ನಾಗರಪಂಚಮಿಯಂದು ಸರಕಾರಿ ರಜೆ ಯಾಕಿಲ್ಲ!
ಆಸ್ತಿಕರು ಹೆಚ್ಚು ಬ್ಯುಸಿ ಇರುವ ಏಕೈಕ ಹಬ್ಬ ಇದು!
ನಮ್ಮ ದೇಶದಲ್ಲಿ ಸರಕಾರಿ ರಜೆಗಳಿಗೆ ಕಡಿಮೆ ಇಲ್ಲ, ನಿಜ. ಆದರೆ ಯಾವುದಕ್ಕೆ ರಜೆ ಕೊಡಬೇಕು ಮತ್ತು ಯಾವುದಕ್ಕೆ ಅಗತ್ಯ ಇಲ್ಲ ಎನ್ನುವುದು ಮಾತ್ರ ಯಾರಿಗೂ ಗೊತ್ತಿಲ್ಲ. ಹೆಚ್ಚಿನ ರಜೆಗಳು ಆಯಾ ಜಾತಿ, ಮತ, ಪಂಗಡಗಳಿಗೆ ಖುಷಿ ಮಾಡಲು ಮಾತ್ರ ಸೀಮಿತವಾಗಿದೆ. ಬೇಕಾದರೆ ಸರಕಾರ ರಜಾ ದಿನವನ್ನಾಗಿ ಘೋಷಿಸಿರುವ ಕೆಲವು ಜಯಂತಿಗಳನ್ನೇ ತೆಗೆದುಕೊಳ್ಳಿ. ಅದರಲ್ಲಿ ಆಯಾ ವ್ಯಕ್ತಿಯ ಜಯಂತಿಯನ್ನು ಅವರದ್ದೇ ಸಮಾಜದ ಕೆಲವು ಆಯ್ದ ಹಿರಿ ತಲೆಗಳು ಸಾಂಕೇತಿಕವಾಗಿ ಆಚರಿಸುತ್ತಾರೆ ವಿನ: ಅದಕ್ಕಿಂತ ಬೇರೆ ಏನೂ ಇಲ್ಲ. ಆವತ್ತು ಪತ್ರಿಕೆಗಳಲ್ಲಿ ಇಂತಿಂತಹ ಸಾಮಾಜಿಕ ಸುಧಾರಕರೊಬ್ಬರ ಜನ್ಮ ದಿನ. ಆ ನಿಮಿತ್ತ ಒಂದು ಲೇಖನ ಬರುತ್ತೆ ಬಿಟ್ಟರೆ ಬೇರೆ ಏನೂ ಇಲ್ಲ. ಹೆಚ್ಚಿನವರು ಈ ಸರಕಾರಿ ಜಯಂತಿಗಳನ್ನು ಫ್ಯಾಮಿಲಿ ಟ್ರಿಪ್ ಗಳನ್ನಾಗಿ ಪರಿವರ್ತಿಸಿ ತಿರುಗಾಡಲು ಹೊರಡುತ್ತಾರೆ ಎನ್ನುವುದು ಟೂರ್ ಆಯೋಜಕರಿಗೆ ಚೆನ್ನಾಗಿ ಗೊತ್ತು. ಅದಕ್ಕಾಗಿ ಅವರು ಆಯಾ ಜಯಂತಿಗಳು ಶುಕ್ರವಾರ, ಶನಿವಾರ ಬಂದರೆ ಜಾಹೀರಾತು ಕೊಟ್ಟು ತಮ್ಮೆಡೆಗೆ ಜನರನ್ನು ಆಕರ್ಷಿಸುತ್ತವೆ. ಆದ್ದರಿಂದ ಅಂತಹ ಕೆಲವು ಜಯಂತಿಗಳಿಗೆ ಕೊಡುತ್ತಿರುವ ಚುನಾವಣಾ ವೋಟ್ ಬ್ಯಾಂಕ್ ರಜೆ ರದ್ದು ಮಾಡಿ ನಿಜವಾಗಿ ಜನ ಸಕ್ರಿಯವಾಗಿ ಆಚರಿಸುವ ಸಂಗತಿಗಳಿಗೆ ಸರಕಾರ ರಜೆ ಕೊಡಬೇಕು ಎನ್ನುವುದು ಧಾರ್ಮಿಕ ನಾಯಕರ ವಾದ.
ನಾಗರ ಪಂಚಮಿಯನ್ನು ಸರಕಾರಿ ರಜಾದಿನವನ್ನಾಗಿ ಘೋಷಿಸಬೇಕು ಎಂದು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತು ಮತ್ತು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಇಲಾಖೆಯ ಸದಸ್ಯ ಪದ್ಮನಾಭ ಕೋಟ್ಯಾನ್ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ. ದೇಶಾದ್ಯಂತ ನಾಗಾರಾಧನೆ ವಿಶಿಷ್ಟವಾದುದು. ಅದರಲ್ಲಿಯೂ ಕರ್ನಾಟಕ ಕರಾವಳಿಯಲ್ಲಿ ನಾಗಾರಾಧನೆ ವಿಶೇಷ ಮಾನ್ಯತೆ ಇದೆ. ಈ ನಾಗಾರಾಧನೆಯ ವಿಶೇಷ ದಿನವೇ ನಾಗರ ಪಂಚಮಿ. ಈ ದಿನ ಜನರು ತಮ್ಮ ಮೂಲಸ್ಥಾನಕ್ಕೆ ಹೋಗಿ ತಂಬಿಲ ಸೇವೆ ಮಾಡಿ ಬರುತ್ತಾರೆ. ಹಾಗೆ ಮೂಲ ಸ್ಥಾನವಿಲ್ಲದವರು ಕುಡುಪು, ಸುಬ್ರಹ್ಮಣ್ಯ ಸೇರಿದಂತೆ ಇನ್ನಿತರ ಪ್ರಮುಖ ನಾಗಕ್ಷೇತ್ರಗಳಿಗೆ ಹೋಗಿ ನಾಗದೇವರನ್ನು ಪೂಜಿಸುತ್ತಾರೆ. ಆದ್ದರಿಂದ ಕರ್ನಾಟಕ ಸರಕಾರವು ಹಿಂದೂ ಧಾರ್ಮಿಕತೆಯ ಪೂಜಾ ಆರಾಧನೆಯ ಮಹತ್ವವನ್ನು ಅರಿತು, ಪ್ರತ್ಯೇಕವಾಗಿ ಮುಜುರಾಯಿ ಇಲಾಖೆಯನ್ನು ವ್ಯವಸ್ಥೆಗೊಳಿಸಿರುವುದರಿಂದ ನಾಗರಪಂಚಮಿಯ ಹಬ್ಬವನ್ನು ಪ್ರಮುಖ ಹಬ್ಬಗಳಲ್ಲಿ ಒಂದೊಂದು ಪರಿಗಣಿಸಿ ಕರ್ನಾಟಕ ಸರಕಾರವು ಸರಕಾರಿ ರಜಾದಿನವಾಗಿ ಘೋಷಿಸಬೇಕು ಎಂದು ಅವರು ವಿನಂತಿಸಿದ್ದಾರೆ.
ಬಹುಶ: ಈಗಿನ ರಾಜ್ಯ ಸರಕಾರ ಈ ಬಗ್ಗೆ ಹೆಚ್ಚಿನ ಒಲವು ತೋರಲಿಕ್ಕಿಲ್ಲ ಎನ್ನುವುದು ಹೆಚ್ಚಿನ ಆಸ್ತಿಕರಿಗೆ ಗೊತ್ತಿದೆ. ಕಾರಣ ಇದಕ್ಕೂ ರಜೆ ಕೊಟ್ಟರೆ ತಮ್ಮ ಜಾತ್ಯಾತೀತ ನೆಲೆಗೆ ತೊಂದರೆ ಉಂಟಾಗಬಹುದು ಎನ್ನುವ ಲೆಕ್ಕಾಚಾರ ಇರುತ್ತದೆ. ಸರಿಯಾಗಿ ನೋಡಿದರೆ ಬೇರೆ ಜಯಂತಿಗಳಿಗಿಂತ ನಮ್ಮ ಜನರು ಹೆಚ್ಚು ಬ್ಯುಸಿ ಇರುವುದು ನಾಗರಪಂಚಮಿಯ ದಿನ. ಆವತ್ತು ಪುಟ್ಟ ಮಗುವಿನಿಂದ ಹಿಡಿದು ವೃದ್ಧರು ಕೂಡ ನಾಗನನ್ನು ಹುಡುಕಿಕೊಂಡು ಹೋಗುತ್ತಾರೆ. ಅದಕ್ಕೆ ಕಾರಣ ನಾಗನ ಬಗ್ಗೆ ಇರುವ ಅಪರಿಮಿತ ಭಕ್ತಿ. ಬೆಳಿಗ್ಗೆ ಸೂರ್ಯ ಉದಯಿಸುವ ಮೊದಲೇ ಎದ್ದು ಮಧ್ಯಾಹ್ನದ ಪೂಜೆ ಮುಗಿದು ನಂತರ ತಡವಾಗಿ ಊಟವೋ ಅಥವಾ ಉಪಹಾರವೋ ಸೇವಿಸುವ ತನಕ ಎಲ್ಲರೂ ಒಂದು ಕ್ಷಣ ಬಿಡುವಿಲ್ಲದೆ ಈ ಹಬ್ಬವನ್ನು ಆಚರಿಸುತ್ತಾರೆ. ನಂತರ ಆಯಾ ಮೂಲಸ್ಥಾನದಿಂದ ಮನೆಗೆ ಬರುವಾಗ ಸಂಜೆಯಾಗಿರುತ್ತದೆ. ಇಂತಹ ಒಂದು ಹಬ್ಬಕ್ಕೆ ರಜೆ ಅಗತ್ಯವೋ, ಇಲ್ಲವೋ ಸರಕಾರಕ್ಕೆ ಬಿಟ್ಟಿದ್ದು.