ಸಿಬಿಐ ನಿರ್ದೇಶಕರನ್ನು ಬದಲಿಸಬೇಡಿ ಎಂದಿದ್ದ ಖರ್ಗೆ!
ಸಿಬಿಐ ಸ್ವತಂತ್ರವಾಗಿ ಕೆಲಸ ಮಾಡುವಂಥ ವಾತಾವರಣ ಇತ್ತೀಚಿಗಷ್ಟೇ ಸೃಷ್ಟಿಯಾಗಿದೆ. ಆದರೆ, ಇದರಿಂದ ಆತಂಕಗೊಂಡಿರುವವರು ಪ್ರಧಾನಿ ವಿರುದ್ಧವೇ ಟೀಕೆ ಮಾಡುತ್ತಿದ್ದಾರೆ. ಸಿಬಿಐ ಅಧಿಕಾರಿಗಳು ಕಾರ್ತಿಯ ಮನೆಗೆ ದಾಳಿಗೆಂದು ಹೋದಾಗ ಅಲ್ಲಿ ದಾಳಿಯ ಮುನ್ಸೂಚನೆಯುಳ್ಳ ಸಿಬಿಐ ಕಚೇರಿಯ ಪತ್ರಗಳು ಸಿಕ್ಕು ಇಡಿಯ ದೇಶವನ್ನು ಗಾಬರಿಗೆ ನೂಕಿತ್ತು.
ಏನೇ ಹೇಳಿ. ನೀರವ್ ಮೋದಿಯ ಹೆಸರಲ್ಲಿ ಕಾಂಗ್ರೆಸ್ಸಿನದ್ದು ಹಿಟ್ ವಿಕೆಟ್ಟೇ. ಭ್ರಷ್ಟಾಚಾರದ ವಿರುದ್ಧ ಮೋದಿಯದ್ದು ಬರಿ ಬೊಗಳೆಯಷ್ಟೇ ಎಂದು ಕಾಡಿ ಅವರಿಗೆ ಈ ವಿರುದ್ಧದ ಹೋರಾಟಕ್ಕೆ ಪೂರ್ಣ ಸ್ವಾತಂತ್ರ್ಯ ಸಿಗುವಂತೆ ಮಾಡಿದ್ದೇ ಕಾಂಗ್ರೆಸ್ಸು. ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂಪಾಯಿಯನ್ನು ಮೋಸ ಮಾಡಲು ಅವಕಾಶ ಮಾಡಿಕೊಟ್ಟವರನ್ನು ಮೋದಿ ಹಿಡಿದು ಒಳದಬ್ಬಬೇಕೆಂಬುದು 128 ಕೋಟಿ ಭಾರತೀಯರ ಅಪೇಕ್ಷೆಯಾಗಿತ್ತು. ಲಲಿತ್, ನೀರವ್, ಮಲ್ಯ ಇವರೆಲ್ಲ ಮೇಲ್ನೋಟಕ್ಕೆ ಕದ್ದು ಓಡಿದವರಷ್ಟೇ. ಅವರಿಗೆ ಸಹಕಾರ ಮಾಡಿದವರೆಲ್ಲ ಭಾರತದಲ್ಲಿಯೇ ಕೊಬ್ಬಿದ ಗೂಳಿಗಳಂತೆ ಮೆರೆಯುತ್ತಿದ್ದರು. ಅಂಥವರನ್ನು ವಿಚಾರಣೆ ನಡೆಸಿ ಮಟ್ಟ ಹಾಕುವಂತಹ ಸಮಯ ಈಗ ಬಂದಿತ್ತು. ಈ ನಿಟ್ಟಿನಲ್ಲಿಯೇ ದೇಶ ಮೋದಿಗೆ ಪೂರ್ಣ ಸ್ವಾತಂತ್ರ್ಯ ನೀಡಿತೆಂದರೆ ತಪ್ಪಾಗಲಾರದು. ನಿಮಗೆ ನೆನಪಿದೆಯೋ ಇಲ್ಲವೋ ಗೊತ್ತಿಲ್ಲ. ಕಳೆದ ತಿಂಗಳು ಹೊಸ ಸಿಬಿಐ ನಿರ್ದೇಶಕರ ನೇಮಕದ ಕುರಿತಂತೆ ಮಲ್ಲಿಕಾರ್ಜುನ ಖರ್ಗೆ ವಿರೋಧ ವ್ಯಕ್ತಪಡಿಸಿದ್ದರು. ಸಿಬಿಐ ನಿರ್ದೇಶಕರ ಆಯ್ಕೆಗೆ ಪ್ರಧಾನಮಂತ್ರಿ, ವಿರೋಧ ಪಕ್ಷದ ನಾಯಕ ಮತ್ತು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ಆಯ್ಕೆ ಸಮಿತಿ ಇದೆ. ಈ ಸಮಿತಿ ಹೊಸ ನಿರ್ದೇಶಕರ ಆಯ್ಕೆಗೆ ತುರ್ತು ಸಭೆ ಸೇರಿತ್ತು. ಸಿಬಿಐ ನಿರ್ದೇಶಕ ಅನಿಲ್ ಸಿನ್ಹಾ ನಂತರ ಆ ಜಾಗಕ್ಕೆ ಸಹಜವಾಗಿಯೇ ಆಯ್ಕೆಯಾಗಿದ್ದ ಆರ್.ಕೆ ದತ್ತ ಅವರನ್ನು ನಿವೃತ್ತಿಗೆ ಒಂದು ವರ್ಷ ಬಾಕಿ ಇರುವಾಗಲೇ ಕೇಂದ್ರ ಸರ್ಕಾರ ಎತ್ತಂಗಡಿಗೆ ಆದೇಶ ಹೊರಡಿಸಿತ್ತು. ತಾತ್ಕಾಲಿಕವಾಗಿ ಐಪಿಎಸ್ ಅಧಿಕಾರಿ ರಾಕೇಶ್ ಅಸ್ಥಾನ ಅವರನ್ನು ನಿರ್ದೇಶಕರಾಗಿ ನೇಮಿಸಿತ್ತು. ಅದು ಸಹಜವೂ ಆಗಿತ್ತು. ಕಾಂಗ್ರೆಸ್ಸಿನ ಅಧಿಕಾರಾವಧಿಯಲ್ಲಿ ಸಾಕಷ್ಟು ಕೆಲಸ ಮಾಡಿ ಅನುಭವವಿದ್ದ ಆರ್.ಕೆ ದತ್ತ ಯಾವ ಕಠೋರ ನಿರ್ಣಯಗಳನ್ನೂ ತೆಗೆದುಕೊಳ್ಳುವಂತೆ ಕಾಣುತ್ತಿರಲಿಲ್ಲ. ಅವರ ಅವಧಿ ಪೂರ್ಣಗೊಳ್ಳುವ ವೇಳೆಗೆ ಮೋದಿಯವರ ಅಧಿಕಾರಾವಧಿ ಪೂರ್ಣಗೊಂಡು ಭ್ರಷ್ಟಾಚಾರಿಗಳೆಲ್ಲ ಬಚಾವಾಗಿಬಿಡುತ್ತಿದ್ದರಲ್ಲದೆ ಮೋದಿ ಇವರ ವಿರುದ್ಧ ಏನೂ ಮಾಡಲಿಲ್ಲವೆಂಬ ಕೊರಗು ಜನಸಾಮಾನ್ಯರಿಗೂ ಇದ್ದೇ ಇರುತ್ತಿತ್ತು.
ಇವಕ್ಕೆಲ್ಲ ಪರಿಹಾರ ಒಂದೇ ಇತ್ತು. ಸಮರ್ಥ ಸಿಬಿಐ ಅಧಿಕಾರಿಯ ನೇಮಕ! ಆಗಲೇ ಮೋದಿ ಪಡೆ ದೆಹಲಿಯ ಕಮೀಷನರ್ ಆಗಿದ್ದ ಅಲೋಕ್ ಕುಮಾರ್ ವರ್ವ ಅವರನ್ನು ಸಿಬಿಐ ನಿರ್ದೇಶಕರಾಗಿ ನೇಮಿಸಿತು. ಮಲ್ಲಿಕಾರ್ಜುನ ಖರ್ಗೆ ಆಯ್ಕೆ ಸಮಿತಿಯಲ್ಲಿಯೇ ತಮ್ಮ ವಿರೋಧ ವ್ಯಕ್ತಪಡಿಸಿ ದತ್ತ ಅವರನ್ನೇ ಮುಂದುವರಿಸಬೇಕೆಂದು ಹಠ ಹಿಡಿದರು. ಆದರೆ ಅದಕ್ಕೆ ಕೇಂದ್ರ ಸರ್ಕಾರ ಕ್ಯಾರೆ ಎನ್ನಲಿಲ್ಲ!
ಆಯ್ಕೆ ಹಿಂದಿನ ಜಾಣತನ: ಅಲೋಕ್ ವರ್ವ ಆಯ್ಕೆ ನ್ಯಾಯಸಮ್ಮತವೇ ಆಗಿತ್ತು. 1979 ರ ಬ್ಯಾಚಿನ ಐಪಿಎಸ್ ಅಧಿಕಾರಿಯಾಗಿದ್ದ ಅವರು ಮಿಜೋರಾಂನ ಮುಖ್ಯ ಪೊಲೀಸ್ ಅಧಿಕಾರಿಯಾಗಿದ್ದರಲ್ಲದೆ ಕೆಲವು ಕಾಲ ತಿಹಾರ್ ಜೈಲಿನ ಡಿಜಿ ಕೂಡ ಆಗಿದ್ದರು. ಕೈದಿಗಳ ಕ್ಷೇಮಾಭಿವೃದ್ಧಿ ಕುರಿತಂತೆ ಅವರು ಆ ಹೊತ್ತಿನಲ್ಲಿ ಮಾಡಿದ ಕೆಲಸಗಳು ಎಲ್ಲರಿಂದಲೂ ಗೌರವಕ್ಕೆ ಪಾತ್ರವಾದವು. ದೆಹಲಿ ಪೊಲೀಸ್ ಪಡೆಯ ವಿಜಿಲೆನ್ಸ್ ವಿಭಾಗದಲ್ಲೂ ಕಾರ್ಯ ನಿರ್ವಹಿಸಿದರು. ದೆಹಲಿಯ ಪೊಲೀಸ್ ಕಮೀಷನರ್ ಆಗಿದ್ದಾಗ 20 ವರ್ಷಗಳಿಂದ ಬಡ್ತಿ ವಂಚಿತರಾಗಿದ್ದ 26,000 ಪೊಲೀಸ್ ಆಧಿಕಾರಿಗಳಿಗೆ ಬಡ್ತಿ ನೀಡಲೇಬೇಕೆಂದು ಕೇಂದ್ರ ಸರ್ಕಾರವನ್ನು ಒಲಿಸಿ ಕಿರಿಯ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದ್ದರು. 36 ವರ್ಷಗಳ ಕಪ್ಪುಚುಕ್ಕೆಯಿಲ್ಲದ ಪ್ರಾಮಾಣಿಕ ಸೇವೆಯಿಂದಾಗಿಯೇ ಅಲೋಕ್ ವರ್ವ ಈ ಪದವಿ ಅಲಂಕರಿಸಿದರು. ಎತ್ತಂಗಡಿಗೊಂಡಿದ್ದ ದತ್ತ ಆನಂತರ ಸಿಬಿಐ ಕಾರ್ಯಶೈಲಿಯನ್ನು ಟೀಕಿಸಿ-‘ಹೀಗೇ ಸಾಗಿದರೆ ಒಂದು ದಿನ ವ್ಯವಸ್ಥೆಯೇ ಕುಸಿದು ಬೀಳುತ್ತದೆ’ ಎಂದು ಕಟುನುಡಿಗಳನ್ನಾಡಿದ್ದರು. ಅದ್ಯಾಕೋ ವರ್ಷಗಟ್ಟಲೇ ಇದೇ ವ್ಯವಸ್ಥೆಯೊಳಗೇ ತಾವೂ ಕೆಲಸ ಮಾಡಿದ್ದು ಅವರಿಗೆ ಮರೆತೇ ಹೋಗಿತ್ತು. ಅಲ್ಲಿಗೇ ಮೋದಿಯ ನಿರ್ಧಾರ ಸಮರ್ಥವಾಗಿತ್ತು ಎನ್ನುವುದರಲ್ಲಿ ಯಾವ ಅನುಮಾನವೂ ಉಳಿಯಲಿಲ್ಲ.
‘ಕೈ’ಗೆ ಆತಂಕ: ಅಲ್ಲಿಂದಾಚೆಗೆ ಕಾಂಗ್ರೆಸ್ ಪಾಳಯಕ್ಕೆ ನಡುಕ ಜೋರಾಗಿಯೇ ಶುರುವಾಗಿತ್ತು. ಅದಾದ ನಂತರವೇ ನೀರವ್ ಮೋದಿಯ ಹನ್ನೊಂದು ಸಾವಿರ ಕೋಟಿ ರೂಪಾಯಿ ಹಗರಣ ಬೆಳಕಿಗೆ ಬಂದಿದ್ದು. ಕಾಂಗ್ರೆಸ್ಸಿನ ಕಾರ್ಯಕರ್ತರು ಇದರಿಂದ ಚಿಗಿತುಕೊಂಡು ಮೋದಿಯವರ ವಿರುದ್ಧ ಮನಸೋ ಇಚ್ಛೆ ಟೀಕೆ ಮಾಡಿದರು. ಆ ವೇಳೆಗೆ ಅದೇ ಕಾಂಗ್ರೆಸ್ಸಿನ ಪ್ರಮುಖ ನಾಯಕರು ಮೌನಕ್ಕೆ ಶರಣಾಗಿದ್ದನ್ನು ಮಾತ್ರ ಯಾರೂ ಗಮನಿಸಿಯೇ ಇರಲಿಲ್ಲ. ಮೋದಿಯವರ ಮುಂದಿನ ನಡೆ ಈ ನಾಯಕರಿಗೆ ಬಲು ಸ್ಪಷ್ಟವಾಗಿತ್ತು. ಸಿಬಿಐ ನಿರ್ದೇಶಕರನ್ನು ಬದಲಾಯಿಸಿಕೊಂಡಿದ್ದು, ನೀರವ್ ಮೋದಿ ಹಗರಣವನ್ನು ಅಗತ್ಯಕ್ಕಿಂತ ಹೆಚ್ಚೇ ಜನರ ಮುಂದೆ ಬಿಚ್ಚಿಟ್ಟಿದ್ದು, ಸ್ವತಃ ರಕ್ಷಣಾ ಸಚಿವರೇ ಈ ಕುರಿತಂತೆ ಪತ್ರಿಕಾ ಗೋಷ್ಠಿ ನಡೆಸಿದ್ದು ಇವೆಲ್ಲವೂ ಮುಂದಿನದರ ದಿಕ್ಸೂಚಿ ಆಗಿತ್ತು.
ನೀರವ್ ಮೋದಿಯ ಅಷ್ಟೂ ಗಲಾಟೆ ಮಾಜಿ ಹಣಕಾಸು ಸಚಿವ ಚಿದಂಬರಂ ಅವರನ್ನೇ ಸುತ್ತಿಕೊಳ್ಳುವಂತೆ ಕಾಣುತ್ತಿತ್ತು. ಅದಾಗಲೇ ಇಶ್ರತ್ ಜಹಾನ್ ಕುರಿತಂತೆ ಅಫಿಡವಿಟ್ ಸಲ್ಲಿಸುವಾಗ ಅದರಲ್ಲಿ ಆಕೆಯ ಲಷ್ಕರ್ ಎ ತೊಯ್ಬಾದ ಸಂಬಂಧಗಳ ಕುರಿತಂತೆ ಇದ್ದ ಸುಳಿವುಗಳನ್ನು ಅಳಿಸಿ ಹಾಕಿದ್ದು ಕಂಟಕವಾಗಿ ಸುತ್ತಿಕೊಂಡಿರುವಾಗಲೇ ನೀರವ್ ಮೋದಿಯ ಗಲಾಟೆ ಅವರಿಗೆ ಉರುಳೇ ಆಗುವ ಲಕ್ಷಣಗಳು ಕಂಡುಬಂದಿತ್ತು. ಹಾಗಂತ ಈ ಆರೋಪ ಹೊಸದೇನೂ ಆಗಿರಲಿಲ್ಲ. ಕಳೆದ ನಾಲ್ಕು ವರ್ಷಗಳಿಂದಲೂ ಚಿದಂಬರಂ ಮಗ ಕಾರ್ತಿಯ ಕುರಿತಂತೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ‘ಎಕನಾಮಿಕ್ ಟೈಮ್್ಸ’ ನಾಲ್ಕು ವರ್ಷಗಳ ಹಿಂದೆಯೇ ಕಾರ್ತಿಯ ಹಿಡಿತದಲ್ಲಿರುವ ಎಂಟು ಕಂಪನಿಗಳ ಕುರಿತಂತೆ ಅವುಗಳ ಅವ್ಯವಹಾರಗಳ ಕುರಿತಂತೆ ವಿಸ್ತಾರವಾಗಿ ವರದಿ ಮಾಡಿತ್ತು. ಖ್ಯಾತ ಅರ್ಥಚಿಂತಕ ಗುರುಮೂರ್ತಿ ‘ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ನಲ್ಲಿ ಕಾರ್ತಿಯ ಸಾವಿರಾರು ಕೋಟಿ ರೂಪಾಯಿ ಆಸ್ತಿ ಬೇನಾಮಿ ಹೆಸರಲ್ಲಿರುವುದನ್ನು ದಾಖಲಿಸಿದ್ದರು. ಅಪ್ಪ-ಮಕ್ಕಳಿಬ್ಬರೂ ಆರಂಭದಲ್ಲಿ ಇದನ್ನು ವಿರೋಧಿಸಿದಂತೆ ಕಂಡರೂ ‘ಇಂಡಿಯನ್ ಎಕ್ಸ್ಪ್ರೆಸ್’ ದಾವೆ ಹೂಡಿ ಎಂದು ಸವಾಲು ಹಾಕಿದಾಗ ಚಿದಂಬರಂ ಮೌನಕ್ಕೆ ಶರಣಾದರು. ಗುರುಮೂರ್ತಿಯವರ ಮತ್ತೊಂದು ಆರೋಪ ಅಪ್ಪ-ಮಕ್ಕಳ ನಿದ್ದೆ ಕೆಡಿಸಿತ್ತು. ವಾಸನ್ ಐ ಕೇರ್ನಲ್ಲಿ ಪರೋಕ್ಷವಾದ ಹಿಡಿತವನ್ನು ಹೊಂದಿರುವ ಕಾರ್ತಿ ಶೇರು ಅವ್ಯವಹಾರದ ಮೂಲಕ ಇನ್ನೂರು ಕೋಟಿಗೂ ಹೆಚ್ಚಿನ ಹಗರಣ ನಡೆಸಿದ್ದರು. ಗುರುಮೂರ್ತಿಯವರು ದಿನೇದಿನೇ ಚಿದಂಬರಂರವರ ಮಹಾ ಸಾಮ್ರಾಜ್ಯದ ಆಳಕ್ಕೆ ಹೊಕ್ಕುತ್ತಿದ್ದರು. ವಾಸ್ತವವಾಗಿ ಬೇನಾಮಿ ಆಸ್ತಿಯನ್ನು ಹುಡುಕಾಡುವುದು ಬಲು ಕಷ್ಟ. ಸಿರಿವಂತನೊಬ್ಬ ಯಾರ್ಯಾರದ್ದೋ ಹೆಸರಲ್ಲಿ ಆಸ್ತಿ ಮಾಡಿಟ್ಟರೆ ಅದನ್ನು ಈತನದ್ದೇ ಎಂದು ಸಾಧಿಸುವುದು ಅಸಾಧ್ಯವೇ. ಆದರೆ ಸಿರಿವಂತರಿಗೂ ಒಂದು ಸಮಸ್ಯೆ ಇದೆ. ಬೇನಾಮಿ ಆಸ್ತಿ ನಂಬಿಕಸ್ತನ ಕೈಲಿಲ್ಲದೇ ಹೋದರೆ ಅದು ಕಳೆದು ಹೋಗುವ ಸಾಧ್ಯತೆಯೂ ಇದೆ. ಹೀಗಾಗಿಯೇ ತಮ್ಮ ಆಸ್ತಿಯನ್ನು ಉಳಿಸಿಕೊಳ್ಳಲು ಸಿರಿವಂತರು ಸಣ್ಣದ್ದೊಂದು ಕೊಂಡಿಯನ್ನು ಉಳಿಸಿಬಿಡುತ್ತಾರೆ. ಕಾರ್ತಿ ಮಿತ್ರರ ಹೆಸರಿನಲ್ಲಿ ಆಸ್ತಿ ಮಾಡಿ ಅವರ ಕೈಯಿಂದ ತನ್ನ ಮಗಳಿಗೆ ಕೊಡುಗೆಯಾಗಿ ಮರಳಿ ಅದೇ ಆಸ್ತಿಯನ್ನು ಬರೆಸಿಕೊಂಡಿದ್ದ. ಮೇಲ್ನೋಟಕ್ಕೆ ಕಾರ್ತಿಯ ಹೆಸರಲ್ಲಿ ಯಾವ ಆಸ್ತಿ ಇರದೇ ಹೋದರೂ ಅವನ ಎಲ್ಲ ಬೇನಾಮಿ ಆಸ್ತಿಯೂ ಪರೋಕ್ಷವಾಗಿ ಆತನ ಮಗಳ ಹೆಸರಿನಲ್ಲಿತ್ತು. ಸಿಬಿಐ ಕಾರ್ತಿಯ ಮನೆಯ ಮೇಲೆ ದಾಳಿ ಮಾಡಿದಾಗ ಈ ಬಗೆಯ ಅನೇಕ ಬೇನಾಮಿ ಆಸ್ತಿಯ ವಿವರಗಳು ಸಿಕ್ಕವು.
ಹಾಗೆ ಸಿಕ್ಕ ವಿವರಗಳ ಜಾಡು ಹಿಡಿದಾಗಲೇ ಗೊತ್ತಾಗಿದ್ದು ಭಾಸ್ಕರ್ ರಾಮನ್ ಎಂಬ ಕಾರ್ತಿಯ ಮಿತ್ರನೊಬ್ಬ ತನ್ನ ಹೆಸರಿನ ಕಂಪೆನಿಯ ಬಹು ದೊಡ್ಡ ಮೊತ್ತದ ಶೇರುಗಳನ್ನು ಕಾರ್ತಿಯ ಮಗಳು ನಳಿನಿಯ ಹೆಸರಿಗೆ ಬರೆದಿದ್ದ ಅಂತ. ಕಾಲಕ್ರಮದಲ್ಲಿ ಕಾರ್ತಿಯ ಮನೆಯಲ್ಲಿ ಲಂಡನ್, ದುಬೈ, ದಕ್ಷಿಣ ಆಫ್ರಿಕಾ, ಫಿಲಿಪೈನ್ಸ್, ಥೈಲಾಂಡ್, ಸಿಂಗಾಪುರ, ಮಲೇಷ್ಯಾ, ಶ್ರೀಲಂಕಾ, ಬ್ರಿಟಿಷ್ ಐಲಾಂಡ್, ಫ್ರಾನ್ಸ್, ಅಮೆರಿಕ, ಸ್ವಿಟ್ಜರ್ಲ್ಯಾಂಡ್, ಗ್ರೀಸ್ ಮತ್ತು ಸ್ಪೇನ್ನಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಪತ್ರ ಬೆಳಕಿಗೆ ಬಂತು. ಅಷ್ಟೇ ಅಲ್ಲ! ನೋಟು ಅಮಾನ್ಯೀಕರಣವಾದಾಗ ಕಾರ್ತಿ ತನ್ನ ಮಿತ್ರರೊಂದಿಗೆ ‘ನನ್ನ ಹಣವೆಲ್ಲ ಡಾಲರ್ಗಳಲ್ಲಿದೆ, ಆರು ಲಕ್ಷದೊಡೆಯ ನಾನು’ ಎಂದು ಹೇಳಿದ್ದು ಈ ಹೊತ್ತಲ್ಲಿ ಬೆಳಕಿಗೆ ಬಂದಿತ್ತು.
ಸಿಬಿಐ ಅಧಿಕಾರಿಗಳು ಕಾರ್ತಿಯ ಮನೆಗೆ ದಾಳಿಗೆಂದು ಹೋದಾಗ ಅಲ್ಲಿ ದಾಳಿಯ ಮುನ್ಸೂಚನೆಯುಳ್ಳ ಸಿಬಿಐ ಕಚೇರಿಯ ಪತ್ರಗಳು ಸಿಕ್ಕು ಇಡಿಯ ದೇಶವನ್ನು ಗಾಬರಿಗೆ ನೂಕಿತ್ತು. ಟ್ವಿಟರ್ಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಸರಿಸುಮಾರು ಇದೇ ವೇಳೆಗೆ 2ಜಿ ಹಗರಣದಿಂದ ರಾಜ ಕನ್ನಿಮೋಳಿ ಬಿಡುಗಡೆಗೊಂಡು ಸಿಬಿಐ ವೈಫಲ್ಯ ಎದ್ದು ಕಾಣುತ್ತಿತ್ತು.
ನಿರ್ದೇಶಕ ದತ್ತ ದೊರೆಗಳು ವಹಿಸಿದ್ದ ಕೆಲಸವನ್ನು ಬಲು ಚೆನ್ನಾಗಿಯೇ ನಿರ್ವಹಿಸುತ್ತಿದ್ದರು. ಅಲೋಕ್ ಕುಮಾರ್ ಆ ಜಾಗಕ್ಕೆ ಬಂದುದರ ಹಿನ್ನೆಲೆ ಇದೂ ಕೂಡ ಆಗಿತ್ತು.
ಕಾರ್ತಿ ಕರಾಮತ್ತು: ಚಿದಂಬರಂಗೆ ಅನುಮಾನವಿರಲಿಲ್ಲ ಎಂದಲ್ಲ. ಹಾಗಂತ ಕಾರ್ತಿ ಮಾಡಿದ ಕೆಲಸಗಳು ಅವರಿಗೆ ಗೊತ್ತಿರಲಿಲ್ಲವೆಂದೂ ಅಲ್ಲ. ಐಎನ್ಎಕ್ಸ್ ಮಿಡಿಯಾ ಹೌಸ್ಗೆ ವಿದೇಶದ ಹಣ ಹೂಡಿಕೆಯ ಪ್ರಸ್ತಾವ ಬಂದಾಗ ಇದೇ ಚಿದಂಬರಂ ತಮ್ಮ ಮಗನೊಂದಿಗೆ ಮಾತುಕತೆ ನಡೆಸಲು ಹೇಳಿದ್ದರು. ಇಂದ್ರಾಣಿ ಮುಖರ್ಜಿ ಕಾರ್ತಿಯ ಸಂಪರ್ಕಕ್ಕೆ ಬಂದಿದ್ದು ಹಾಗೆ. ವಿದೇಶಿ ಹಣ ಹೂಡಿಕೆಯದ್ದು ಒಂದು ದೊಡ್ಡ ಮಾಫಿಯಾ. ಕಿಕ್ ಬ್ಯಾಕ್ಗಳ ರೂಪದಲ್ಲಿ ಹಣವನ್ನು ವಿದೇಶದಲ್ಲಿ ಸಂಗ್ರಹಿಸೋದು ಅದನ್ನು ಮಾರಿಷಸ್ ಮಾರ್ಗವಾಗಿ ಯಾವುದಾದರೂ ಕಂಪನಿಗಳ ಮೂಲಕ ಮತ್ತೆ ಭಾರತದಲ್ಲಿ ಹೂಡೋದು. ಇಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಿಸಿ ಕಪ್ಪುಹಣವನ್ನು ಅಧಿಕೃತವಾಗಿಯೇ ಪರಿವರ್ತಿಸಿಕೊಳ್ಳೋದು. ಐಎನ್ಎಕ್ಸ್ ಮಿಡಿಯಾ ಇದರ ಒಂದು ಕೊಂಡಿಯಾಗಿತ್ತು. ಇಂದ್ರಾಣಿ ಮುಖರ್ಜಿಗೆ ಈ ಸಹಾಯ ಮಾಡಲೆಂದು ಕಾರ್ತಿ ಬಲು ದೊಡ್ಡ ವ್ಯವಹಾರ ಕುದುರಿಸಿದ್ದರು. ತಂದೆ ಸರ್ಕಾರದ ಬಲು ದೊಡ್ಡ ಹುದ್ದೆಯಲಿದ್ದುದರಿಂದ ಇಡಿಯ ಪರಿವಾರ ಸೋನಿಯಾ ಗಾಂಧಿಗೆ ಆಪ್ತವಾಗಿದ್ದುದರಿಂದ ಎಲ್ಲಕ್ಕೂ ಮಿಗಿಲಾಗಿ ಆಗಿನ ಪ್ರಧಾನಿ ಮನಮೋಹನ್ ಸಿಂಗರು ಸದಾ ಮೌನಿಯಾಗಿರುತ್ತಿದ್ದುದರಿಂದ ಕಾರ್ತಿ ಚಿದಂಬರಂ ಆಡಿದ್ದೇ ಆಟವಾಗಿತ್ತು. ಹ್ಯಾರಿಸ್ನ ಮಗ ಬೀದಿಗೆ ಬಂದು ಹೊಡೆಯುವಷ್ಟು ಕೆಳ ಮಟ್ಟದ ಗೂಂಡಾ. ಕಾರ್ತಿ ಅಧಿಕಾರಿಗಳನ್ನೇ ಬೆದರಿಸಿ ತನ್ನ ಕೆಲಸ ಮಾಡಿಕೊಳ್ಳಬಲ್ಲಷ್ಟು ಪ್ರಭಾವಿ ಅಷ್ಟೇ.
ಚೆನ್ನೈನ ಆದಾಯ ತೆರಿಗೆ ಇಲಾಖೆಯ ಕಮೀಷನರ್ ಶ್ರೀನಿವಾಸ್ ರಾವ್ ಕಾರ್ತಿಯ ಕಾನೂನು ಬಾಹಿರ ಚಟುವಟಿಕೆಗಳನ್ನು ವಿರೋಧಿಸಿದ್ದರಿಂದ ವರ್ಗಾವಣೆಗೊಳಗಾಗಿದ್ದರು. ಸಿಬಿಐ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲೇ ಅವನನ್ನು ಬಂಧಿಸಿ ದೆಹಲಿಗೆ ಕರೆ ತರುವಾಗ ಬಿಸಿನೆಸ್ ಕ್ಲಾಸ್ನಲ್ಲೇ ಕರೆದೊಯ್ಯಬೇಕೆಂದು ಧಮಕಿ ಹಾಕಿದ್ದ. ವಿಚಾರಣೆಗೆ ಸಿಬಿಐ ಕಚೇರಿಯಲ್ಲಿ ಕುಳಿತಿರುವಾಗ ಎಂಥ ಊಟ ಬೇಕೆಂದು ತಾಕೀತು ಮಾಡಿದ್ದಲ್ಲದೆ ತನ್ನನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ ತಾನು ಮಂತ್ರಿಯಾಗಿ ಬಂದಾಗ ಸರಿಯಾದ ಪಾಠ ಕಲಿಸುವೆನೆಂದು ಬೆದರಿಸಿದ್ದ.
ವಿದೇಶಕ್ಕೆ ಹಾರಿದ್ದ ಚಿದಂಬರಂ ಈ ಎಲ್ಲದರ ಮುನ್ಸೂಚನೆ ಇದ್ದೇ ತಮ್ಮೆಲ್ಲ ಕಾರ್ಯಕ್ರಮಗಳನ್ನು ಮೊಟಕುಗೊಳಿಸಿ ಮರಳಿ ಬಂದು ಕಾರ್ತಿಗೆ ‘ನಾನಿದ್ದೇನೆ. ಹೆದರಬೇಡ’ ಎಂದಿದ್ದರು.
ನಮ್ಮ ದೇಶದ ಕೆಲ ತನಿಖಾ ಸಂಸ್ಥೆಗಳು 50ಕ್ಕೂ ಹೆಚ್ಚು ವರ್ಷ ಆಳಿದ ಕಾಂಗ್ರೆಸ್ಸಿಗರ ಮಾತನ್ನು ಈಗಲೂ ಕೇಳುತ್ತವೆ. ನಾಲ್ಕು ವರ್ಷಗಳ ನಂತರ ಸಿಬಿಐ ಸ್ವತಂತ್ರವಾಗಿ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಈಗ ದಕ್ಕಿದೆ. ತಮ್ಮಿಚ್ಛೆಗೆ ತಕ್ಕಂತೆ ನಡೆದುಕೊಳ್ಳಲು ಮೋದಿ ಬಿಡುತ್ತಿಲ್ಲವೆಂದು ಕೋಪಿಸಿಕೊಂಡ ನ್ಯಾಯಾಧೀಶರುಗಳು ಬೀದಿಗೆ ಬಂದದ್ದಂತೂ ನಿಮಗೆ ನೆನಪೇ ಇದೆ. ಆದರೆ ಹನ್ನೆರಡು ವರ್ಷಗಳ ಕಾಲ ಗುಜರಾತ್ನಲ್ಲಿ ಈ ಬಗೆಯ ಎಲ್ಲ ಶೋಷಣೆಗಳನ್ನು ಎದುರಿಸಿ ನಿಂತ ನರೇಂದ್ರ ಮೋದಿ ಹಿಂದೆಂದಿಗಿಂತಲೂ ಅಚಲವಾಗಿದ್ದಾರೆ.
Leave A Reply