ಅಪ್ಪ, ಅಮ್ಮನಿಗೆ ನೋವು ಕೊಟ್ಟವರಲ್ಲಿ ನಮಗೆ ಮೊದಲ ಸ್ಥಾನವಂತೆ!!
ಹೆಲ್ಪ್ ಏಜ್ ಇಂಡಿಯಾ ಎನ್ನುವ ಯಾವುದೋ ಸಂಸ್ಥೆಯೊಂದು ಒಂದು ವಿಷಯದ ಮೇಲೆ ಸಮೀಕ್ಷೆ ಮಾಡಿ ಅದರಲ್ಲಿ ಮಂಗಳೂರು ಒಂದನೇ ಸ್ಥಾನದಲ್ಲಿ ಇದೆ ಎಂದು ಹೇಳಿದೆ. ಪಾಸಿಟಿವ್ ಕಾರಣವಾಗಿದ್ದರೆ ನಾವು ಬೆನ್ನು ತಟ್ಟಿಕೊಳ್ಳಬಹುದಿತ್ತು. ಆದರೆ ಅವರು ನಮಗೆ ಒಂದನೇ ಸ್ಥಾನವನ್ನು ಕೊಟ್ಟಿದ್ದು ಪಕ್ಕಾ ನೆಗೆಟಿವ್ ಕಾರಣಕ್ಕೆ. ಅವರ ವಿಷಯ ಇದ್ದದ್ದು ಯಾವ ರೀತಿಯಲ್ಲಿ ಮತ್ತು ಯಾವ ಕಾರಣಕ್ಕಾಗಿ ವೃದ್ಧರು ಕಿರುಕುಳ, ಅವಮಾನವನ್ನು ಅನುಭವಿಸುತ್ತಾರೆ ಎನ್ನುವುದು.
ಇದೊಂದು ಅಪ್ಪಟ ಸಾಮಾಜಿಕ ವಿಷಯ. ಇವರ ಸರ್ವೆ ನಿಜಾನಾ ಅಥವಾ ಸತ್ಯಕ್ಕೆ ದೂರವಾದ ವಿಷಯವಾ ಎನ್ನುವ ಚರ್ಚೆಗೆ ನಾನು ಈಗ ಹೋಗಲ್ಲ. ಸಾಮಾಜಿಕ ತಾಣಗಳಲ್ಲಿ ಮಂಗಳೂರಿನ ಹೆಸರನ್ನು ಹಾಳು ಮಾಡುವ ಪ್ರಯತ್ನ ಎಂದು ಕೆಲವರು ಬರೆದಿದ್ದಾರೆ. ಸಮೀಕ್ಷೆ ಮಾಡಿದವರು ನಮಗೆ 47% ಕೊಟ್ಟು ತಾವು ಸಮೀಕ್ಷೆ ಮಾಡಿದ ರಾಷ್ಟ್ರದ 23 ನಗರಗಳಲ್ಲಿ ಮಂಗಳೂರಿಗೆ ಮೊದಲ ಸ್ಥಾನ ಎಂದು ಬರೆದಿದ್ದಾರೆ. ಅಷ್ಟು ಪ್ರಮಾಣದಲ್ಲಿ ಇಲ್ಲಿ ವೃದ್ಧರು ಕಿರುಕುಳ, ಅವಮಾನ ಅನುಭವಿಸುತ್ತಿದ್ದಾರೋ, ಇಲ್ಲವೋ ಎನ್ನುವುದು ಬೇರೆ ವಿಷಯ. ಆದರೆ ವೃದ್ಧರು ಆ ಸಮೀಕ್ಷೆಯಲ್ಲಿ ಹೇಳಿದಂತೆ ಮಗ ಅಥವಾ ಸೊಸೆಯಿಂದ ನಿಂದನೆಗೆ ಒಳಗಾಗುತ್ತಿರುವುದು ಎಲ್ಲಾ ಕಡೆಗಳಂತೆ ಇಲ್ಲಿಯೂ ನಡೆದಿದೆ. ಅದರಲ್ಲಿ ಮಂಗಳೂರು ನಂಬರ್ 1 ಆಗಬೇಕೆನಿಲ್ಲ. ಆ ಸಂಸ್ಥೆಯ ವಿರುದ್ಧ ಟೀಕೆ ಮಾಡಿ ಬರೆಯುವುದಕ್ಕಿಂತ ನಾವು ಒಂದಿಷ್ಟು ಆತ್ಮಾವಲೋಕನ ಮಾಡುವ ಅಗತ್ಯವೂ ಇದೆ.
ತಂದೆ ದುಡಿದು ತಂದ ಬೆವರಿಗೆ ಲೆಕ್ಕ ಇಲ್ಲವೇ…
ಮೊದಲನೇಯದಾಗಿ ದೇಶದ ಬೇರೆ ನಗರಗಳಂತೆ ಮಂಗಳೂರು ಕೂಡ ವೇಗವಾಗಿ ಬೆಳೆಯುತ್ತಿದೆ. ನಮ್ಮ ಬೆಳವಣಿಗೆಯ ವೇಗ ಎಷ್ಟು ಹೆಚ್ಚಾಗುತ್ತದೋ ಮಾನವೀಯತೆ, ಸಂಬಂಧ, ಅಟ್ಯಾಚ್ ಮೆಂಟ್ ಗಳು ಇಳಿಮುಖವಾಗುತ್ತಾ ಹೋಗುತ್ತದೆ. ನಮಗೆ ನಿನ್ನೆ ಮೊನ್ನೆ ಕೆಲಸ ಕೊಟ್ಟ ಬಾಸ್ ಇಪ್ಪತ್ತೆರಡು ವರ್ಷದಿಂದ ಸಾಕಿ, ಸಲಹಿ, ಬೆಳೆಸಿದ ತಂದೆಯ ಎದುರು ದೊಡ್ಡವನಾಗಿ ಕಾಣುತ್ತಾನೆ. ಆಫೀಸಿನಲ್ಲಿ ಇಡೀ ದಿನ ಇರುವ ಮಗ ಆ ದೊಡ್ಡ ಆಫೀಸಿನಲ್ಲಿ ಕೆಲಸ ಸಿಗಲು ನಮಗೆ ವಿದ್ಯಾರ್ಹತೆ ದೊರಕಲು ಹಗಲು ರಾತ್ರಿ ದುಡಿದ ತಂದೆಯ ಬಳಿ ದಿನದಲ್ಲಿ ಅರ್ಧ ಗಂಟೆ ಕುಳಿತುಕೊಳ್ಳಲು ಸಮಯ ಇಲ್ಲ ಎನ್ನುತ್ತಾನೆ. ತಾನು ಚಿಕ್ಕವನಿದ್ದಾಗ ತನಗೆ ಸ್ನಾನ ಮಾಡಿಸಿ, ತಿಂಡಿ ತಿನ್ನಿಸಿ, ಯೂನಿಫಾರ್ಮಂ ಹಾಕಿ ಶಾಲೆಗೆ ಬಿಟ್ಟು ಬರುತ್ತಿದ್ದ ತಂದೆಗೆ ಬೆಳೆದ ಮಗ “ತಂದೆಯನ್ನು ಒಮ್ಮೆ ಆಸ್ಪತ್ರೆಗೆ ಕರೆದುಕೊಂಡು ಚೆಕ್ ಅಪ್ ಮಾಡಿಸಲು ಇದೆ” ಎಂದು ತಾಯಿ ಹೇಳಿದರೂ ಕಿವಿ ಮೇಲೆ ಬೀಳದ ಹಾಗೆ ನಟಿಸಿ ಎದ್ದು ಹೋಗುತ್ತಾನೆ. ಶಾಲೆಯಲ್ಲಿ ಮಗ ಬಿದ್ದು ಗಾಯ ಮಾಡಿಕೊಂಡಿದ್ದಾನೆ ಎಂದು ಫೋನ್ ಬಂದ ಕೂಡಲೇ ಓಡೋಡಿ ಹೋಗಿ ರಿಕ್ಷಾದಲ್ಲಿ ಕುಳ್ಳಿರಿಸಿ ಹುಶಾರಾಗಿ ಕರೆದುಕೊಂಡು ಬರುತ್ತಿದ್ದ ತಂದೆಯನ್ನು ಒಮ್ಮೆ ಬಟ್ಟೆಯ ಅಂಗಡಿಗೆ ಕರೆದುಕೊಂಡು ಹೋಗಿ ನಿನಗೆ ಬೇಕಾದ ಶರ್ಟ್ ತೆಗೆದುಕೊಡಲು ಸಮಯ ಇಲ್ಲ ಎನ್ನುವ ಎಷ್ಟೋ ಮಗಂದಿರಿದ್ದಾರೆ. ಇನ್ನು ತಾಯಿ ಅನುಭವಿಸಿದ ಕತೆ ಕೂಡ ಬೇರೆಯಲ್ಲ.
ತಾಯಿ ನಿದ್ರೆ ಮಾಡದ ದಿನಗಳು ಮರೆತು ಹೋಯಿತಾ…
ಒಂಭತ್ತು ತಿಂಗಳು ಹೊತ್ತು, ಹೆತ್ತು ಈ ಭುವಿಗೆ ಇಳಿಸುವ ತಾಯಿ ಮಗು ನಕ್ಕಾಗ ಪಡುವ ಖುಷಿ ಅವಳಿಗೆ ಮಾತ್ರ ಗೊತ್ತು. ಮಗ ಅಥವಾ ಮಗಳು ಹೊಟ್ಟೆ ತುಂಬಾ ಊಟ ಮಾಡಿದ್ರು ಎಂದರೆ ತಾನೇ ಊಟ ಮಾಡಿದ ಹಾಗೆ ತೃಪ್ತಿ ಪಡುವ ತಾಯಿ ಪ್ರೀತಿಗೆ ಎಣೆ ಇದೆಯಾ? ಮಗ ಅಥವಾ ಮಗಳು ಒಳ್ಳೆಯ ಬಟ್ಟೆ ಹಾಕಿ ಶಾಲೆಯ ವಾರ್ಷಿಕೋತ್ಸವಕ್ಕೆ ಹೊರಟು ನಿಂತಾಗ ತಾನೇ ಸಿಂಗಾರಗೊಂಡಂತೆ ಖುಷಿ ಪಡುವ ತಾಯಿಯ ಪ್ರೀತಿ ಅರ್ಥವಾಗುವುದು ಸುಲಭವಲ್ಲ. ಮಗುವಿಗೆ ಐದು ವರ್ಷ ಆಗುವ ತನಕ ರಾತ್ರಿ ಸರಿಯಾಗಿ ನಿದ್ರೆ ಮಾಡದ ತಾಯಿಗೆ ಮಗ ಅಥವಾ ಮಗಳು ದೊಡ್ಡವರಾದ ನಂತರ ಕೊಡುವ ಕೊಡುಗೆ ಏನು? ಮನೆಯ ಮೂಲೆ.
ಇತ್ತೀಚೆಗೆ ಒಂದು ಶಾಲೆಯಲ್ಲಿ ಒಂದು ಶಿಬಿರ ನಡೆಯುವಾಗ ಸಂಪನ್ಮೂಲ ವ್ಯಕ್ತಿಯೊಬ್ಬರು ಒಂದು ಪ್ರಶ್ನೆ ಕೇಳಿದರಂತೆ ” ನಿಮ್ಮ ಮನೆಯಲ್ಲಿ ನಿರ್ಜಿವವಾಗಿರುವ, ಇಡೀ ದಿನ ದುಡಿಯುವ ನಂತರ ಆಯಾಸವಾದಾಗ ಮೂಲೆಯಲ್ಲಿ ಕುಳಿತುಕೊಳ್ಳುವ, ಅಗತ್ಯ ಇರುವಾಗ ಮತ್ತೆ ಎದ್ದು ಬಂದು ಕೆಲಸ ಮಾಡುವುದು ಯಾರು?” ಎಲ್ಲಾ ಮಕ್ಕಳು ತಾಯಿ ಎಂದರಂತೆ. ನಂತರ ಆವತ್ತು ಸಂಜೆಯ ಕಾರ್ಯಕ್ರಮದಲ್ಲಿ ಇದೇ ಪ್ರಶ್ನೆಯನ್ನು ಮಕ್ಕಳ ಪೋಷಕರಿಗೆ ಕೇಳಿದಾಗಲೂ ಅನೇಕರು ವಯಸ್ಸಾದ ತಾಯಿ ಎಂದರಂತೆ. ನಂತರ ಸಂಪನ್ಮೂಲ ವ್ಯಕ್ತಿ ಹೇಳಿದರಂತೆ “ನೀವು ನನ್ನ ಪ್ರಶ್ನೆಯ ಪ್ರಾರಂಭವನ್ನು ಗಮನಿಸಲೇ ಇಲ್ಲ, ಎಲ್ಲರೂ ಇಡೀ ದಿನ ದುಡಿಯುವ, ಸುಸ್ತಾದ ಮೂಲೆಯಲ್ಲಿ ಕುಳಿತುಕೊಳ್ಳುವ ಎಂದೇ ಕೇಳಿಸಿಕೊಳ್ಳುತ್ತಿದ್ದಿರಿ, ನನ್ನ ಪ್ರಶ್ನೆಗೆ ಉತ್ತರ ಪೊರಕೆ ಅಂದರೆ ಹಿಡಿಸೂಡಿ” ಎಂದರಂತೆ. ಯಾಕೆಂದರೆ ಯಾರೂ ಕೂಡ ನಿರ್ಜಿವವಾಗಿರುವ ಎನ್ನುವ ಶಬ್ದವನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ.
ಈ ಮೇಲಿನ ಕಥೆಯಲ್ಲಿ ಎಷ್ಟೊಂದು ಅರ್ಥ ಇದೆಯಲ್ಲ. ನಾವು ಬೆಳೆದಂತೆಲ್ಲ ನಮ್ಮ ಅಪ್ಪ, ಅಮ್ಮನ ಬಗ್ಗೆ ಹೇಗೆ ಯೋಚಿಸುತ್ತವೆ ಎನ್ನುವುದು ಗೊತ್ತಾಗುತ್ತದೆ. ಮೋದಿ ತಾಯಿಯೊಂದಿಗೆ ಕುಳಿತ ಫೋಟೋ ನೋಡಿದ ಕೂಡಲೇ ನಮಗೂ ತಾಯಿ ನೆನಪಾಗುತ್ತಾಳೆ, ಫೋಟೋ ಮರೆತ ಹಾಗೆ ತಾಯಿ ಕೂಡ ಮರೆತು ಹೋಗುತ್ತಾಳೆ!
Leave A Reply