ಮಂಗಳೂರಿನ ಆರ್ ಟಿಒದಲ್ಲಿ ‘ವಾಹನ್’ ಅಳವಡಿಸುವುದು ಯಾವಾಗ?
ಮಂಗಳೂರಿನಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಬರುವ ನಾಗರಿಕರು ತಮ್ಮ ಕೆಲಸ ಮಾಡಿಸಿಕೊಳ್ಳಲು ಪರದಾಡುತ್ತಿದ್ದಾರೆ ಎನ್ನುವ ದೂರು ಹಲವು ದಿನಗಳಿಂದ ಕೇಳಿಬರುತ್ತಿತ್ತು. ಉದ್ದುದ್ದ ಸರದಿ ಸಾಲು ಕರಗುತ್ತಲೇ ಇಲ್ಲ ಎನ್ನಲಾಗುತ್ತಿತ್ತು. ಕೆಲಸ ಮಾಡಲು ಸರಿಯಾದ ಸಿಬ್ಬಂದಿ ಮೊದಲೇ ಅಲ್ಲಿಲ್ಲ. ಅದರ ಮೇಲೆ ಇರುವ ಸಿಬ್ಬಂದಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮಾನಾಥ್ ರೈ ಅವರು ತಮ್ಮ ಸ್ವಕ್ಷೇತ್ರ ಬಂಟ್ವಾಳಕ್ಕೆ ಕರೆದುಕೊಂಡು ಹೋಗಿದ್ದಾರೆ. ಇದರಿಂದ ಮೊದಲೇ ಮಳೆಗೆ ಒದ್ದೆಯಾಗಿದ್ದ ಗುಬ್ಬಿಯನ್ನು ಗಿಡುಗ ಎತ್ತಿಕೊಂಡು ಹೋಯಿತು ಎನ್ನುವಂತಾಗಿದೆ ಆರ್ ಟಿಒ ಪರಿಸ್ಥಿತಿ. ಇನ್ನು ಆರ್ ಟಿಒ ದ ಇನ್ನಷ್ಟು ನಿಕೃಷ್ಟ ಪರಿಸ್ಥಿತಿಗೆ ಕಾರಣ ಆ ಸಾಫ್ಟ್ ವೇರ್.
ವಾಹನ್ ಸ್ಟಾಪ್ ವೇರ್ ಎಂದರೆ ಎನು?
ಆರ್ ಟಿಒದಲ್ಲಿ ವಾಹನ್ ಎನ್ನುವ ಹೊಸ ಸಾಫ್ಟ್ ವೇರ್ ಬಂದು ಕುಳಿತಿದೆ. ಕೇಂದ್ರ ಸರಕಾರದ ಪ್ರಕಾರ ಇದು ರಾಜ್ಯದಲ್ಲಿ ಆರು ತಿಂಗಳ ಮೊದಲೇ ಅನುಷ್ಟಾನಕ್ಕೆ ಬರಬೇಕಿತ್ತು. ಆದರೆ ಅವರು ಕಳುಹಿಸಿಕೊಟ್ರೂ ಇವರು ಅದನ್ನು ಕಂಪ್ಯೂಟರ್ ಗಳಿಗೆ ಅಳವಡಿಸಿಲ್ಲ. ಇದನ್ನು ಆದಷ್ಟು ಬೇಗ ಅಳವಡಿಸಿ ಜನಸಾಮಾನ್ಯರ ಆರ್ ಟಿಒ ಸಂಬಂಧಿತ ಕೆಲಸ ಶೀಘ್ರ ಮಾಡಿಕೊಳ್ಳಿ ಎಂದು ನಮ್ಮ ಶಾಸಕರಾಗಿದ್ದ ಜೆ ಆರ್ ಲೋಬೊ ಅವರು ಸೂಚನೆ ಕೊಡಬಹುದಿತ್ತು. ಅದರೆ ಇವರು ಶಿಲಾನ್ಯಾಸ, ಗುದ್ದಲಿ ಪೂಜೆ ಮಾಡುವುದರಲ್ಲಿ ಬಿಝಿಯಾಗಿದ್ದ ಕಾರಣ ಆ ಬಗ್ಗೆ ಯೋಚಿಸಲು ಹೋಗಲೇ ಇಲ್ಲ. ಆದ್ದರಿಂದ ವಾಹನ್ ಸಾಫ್ಟ್ ವೇರ್ ಹಾಗೆ ಧೂಳು ತಿನ್ನುತ್ತಾ ಕುಳಿತುಬಿಟ್ಟಿತು. ಇದು ಸರಿಯಾಗಿ ಜಾರಿಗೆ ಬಂದರೆ ಜನರಿಗೆ ತುಂಬಾ ಅನುಕೂಲವಾಗುತ್ತಿತ್ತು. ಮಧ್ಯವರ್ತಿ ಅಂದರೆ ಬ್ರೋಕರ್ ಗಳಿಗೆ ಅವಲಂಬಿಸಬೇಕಾಗಿರಲಿಲ್ಲ. ಅತ್ತ ರಮಾನಾಥ್ ರೈ ಅವರು ತಮ್ಮ ರಾಜಕೀಯ ಲಾಭಗಳಿಗಾಗಿ ಇಲ್ಲಿಂದ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗಿ ಇಲ್ಲಿನ ಆರ್ ಟಿಒ ಅನ್ನು ಸಂಕಷ್ಟಕ್ಕೆ ದೂಡಿದರಾದರೂ ಅವರು ಅಲ್ಲಿ ತೆರೆದಿರುವ ಆರ್ ಟಿಒ ಕೆಲಸ ಪ್ರಾರಂಭಿಸಲೇ ಇಲ್ಲ. ಕಾರಣ ಹೊಸ ಆರ್ ಟಿಒ ಕಚೇರಿ ಎಲ್ಲೇ ತೆರೆಯಲಿ ಅಲ್ಲಿ ವಾಹನ್ ಸಾಪ್ಟ್ ವೇರ್ ಅಳವಡಿಸಿಯೇ ಕೆಲಸ ಪ್ರಾರಂಭಿಸಬೇಕು. ಮಂಗಳೂರಿನ ಆರ್ ಟಿಒದಲ್ಲಿಯೇ ವಾಹನ್ ಇನ್ನೂ ಅಳವಡಿಸದೇ ಇರುವುದರಿಂದ ಬಂಟ್ವಾಳದಲ್ಲಿ ಅದನ್ನು ತೆಗೆದುಕೊಂಡು ಹೋಗುವ ಕಥೆಯೇ ಉದ್ಭವಿಸುವುದಿಲ್ಲ. ಆದ್ದರಿಂದ ಇಲ್ಲಿಯೂ ಜನರ ಕೆಲಸ ಆಗುತ್ತಿಲ್ಲ, ಅತ್ತ ಬಂಟ್ವಾಳ ಕೂಡ ನಾಮಕಾವಸ್ತೆ ಕಚೇರಿ ತೆರೆಯಲ್ಪಟ್ಟಿದೆ. ಇನ್ನು ಸುರತ್ಕಲ್ ನಲ್ಲಿ ತೆರೆಯಬೇಕಾಗಿದ್ದ ಆರ್ ಟಿಒ ಕಚೇರಿಯ ಕತೆಯಂತೂ ಅದು ಸುರತ್ಕಲ್ ಜನರಿಗೆ ಊಟಕ್ಕಿಲ್ಲದ ಉಪ್ಪಿನಕಾಯಿ ಬಡಿಸಿದಂತೆ ಆಗಿದೆ. ಮಂಗಳೂರಿನ ಆರ್ ಟಿಒದಲ್ಲಿ 44 ಸಿಬ್ಬಂದಿ ಅಂದರೆ ಲೆಕ್ಕಕ್ಕಿಂತ 50% ಕಡಿಮೆ ಸಿಬ್ಬಂದಿ ಇದ್ದಾರೆ. ಎಂಟು ಜನ ಬಂಟ್ವಾಳಕ್ಕೆ ಹೋಗಿರುವುದರಿಂದ ಎಷ್ಟಾಯಿತು ಎಂದು ನೀವೆ ಲೆಕ್ಕ ಹಾಕಿ. ಒಬ್ಬೊಬ್ಬರ ಡಿಎಲ್, ಎಲ್ ಎಲ್ ಆರ್ ಪ್ರಿಂಟ್ ಆಗಿ ಬರಬೇಕಾದರೆ ಮೂವತ್ತು ದಿನಗಳಾಗುತ್ತದೆ. ಇನ್ನು ರಿನಿವಲ್ ಮಾಡಲು ಮತ್ತಷ್ಟು ದಿನಗಳು ಬೇಕಾಗುತ್ತದೆ. ಕೇಳಿದರೆ ಸಿಬ್ಬಂದಿಗಳ ಕೊರತೆ ಎನ್ನುತ್ತಾರೆ. ನಮ್ಮ ಜನಪ್ರತಿನಿಧಿಗಳು ಆರ್ ಟಿಒ ಕಚೇರಿ ತೆರೆದು ತಮ್ಮ ಪ್ರಚಾರದ ಪತ್ರದಲ್ಲಿ ಮುದ್ರಿಸಲು ಆಸಕ್ತಿ ತೋರಿಸುತ್ತಾರೆ. ಅದೇ ಅಲ್ಲಿ ಸರಿಯಾಗಿ ಸಿಬ್ಬಂದಿ ಇದ್ದಾರಾ ಎಂದು ನೋಡಲು ಹೋಗುವುದಿಲ್ಲ.
ಸದ್ಯಕ್ಕೆ ಸಮಸ್ಯೆ ಮುಗಿಯಲ್ಲ…
ಇನ್ನು ವಾಹನ್ ಸಾಫ್ಟ್ ವೇರ್ ಅಳವಡಿಸಿ ಸಿಸ್ಟಮ್ ಅಪ್ ಗ್ರೇಡ್ ಮಾಡಲು ಕನಿಷ್ಟ ಒಂದು ವಾರ ಬೇಕು. ಆ ಸಮಯದಲ್ಲಿ ಆರ್ ಟಿಒ ಕೆಲಸ ಏನೂ ಆಗುವುದಿಲ್ಲ. ನಮ್ಮ ಆರ್ ಟಿಒದಲ್ಲಿ ಮೊದಲೇ ಸಿಬ್ಬಂದಿ ಕೊರತೆ ಇದೆ. ಇದರಿಂದ ಒಂದು ವಾರದೊಳಗೆ ಆಗಬೇಕಾದ ಅಪ್ ಗ್ರೇಡ್ ಒಂದು ತಿಂಗಳು ಆದರೂ ಆಗಿಲ್ಲ. ಸದ್ಯ ಭಾರೀ ಕಷ್ಟದಲ್ಲಿ ಎಲ್ ಎಲ್ ಆರ್ ಮತ್ತು ಡಿಎಲ್ ಮಾತ್ರ ಆಗುತ್ತಿದೆ. ಎಫ್ ಸಿ ಅಂದರೆ ಫಿಟ್ ನೆಸ್ ಸರ್ಟಿಫಿಕೇಟ್ ಕೂಡ ರಿನಿವಲ್ ಆಗುತ್ತಿಲ್ಲ. ಯಾವಾಗ ಗಾಡಿಗಳದ್ದು ಫಿಟ್ ನೆಸ್ ಧೃಡೀಕರಣ ಆಗುವುದಿಲ್ಲವೋ ಆಗ ಇನ್ಯೂರೆನ್ಸ್ ಕೂಡ ಕಟ್ಟಲು ಆಗುವುದಿಲ್ಲ. ಇನ್ನು ಪರ್ಮಿಟ್ ರಿನಿವಲ್ ಕೂಡ ಆಗುತ್ತಿಲ್ಲ. ಎಲ್ಲದಕ್ಕೂ ಆರ್ ಟಿಒದಲ್ಲಿ ದಿನ ದೂಡುತ್ತಾ ಟೈಮ್ ವೇಸ್ಟ್ ಮಾಡುತ್ತಿದ್ದಾರೆ. ಇನ್ನು ಹಣ ಕಟ್ಟಿ ಡಿಡಿ ತರಲು ಆರ್ ಟಿಒ ದಲ್ಲಿ ಹೇಳುತ್ತಾರೆ. ಆದರೆ ಡಿಡಿ ಫೋರ್ಜರಿ ಮಾಡಿ ಕೋಟಿಗಟ್ಟಲೆ ಹಣ ಗುಳಂ ಮಾಡಿದ ಪ್ರಕರಣ ಈಗಾಗಲೇ ಎಲ್ಲರಿಗೆ ಗೊತ್ತಿರುವ ವಿಚಾರ. ಇನ್ನು ಕಳೆದ ಐದು ವರ್ಷಗಳಲ್ಲಿ ಮಧ್ಯದ ಮೂರು ತಿಂಗಳು ಬಿಟ್ಟರೆ ಮಂಗಳೂರಿಗೆ ಪೂರ್ಣಕಾಲಿಕ ಆರ್ ಟಿಒ ಇಲ್ಲಿಯ ತನಕ ಸಿಕ್ಕಿಲ್ಲ. ಅಲ್ಲಿ ಯಾವಾಗ ನೋಡಿದರೂ ಇರುವುದು ಪ್ರಭಾರ ಅಧಿಕಾರಿ ಮಾತ್ರ. ಬ್ರೇಕ್ ಇನ್ಸಪೆಕ್ಟರ್ ಇಲ್ಲ. ಸೂಪರಿಟೆಂಡೆಟ್ ಇಲ್ಲ. ಸಿಬ್ಬಂದಿಯ ಕೊರತೆ ಜೊತೆ ಅಧಿಕಾರಿಗಳೇ ಇಲ್ಲದಿರುವುದು ನಮ್ಮ ಮಂಗಳೂರಿನ ಆರ್ ಟಿಒ ವೈಶಿಷ್ಟ್ಯ. ಹೇಳಲಿಕ್ಕೆ ಇದು ರಾಜ್ಯದ ಎರಡನೇ ಅತೀ ಹೆಚ್ಚು ಆದಾಯ ತರುವ ಆರ್ ಟಿಒ. ಎಲ್ಲದಕ್ಕೂ ಪಡೆದುಕೊಂಡು ಬಂದಿರಬೇಕು ಎನ್ನುತ್ತಾರಲ್ಲ, ಹಾಗೆ!
Leave A Reply