ಕಳಪೆ ಕಾಮಗಾರಿಗೆ ಕೈ ಜೋಡಿಸುವವರಿಗೆ ಬಿಸಿ ಮುಟ್ಟಿಸುವ ಜವಾಬ್ದಾರಿ ಹೊಸ ಶಾಸಕರುಗಳ ಮೇಲಿದೆ
ಕರಾವಳಿಯಲ್ಲಿ ಗೆದ್ದಿರುವ ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಅಭಿವೃದ್ಧಿ ಮಾಡುವಾಗ ಮೊದಲು ಒಂದು ಕಣ್ಣು ಇಂಜಿನಿಯರ್ಸ್ ಮತ್ತು ಗುತ್ತಿಗೆದಾರರ ಮೇಲೆ ಇಡಬೇಕು. ಜನರ ತೆರಿಗೆಯನ್ನು ಪೋಲು ಮಾಡಲು ಹಿಂದೆ ಮುಂದೆ ನೋಡದ ಸರಕಾರಿ ಅಧಿಕಾರಿಗಳು, ಇಂಜಿನಿಯರ್ಸ್, ಗುತ್ತಿಗೆದಾರರ ನಡುವಿನ ಅಪವಿತ್ರ ಮೈತ್ರಿ ಮುರಿಯುವ ಕೆಲಸ ಮಾಡಬೇಕು. ಅದು ಯಾವುದೇ ಇಲಾಖೆ ಇರಲಿ, ಉದಾಹರಣೆಗೆ ಲೋಕೋಪಯೋಗಿ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ, ಜಿಲ್ಲಾ ಪಂಚಾಯತ್ ವತಿಯಿಂದ ಒಂದು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಇಟ್ಟುಕೊಳ್ಳೋಣ. ಆಗ ಆ ಕಾಮಗಾರಿಗೆ ಎಷ್ಟು ವೆಚ್ಚವಾಗುತ್ತೋ ಅದಕ್ಕಿಂತಲೂ ಹೆಚ್ಚಿನ ಎಸ್ಟೀಮೇಟ್ ಅನ್ನು ಅಧಿಕಾರಿಗಳು ಮಾಡುತ್ತಾರೆ. ಮಂಗಳೂರು ನಗರದ ಮುಖ್ಯರಸ್ತೆಯೊಂದನ್ನು ಕಾಂಕ್ರೀಟಿಕರಣ ಮಾಡಬೇಕಾದರೆ ಅದಕ್ಕೆ ಎಂ-40 ಕಾಂಕ್ರೀಟ್ ಮಿಕ್ಸ್ ಹಾಕಬೇಕು ಎನ್ನುವ ನಿಯಮವಿದೆ. ಅದರೆ ಈಗ ಹಿಂದಿನ ಹಾಗೆ ಇಲ್ಲ. ರೆಡಿಮಿಕ್ಸ್ ಮಾಡಿ ಕಾಂಕ್ರೀಟಿಕರಣ ಮಾಡುವುದರಿಂದ ಗುತ್ತಿಗೆದಾರರು ರೆಡಿಮಿಕ್ಸ್ ಮಾಡುವವರಿಗೆ ಹೇಗೆ ಹೇಳುತ್ತಾರೋ ಹಾಗೆ ಮಾಡಿಕೊಡುತ್ತಾರೆ. ಆದರೆ ಎಸ್ಟೀಮೇಟ್ ಮಾಡುವಾಗ ದಾಖಲೆಯಲ್ಲಿ ಎಂ-40 ಎಂದೇ ಬರೆದಿರಲಾಗುತ್ತದೆ. ಆದರೆ ಅನುಷ್ಟಾನಕ್ಕೆ ತರುವಾಗ ಎಂ-40 ನಿಯಮ ಪಾಲಿಸಲಾಗಿದೆಯಾ ಎಂದು ಸರಕಾರಿ ಇಂಜಿನಿಯರ್ಸ್ ನೋಡಲು ಹೋಗುವುದಿಲ್ಲ. ಇದರಿಂದ 40 ವರ್ಷ ಬಾಳ್ವಿಕೆ ಬರಬೇಕಾದ ಕಾಂಕ್ರೀಟ್ ರಸ್ತೆಗಳು ಕೆಲವೇ ವರ್ಷಗಳಲ್ಲಿ ಪ್ರಾಣ ಬಿಡುವ ಹಂತಕ್ಕೆ ಬರುತ್ತದೆ. ಇನ್ನು ಹೆವಿ ವೆಹಿಕಲ್ ಹೋಗದ ರಸ್ತೆಗಳಲ್ಲಿ ಎಂ-30 ಆದರೂ ಹಾಕಲೇಬೇಕು. ಆದರೆ ಈ ಗುತ್ತಿಗೆದಾರರು ತಮ್ಮ ಲಾಭ ಹೆಚ್ಚಿಸಲು ಕಳಪೆ ಕಾಮಗಾರಿ ಮಾಡಲು ಹಿಂದೇಟು ಹಾಕುವುದಿಲ್ಲ. ಇನ್ನು ಕಾಂಕ್ರೀಟ್ ರಸ್ತೆ ಮಾಡುವಾಗ ಮೊದಲು ಕೆಳಗೆ ಬೆಡ್ ತರಹದ ವ್ಯವಸ್ಥೆ ಮಾಡುತ್ತಾರೆ. ಅದು ಕನಿಷ್ಟ 15 ರಿಂದ 20 ಸೆಂಟಿ ಮೀಟರ್ ಮಾಡಲೇಬೇಕು. ಆದರೆ ಗುತ್ತಿಗೆದಾರ ಮಾಡುವುದಿಲ್ಲ. ಆದರಿಂದ ಬೆಡ್ ಮೇಲೆ ಕಾಂಕ್ರೀಟ್ ಮಿಕ್ಸ್ ಸುರಿದು ಕೆಲಸ ಮುಗಿಸುವಾಗ ಕೆಳಗಿನ ಬೆಡ್ ಯಾರಿಗೆ ತಾನೇ ಕಾಣಿಸುತ್ತದೆ. ಅದರಿಂದ ಕಾಂಕ್ರೀಟ್ ರಸ್ತೆಗಳು ಬೇಗ ಬಿರುಕು ಬಿಡುತ್ತದೆ. ಎಂಜಿ ರಸ್ತೆ, ಪಿವಿಎಸ್, ಬಂಟ್ಸ್ ಹಾಸ್ಟೆಲ್ ರಸ್ತೆಗಳು ಕಾಂಕ್ರೀಟಿಕರಣ ಮಾಡುವಾಗ ಮ್ಯಾನುವಲ್ ಆಗಿ ಕೆಲಸ ನಡೆಯುತ್ತಿತ್ತು. ಈಗ ರೆಡಿಮಿಕ್ಸ್. ಆದ್ದರಿಂದ ಎಲ್ಲಿಯಾದರೂ ಕಳಪೆ ಕಾಂಕ್ರೀಟಿಕರಣ ಆದರೆ ಆ ಕೆಲಸ ಮಾಡಿದ ಜ್ಯೂನಿಯರ್ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್ ಮತ್ತು ಎಕ್ಸಿಕ್ಯೂಟಿವ್ ಇಂಜಿನಿಯರ್ಸ್ ಗಳ ಮೇಲೆ ಕ್ರಮ ತೆಗೆದುಕೊಳ್ಳಲು ಪಾಲಿಕೆಯ ಕಮೀಷನರ್ ಅವರಿಗೆ ಶಾಸಕರು ಸೂಚನೆ ಕೊಡಬೇಕು.
ಇಬ್ಬರಿಗೆ ಬಿಸಿ ಮುಟ್ಟಿಸಿದರೆ ಉಳಿದವರಿಗೆ..
ಪಾಲಿಕೆಯ ಕಮೀಷನರ್ ಅವರು “ಕಳಪೆ ಕಾಮಗಾರಿ ಮಾಡಲು ಗುತ್ತಿಗೆದಾರರೊಂದಿಗೆ ಕೈ ಜೋಡಿಸಿದ ಕಾರಣಕ್ಕೆ ಇಂಜಿನಿಯರ್ ಗಳನ್ನು ಅಮಾನತುಗೊಳಿಸಿದರೆ” ನಂತರ ಬೇರೆ ಯಾರಿಗೂ ಕಳಪೆ ಕಾಮಗಾರಿ ಮಾಡಲು ಧೈರ್ಯ ಬರುವುದಿಲ್ಲ. ಇನ್ನು ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರಿಂದಲೇ ಆ ಕಳಪೆ ರಸ್ತೆಯನ್ನು ಸರಿ ಮಾಡಬೇಕು ಅಥವಾ ಅವರಿಗೆ ಕೊಡುವ ಹಣದಲ್ಲಿ ಕಟ್ ಮಾಡಿ ಕೊಡಬೇಕು. ಎರಡನೇ ಬಾರಿ ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರನ್ನು ಬ್ಲ್ಯಾಕ್ ಲಿಸ್ಟ್ ನಲ್ಲಿ ಸೇರಿಸಬೇಕು. ಇದೇ ನಿಯಮ ರಸ್ತೆ ಡಾಮರೀಕರಣಕ್ಕೂ ಅನ್ವಯಿಸುತ್ತದೆ. ಒಂದು ರಸ್ತೆಗೆ ಡಾಮರು ಹಾಕಿದ ಎರಡು ವರ್ಷಗಳ ತನಕ ಅದನ್ನು ನಿರ್ವಹಣೆ ಮಾಡುವ ಜವಾಬ್ದಾರಿ ಆ ಗುತ್ತಿಗೆದಾರರ ಮೇಲೆನೆ ಇರುತ್ತದೆ. ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರ ಎರಡು ವರ್ಷಗಳ ಒಳಗೆ ಆ ರಸ್ತೆಯಲ್ಲಿ ಹೊಂಡ ಬಿದ್ದರೆ ಅತ್ತ ಕಡೆ ತಲೆ ಹಾಕಿ ಕೂಡ ಮಲಗುವುದಿಲ್ಲ. ಪಾಲಿಕೆ ಏನು ಮಾಡುತ್ತದೆ ಎಂದರೆ ಪ್ಯಾಚ್ ವರ್ಕ್ ಎನ್ನುವ ಹೆಸರಿನಲ್ಲಿ ಒಂದಿಷ್ಟು ಲಕ್ಷ ರೂಪಾಯಿಗಳನ್ನು ರಿಲೀಸ್ ಮಾಡಿ ಕೆಲಸ ಮಾಡಿಸುತ್ತದೆ. ಇದು ನಿಲ್ಲಬೇಕು. ಅದರ ಬದಲು ಶಾಸಕರು ಡಾಮರುಗೊಂಡ ರಸ್ತೆಗೆ ಎರಡು ವರ್ಷ ಆಗದೇ ಇದ್ದಲ್ಲಿ ಅದೇ ಗುತ್ತಿಗೆದಾರನಿಗೆ ಕರೆದು ಸರಿ ಮಾಡಿಕೊಡಲು ಸೂಚಿಸಬೇಕು.
ಸಮಯ ಪರಿಪಾಲನೆ ಮುಖ್ಯ.
ಇನ್ನು ಸಮಯ ಪರಿಪಾಲನೆ. ಸರಕಾರಿ ಕಚೇರಿಗಳಲ್ಲಿ ಬೆಳಿಗ್ಗೆ ಸರಿಯಾಗಿ ಹತ್ತು ಗಂಟೆಯ ಒಳಗೆ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಬೇಕೆನ್ನುವ ಕಟ್ಟುನಿಟ್ಟಿನ ಸೂಚನೆ ಶಾಸಕರುಗಳು ಕೊಡಬೇಕು. ಒಂದು ವೇಳೆ ಯಾವುದೇ ಅಧಿಕಾರಿ ಬೆಳಿಗ್ಗೆ ಫೀಲ್ಡಿನಲ್ಲಿ ಇದ್ದರೆ ಮಧ್ಯಾಹ್ನ 3.30 ರಿಂದ 5.30 ರ ತನಕ ತಮ್ಮ ವಿಭಾಗದ ಕಚೇರಿಯಲ್ಲಿ ಇರಲೇಬೇಕು ಎನ್ನುವ ನಿಯಮ ಇರಬೇಕು. ಆ ಸಮಯದಲ್ಲಿ ಬೇರೆ ಯಾವುದೇ ರೀತಿಯ ಮೀಟಿಂಗ್ ಗಳನ್ನು ಕಮೀಷನರ್ ಅವರು ಇಟ್ಟುಕೊಳ್ಳಬಾರದು. ಮೀಟಿಂಗ್ ಏನೇ ಇದ್ದರೂ ಅದು ಬೆಳಗ್ಗೆನೆ ಇಟ್ಟು ಮುಗಿಸಬೇಕು. ಕೆಲವೊಮ್ಮೆ ಜಿಲ್ಲಾಧಿಕಾರಿ/ಸಚಿವ/ರಾಜ್ಯ ಕಾರ್ಯದರ್ಶಿಗಳೊಂದಿಗೆ ಮೀಟಿಂಗ್ ಇದ್ದರೆ ಆಗ ಪಾಲಿಕೆಯ ಯಾವ ಅಧಿಕಾರಿ ತಮ್ಮ ಕಚೇರಿಯಿಂದ ಅದಕ್ಕೆ ತೆರಳುತ್ತಿದ್ದಾರೋ ಅವರು ಪ್ರವೇಶ ದ್ವಾರದಲ್ಲಿ ಸ್ವಾಗತಕಾರರ ಮೇಜಿನ ಮೇಲಿರುವ ಲೆಡ್ಜರ್ ನಲ್ಲಿ ಎಷ್ಟು ಗಂಟೆಗೆ ಎಲ್ಲಿ ಯಾವ ಸಭೆಗೆ ಹೋಗುತ್ತಿರುವುದಾಗಿ ಬರೆದು ಹೋಗಬೇಕು. ಹಾಜರಾತಿ ದೃಢಪಡಿಸುವ ಬಯೋಮೆಟ್ರಿಕ್ ಪಾಲಿಕೆಯಲ್ಲಿ ಸರಿಯಾಗಿ ಕೆಲಸ ನಿರ್ವಹಿಸುವಂತೆ ನೋಡಿಕೊಳ್ಳಬೇಕು. ಅದು ಹಾಳಾಗಿದ್ದಷ್ಟು ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಗಳು ಅದರ ದುರುಪಯೋಗ ಮಾಡುತ್ತಿರುತ್ತಾರೆ!!
Leave A Reply