ನೂರು ಜನರ ಪ್ರಾಣ ಉಳಿಸಿ ತನ್ನ ಪ್ರಾಣವನ್ನೇ ಕಳೆದುಕೊಂಡ ವೀರಯೋಧನ ಜನ್ಮದಿನ ಇಂದು
ಜಮ್ಮು-ಕಾಶ್ಮೀರದಲ್ಲಿ ಸೈನಿಕರಿಗೆ ನಾಲ್ಕು ಸವಾಲುಗಳು ಹಿಂಡಿ ಹಿಪ್ಪೆ ಮಾಡುತ್ತವೆ. ಒಂದು ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿಸಬೇಕು, ಇನ್ನೊಂದು ಉಗ್ರರಿಮದ ಜನರ ಪ್ರಾಣ ರಕ್ಷಿಸಬೇಕು, ಮಗದೊಂದು ಮೈ ಕೊರೆಯುವ ಚಳಿಯನ್ನೂ ಎದುರಿಸಬೇಕು, ಕೊನೆಗೆ ಇಷ್ಟೆಲ್ಲ ಮಾಡಿ ತಮ್ಮ ಪ್ರಾಣ ಉಳಿಸಿಕೊಳ್ಳಬೇಕು.
ಹೀಗೆ ನಾಲ್ಕೂ ವಿಧದಲ್ಲಿ ಅಪರೂಪಕ್ಕೆ ಜಮ್ಮು-ಕಾಶ್ಮೀರದಲ್ಲಿ ಸೈನಿಕರು ಯಶಸ್ಸು ಕಾಣುತ್ತಾರೆ. ಆದರೆ ಆ ವೀರಯೋಧ ಮಾತ್ರ ಈ ನಾಲ್ಕೂ ಸವಾಲುಗಳನ್ನು ಎದುರಿಸಿದ. ಕೊನೆಗೆ ಒಂದರಲ್ಲಿ ಹಿನ್ನಡೆ ಅನುಭವಿಸಿ ನಮ್ಮ ಮನದಲ್ಲಿ ಅಮರನಾಗಿ ಉಳಿಯುವ ಮೂಲಕ ನಾಲ್ಕನ್ನೂ ಸಾಧಿಸಿದ ವೀರಯೋಧ ಎನಿಸಿದ.
ಆ ವೀರಯೋಧನ ಹೆಸರು ಕ್ಯಾಪ್ಟನ್ ತುಷಾರ್ ಮಹಾಜನ್ ಅಂತ. 2016ರಲ್ಲಿ ಜಮ್ಮು-ಕಾಶ್ಮೀರದ ಉದ್ಯಮ ಅಭಿವೃದ್ಧಿ ಸಂಸ್ಥೆ (ಇಡಿಐ) ಮೇಲೆ ಉಗ್ರರು ಮಾಡಿದ ದಾಳಿಯನ್ನು ಪ್ರಾಯಶಃ ಯಾರೂ ಮರೆತಿರಲಿಕ್ಕಿಲ್ಲ. 2010ರಲ್ಲಿ ಸೇನೆ ಸೇರಿದರೂ ತುಷಾರ್ ಜಮ್ಮು-ಕಾಶ್ಮೀರ ಗಡಿ ಸೇರಿದ್ದು 2016ರಲ್ಲಿ. ಅಂದರೆ ದಾಳಿ ನಡೆಯುವ ವರ್ಷದಲ್ಲಿ.
ಹೀಗೆ ದಾಳಿ ನಡೆಯುತ್ತಲೇ ತುಷಾರ್ ಮಹಾಜನ್ ಅವರಿಗೆ ದಾಳಿಯ ಮುಂದಾಳತ್ವ ನೀಡಲಾಯಿತು. ಫೆ.20, 2016ರಂದು ನಡೆದ ದಾಳಿ ನೂರಕ್ಕೂ ಅಧಿಕ ಜನರ ಪ್ರಾಣಕ್ಕೇ ಕುತ್ತು ತಂದಿತು. ನಮ್ಮ ವೀರಯೋಧರು ಆ ಬಹುಮಹಡಿ ಕಟ್ಟಡ ಸುತ್ತುವರಿದರು. ಉಗ್ರರ ದಾಳಿಗೆ ಪ್ರತಿದಾಳಿ ನಡೆಸಿದರು.
ಕೊನೆಗೂ ತುಷಾರ್ ಮಹಾಜನ್ ನೇತೃತ್ವದಲ್ಲಿ ನಮ್ಮ ಭದ್ರತಾ ಸಿಬ್ಬಂದಿ ಕಟ್ಟಡದಲ್ಲಿದ್ದ ನೂರಕ್ಕೂ ಅಧಿಕ ಜನರನ್ನು ಸ್ಥಳಾಂತರಿಸುವಲ್ಲಿ ಯಶಸ್ವಿಯಾದರು. ಆದರೆ ಅಂದು ನಡೆದ ಗುಂಡಿನ ದಾಳಿಯಲ್ಲಿ ತುಷಾರ್ ಗಾಯಗೊಂಡರು. ಕೊನೆಗೆ ದೇಶಕ್ಕಾಗಿ ಮಾಡುವ ಗರಿಷ್ಠ ತ್ಯಾಗವಾದ ಪ್ರಾಣವನ್ನೂ ನೂರು ಜನರ ರಕ್ಷಣೆಗಾಗಿ ಸಮರ್ಪಿಸಿದರು. ಆ ಮೂಲಕ ಯೋಧನಾಗಿ ನಮ್ಮ ಮನದಲ್ಲಿ ಅಮರರಾಗಿಬಿಟ್ಟರು.
ಜಮ್ಮು-ಕಾಶ್ಮೀರದ ಪ್ರತಿಷ್ಠಿತ ಶೈಕ್ಷಣಿಕ ತಜ್ಞ ದೇವರಾಜ್ ಗುಪ್ತ ಅವರ ಮುದ್ದಿನ ಮಗನಾಗಿ ಜನಿಸಿದ ತುಷಾರ್ ಮಹಾಜನ್, ತಮ್ಮ ಪೋಷಕರಿಗೆ ತಾವು ಎಂಜಿನಿಯರ್ ಆಗುವ ಕನಸಿತ್ತು ಎಂಬುದನ್ನು ಮನಗಂಡಿದ್ದ. ಆದರೂ ಬಾಲ್ಯದಲ್ಲಿದ್ದ ಸೇನೆ ಸೇರಬೇಕು ಎಂಬ ಕನಸಿಗೆ ನೀರೆರೆದು ರಾಷ್ಟ್ರೀಯ ಭದ್ರತಾ ಅಕಾಡೆಮಿ ಸೇರಿದ. ಆದರೆ ಮದುವೆಯೂ ಆಗದ ಆತ ದೇಶಕ್ಕಾಗಿ ಸರ್ವಶ್ರೇಷ್ಠ ತ್ಯಾಗ ಮಾಡಿದ.
(so jaegi kal lipatkar tirange ke sath, yeh deshbhakti hai sahab, tarikhon per jagti hai) ನನ್ನ ದೇಶಪ್ರೇಮ ಈಗ ಭಾರತದ ತ್ರಿವರ್ಣ ಧ್ವಜ ಹೊದ್ದುಕೊಂಡು ಮಲಗಿರಬಹುದು. ಆದರೆ ಅದು ಸಂದರ್ಭಕ್ಕನುಸಾರವಾಗಿ ಧುತ್ತನೆ ಎದ್ದು ಕುಳಿತುಬಿಡುತ್ತದೆ ಎಂಬುದು 2017ರ ಜನವರಿ 26ರಂದು ತುಷಾರ್ ಮಹಾಜನ್ ವಾಟ್ಸ್ ಆ್ಯಪ್ ಸ್ಟೇಟಸ್ ಆಗಿತ್ತು. ಅಂದು ಭಾರತ ಸರ್ಕಾರ ಈ ವೀರಯೋಧನಿಗೆ ಮರಣೋತ್ತರವಾಗಿ ಶೌರ್ಯ ಚಕ್ರ ಪ್ರಶಸ್ತಿ ನೀಡಿತ್ತು. ಇಂತಹ ವೀರಯೋಧನಿಗೆ ಜನ್ಮದಿನದ ಶುಭಾಶಯ ಹೇಳಬೇಕು. ನಮ್ಮ ಮನದಲ್ಲಾದರೂ!
Leave A Reply