ ಈ ಪಟಾಕಿ ಮಾರಾಟ ಬ್ಯಾನ್ ಅನ್ನು ಕಳೆದ ನವೆಂಬರ್ 11 ಕ್ಕೆ ಹಾಕಲಾಗಿತ್ತು. ಆದರೆ ಪಟಾಕಿ ಮಾರಾಟಗಾರರು ಮತ್ತು ಉತ್ಪಾದಕರು ಮನವಿ ಸಲ್ಲಿಸಿದ ಮೇರೆಗೆ ಸೆಪ್ಟೆಂಬರ್ 12 ರಂದು ಬ್ಯಾನ್ ಹಿಂತೆಗೆಯಲಾಗಿತ್ತು. ನ್ಯಾಯಾಲಯ ಬ್ಯಾನ್ ಹಿಂತೆಗೆದುಕೊಂಡ ನಂತರ ಸಮಾಧಾನಗೊಂಡ ಉತ್ಪಾದಕರು ಮತ್ತು ಮಾರಾಟಗಾರರು ಕೋಟಿಗಟ್ಟಲೆ ಹಣ ಬಂಡವಾಳ ಹೂಡಿ ಸ್ಟಾಕ್ ತಂದು ಇಟ್ಟುಕೊಂಡಿದ್ದರು. ಇನ್ನೇನೂ ಮಳಿಗೆ ತೆರೆದು ಪಟಾಕಿ ಮಾರಬೇಕು ಎಂದು ಅಂದುಕೊಂಡಿದ್ದವರಿಗೆ ಅಕ್ಟೋಬರ್ 9 ಕ್ಕೆ ಬಂದಿರುವ ಆದೇಶ ತಲೆನೋವು ತಂದು ಒಡ್ಡಿದೆ. ಇನ್ನೇನೂ ಈ ಆದೇಶದಿಂದ ಆತ್ಮಹತ್ಯೆ ಮಾಡುವುದೊಂದೇ ದಾರಿ ಎಂದು ಮಾರಾಟಗಾರರು ನೋವು ತೋಡಿಕೊಳ್ಳುತ್ತಿದ್ದಾರೆ. ಮೊದಲೇ ಬ್ಯಾನ್ ತೆಗೆಯಲ್ಲ ಎಂದು ಹೇಳಿದ್ದರೆ ನಾವು ಪಟಾಕಿ ಸ್ಟಾಕ್ ಮಾಡಿಕೊಳ್ಳುತ್ತಿರಲಿಲ್ಲ, ಆದರೆ ದೀಪಾವಳಿಗೆ ಬೆರಳೆಣಿಕೆಯ ದಿನಗಳಿರುವಾಗ ಹೀಗೆ ಧೀಡೀರ್ ಬ್ಯಾನ್ ಮಾಡಿದರೆ ನಾವು ಏನು ಮಾಡುವುದು ಎಂದು ಅವರು ಪ್ರಶ್ನಿಸುತ್ತಿದ್ದಾರೆ. ಇತ್ತೀಚೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬಾರ್, ವೈನ್ ಶಾಪ್ ಗಳಲ್ಲಿ ಮದ್ಯ ಮಾರಲೇಬಾರದು ಎಂದು ಆದೇಶ ಕೊಟ್ಟಿದ್ದ ಸುಪ್ರೀಂ ಕೋರ್ಟ್ ನಂತರ ಕೆಲವು ದಿನಗಳ ಬಳಿಕ ಉಲ್ಟಾ ಹೊಡೆದು ರಾಷ್ಟ್ರೀಯ ಹೆದ್ದಾರಿ ನಗರದೊಳಗೆ ಹೋಗುತ್ತಿದ್ರೆ ಮಾರಬಹುದು ಎಂದಿತ್ತು. ಹಿಂದೆ ಹಳೆ ವಾಹನಗಳನ್ನು ರಸ್ತೆಯಲ್ಲಿ ಓಡಿಸಬಾರದು ಎಂದು ಆದೇಶ ಕೊಟ್ಟ ಸುಪ್ರೀಂ ಕೋರ್ಟ್ ನಂತರ ಅದು ಅನುಷ್ಟಾನಗೊಂಡಿರುವ ಬಗ್ಗೆ ತೀರ್ಮಾನ ಕೈಗೊಂಡಿರಲಿಲ್ಲ. ಹೀಗೆ ಸುಪ್ರೀಂಕೋರ್ಟ್ ತನ್ನ ಆದೇಶಗಳನ್ನು ಕೊಡುವಾಗ ಅದರಿಂದ ಆಗುವ ಸಾಮಾಜಿಕ, ಆರ್ಥಿಕ, ಧಾರ್ಮಿಕ ಪರಿಣಾಮಗಳನ್ನು ಅಭ್ಯಸಿಸುವುದು ಒಳ್ಳೆಯದು.
ಪಟಾಕಿಗಳನ್ನು ಮಾರಬಾರದು ಎಂದು ಆದೇಶ ಕೊಟ್ಟಿರುವ ನ್ಯಾಯಾಲಯ ಅದನ್ನು ಕೇವಲ ದೀಪಾವಳಿಗೆ ಮಾತ್ರ ಸೀಮಿತಗೊಳಿಸಿರುವುದು ಮತ್ತೊಂದು ಚರ್ಚೆಗೆ ಕಾರಣವಾಗಿದೆ. ಯಾಕೆಂದರೆ ನವೆಂಬರ್ 1 ರ ನಂತರ ಲೈಸೆನ್ಸ್ ಇರುವ ಪಟಾಕಿ ಮಾರಾಟಗಾರರಿಗೆ ಈ ಬ್ಯಾನ್ ಅನ್ವಯಿಸಲ್ಲ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ನೀಡಿದೆ. ಅಂದರೆ ದೀಪಾವಳಿಯನ್ನು ಮಾತ್ರ ಗುರಿಯಾಗಿಸಿರುವುದು ಸ್ಪಷ್ಟ. ಉತ್ತರ ಭಾರತದಲ್ಲಿ ಪಟಾಕಿಯನ್ನು ಹೊಸ ವರ್ಷಾಚರಣೆಗೆ, ಈದ್ ಉಲ್ ಫ್ರಿತರ್ ಹಬ್ಬಕ್ಕೆ, ಮದುವೆಗಳಲ್ಲಿ, ಕಾಲೇಜು ಚುನಾವಣೆಗಳಲ್ಲಿ, ರಾಜಕೀಯ ಕಾರ್ಯಕ್ರಮಗಳಲ್ಲಿ ಪಟಾಕಿಗಳನ್ನು ಹೊಡೆಯುವುದು ಮಾಮೂಲು. ಅಂತಹ ಸಂದರ್ಭಗಳಲ್ಲಿ ಪಟಾಕಿಗಳು ಸಿಗಲಿವೆ. ಈಗ ಬ್ಯಾನ್ ಬಿದ್ದಿರುವುದು ಕೇವಲ ತಾತ್ಕಾಲಿಕ ಲೈಸೆನ್ಸ್ ತೆಗೆದುಕೊಂಡು ದೀಪಾವಳಿಗೆ ವ್ಯಾಪಾರಕ್ಕೆ ಕುಳಿತುಕೊಂಡವರಿಗೆ. ಒಮ್ಮೆ ದೀಪಾವಳಿ ಮುಗಿದ ಮೇಲೆ ಇವರ ತಾತ್ಕಾಲಿಕ ಲೈಸೆನ್ಸ್ ಕೊನೆಗೊಳ್ಳುತ್ತದೆ. ಅದರ ನಂತರ ಯಥಾಪ್ರಕಾರ ಲೈಸೆನ್ಸ್ ಇರುವ ಪಟಾಕಿ ಮಾರಾಟಗಾರರು ತಮ್ಮ ವ್ಯವಹಾರ ಮುಂದುವರೆಸಲಿದ್ದಾರೆ.
ಸುಪ್ರೀಂ ಕೋರ್ಟಿಗೆ ಸಾಮಾಜಿಕ ಕಳಕಳಿ ಇರಬೇಕಾದದ್ದು ಅಗತ್ಯ. ಆದರೆ ಎಡಬಿಡಂಗಿತನದಲ್ಲಿ ನೀಡುವ ಸೂಚನೆಗಳು ಬೇರೆಯದ್ದೇ ಆದ ಚರ್ಚೆಯನ್ನು ಹುಟ್ಟುಹಾಕುತ್ತವೆ. ಎಲ್ಲಿಯ ತನಕ ಅಂದರೆ ಇದನೀಗ ದಾರ್ಮಿಕ ಭಾವನೆಗಳನ್ನು ಕೆರಳಿಸುವ ಆದೇಶವನ್ನಾಗಿಯೂ ನೋಡಲಾಗುತ್ತಿದೆ. ಅಷ್ಟಕ್ಕೂ ಪಟಾಕಿ ಬೇಕೆ ಎಂದಾದರೆ ದೆಹಲಿಯ ಗಡಿಯಲ್ಲಿರುವ ಬೇರೆ ರಾಜ್ಯಗಳಿಂದ ಖರೀದಿಸಿ ಆಸಕ್ತರು ಹೊಡೆಯಬಹುದು. ಯಾಕೆಂದರೆ ಬ್ಯಾನ್ ಇರುವುದು ಮಾರುವುದಕ್ಕೆ, ಹೊಡೆಯುವುದಕ್ಕಲ್ಲ!
Leave A Reply