ಮಂಗಳೂರಿನಲ್ಲಿ ರಾಜಕಾಲುವೆಗಳ ಅತಿಕ್ರಮಣದ ವರದಿ ಬಹಿರಂಗ ಪಡಿಸಿ!
ಮಂಗಳೂರಿನಲ್ಲಿ ಹತ್ತು ದಿನಗಳ ಹಿಂದೆ ಸುರಿದ ವರ್ಷಧಾರೆಗೆ ಮಂಗಳೂರಿನಲ್ಲಿ ಇದ್ದ ಹಳ್ಳಕೊಳ್ಳಗಳೆಲ್ಲ ತುಂಬಿದ್ದವು. ನೀರು ಚರಂಡಿಯಲ್ಲಿ ತುಂಬಿ ರಸ್ತೆಯ ಮೇಲೆಲ್ಲ ಹರಿದಿತ್ತು. ಒಂದು ದಿನದ ಮಟ್ಟಿಗೆ ಕೃತಕ ಕೆರೆಗಳಾಗಿದ್ದವು. ಅದರ ನಂತರ ಅಂತಹ ಮಳೆ ಮತ್ತೆ ಬಂದಿಲ್ಲ. ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು, ಕಾರ್ಪೋರೇಟರ್ ಗಳು ಕೂಡ ಮೇ 30 ಅನ್ನು ಮರೆತುಬಿಟ್ಟರು. ಅಂತಹ ಮಳೆ ಮತ್ತೆ ಬರಲ್ಲ ಎನ್ನುವ ನಂಬಿಕೆ ಎಲ್ಲರಿಗೂ ಇತ್ತು. ಆವತ್ತು ಸುರಿದ ಮಳೆ ನೆರೆಯಾಗಿ ಪರಿವರ್ತನೆ ಆಗಲು ಮುಖ್ಯ ಕಾರಣ ಇದ್ದದ್ದೇ ಚರಂಡಿಗಳಲ್ಲಿ ತುಂಬಿದ ಹೂಳು.
ಚರಂಡಿಯ ಹೂಳು ಟ್ರಿಪರ್ ಗೆ ಹೋಗುವುದಿಲ್ಲ, ಮತ್ತೆ ಚರಂಡಿ ಸೇರುತ್ತದೆ..
ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಒಟ್ಟು ಅರವತ್ತು ವಾರ್ಡುಗಳಿವೆ. ಅನೇಕ ಕಡೆ ಹೂಳುಗಳನ್ನು ತೆಗೆಯುವ ಕೆಲಸ ಪಾಲಿಕೆಯ ಕಡೆಯಿಂದ ಆಗಲೇ ಇಲ್ಲ. ಹೆಚ್ಚಿನ ಕಡೆ ಈ ಬುದ್ಧಿವಂತರು ಏನು ಮಾಡಿದ್ದಾರೆ ಎಂದರೆ ಚರಂಡಿಗಳಿಂದ ಹೂಳು ತೆಗೆದು ಮೇಲೆ ಹಾಕಿದ್ದರು. ಆ ಹೂಳುಗಳು ಮೇ 30 ರಂದು ಸುರಿದ ದೊಡ್ಡ ಮಳೆಗೆ ಮತ್ತೆ ಚರಂಡಿಯಲ್ಲಿ ಸೇರಿವೆ. ಈ ಮೂಲಕ ಪಾಲಿಕೆ ನಮ್ಮ ನಿಮ್ಮ ಲಕ್ಷಾಂತರ ರೂಪಾಯಿ ತೆರಿಗೆ ಹಣವನ್ನು ಪೋಲು ಮಾಡಿದೆ. ಪಾಲಿಕೆಯವರು ಮಳೆಗಾಲಕ್ಕೆ ನೇಮಿಸುವ ಗ್ಯಾಂಗ್ ನ ಹಿಂದಿರುವ ಗೋಲ್ ಮಾಲ್ ಅನ್ನು ನಾನು ಈ ಹಿಂದೆನೂ ನಿಮಗೆ ವಿವರಿಸಿದ್ದೇನೆ. ಇವತ್ತು ಅದರಲ್ಲಿ ಮತ್ತೊಂದು ವಿಷಯ ಹೇಳಲಿಕ್ಕೆ ಇದೆ.
ಗ್ಯಾಂಗ್ ಗಳಲ್ಲಿ ಕನಿಷ್ಟ ಎಂಟು ಜನರು ಇರಬೇಕು ಎನ್ನುವ ವಿಚಾರ ನಿಮಗೆ ಗೊತ್ತೆ ಇದೆ. ಪ್ರತಿ ಗ್ಯಾಂಗಿನ ಬಳಿ ಒಂದು ಟ್ರಿಪ್ಪರ್ ಇರಲೇಬೇಕು. ಆದರೆ 60 ವಾರ್ಡಿನಲ್ಲಿ ಎಷ್ಟು ಟಿಪ್ಪರ್ ಓಡಾಡುತ್ತಿದೆ ಎಂದು ಮೇಯರ್ ಕರೆಕ್ಟಾಗಿ ಹೇಳಲಿ ನೋಡೋಣ.
ಗ್ಯಾಂಗ್ ನಲ್ಲಿ ಇದ್ದವರು ಏನು ಮಾಡುತ್ತಾರೆ ಎಂದರೆ ಒಂದು ತೋಡಿನ ಹೂಳನ್ನು ತೆಗೆದು ಮೇಲೆ ಹಾಕುತ್ತಾರೆ. ಎಲ್ಲವನ್ನು ತೆಗೆದು ಮೇಲೆ ಹಾಕಿದ ನಂತರ ಅದರ ಒಂದು ಫೋಟೋ ತೆಗೆಯಲಾಗುತ್ತದೆ. ಆ ಫೋಟೋ ತೆಗೆದುಕೊಂಡು ಹೋಗಿ ಪಾಲಿಕೆಯಲ್ಲಿ ಸಂಬಂಧಪಟ್ಟವರಿಗೆ ತೋರಿಸಿದರೆ ಬಿಲ್ ಪಾಸಾಗುತ್ತದೆ. ಅದರ ನಂತರ ಹೂಳನ್ನು ಕೇಳುವವರಿಲ್ಲ, ನೋಡುವವರಿಲ್ಲ. ಒಂದು ಜೋರು ಮಳೆ ಬಂದರೆ ಹೂಳು ಮಂಗಮಾಯ, ಅಂದರೆ ಟ್ರಿಪರ್ ನಲ್ಲಿ ತೆಗೆದುಕೊಂಡು ಹೋದರು ಎಂದಲ್ಲ, ಹೂಳು ಮತ್ತೆ ಅದೇ ತೋಡಿಗೆ ಸೇರುತ್ತದೆ. ಮತ್ತೆ ಮಳೆ ಬರುತ್ತದೆ. ಹೂಳು ಚರಂಡಿಯಲ್ಲಿಯೇ ಇರುವುದರಿಂದ ಕೃತಕ ನೆರೆ ಉಂಟಾಗುತ್ತದೆ. ಪಾಲಿಕೆಯಲ್ಲಿ ಯಾರಿಗೆ ಹೂಳಿನಲ್ಲಿ ಎಷ್ಟು “ಪಾಲು” ಹೋಗಿದೆಯೋ ಅಷ್ಟು ಹೋಗಿರುವುದರಿಂದ ಅವರು ಕೂಡ ಮಾತನಾಡದೆ ಸುಮ್ಮನೆ ಕೂತಿರುತ್ತಾರೆ. ಆಯಾ ವಾರ್ಡಿನ ಕಾರ್ಪೋರೇಟರ್ ಗಳು ಕೂಡ ಈ ಹೂಳಿನ ವಿಷಯದಲ್ಲಿ ಮಾತನಾಡದೇ ಇರುವುದರಿಂದ ಹೂಳು ತೆಗೆಯುವುದು, ಫೋಟೋ ಹೊಡೆಯುವುದು, ಮತ್ತೆ ಹೂಳು ಚರಂಡಿಗೆ ಸೇರುವುದು ನಡೆಯುತ್ತಲೇ ಇರುತ್ತದೆ.
ರಾಜಕಾಲುವೆ ಅತಿಕ್ರಮಣ ಮಾಡಿದವರು ಯಾರು…
ಇನ್ನು ರಾಜಕಾಲುವೆಯ ವಿಷಯಕ್ಕೆ ಬರೋಣ. ಮಂಗಳೂರಿನಲ್ಲಿ ರಾಜಕಾಲುವೆಗಳನ್ನು ಅತಿಕ್ರಮಣ ಮಾಡಲಾಗಿದೆ ಎನ್ನುವುದು ಜನಸಾಮಾನ್ಯರಲ್ಲಿ ಯಾರು ಬೇಕಾದರೂ ಕಣ್ಣು ಮುಚ್ಚಿ ಅಂದಾಜು ಮಾಡಬಹುದು. ಮೊನ್ನೆ ಕೃತಕ ನೆರೆ ಬಂದಾಗ ರಾಜಕಾಲುವೆ ಮತ್ತು ಇತರ ಕಾಲುವೆಗಳನ್ನು ಕೆಲವರು ಒತ್ತುವರಿ ಮಾಡಿದ್ದೇ ಕಾರಣ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್ ಹೇಳಿದ್ದರು. ಅದರ ನಂತರ ರಾಜಕಾಲುವೆಗಳ ಅತಿಕ್ರಮಣದ ಕುರಿತು ವರದಿ ಸಿದ್ಧಪಡಿಸುವಂತೆ ಒಂದು ಕಮಿಟಿ ಕೂಡ ರಚಿಸಿದ್ದರು. ಈ ಸಮಿತಿ ಒಂದು ವರದಿ ಕೂಡ ತಯಾರು ಮಾಡಿದೆ. ಆ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಕೊಟ್ಟಾರಚೌಕಿಯಲ್ಲಿರುವ ರಾಜಕಾಲುವೆ ತೆರವು ಪ್ರಕ್ರಿಯೆ ಪ್ರಾರಂಭವೂ ಆಗಿದೆ. ಮಂಗಳೂರಿನ ಜನ ಇತ್ತೀಚೆಗೆ ಸಂಭವಿಸಿದ ನೆರೆಯಿಂದ ಸಾಕಷ್ಟು ಬಳಲಿದ್ದರು. ಅದಕ್ಕೆ ರಾಜಕಾಲುವೆಗಳ ಒತ್ತುವರಿಗಳು ಕೂಡ ಕಾರಣಗಳಲ್ಲಿ ಪ್ರಮುಖವಾಗಿದ್ದರೆ ಆ ವರದಿಯಲ್ಲಿ ಏನಿದೆ ಎಂದು ತಿಳಿಯುವ ಹಕ್ಕು ಮಂಗಳೂರಿನ ಪ್ರತಿಯೊಬ್ಬ ನಾಗರಿಕನಿಗೂ ಇದೆ. ಜಿಲ್ಲಾಧಿಕಾರಿಗಳು ಆ ವರದಿಯನ್ನು ಮಾಧ್ಯಮಗಳ ಮೂಲಕ ಜನರ ಮುಂದೆ ಇಡಬೇಕು. ಈ ಮೂಲಕ ಮಂಗಳೂರಿನಲ್ಲಿ ರಾಜಕಾಲುವೆ ಅತಿಕ್ರಮಣ ಮಾಡಿದವರು ಯಾರು ಎಂದು ಎಲ್ಲರಿಗೂ ಗೊತ್ತಾಗಬೇಕು. ಆಗುತ್ತಾ?
Leave A Reply