ಪೋರ್ಜರಿ ಮಾಡುವಾಗ ಸಿಕ್ಕಿ ಬೀಳಲ್ಲ ಎನ್ನುವ ಧೈರ್ಯ ಶಾಸಕರಿಗೆ ಇತ್ತಾ?
ಜೆ ಆರ್ ಲೋಬೋ ಅವರು ನ್ಯಾಯವಾದ ದಾರಿಯಲ್ಲಿಯೇ ನಡೆಯುವವರಾಗಿದ್ದಲ್ಲಿ ಅವರು ಉರ್ವಾ ಮೈದಾನವನ್ನು ಮೊದಲು ಯಾರು ಅರ್ಜಿ ಕೊಟ್ಟು ಬುಕ್ ಮಾಡಿದ್ದರೋ ಅವರಿಗೆನೆ ಕೊಡುತ್ತಿದ್ದರು. ಆದರೆ ಶಾಸಕರಾಗಿ ಎಲ್ಲರನ್ನು ಸಮಾನವಾಗಿ ಕಾಣಬೇಕಾಗಿದ್ದ ಲೋಬೊ ಹಾಗೆ ಮಾಡಲಿಲ್ಲ. ಸಿಎಸ್ ಐ ಚರ್ಚ್ ನವರಿಗೆ ಮೋಸ ಮಾಡಲು ಅವರು ಹಿಂಜರಿಯಲಿಲ್ಲ. ಅವರಿಗೆ ನ್ಯಾಯಯುತವಾಗಿ ಇದ್ದವರಿಗಿಂತ ತನ್ನ ಪಕ್ಷದ ಕಾರ್ಫೋರೇಟರ್ ಅವರೇ ಮುಖ್ಯವಾದರು. ಅವರಿಗೆ ಫೋರ್ಜರಿ ಮಾಡಿದರೆ ಸಿಕ್ಕಿ ಬೀಳುವುದಿಲ್ಲ ಎನ್ನುವ ಗ್ಯಾರಂಟಿ ಇತ್ತು. ಏಕೆಂದರೆ ಶಾಸಕರು ಅವರೇ ಆಗಿರುವುದರಿಂದ ಮತ್ತು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷವೇ ಆಡಳಿತ ನಡೆಸುವುದರಿಂದ ಮತ್ತು ಪಾಲಿಕೆಯ ಕಮೀಷನರ್ ಕೂಡ ತಮ್ಮದೇ ವ್ಯಕ್ತಿಯಾಗಿರುವುದರಿಂದ ಸಿಕ್ಕಿಬೀಳುವುದು ಹೇಗೆ ಎಂದು ಅವರು ಅಂದುಕೊಂಡಿದ್ದರು. ಕೆಎಎಸ್ ಮಾಡಿರುವ ತಮಗೆ ಇದೆಲ್ಲ ದೊಡ್ಡ ವಿಷಯವೇ ಅಲ್ಲ ಎಂದು ನಿರ್ಧರಿಸಿದ ಲೋಬೋ ಅವರು ಸಿಎಸ್ ಐ ಚರ್ಚಿನವರಿಗೆ ಉಲ್ಟಾ ಹೊಡೆಯಲು ಐಡಿಯಾ ಮಾಡಿದರು.
ಸೀಲ್ ಪೋರ್ಜರಿ ಮಾಡಲಾಯಿತು…
ಸಿಎಸ್ ಐ ಚರ್ಚಿನವರಿಗೆ ಉರ್ವಾ ಮೈದಾನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟ ಮಾಡಲು ಅಗತ್ಯ ಇದ್ದದ್ದು ಎಪ್ರಿಲ್ 7 ಮತ್ತು 8 ಕ್ಕೆ. ಅವರು ಅರ್ಜಿ ಕೊಟ್ಟಿದ್ದು 27/2/18 ರಂದು. ನಿಮಗೆ ಇಲ್ಲೊಂದು ಸಣ್ಣ ಆಡಳಿತಾತ್ಮಕ ವಿಷಯ ಹೇಳುತ್ತೇನೆ. ಯಾರಾದರೂ ಮೈದಾನ ಅಥವಾ ಪುರಭವನ ಇಂತಿಂತಹ ದಿನ ಬೇಕು ಎಂದು ಅರ್ಜಿ ಕೊಟ್ಟರೆ ಅದನ್ನು ಮೊದಲಿಗೆ ಟಪ್ಪಾಲು ವಿಭಾಗ ಸ್ವೀಕರಿಸುತ್ತದೆ. ಅದು ಅಲ್ಲಿಂದ ಆವತ್ತೆ ಅಥವಾ ಮರುದಿನ ಪಾಲಿಕೆಯ ಕಮೀಷನರ್ ಅವರ ಚೇಂಬರಿಗೆ ಹೋಗುತ್ತದೆ. ಅಲ್ಲಿ ಆಯುಕ್ತರು ಸಹಿ ಹಾಕಿ ಸಂಬಂಧಪಟ್ಟ ವಿಭಾಗಕ್ಕೆ ಕಳುಹಿಸುತ್ತಾರೆ. ಇಲ್ಲಿ ಸಿಎಸ್ ಐ ಚರ್ಚಿನವರು ಮೈದಾನ ಬೇಕು ಎಂದು ಫೆಬ್ರವರಿ 27 ಕ್ಕೆ ಅರ್ಜಿ ಹಾಕಿದ ಬಳಿಕ ಯಕ್ಷಗಾನ ದ ಆಯೋಜಕರು ಅರ್ಜಿ ಕೊಟ್ಟಿದ್ದು 17/3/18 ರಂದು. ಅಂದರೆ ಸುಮಾರು 20 ದಿನಗಳ ನಂತರ. ಆದರೆ ಕ್ರಮಪ್ರಕಾರವಾಗಿ ಮಾರ್ಚ್ ಗಿಂತ ಫೆಬ್ರವರಿ ಮೊದಲು ಬರುವುದರಿಂದ ಯಕ್ಷಗಾನದವರಿಗಿಂತ ಸಿಎಸ್ ಐ ಚರ್ಚ್ ನವರಿಗೆ ಮೊದಲು ಕೊಡಬೇಕಾದದ್ದು ನ್ಯಾಯ. ಆದರೆ ಲೋಬೋ ಏನು ಮಾಡಿದರು ಎಂದರೆ ಯಕ್ಷಗಾನದ ಆಯೋಜಕರು ಸಿಎಸ್ ಐ ಚರ್ಚ್ ನವರು ಕೊಟ್ಟ ದಿನಕ್ಕಿಂತ ಹಿಂದಿನ ಯಾವುದಾದರೂ ದಿನ ನೋಡಿ ಆವತ್ತು ಕೊಟ್ಟಂತೆ ಮಾಡೋಣ ಎಂದು ನಿರ್ಧರಿಸಿದರು. ಯಕ್ಷಗಾನದವರು 8/2/18 ರಂದು ಮನವಿ ಕೊಟ್ಟ ಹಾಗೆ ಮಾಡಿದರು. ಅವರ ಮನವಿಯ ಮೇಲೆ 8/2/18 ರಂದು ಟಪ್ಪಾಲು ವಿಭಾಗದಿಂದ ಸೀಲು ಬೀಳುವಂತೆ ಮಾಡಿದರು. ಅಂದರೆ ಈ ಅರ್ಜಿ 8/2/2018 ಕ್ಕೆ ಟಪ್ಪಾಲು ವಿಭಾಗಕ್ಕೆ ಬಂದಿದೆ ಎಂದು ಮೇಲ್ನೋಟಕ್ಕೆ ಅನಿಸುವಂತೆ ಡ್ರಾಮ ಮಾಡಿದರು. ಒಂದು ವೇಳೆ ಫೆಬ್ರವರಿ 8 ಕ್ಕೆ ಅರ್ಜಿ ಬಂದಿದ್ದರೆ ಅದು ಆ ದಿನ ತಪ್ಪಿದರೆ ಮರುದಿನ ಕಮೀಷನರ್ ಅವರಿಂದ ಸಹಿ ಹೊಂದಬೇಕಿತ್ತು. ಆದರೆ ಅದು ನಡೆದೆ ಇಲ್ಲ.
ಸಿಎಸ್ ಐ ಚರ್ಚಿನವರು ನನ್ನ ಬಳಿ ಬಂದು ಹೀಗೆಗೆ ಆದ ಅನ್ಯಾಯವನ್ನು ಹೇಳಿದಾಗ ನಾನು ಮಾಹಿತಿ ಹಕ್ಕಿನಲ್ಲಿ ಅರ್ಜಿ ಹಾಕಿ ಕೇಳಿದೆ. ಆಗ ಯಕ್ಷಗಾನದ ಆಯೋಜಕರು ಮಾರ್ಚ್ 17 ಕ್ಕೆ ಅರ್ಜಿ ಹಾಕಿದ್ದಕ್ಕೆ ಆಯುಕ್ತರು ಟಪ್ಪಾಲು ವಿಭಾಗದಿಂದ ಬಂದ ಪತ್ರಕ್ಕೆ ಸಹಿ ಹಾಕಿ ಕಳುಹಿಸಿದ್ದು ಗೊತ್ತಾಯಿತು. ಅದರಲ್ಲಿ ಅವರು ಮಾರ್ಚ್ 17 ಕ್ಕೆ ಸಹಿ ಹಾಕಿರುವುದರಿಂದ ಅದು ಆವತ್ತು ಅಥವಾ ಅದರ ಹಿಂದಿನ ದಿನ ಮಾತ್ರ ಬಂದಿರುವ ಚಾನ್ಸ್ ಇದೆ. ಆದರೆ ಲೋಬೋ ಅವರು ಸಿದ್ಧಪಡಿಸಿದ ಅರ್ಜಿಯಲ್ಲಿ ಫೆಬ್ರವರಿ 8 ಕ್ಕೆ ಅರ್ಜಿ ಕೊಟ್ಟಂತೆ ಕಾಣುತ್ತದೆ. ಹಾಗಾದರೆ ಫೆಬ್ರವರಿ 8 ರಂದು ಅರ್ಜಿ ಕೊಟ್ಟಿದ್ದರೆ ಐದು ವಾರ ಟಪ್ಪಾಲು ವಿಭಾಗದಲ್ಲಿಯೇ ಇರಲು ಸಾಧ್ಯವಿಲ್ಲ. ಇಲ್ಲಿ ಲೋಬೋ ಮತ್ತು ತಂಡದ ಪೋರ್ಜರಿ ಬೆಳಕಿಗೆ ಬಂತು. ಇದನ್ನು ಮಾಡುವ ಅಗತ್ಯ ಇತ್ತಾ ಶಾಸಕರೆನಿಸಿಕೊಂಡವರೇ ಎನ್ನುವುದು ಸದ್ಯದ ಪ್ರಶ್ನೆ.
ಆದರೂ ಮೈದಾನ ಬಳಸಲಾಯಿತು..
ಅದರ ಬಳಿಕ ಯಕ್ಷಗಾನದವರು ತಮಗೆ ಮೈದಾನ ಸಿಗುವುದಿಲ್ಲ ಎಂದು ಗೊತ್ತಾದ ತಕ್ಷಣ ಉರ್ವಾ ಮೈದಾನದ ಹೊರಗೆ ರಸ್ತೆಯಲ್ಲಿಯೇ ವೇದಿಕೆಯನ್ನು ಕಟ್ಟಿದರು. ಇದಕ್ಕೆ ಚುನಾವಣಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದರು. ಪೊಲೀಸ್ ಕಂಪ್ಲೇಂಟ್ ಸಲ್ಲಿಸಿದರು. ಅದರಿಂದ ಯಕ್ಷಗಾನಕ್ಕೆ ವೇದಿಕೆಯನ್ನು ಮೈದಾನದ ಹೊರಗಿನಿಂದ ತೆರವುಗೊಳಿಸಿ ಒಳಗೆ ಹಾಕಲಾಯಿತು. ಮೈದಾನದ ಒಳಗೆನೆ ಯಕ್ಷಗಾನ ಆಡಲಾಯಿತು. ಈಗ ಇನ್ನೊಂದು ಪ್ರಶ್ನೆ ಏನೆಂದರೆ ಮೈದಾನದಲ್ಲಿ ಯಕ್ಷಗಾನ ನಡೆಸಲು ಯಾವುದೇ ಅನುಮತಿ ಇಲ್ಲದೇ ಇದ್ದಾಗ ಹೇಗೆ ಆಡಿಸಲಾಯಿತು ಎನ್ನುವುದು ಮತ್ತು ಪಾಲಿಕೆಯಿಂದ ಮತ್ತು ಚುನಾವಣಾ ಆಯೋಗದಿಂದ ಮೈದಾನವನ್ನು ಬಳಸಲು ಯಾವುದೇ ಅನುಮತಿ ಇಲ್ಲದೆ ಇದ್ದಾಗ ಯಾರ ಭರವಸೆ ಮೇಲೆ ಅಲ್ಲಿ ಯಕ್ಷಗಾನ ಆಡಿಸಲಾಯಿತು ಎನ್ನುವುದನ್ನು ಲೋಬೋ ಅವರು ಹೇಳಬೇಕಾಗಿದೆ.
ಇಲ್ಲಿ ಗಮನಿಸಬೇಕಾದ ಮೂರು ಅಂಶಗಳಿವೆ. ಒಂದನೇಯದಾಗಿ ಹೈಕೋರ್ಟ್ ಸೂಚನೆಯ ನಂತರವೂ ನಿಯಮಗಳನ್ನು ಸಮರ್ಪಕವಾಗಿ ಪಾಲಿಸದೇ ಇರುವುದು. ಎರಡನೇಯದು ಸೀಲ್, ದಾಖಲೆ ಹೆಚ್ಚು ಕಡಿಮೆ ಮಾಡಿ ನಿಯಮ ಉಲ್ಲಂಘಿಸಿದ್ದು. ಮೂರನೇಯದ್ದು ಅನುಮತಿ ಇಲ್ಲದ ನಂತರವೂ ಮೈದಾನ ಬಳಸಲು ಮೌನ ಸಮ್ಮತಿ ಕೊಟ್ಟಿರುವುದು. ಬಹುಶ: ಚುನಾವಣೆಯ ಹೊತ್ತಿನಲ್ಲಿ ತಮ್ಮ ಸಮುದಾಯದವರನ್ನು ಎದುರು ಹಾಕಿಕೊಂಡರೂ ಪರವಾಗಿಲ್ಲ, ಅವರು ಹೇಗೂ ತನಗೆನೆ ವೋಟ್ ಹಾಕುವುದು ಅದರ ಬದಲು ನಿಯಮ ಉಲ್ಲಂಘಿಸಿಯಾದರೂ ಬೇರೆಯವರಿಗೆ ಫೆವರ್ ಮಾಡೋಣ ಎನ್ನುವ ಐಡಿಯಾ ಲೋಬೋ ಇತ್ತೋ ಏನೋ, ಸಿಕ್ಕಿಬಿದ್ದ ಕಾರಣ ಒಂದು ಪೋರ್ಜರಿ ಹೊರಗೆ ಬಂದಿದೆ. ಬರದೇ ಇರುವುದು ಎಷ್ಟಿದೆಯೋ!
Leave A Reply