ವೇದವ್ಯಾಸ ಕಾಮತ್ ಹಾಗೂ ಭರತ್ ಶೆಟ್ಟಿ ಮಾಡಬೇಕಿರುವ ಮೊದಲ ಕೆಲಸಗಳು!!
ನಿನ್ನೆಗೆ ಭರ್ತಿ ಮೂರು ವರ್ಷ. ನಾನು ಫೇಸ್ ಬುಕ್ಕಿನಲ್ಲಿ ಜಾಗೃತಿ ಸರಣಿ ಲೇಖನವನ್ನು ಬರೆಯಲು ಶುರು ಮಾಡಿ ಮೇ 15, 2018 ಕ್ಕೆ ಮೂರು ವರ್ಷ ಕಂಪ್ಲೀಟ್ ಆಯಿತು. ಸಮಾಜದ ಅಂಕುಡೊಂಕುಗಳನ್ನು, ಜನಸಾಮಾನ್ಯರಿಗೆ ಸರಕಾರಿ ವ್ಯವಸ್ಥೆಯಿಂದ ಆಗುವ ತೊಂದರೆಗಳನ್ನು ಸರಿಪಡಿಸಲು ಪ್ರಯತ್ನಿಸುವ ಈ ಸರಣಿ ಅಂಕಣಗಳು ಹೀಗೆ ಮುಂದುವರೆಯಲಿವೆ. ಮಂಗಳೂರು ನಗರ ದಕ್ಷಿಣಕ್ಕೆ ಹೊಸ ಶಾಸಕರಾಗಿ ಡಿ ವೇದವ್ಯಾಸ ಕಾಮತ್ ಹಾಗೂ ಮಂಗಳೂರು ನಗರ ಉತ್ತರಕ್ಕೆ ಡಾ| ಭರತ್ ಶೆಟ್ಟಿ ಬಂದಿದ್ದಾರೆ. ಎರಡೂ ಕ್ಷೇತ್ರಗಳು ಹೊಸ ಉತ್ಸಾಹಿ ಯುವಕರ ಕೈಯಲ್ಲಿವೆ. ಮಂಗಳೂರು ಮಹಾನಗರ ಪಾಲಿಕೆಯ ಅರವತ್ತು ವಾರ್ಡುಗಳು ಈ ಎರಡು ಕ್ಷೇತ್ರಗಳಲ್ಲಿ ಹಂಚಿ ಹೋಗಿವೆ. 60 ರಲ್ಲಿ 38 ವಾರ್ಡ್ ಗಳು ಮಂಗಳೂರು ನಗರ ದಕ್ಷಿಣದಲ್ಲಿವೆ. ಎರಡು ಕ್ಷೇತ್ರಗಳ ಶಾಸಕರು ಅಧಿಕಾರ ಸ್ವೀಕರಿಸಿದ ತಕ್ಷಣ ಮಾಡಬೇಕಾದ ಕೆಲವು ಕೆಲಸಗಳನ್ನು ಈಗ ನೋಡೋಣ.
ಪಾಲಿಕೆಯ ಕೆಲಸಗಳಿಗೆ ಟೈಮ್ ಲಿಮಿಟ್…
ಮೊತ್ತ ಮೊದಲಿಗೆ ಆಗಬೇಕಾದದ್ದು ಪಾಲಿಕೆಯಲ್ಲಿ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಸಲು ಬರುವ ನಾಗರಿಕರನ್ನು ನಾಳೆ ಬನ್ನಿ, ನಾಡಿದ್ದು ಬನ್ನಿ, ಒಂದು ವಾರ ಬಿಟ್ಟು ಬನ್ನಿ ಎಂದು ಸತಾಯಿಸುವುದು ನಿಲ್ಲಿಸಬೇಕು. ಉದಾಹರಣೆಗೆ: ನಿಮ್ಮ ಮನೆಯ ನೀರಿನ ಬಿಲ್ ಪ್ರತಿ ತಿಂಗಳು 65 ರೂಪಾಯಿ ಬರುತ್ತದೆ ಎಂದು ಇಟ್ಟುಕೊಳ್ಳೋಣ. ಒಂದು ತಿಂಗಳು ಅಕಸ್ಮಾತ್ ಆಗಿ 650 ಎಂದು ಬಿಲ್ ಬಂದಿರುತ್ತದೆ. ನಿಮಗೆ ಟೆನ್ಷನ್ ಆಗುತ್ತದೆ. ನೀವು ಶಕ್ತಿನಗರದ ಆಶ್ರಯ ಕಾಲೋನಿಯಿಂದ ಮಂಗಳೂರು ಮಹಾನಗರ ಪಾಲಿಕೆಗೆ ಬರುತ್ತೀರಿ. ಅಲ್ಲಿ ಮನವಿ ಕೊಡುತ್ತೀರಿ. ಆಗ ಪಾಲಿಕೆಯ ಸಿಬ್ಬಂದಿಗಳು ಏನು ಮಾಡಬೇಕು ಎಂದರೆ ಅರ್ಜಿಯಲ್ಲಿ ಆ ನಾಗರಿಕನ ಫೋನ್ ನಂಬ್ರ ತೆಗೆದುಕೊಳ್ಳಬೇಕು. ಆ ನಾಗರಿಕನ ಕೆಲಸ ಆದ ಕೂಡಲೇ ಆತನ ಮೊಬೈಲಿಗೆ ನಿಮ್ಮ ಕೆಲಸ ಆಗಿದೆ ಎನ್ನುವ ಸಂದೇಶ ಕಳುಹಿಸಿಕೊಡಬೇಕು. ಆಗ ಆ ವ್ಯಕ್ತಿಗೆ ಸಮಾಧಾನವಾಗುತ್ತದೆ. ಒಂದು ವೇಳೆ ಸಾಧ್ಯವಾದರೆ ಆ ನಾಗರಿಕನಿಗೆ ಫೋನ್ ಮಾಡಿ ನಿಮ್ಮ ಕೆಲಸ ಆಗಿದೆ ಎಂದು ವಿಷಯ ತಲುಪಿಸಬೇಕು. ಸರಕಾರಿ ಕಚೇರಿಗಳಲ್ಲಿ ಹೀಗೆ ಶಿಸ್ತುಬದ್ಧವಾಗಿ ಕೆಲಸಗಳು ಪ್ರಾರಂಭವಾದರೆ ಆಗ ಸಾರ್ವಜನಿಕರು ನೆಮ್ಮದಿಯ ವಾತಾವರಣದಲ್ಲಿ ಇರುತ್ತಾರೆ. ಅದು ಬಿಟ್ಟು ಒಮ್ಮೆ ಮನವಿ ಕೊಡಲು ಬರುವಾಗಲೇ ಬಂದ ವ್ಯಕ್ತಿಗೆ ಅರ್ಧ ದಿನ ವೇಸ್ಟ್ ಆಗಿರುತ್ತದೆ. ಒಂದು ವಾರ ಬಿಟ್ಟು ಮತ್ತೆ ಪುನ: ಬರುವುದೆಂದರೆ ಇನ್ನರ್ಧ ದಿನ ವೇಸ್ಟ್ ಆಗುತ್ತದೆ. ಹೀಗೆ ಪ್ರತಿಯೊಬ್ಬ ಸಾರ್ವಜನಿಕರು ಪಾಲಿಕೆಯಲ್ಲಿ ತಮ್ಮ ಕೆಲಸ ಮಾಡಿಸಿಕೊಳ್ಳಲು ದಿನ ವೇಸ್ಟ್ ಮಾಡಿಕೊಳ್ಳುತ್ತಾ ಹೋಗುವ ವ್ಯವಸ್ಥೆ ನಿಲ್ಲಬೇಕು. ಅಂದರೆ ಪಾಲಿಕೆಯಲ್ಲಿ ನಾಗರಿಕರ ಪ್ರತಿಯೊಂದು ಕೆಲಸಕ್ಕೂ ಟೈಮ್ ಲಿಮಿಟ್ ಮಾಡಬೇಕು. ಇಂತಿಂತಹ ಕೆಲಸ ಇಷ್ಟಿಷ್ಟೇ ದಿನಗಳ ಒಳಗೆ ಮುಗಿಸಿ ಕೊಡುತ್ತೇವೆ ಎಂದು ಪಾಲಿಕೆಯಲ್ಲಿ ಆದೇಶ ಬರಬೇಕು. ಬೇಕಾದರೆ ಅಲ್ಲೊಂದು ಬೋರ್ಡ್ ಮಾಡಿ ಹಾಕಿದ್ದರೆ ಒಳ್ಳೆಯದು. ಉದಾಹರಣೆಗೆ ಒಂದು ಮನೆಗೆ ನೀರಿನ ಸಂಪರ್ಕ ಆಗಬೇಕು ಎಂದರೆ ಅದೇನೋ ಸರಕಾರ ರಚನೆ ಮಾಡುವಷ್ಟು ದೊಡ್ಡ ವಿಷಯವಲ್ಲ. “ಇವತ್ತು ಬುಧವಾರ ನೀವು ಅರ್ಜಿ ಕೊಟ್ಟಿದ್ದಿರಿ. ಶನಿವಾರ ಬೆಳಿಗ್ಗೆ ನೀರಿನ ಸಂಪರ್ಕ ಆಗಿ ಮಧ್ಯಾಹ್ನದೊಳಗೆ ನಿಮ್ಮ ಮನೆಗೆ ನೀರು ಬರುತ್ತದೆ” ಎಂದು ಪಾಲಿಕೆಯಲ್ಲಿ ಉತ್ತರ ಬಂದರೆ ಅರ್ಜಿ ತೆಗೆದುಕೊಂಡು ಬಂದ ವ್ಯಕ್ತಿಗೆ ಎಷ್ಟು ಖುಷಿಯಾಗುತ್ತದೆ, ನೀವೆ ಯೋಚಿಸಿ.
ಖಾಲಿ ಬಿದ್ದಿರುವ ಹುದ್ದೆಗಳಿಗೆ ಭರ್ತಿ…
ಈ ಕೆಲಸ ಸಲೀಸಾಗಿ ಮಾಡಬೇಕಾದರೆ ಪಾಲಿಕೆಯಲ್ಲಿ ಖಾಲಿ ಬಿದ್ದಿರುವ ಅನೇಕ ಹುದ್ದೆಗಳನ್ನು ತುಂಬುವ ಕೆಲಸ ಮೊದಲು ಮಾಡಿದರೆ ಒಳ್ಳೆಯದು. ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಶಾಸಕರು ಪಾಲಿಕೆಯಲ್ಲಿ ಕುಳಿತು ಯಾವೆಲ್ಲ ಪೋಸ್ಟ್ ಗಳು ಅಂದರೆ ಹುದ್ದೆಗಳು ಪಾಲಿಕೆಯಲ್ಲಿ ಖಾಲಿ ಬಿದ್ದಿವೆ ಎನ್ನುವುದರ ಪಟ್ಟಿ ಮಾಡಬೇಕು. ಎಲ್ಲ ಹುದ್ದೆಗಳನ್ನು ಮುಂದಿನ ವಾರವೇ ಭರ್ತಿ ಮಾಡಬೇಕು ಎಂದು ನಾನು ಹೇಳುವುದಿಲ್ಲ. ಅದು ಸಾಧ್ಯವೂ ಇಲ್ಲ. ಉದಾಹರಣೆಗೆ ಹತ್ತು ಹುದ್ದೆಗಳು ಖಾಲಿ ಇದ್ದರೆ ಪ್ರಾರಂಭಿಕ ಹಂತದಲ್ಲಿ ಒಂದೆರಡು ಹೀಗೆ ಕ್ರಮೇಣ ಆದಷ್ಟು ಶೀಘ್ರದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಬೇಕು. ಇನ್ನು ಸರಕಾರಿ ಕಚೇರಿಗಳಲ್ಲಿಯೂ ಪ್ರಮುಖ ಹುದ್ದೆಗಳು ಖಾಲಿ ಇವೆ. ಉದಾಹರಣೆಗೆ ಪ್ರಾದೇಶಿಕ ಸಾರಿಗೆ ಕಚೇರಿ ಅಂದರೆ ಆರ್ ಟಿಒ ಅಲ್ಲಿ ಪೂರ್ಣಕಾಲಿಕ ಆರ್ ಟಿಒ ಇಲ್ಲದೇ ಕಚೇರಿ ಒದ್ದಾಡುತ್ತಿದೆ. ಅದನ್ನು ಸರಿಮಾಡಬೇಕು.
ಬೇರುಬಿಟ್ಟಿರುವವರನ್ನು ಎಬ್ಬಿಸಿ…
ಮೂರನೇಯದಾಗಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಒಂದೇ ವಿಭಾಗ, ಒಂದೇ ಹುದ್ದೆಯಲ್ಲಿ ಬೇರು ಬಿಟ್ಟಿರುವ ಅನೇಕರು ಇದ್ದಾರೆ. ಅವರನ್ನು ಆಯಾ ವಿಭಾಗಗಳಿಂದ ವರ್ಗಾಯಿಸುವ ಪ್ರಕ್ರಿಯೆ ಶುರು ಮಾಡಬೇಕು. ಜ್ಯೂನಿಯರ್ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್, ಎಕ್ಸಿಕ್ಯೂಟಿವ್ ಇಂಜಿನಿಯರ್ಸ್ ಗಳು ನಗರ ಯೋಜನಾ ವಿಭಾಗದವರೊಂದಿಗೆ, ಹಾಗೆ ಪಾಲಿಕೆಯ ಗುತ್ತಿಗೆದಾರರು ಬಿಲ್ಡರ್ ಗಳೊಂದಿಗೆ, ರೆವಿನ್ಯೂ ವಿಭಾಗದವರು ಬ್ರೋಕರ್ಸ್ ಗಳೊಂದಿಗೆ ಅಪವಿತ್ರ ಮೈತ್ರಿಕೊಂಡು ಜನರ ತೆರಿಗೆಯ ಹಣ ನುಂಗಿ ಆರಾಮವಾಗಿದ್ದಾರೆ. ಆದ್ದರಿಂದ ಅಂತವರನ್ನು ಶೀಫ್ಟ್ ಮಾಡುವ ಕೆಲಸ ನಡೆಯಬೇಕು. ಒಂದು ವೇಳೆ ಒಬ್ಬ ಅಧಿಕಾರಿ ಅಥವಾ ಸಿಬ್ಬಂದಿ ಜನರಿಗೆ ಉಪಕಾರ ಮಾಡುತ್ತಾ ಅವರ ವಿಶ್ವಾಸಗಳಿಸಿದ್ದಾರೆ ಎಂದಾದರೆ ಅವರು ಇದ್ದ ಕಡೆಯಲ್ಲಿಯೇ ಇರಲಿ, ತೊಂದರೆ ಇಲ್ಲ, ಉಳಿದವರಿಗೆ ಗಂಟು ಮೂಟೆ ಕಟ್ಟಲು ಹೇಳಬೇಕು!
Leave A Reply