ಇಷ್ಟು ವಿಷಯಗಳು ಇದ್ದರೂ ಬಿಜೆಪಿ ಗುಜರಾತಿನಲ್ಲಿ ಸೋಲಿಲ್ಲ ಎಂದರೆ…..!
ಯಾವುದೇ ಒಂದು ಸರಕಾರ ಅಧಿಕಾರದಲ್ಲಿ ಐದು ವರ್ಷ ಇದ್ರೆ ಸಾಕು, ಮುಂದಿನ ಚುನಾವಣೆ ಬರುತ್ತಿದ್ದಂತೆ ಆಡಳಿತ ವಿರೋಧಿ ಅಲೆ ಏರ್ಪಟ್ಟಿರುತ್ತದೆ. ಅದಕ್ಕೆ ಕಾರಣ ಮತದಾರರ ಹೆಚ್ಚುತ್ತಿರುವ ನಿರೀಕ್ಷೆ ಮತ್ತು ಅಧಿಕಾರರೂಢ ಪಕ್ಷ ತೆಗೆದುಕೊಳ್ಳುವ ಕೆಟ್ಟ ನಿರ್ಧಾರಗಳು. ಆದ್ದರಿಂದ ನೀವು ಅಭಿವೃದ್ಧಿ ಮತ್ತು ಜನರ ನಿರೀಕ್ಷೆ ಎರಡನ್ನೂ ಕೂಡ ಗಮನದಲ್ಲಿ ಇಟ್ಟು ಹೋಗಬೇಕಾಗುತ್ತದೆ. ಬೇಕಾದರೆ ಗುಜರಾತನ್ನೇ ತೆಗೆದುಕೊಳ್ಳಿ. ಅಲ್ಲಿ ವಿರೋಧ ಪಕ್ಷಗಳು ಕೂಡ ಅಭಿವೃದ್ಧಿ ಆಗಿಲ್ಲ ಎಂದು ಹೇಳಲು ಹೋಗುವುದೇ ಇಲ್ಲ. ಏಕೆಂದರೆ ಕಳೆದ 22 ವರ್ಷಗಳಲ್ಲಿ ಅಲ್ಲಿ ಸಾಕಷ್ಟು ಅಭಿವೃದ್ಧಿ ಆಗಿದೆ. ಅದಕ್ಕೆ ಕಾಂಗ್ರೆಸ್ ಏನು ಮಾಡಿತು ಎಂದರೆ ಪಟೇಲರ ಮೀಸಲಾತಿ ವಿಷಯ ತೆಗೆಯಿತು. ಹಾರ್ದಿಕ್ ಪಟೇಲ್ ಕಾರ್ಯಕ್ರಮಕ್ಕೆ ಸೇರುತ್ತಿದ್ದ ಜನರನ್ನು ನೋಡಿ ಖುಷಿಗೊಂಡ ಕಾಂಗ್ರೆಸ್ಸಿಗೆ ಅದೊಂದು ವೋಟ್ ಬ್ಯಾಂಕ್ ಆಗಿ ಕಾಣಲು ಶುರುವಾಯಿತು. ಇವನನ್ನು ಹಿಡಿದುಕೊಂಡರೆ ಕೆಲಸ ಆಗುತ್ತದೆ ಎನ್ನುವ ಅಭಿಪ್ರಾಯಕ್ಕೆ ಕಾಂಗ್ರೆಸ್ ಮುಖಂಡರು ಬಂದರು. ರಾಹುಲ್ ಗಾಂಧಿಯನ್ನು ಕೂಡ ಇದೇ ವಿಷಯ ಹೇಳಿ ನಂಬಿಸಲಾಯಿತು. ಮತ್ತೊಂದೆಡೆ ಅಲ್ಫೇಶ್ ಠಾಕೂರ್ ಹಿಂದುಳಿದ ವರ್ಗಗಳಿಗೆ ಅದು ಬೇಕು, ಇದು ಬೇಕು ಎಂದು ಹೇಳಿ ಹೊರಟ. ಕಾಂಗ್ರೆಸ್ ಅವನನ್ನು ಕರೆದು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಿತು. ಅತ್ತ ಜಿಗ್ನೇಶ್ ಮೇವಾನಿ ದಲಿತರ ಹಕ್ಕು ಮುಖ್ಯ ಎಂದ. ಅವನನ್ನು ಕಾಂಗ್ರೆಸ್ ಅಪ್ಪಿಕೊಂಡಿತು. ಆತ ಕೊಸರಾಡಿ ದೇಶದಿಂದ ಬ್ಯಾನ್ ಆಗಬೇಕಾಗಿರುವ ದೇಶದ್ರೋಹಿ ಸಂಘಟನೆಗಳೊಂದಿಗೆ ಸೇರಿಕೊಂಡ. ಆದರೂ ಕಾಂಗ್ರೆಸ್ ಅವನು ನಮ್ಮವ ಎಂದಿತು. ಒಂದು ಕಡೆ ಪಾಟೀದಾರ್ ಮತ್ತೊಂದೆಡೆ ಓಬಿಸಿ ಇನ್ನೊಂದೆಡೆ ದಲಿತ ವಿಷಯವನ್ನೇ ತೆಗೆದುಕೊಂಡು ಬಿಜೆಪಿಯನ್ನು ಮುಗಿಸಲು ಕಾಂಗ್ರೆಸ್ ಹೊರಟು ಬಿಟ್ಟಿತ್ತು. ಮೂರಕ್ಕೂ ಹೊರಗಿನ ವ್ಯಕ್ತಿಗಳಿಗೆ ಸುಫಾರಿ ಕೊಟ್ಟು ಯುದ್ಧರಂಗಕ್ಕೆ ಬಿಡಲಾಯಿತು. ಪಟೇಲರು, ದಲಿತರು, ಹಿಂದುಳಿದ ವರ್ಗಗಳನ್ನು ಅವರು ನೋಡಿಕೊಳ್ಳುತ್ತಾರೆ, ನೀವು ಏನಾದರೂ ಮಾಡಬೇಕಲ್ಲ ಅಧ್ಯಕ್ಷರೇ ಎಂದು ಹೇಳಿ ವಿಆರ್ ಎಸ್ ತೆಗೆದುಕೊಂಡಿರುವ ಕೆಲವು ಕಾಂಗ್ರೆಸ್ಸಿಗರು ರಾಹುಲ್ ಗಾಂಧಿಯನ್ನು ಕರೆದುಕೊಂಡು ದೇವಸ್ಥಾನಗಳಿಗೆ ಹೊರಟರು. ಭಟ್ರೇ, ನಾಮ ಸ್ಪಲ್ಪ ದೊಡ್ಡದು ಹಾಕಿ, ಉಳಿದದ್ದು ನಾವು ನೋಡಿಕೊಳ್ಳುತ್ತೇವೆ ಎಂದರು. ದೇವರಿಗೆ ಹೇಗೆ ಅಡ್ಡಬೀಳುವುದು ಎಂದು ರಾಹುಲ್ ಗಾಂಧಿಗೆ ಟಿವಿಷನ್ ಹೇಳಿ ಕೊಡಲಾಯಿತು. ರಾಹುಲ್ ಗಾಂಧಿ ಕುತ್ತಿಗೆಗೆ ಯಾವುದೋ ಜಪಮಾಲೆಯಂತದ್ದು ಬಂದು ಬಿತ್ತು. ಕೇಳಿದ್ರೆ ಒಳಗೆ ಜನಿವಾರ ಕೂಡ ಇದೆ ಎಂದು ಹೇಳಿಬಿಡಿ ಎನ್ನಲಾಯಿತು. ರಾಹುಲ್ ಗಾಂಧಿ ಬ್ರಾಹ್ಮಣರ ವೋಟ್ ಪಡೆದುಕೊಂಡರೆ ಉಳಿದ ಹೊರಗುತ್ತಿಗೆದಾರರು ಬೇರೆ ಬೇರೆ ಜಾತಿಗಳನ್ನು ನೋಡಿಕೊಂಡರೆ ಮತ್ತೇನೂ ಕಷ್ಟ ಎಂದು ಕಾಂಗ್ರೆಸ್ ಅಂದುಕೊಂಡಿತು. ಅದರ ನಡುವೆ ಜಿಎಸ್ ಟಿ ಬಗ್ಗೆ ಗುಜರಾತಿನ ಉದ್ದಿಮೆದಾರರಿಗಿದ್ದ ಅಸಮಾಧಾನವನ್ನು ನೋಡಿ ಖುಷಿಗೊಂಡ ರಾಹುಲ್ ಗಾಂಧಿ ಅದನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದರು. ಇನ್ನೇನೂ ಬಾಕಿ ಇದೆ. ಇನ್ನು ಕೇವಲ ಗೆಲ್ಲುವುದು ಮಾತ್ರ ಎನ್ನುವ ಕಾಂಗ್ರೆಸ್ ಕಂಡ ಕನಸಿನಲ್ಲಿ ಯಾವ ತಪ್ಪು ಕೂಡ ಇರಲಿಲ್ಲ. ಏಕೆಂದರೆ ಜಾತಿ, ವಂಶವಾದ ಬಿಟ್ಟು ಕಾಂಗ್ರೆಸ್ ಮೇಲೆ ಬಂದಿರಲಿಲ್ಲ. ನಮ್ಮ ಜನ ಕೂಡ ಹಾಗೆ ಎಂದು ಅಂದುಕೊಂಡಿತ್ತು.
ಅದರೊಂದಿಗೆ ನೋಟ್ ಬ್ಯಾನ್ ಕೂಡ ತೆಗೆದುಕೊಂಡು ರಣರಂಗಕ್ಕೆ ಧುಮುಕಿದ ಕಾಂಗ್ರೆಸ್ಸಿಗೆ ಬಿಜೆಪಿಯ ಮೇಲೆ ಸಹೋದರ ಮತ್ಸರ ಹೊಂದಿರುವ ಮಹಾರಾಷ್ಟ್ರದ ಶಿವಸೇನೆಯ ಬುಸುಗುಡುವಿಕೆ ಲಾಭಕರವಾಗಿ ಕಂಡಿತು. ಅದನ್ನು ಕೂಡ ಅಸ್ತ್ರವಾಗಿ ಬಳಸಿದ ಕಾಂಗ್ರೆಸ್ ರಣರಂಗದಲ್ಲಿ ಸೋಲುವ ಚಾನ್ಸೆ ಇರಲಿಲ್ಲ. ಅಷ್ಟೇ ಅಲ್ಲ ಕಳೆದ ನಾಲ್ಕು ವರ್ಷಗಳಿಂದ ನರೇಂದ್ರ ಮೋದಿ ಎನ್ನುವ ಸಿಂಹ ತನ್ನ ಗುಹೆ ಬಿಟ್ಟು ಸಿಂಹಾಸನದ ಮೇಲೆ ಕುಳಿತಿರುವ ಕಾರಣ ಅವರ ಪಾದುಕೆ ಇಟ್ಟು ಗುಜರಾತಿನಲ್ಲಿ ಸರಕಾರ ನಡೆಯುತ್ತಿದೆಯೇನೋ ಎನ್ನುವ ವಾತಾವರಣ ನಿರ್ಮಾಣವಾಗಿತ್ತು. ಮನುಷ್ಯನೇ ಎದುರಿಗೆ ಇಲ್ಲದಿದ್ದಾಗ ಅವನ ನೆರಳಿಗೆ ನಮಸ್ಕರಿಸಲು ಯಾರು ಒಪ್ಪುತ್ತಾರೆ ಎಂದು ಕಾಂಗ್ರೆಸ್ ಅಂದುಕೊಂಡಿತ್ತು.
ಈ ಎಲ್ಲ ವಿಷಯಗಳನ್ನು ತೆಗೆದುಕೊಂಡು ಹೊರಟ ಕಾಂಗ್ರೆಸ್ ಗುಜರಾತಿನಲ್ಲಿ ಸೋಲುವುದು ಸಾಧ್ಯವೇ ಇಲ್ಲ ಎಂದು ಆರಂಭಿಕ ಲೆಕ್ಕಾಚಾರ ನಡೆದು ಹೋಗಿತ್ತು. ಎಷ್ಟೇ ದೊಡ್ಡ ನಾಯಕನಿರಲಿ, ಎಷ್ಟೇ ಪ್ರೀತಿ ಇರಲಿ, 22 ವರ್ಷಗಳಿಂದ ಒಬ್ಬನನ್ನೇ ನೋಡಲು ಅದೇನೂ ಸಾಸ್ ಬಿ ಕಬಿ ಬಹುತೀ ಧಾರಾವಾಹಿ ಅಲ್ಲ. ಮೋದಿ ದೆಹಲಿಗೆ ಹೋದ ಬಳಿಕ ಎರಡು ಮುಖ್ಯಮಂತ್ರಿ ಕಂಡ ರಾಜ್ಯ ಅದು. ಜನ ಸಹಜವಾಗಿ ಬದಲಾವಣೆ ಬಯಸಬೇಕಿತ್ತು. ಆದರೆ ಗುಜರಾತಿನ ಮಾರ್ವಾಡಿಗಳು ಎಲ್ಲಾ ಸೈಡ್ ಡಿಶ್ ಗಳಿಗಿಂತ ಮೇನ್ ಮಿಲ್ ಮುಖ್ಯ ಎಂದರು. ಜಾತಿ, ಧರ್ಮ, ಮೀಸಲಾತಿ, ಜಿಎಸ್ ಟಿ, ನೋಟ್ ಅಮಾನ್ಯಕರಣಗಳಿಗಿಂತ ಇಷ್ಟು ವರ್ಷ ಗುಜರಾತನ್ನು ಉಳಿಸಿ, ಬೆಳೆಸಿದ ಅಭಿವೃದ್ಧಿ ಮುಖ್ಯ ಎಂದರು.
ಎಲ್ಲಕ್ಕಿಂತ ಆಶ್ಚರ್ಯ ಎಂದರೆ ಚುನಾವಣಾ ರಾಜಕೀಯದಲ್ಲಿ ಒಂದು ವಿಸ್ಮಯ ನಡೆದಿದೆ. ಬಿಜೆಪಿಯ ಸೀಟುಗಳ ಸಂಖ್ಯೆ ಕಡಿಮೆ ಆದರೂ ವೋಟ್ ಶೇರ್ ಜಾಸ್ತಿಯಾಗಿದೆ. 2012 ರಕ್ಕಿಂತ ಹೆಚ್ಚು ವೋಟ್ ಶೇರ್ ಬಿಜೆಪಿ ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಪಶ್ಚಿಮ ಬಂಗಾಳದಲ್ಲಿ ಇಂತಹುದೇ ಅವಕಾಶ ಎಡಪಕ್ಷಗಳಿಗೆ ಜನ ಕೊಟ್ಟಿದ್ದರಾದರೂ ಪ್ರತಿ ಚುನಾವಣೆಗೆ ಅದರ ವೋಟ್ ಶೇಕಡಾವಾರು ಕಡಿಮೆಯಾಗುತ್ತಾ ಹೋಗಿದ್ದು ನಿಮಗೆ ಗೊತ್ತಿರಬಹುದು. ಆದರೆ ಇಲ್ಲಿ ಹಾಗೆ ನಡೆದಿಲ್ಲ. ಜನ ಮೋದಿಯೇ ಬೇಕು ಎನ್ನುವುದನ್ನು ಹೆಚ್ಚು ವೋಟ್ ಹಾಕಿ ಸಾಬೀತುಪಡಿಸಿದ್ದಾರೆ. ಆದರೆ ಹಲವೆಡೆ ಒಂದು ಸಾವಿರಕ್ಕಿಂತ ಕಡಿಮೆ ಮತಗಳ ಆಧಾರದಲ್ಲಿ ಬಿಜೆಪಿ ಸೋತಿರುವ ಕಾರಣ ಸೀಟುಗಳ ಸಂಖ್ಯೆ 10-15 ಕಡಿಮೆಯಾಗಿರಬಹುದು.
ಆದರೆ ಕರ್ನಾಟಕದ ಕಾಂಗ್ರೆಸ್ ಮುಖಂಡರು ಗುಜರಾತಿನ 77 ಸೀಟುಗಳಿಂದ ಒಂದಿಷ್ಟು ಹೊಸ ವಿಷಯಗಳನ್ನು ಕೂಡ ಕಲಿತಿರಬಹುದು. ಮೊದಲನೇಯದಾಗಿ ಜಿಗ್ನೇಶ್ ಮೇವಾನಿಯನ್ನು ಬಳಸಿ ದಲಿತರ ವೋಟ್ ಕಾಂಗ್ರೆಸ್ಸಿಗೆ ಸೆಳೆಯುವುದು, ಅಲ್ಫೇಶ್ ಠಾಕೂರ್ ನನ್ನು ಬಳಸಿ ಹಿಂದುಳಿದ ವರ್ಗಗಳ ಮತಗಳನ್ನು ಎಳೆಯುವುದು ಮತ್ತು ರಾಹುಲ್ ಗಾಂಧಿಯನ್ನು ಯಾವ್ಯಾವ ದೇವಸ್ಥಾನಗಳಿಗೆ ಕರೆದುಕೊಂಡು ಹೋಗುವುದು ಎಂದು ಪಟ್ಟಿ ಮಾಡುವುದು.
Leave A Reply