“ಬಿಲ್ಡರ್ ರಕ್ಷಿತೋ ರಕ್ಷಿತ:” ಪಾಲಿಕೆ ಸದಸ್ಯರ ಹಳೆ ನಂಬಿಕೆ!
ಅದು ಸಾರ್ವಜನಿಕ ಕುಂದುಕೊರತೆ ಕೇಳುವ ಸಭೆ. ಲ್ಯಾಂಡ್ ಟ್ರೇಡ್ ಬಿಲ್ಡರ್ ಪರವಾಗಿ ಬ್ಯಾಟಿಂಗ್ ಮಾಡಲು ಮಂಗಳೂರು ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯರಾದ ಶಶಿಧರ್ ಹೆಗ್ಡೆ ಹಾಗೂ ಡಿಕೆ ಅಶೋಕ್ ಅವರು ಬಂದಿದ್ದರು. ಶಾರದಾನಿಕೇತನದ ನಿವಾಸಿಗಳ ಪರವಾಗಿ ಬೌಲಿಂಗ್ ಮಾಡಿ ಪಾಲಿಕೆ ಸದಸ್ಯರ ವಿಕೆಟ್ ಉದುರಿಸಲು ನಾನು ತಯಾರಾಗಿದ್ದೆ. ಈ ಜಾಗದ ವಿಷಯದಲ್ಲಿ ನಾನು ಯಾವ ರೀತಿಯ ಬೌಲಿಂಗ್ ಮಾಡುತ್ತೇನೆ ಎಂದು ಗೊತ್ತಿಲ್ಲದಷ್ಟು ದಡ್ಡರು ಪಾಲಿಕೆಯಲ್ಲಿ ಇಲ್ಲ ಎಂದು ನನಗೆ ಗೊತ್ತಿದೆ. ಕಂದಾಯ ವಿಭಾಗದವರು 15 ನಿಮಿಷ ಸುಮ್ಮನೆ ಕುಳಿತರೆ ಮಂಗಳೂರಿನ ಅರ್ಧ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಕೊಂಡು ಬಿಡುವಷ್ಟು ಇಲ್ಲಿ ಚಾಣಾಕ್ಷರಿದ್ದಾರೆ. ಪಾಲಿಕೆಯಲ್ಲಿ ಅಭಿವೃದ್ಧಿಗೆ ಚಿಂತನೆ ಮಾಡುವುದಕ್ಕಿಂತ ಬಿಲ್ಡರ್ ಗಳನ್ನು ರಕ್ಷಿಸುವುದು ಹೇಗೆ ಎಂದೇ ಇಲ್ಲೊಂದು ಚೇಂಬರ್ ತರಹದ್ದು ಮಾಡಬೇಕಿದೆ. ಅದಕ್ಕೆ ಬಿಲ್ಡರ್ಸ್ ರಕ್ಷಣಾ ವಿಭಾಗ ಎಂದು ಹೆಸರಿಟ್ಟರೆ ತುಂಬಾ ಉದಯೋನ್ಮುಖ ಬಿಲ್ಡರ್ ಗಳಿಗೆ ಅನುಕೂಲವಾಗುತ್ತದೆ. ಅಲ್ಲಿ ತಿಂಗಳಿಗೊಮ್ಮೆ ಸೆಮಿನಾರ್ ಮಾಡಿ ಪಾಲಿಕೆಯನ್ನು ವಂಚಿಸುವುದು ಹೇಗೆ ಎಂದು ಹೇಳಿಕೊಡಲು ಪಾಲಿಕೆಯ ಹಳೆಹುಲಿಗಳು ಇದ್ದೇ ಇರುತ್ತಾರೆ. ಹಾಗೆ ಆಗ ನಗರಾಭಿವೃದ್ಧಿ ಸಚಿವರಾಗಿದ್ದ ವಿನಯ ಕುಮಾರ್ ಸೊರಕೆಯವರು ಪಾಲಿಕೆಯ ಪರಿಷತ್ ಸಭೆಯಲ್ಲಿ ಕರೆದಿದ್ದ ಸಾರ್ವಜನಿಕ ಕುಂದುಕೊರತೆ ಸಭೆಯಲ್ಲಿ ಬಿಲ್ಡರ್ ಪರವಾಗಿ ಮಾತನಾಡಲು ಶಶಿಧರ್ ಹೆಗ್ಡೆ, ಡಿಕೆ ಅಶೋಕ್ ಕುಮಾರ್ ಸಕಲ ತಯಾರಿಯೊಂದಿಗೆ ಬಂದಿದ್ದರು.
ಸಭೆಯಲ್ಲಿ ನನ್ನ ಅವಕಾಶ ಬಂದಾಗ ” ಯಾವುದೇ ರಸ್ತೆಯನ್ನು ಅಗಲ ಮಾಡಬೇಕಾದರೆ ಅದಕ್ಕೆ ಬೇರೆ ಬೇರೆ ನಿಯಮಗಳಿವೆ. ಅದನ್ನು ಪಾಲಿಸದೇ ಚಿಲಿಂಬಿಯಲ್ಲಿರುವ ಶಾರದಾನಿಕೇತನ ರಸ್ತೆಯನ್ನು ಕಾನೂನುಬಾಹಿರವಾಗಿ ಅಗಲೀಕರಣ ಮಾಡಲು ತಯಾರಿ ನಡೆಯುತ್ತಿದೆ. ಅದನ್ನು ತಕ್ಷಣ ನಿಲ್ಲಿಸಬೇಕು” ಎಂದು ಆಗ್ರಹಿಸಿದೆ. ಅದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಶಶಿಧರ್ ಹೆಗ್ಡೆ ಹಾಗೂ ಡಿಕೆ ಅಶೋಕ್ ಅವರು ರಸ್ತೆ ಅಗಲೀಕರಣ ಮಾಡಲು ಒಪ್ಪಿ ನೂರು ಜನ ಸಹಿ ಮಾಡಿದ್ದಾರೆ, ಆದ್ದರಿಂದ ರಸ್ತೆ ಅಗಲೀಕರಣ ಮಾಡಲು ಸ್ಥಳೀಯರ ವಿರೋಧ ಇಲ್ಲ ಎಂದು ಬಿಟ್ಟರು. ಎಂತಹ ಹಸಿಹಸಿ ಸುಳ್ಳು ಎಂದು ಅನಿಸಿತು. ಶಾರದಾನಿಕೇತನ ರಸ್ತೆಯ ನೂರು ಜನ ಸಹಿ ಹಾಕಿ ರಸ್ತೆ ಅಗಲೀಕರಣ ಮಾಡಲು ಒಪ್ಪುವ ಸಾಧ್ಯತೆ ಇಲ್ಲವೇ ಇಲ್ಲ. ಯಾಕೆಂದರೆ ಅದರ ವಿರುದ್ಧವಾಗಿ ಲೋಕಾಯುಕ್ತಕ್ಕೆ ದೂರು ಕೊಟ್ಟವರು ಆ ರಸ್ತೆಯವರು. ಅಗತ್ಯ ಬಿದ್ದರೆ ಕರ್ನಾಟಕ ಉಚ್ಚ ನ್ಯಾಯಾಲಯ ಮತ್ತು ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಹೋರಾಡಲು ಅವರು ತಯಾರಿದ್ದಾರೆ. ಹಾಗಿರುವಾಗ ಅಗಲ ಮಾಡಿ, ನಮಗೆ ಒಪ್ಪಿಗೆ ಇದೆ ಎಂದು ನೂರು ಜನ ಹೇಗೆ ಸಹಿ ಹಾಕುತ್ತಾರೆ ಎನ್ನುವುದು ನನಗೆ ಅನಿಸಿತ್ತು.
ಮತ್ತೆ ನೋಡಿದರೆ ಶಶಿಧರ್ ಹೆಗ್ಡೆ ಅಥವಾ ಡಿಕೆ ಅಶೋಕ್ ಸಹಿ ಹಾಕಿಸಿದ ನೂರು ಜನ ಆ ರಸ್ತೆಯವರೇ ಅಲ್ಲ. ಕಿವಿ ಮತ್ತು ತಲೆಯ ನಡುವೆ ಒಂದಿಷ್ಟು ಗ್ಯಾಪ್ ಹೆಚ್ಚಿದ್ದರೆ ಅಲ್ಲಿಯೇ ಮೂರು ಮಹಡಿಯ ಕಟ್ಟಡ ಕಟ್ಟಬಹುದು ಎನ್ನುವಷ್ಟು ಬುದ್ಧಿವಂತರಾಗಿರುವ ಪಾಲಿಕೆಯ ಸದಸ್ಯರು ಶಾರದಾನಿಕೇತನ ರಸ್ತೆಯ ವಿವಾದ ಪರಿಹರಿಸಲು ನೂರು ಜನ ಸಹಿಯುಳ್ಳ ಒಪ್ಪಿಗೆ ಪತ್ರ ತಯಾರಿ ಮಾಡಿಕೊಂಡು ಬಂದಿದ್ದರು. ನಂತರ ವಿಚಾರಿಸಿದರೆ ಇವರ ಪತ್ರಕ್ಕೆ ಸಹಿ ಹಾಕಿದ ನೂರು ಜನರು ಆ ರಸ್ತೆಯವರು ಅಲ್ಲವೇ ಅಲ್ಲ. ಅವರಿಗೂ ಆ ರಸ್ತೆಗೂ ಏನೂ ಸಂಬಂಧವಿಲ್ಲ. ಸಹಿ ಹಾಕಿದವರು ಚಿಲಿಂಬಿ ಗುಡ್ಡೆಯ ಮತ್ತೊಂದು ಪಾಶ್ವದಲ್ಲಿ ಇರುವವರು. ಅವರಿಗೆ ಹೋಗಿ ಬರಲು ಬೇರೆಯದ್ದೇ ರಸ್ತೆ ಇದೆ. ಅಂತವರಿಂದ ಸಹಿ ಹಾಕಿಸಿ ನೂರು ಜನರ ಒಪ್ಪಿಗೆ ಇದೆ ಎಂದು ಇವರು ತೋರಿಸಿದಾಗ ನಂಬಲು ನಾನೇನೂ ಪಪ್ಪು ಅಲ್ಲ. ಕೊನೆಗೆ ನಮ್ಮೆಲ್ಲರ ಮಾತುಗಳನ್ನು ಕೇಳಿ ಸೊರಕೆಯವರಿಗೆ ಯಾವುದೇ ನಿರ್ಣಯಕ್ಕೆ ಬರಲು ಸಾಧ್ಯವಾಗಲಿಲ್ಲ. ಏಕೆಂದರೆ ಒಂದು ಕಡೆ ಸತ್ಯ ಇದೆ. ಮತ್ತೊಂದೆಡೆ ತಮ್ಮದೇ ಪಕ್ಷದ ಬಾಲಗೋಂಚಿಗಳಿದ್ದಾರೆ. ಯಾವುದನ್ನು ಎದುರು ಹಾಕಿಕೊಂಡರೂ ಅದು ತಮಗೆ ತಿರುಮಂತ್ರ ಆಗಬಹುದು ಎಂದು ಅವರಿಗೆ ಅನಿಸಿರಬಹುದು. ಅವರು ತಲೆ ಅಲ್ಲಾಡಿಸಿದರು. ಬಹುಶ: ತನ್ನ ಕೈಯಲ್ಲಿ ಆಗುವುದಿಲ್ಲ ಎಂದು ಕೈಚೆಲ್ಲಿದ ಭಾವನೆ ಅಡಕವಾಗಿತ್ತು. ಅವರು ಸಭೆ ಮುಗಿಸಿ ಎದ್ದು ಹೋದರು. ನಾನು ಹೊರಗೆ ಬಂದೆ. ಶಾರದಾನಿಕೇತನ ರಸ್ತೆಯವರು ಲೋಕಾಯುಕ್ತಕ್ಕೆ ದೂರು ಕೊಟ್ಟಾಗಲೇ ತಾವು ಎಚ್ಚರವಾಗಿ ಈ ನೂರು ಸಹಿಯ ನಾಟಕ ಮಾಡದಿದ್ರೆ ಬಿಲ್ಡರ್ ಗೆ ತೊಂದರೆಯಾಗುತ್ತಿತ್ತು, ಈಗ ಓಕೆ ಎಂದು ಬಿಲ್ಡರ್ ಪರ ಬ್ಯಾಟಿಂಗ್ ಮಾಡುತ್ತಿದ್ದವರು ಗ್ಲೌಸ್, ಪ್ಯಾಡ್, ಹೆಲ್ಮೆಟ್ ಎಲ್ಲ ತೆಗೆದು ದಣಿವಾರಿಸಿಕೊಳ್ಳುತ್ತಿದ್ದರು!
ನಂತರ ಏನಾಯಿತು ಎನ್ನುವುದನ್ನು ನಾಳೆ ಹೇಳುತ್ತೇನೆ. ನನ್ನ ಕಳಕಳಿ ಇಷ್ಟೇ, ನಮ್ಮ ನಾಗರಿಕರು ಮೋಸ ಹೋಗಬಾರದು. ಕಂಪ್ಲೀಶನ್ ಪ್ರಮಾಣ ಪತ್ರ ಇಲ್ಲದ ವಸತಿ ಸಮುಚ್ಚಯದಲ್ಲಿ ಫ್ಲಾಟ್ ಖರೀದಿಸಿದರೆ ಏನು ರಿಸ್ಕ್ ಎನ್ನುವುದನ್ನು ನಾಳೆ ಹೇಳಲಿದ್ದೇನೆ. ಈಗ ರಸ್ತೆ ಅಗಲೀಕರಣವಾಗದೇ ಬಿಲ್ಡರ್ ಫ್ಲಾಟ್ ಗಳನ್ನು ಮಾರಾಟ ಮಾಡಿದರೆ ಪಾಲಿಕೆ ಕಡೆಯಿಂದ ಅಕ್ರಮವಾಗಿಯೋ ಅಥವಾ ಹಿಂದಿನ ಬಾಗಿಲಿನಿಂದಲೋ ಸೌಲಭ್ಯ ಪಡೆದುಕೊಳ್ಳಬಹುದು. ಆದರೆ ಅದು ಶಾಶ್ವತ ಅಲ್ಲ. ಬಿಲ್ಡರ್ ಗಳು ಹೆಚ್ಚೆಂದರೆ ಪಾಲಿಕೆ, ಮೂಡಾದ ಅಧಿಕಾರಿಗಳನ್ನು, ಸದಸ್ಯರನ್ನು ಖರೀದಿಸಬಹುದು. ಆದರೆ ಶಾರದಾನಿಕೇತನ ರಸ್ತೆಯ ನಿವಾಸಿಗಳು ಉಚ್ಚ ನ್ಯಾಯಾಲಯ, ಸವೋರ್ಚ ನ್ಯಾಯಾಲಯದ ತನಕ ಹೋಗಿದ್ದಾರೆ. ವಿಷಯ ಕುತೂಹಲಕರವಾಗಿದೆ. ಬಿಲ್ಡರ್, ಪಾಲಿಕೆ, ಮೂಡಾದ ನಡುವೆ ಸಜ್ಜಿಗೆ, ಬಜಿಲ್ ಆಗುವುದು ಮಾತ್ರ ಆ ಬಿಲ್ಡಿಂಗ್ ನಲ್ಲಿ ಫ್ಲಾಟ್ ತೆಗೆದುಕೊಂಡ ಮತ್ತು ರಸ್ತೆಯಲ್ಲಿ ವಾಸಿಸುವ ನಾಗರಿಕರು. ಉಳಿದೆಲ್ಲರೂ ತಮ್ಮ ಪಾಲು ತೆಗೆದುಕೊಂಡು ಖುಷಿಯಾಗಿದ್ದಾರೆ!
Leave A Reply