ಸನ್ಮಾನದ ಸಮಯ ಮತ್ತು ಹಣವನ್ನು ಅಭಿವೃದ್ಧಿಗೆ ಉಪಯೋಗಿಸಿದರೆ ಇಬ್ಬರಿಗೂ ಒಳ್ಳೆಯದು!!
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿ ಗೆದ್ದಿರುವ ಏಳು ಕ್ಷೇತ್ರಗಳಲ್ಲಿ ಆರರಲ್ಲಿ ಗೆದ್ದಿರುವವರು ಮೊದಲ ಬಾರಿ ಶಾಸಕರಾಗಿದ್ದಾರೆ. ಅವರ ಮೇಲೆ ಜನರಿಗೆ ತುಂಬಾ ನಿರೀಕ್ಷೆಗಳಿವೆ. ಜನರ ಎಲ್ಲಾ ನಿರೀಕ್ಷೆಗಳನ್ನು ಈಡೇರಿಸಲು ಸಾಧ್ಯವೇ ಇಲ್ಲ. ಆದರೆ ಜನರಿಗೆ ಸರಕಾರಿ ಕಚೇರಿಗಳಿಂದ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸಲು ಸಾಧ್ಯವಿದೆ. ಅದಕ್ಕಾಗಿ ಅವರು ಏನು ಮಾಡಬೇಕು ಎಂದರೆ ತಮ್ಮ ತಮ್ಮ ಕ್ಷೇತ್ರಗಳಲ್ಲಿರುವ ಸರಕಾರಿ ಇಲಾಖೆಗಳ ಕಚೇರಿಗಳಿಗೆ ಧೀಡೀರ್ ಭೇಟಿಕೊಡಬೇಕು. ಅಲ್ಲಿ ಜನರು ಅನುಭವಿಸುವ ತೊಂದರೆಗಳನ್ನು ನೋಡಬೇಕು.
ಯಾವುದು ಕೂಡ ಜಾಸ್ತಿಯಾದರೆ ಇಬ್ಬರಿಗೂ ನಷ್ಟ…
ಶಾಸಕರು ಜನರಿಗಾಗಿ ಕೆಲಸ ಮಾಡಬೇಕಾದರೆ ಅವರನ್ನು ಕರೆದು ಮಾಡುವ ಸನ್ಮಾನ ಕಾರ್ಯಕ್ರಮಗಳಿಗೆ ಫುಲ್ ಸ್ಟಾಪ್ ಬೀಳಬೇಕು. ಈ ಸನ್ಮಾನ ಕಾರ್ಯಕ್ರಮಗಳು ಯಾವತ್ತೂ ನಿಲ್ಲುವುದಿಲ್ಲ. ಮಂಗಳೂರಿನಲ್ಲಿ ಸಾವಿರಾರು ಯುವಕ, ಯುವತಿ ಮಂಡಲ, ಸಂಘ ಸಂಸ್ಥೆಗಳಿವೆ. ಪ್ರತಿ ದಿನ ಮೂರರ ಹಾಗೆ ಹೋದರೆ ತಿಂಗಳಿಗೆ ತೊಂಭತ್ತು ಆಗುತ್ತದೆ. ವರ್ಷಕ್ಕೆ ಒಂಬೈನೂರ ಅರವತ್ತು ಆಗುತ್ತದೆ. ಅದರ ನಡುವೆ ಬೆಂಗಳೂರಿನಲ್ಲಿ ವಿಧಾನಸಭಾ ಅಧಿವೇಶನ, ಬೇರೆ ಬೇರೆ ಚುನಾವಣೆಗಳ ಸಮಯದಲ್ಲಿ ಸನ್ಮಾನ ಸ್ವೀಕರಿಸಲು ಆಗುವುದಿಲ್ಲ. ಅದನ್ನೆಲ್ಲ ತೆಗೆದರೆ ವರ್ಷಕ್ಕೆ ಸರಾಸರಿ ಐನೂರು ಸನ್ಮಾನ ಆಗಬಹುದು. ವರ್ಷಕ್ಕೆ ಐನೂರು ಸನ್ಮಾನ ಅಂತ ಹೇಳಿದರೂ ಐದು ವರ್ಷಕ್ಕೆ ಎರಡೂವರೆ ಸಾವಿರ ಸನ್ಮಾನ ಆಗುತ್ತದೆ. ಈ ಸರಕಾರ ತುಂಬಾ ದಿನ ಬರುವುದಿಲ್ಲ ಎಂದು ಇದರ ಜನಕ ದೇವೇಗೌಡರಿಂದ ಜನಸಾಮಾನ್ಯರ ತನಕ ಪ್ರತಿಯೊಬ್ಬರಿಗೂ ಗೊತ್ತು. ಅದಕ್ಕಾಗಿ ಎಲ್ಲರೂ ಶಾಸಕರುಗಳನ್ನು ಮೆಚ್ಚಿಸಲು ಸ್ಪರ್ಧೆಗೆ ಬಿದ್ದವರಂತೆ ಸನ್ಮಾನ ಇಟ್ಟುಕೊಳ್ಳುತ್ತಿದ್ದಾರೆ.
ಆದ್ದರಿಂದ ಸರಕಾರ ಇರುವಷ್ಟು ದಿನ ಸನ್ಮಾನ ಕಾರ್ಯಕ್ರಮಗಳು ನಡೆಯಬೇಕು, ಅದರೊಂದಿಗೆ ಅಭಿವೃದ್ಧಿಯೂ ಆಗಬೇಕು. ಪಕ್ಷ ಕಟ್ಟುವ ಕೆಲಸವೂ ಆಗಬೇಕು, ಉಳಿದ ಕೆಲಸಗಳು ಕೂಡ ಆಗಬೇಕು. ಒಬ್ಬ ಶಾಸಕನಿಗೆ ಎಲ್ಲ ಕಳೆದರೆ ಇರುವುದೇ 12 ಗಂಟೆ. ಬೆಳಿಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯ ತನಕ. ಹೀಗಿರುವಾಗ ಸರಾಸರಿ ಮೂರು ಸನ್ಮಾನ ಎಂದರೆ ಆ ಸ್ಥಳಕ್ಕೆ ಹೋಗಿ ಬರಲು ಅರ್ಧದಿಂದ ಮುಕ್ಕಾಲು ಗಂಟೆ ಅಲ್ಲಿ ಅರ್ಧದಿಂದ ಮುಕ್ಕಾಲು ಗಂಟೆ ಭಾಷಣ, ಅದು ಇದು ಎಂದು ಒಟ್ಟಿಗೆ ಕನಿಷ್ಟ ಒಂದೂವರೆ ಗಂಟೆ ಮತ್ತು ಅಲ್ಲಿ ಕೈ ಕುಲುಕುವುದು, ಫೋಟೋ ಅದು ಇದು ಎಂದು ಕಾಲು ಗಂಟೆ, ನಂತರ ಬೊಂಡ, ಚಾ, ತಿಂಡಿ ಸ್ವೀಕರಿಸಲೇಬೇಕು ಎನ್ನುವ ಪ್ರೀತಿಯ ಒತ್ತಡ. ಒಟ್ಟು ಎರಡು ಗಂಟೆ ಒಂದು ಸನ್ಮಾನಕ್ಕೆ ವೇಸ್ಟ್ಆಗುತ್ತದೆ. ಹೀಗೆ ಮೂರು ಸನ್ಮಾನ ಅಂದರೆ ಆರು ಗಂಟೆ ಅಪ್ಪಟ ವೇಸ್ಟ್. ಅದರ ಬದಲು ಆ ಸಮಯವನ್ನು ಶಾಸಕರು ಅದೇ ಪ್ರದೇಶದ ಜನರ ಅಭಿವೃದ್ಧಿಗೆ ಚಿಂತನೆ ಮಾಡಲು ಬಳಸಿದರೆ ಆಗ ಜನರಿಗೆ ಖುಷಿಯಾಗುತ್ತದೆ. ಅವರು ಯಾವತ್ತೂ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಇಲ್ಲದಿದ್ದರೆ ಸನ್ಮಾನದ ದಿನ ಮಾತ್ರ ಅಲ್ಲಿನ ಜನರ ನೆನಪಿನಲ್ಲಿ ಶಾಸಕರು ಉಳಿಯುತ್ತಾರೆ. ಆ ಪ್ರದೇಶ ಎರಡು ವರ್ಷಗಳ ಒಳಗೆ ಅಭಿವೃದ್ಧಿಯಾಗದೇ ಇದ್ದರೆ ಆವತ್ತು ಸನ್ಮಾನ ಮಾಡಿದ ಜನರೇ ಬೈಯಲು ಶುರು ಮಾಡುತ್ತಾರೆ. ತಮ್ಮ ಹಾರ, ತುರಾಯಿಯ ಹಣ ವೇಸ್ಟ್ ಆಯಿತು ಎಂದೇ ಹೇಳಿದ್ರೂ ಹೇಳಬಹುದು.
ಸಮಯ, ಹಣ ಸದುಪಯೋಗವಾಗಬೇಕಾದರೆ…
ಯಾವುದೇ ಸಂಘ, ಸಂಸ್ಥೆಗಳು ಶಾಸಕರುಗಳನ್ನು ಕರೆದು ಸನ್ಮಾನ ಮಾಡುವ ಬದಲು ಅದಕ್ಕೆ ಖರ್ಚಾಗುವ ಹಣಕ್ಕೆ ಒಂದಿಷ್ಟು ಸೇರಿಸಿ ಆ ಭಾಗದಲ್ಲಿರುವ ಬಡವರಿಗೆ ಏನಾದರೂ ಸಹಾಯ ಮಾಡಿದರೆ ಅದರಲ್ಲಿ ಆ ಬಡವನಿಗೂ ಖುಷಿಯಾಗುತ್ತದೆ, ಶಾಸಕರ ಸಮಯವೂ ಉಳಿಯುತ್ತದೆ, ಆ ಸಮಯವನ್ನು ಅವರು ಅಭಿವೃದ್ಧಿ ಕೆಲಸಕ್ಕೆ ವಿನಿಯೋಗಿಸಲು ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕ ಜನಾರ್ಧನ ಪೂಜಾರಿಯವರನ್ನು ನಮ್ಮ ಶಾಸಕರು ಮಾದರಿಯಾಗಿ ತೆಗೆದುಕೊಳ್ಳಬೇಕು. ಅವರು ಯಾವುದೇ ಸನ್ಮಾನ ಕಾರ್ಯಕ್ರಮಕ್ಕೆ ಕರೆದರೂ ಸ್ಪಷ್ಟವಾಗಿ ನಿರಾಕರಿಸುತ್ತಿದ್ದರು. ಯಾವುದೇ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಟ್ಟರೆ ಬೇಡವೇ ಬೇಡಾ ಎನ್ನುತ್ತಿದ್ದರು. ತಾವು ಅಧಿಕಾರದಲ್ಲಿದ್ದಷ್ಟು ಅವಧಿ ಜನಾರ್ಧನ ಪೂಜಾರಿ ಅದನ್ನು ಪಾಲಿಸಿಕೊಂಡು ಬಂದರು.
ಅಷ್ಟಕ್ಕೂ ಒಬ್ಬ ಶಾಸಕ ಗೆದ್ದದ್ದೇ ಸಾಧನೆಯಾದರೆ ಅವರು ಐದು ವರ್ಷ ಏನೂ ಮಾಡದೇ ಹೀಗೆ ಸನ್ಮಾನ ಸ್ವೀಕರಿಸಿಕೊಂಡು ಓಡಾಡುತ್ತಾ ಇದ್ದರೆ ಜನ ಮತ್ತೆ ಆರಿಸಿ ಕಳುಹಿಸುತ್ತಾರಾ?
ಈಗ ಮತ್ತೆ ವಿಷಯಕ್ಕೆ ಬರೋಣ. ಮಂಗಳೂರಿನಲ್ಲಿ ಮೋಡಗಳಿಗೆ ತೂತು ಬಿದ್ದಿದೆಯೇನೋ ಎನ್ನುವಂತೆ ಮಳೆ ಸುರಿಯುತ್ತಿದೆ. ಕೆಳರಥಬೀದಿ, ಬಜಿಲ್ ಕೇರಿ, ಟೌನ್ ಕೌಂಪೌಡ್ ನಂತಹ ಅನೇಕ ಸ್ಥಳಗಳಲ್ಲಿ ನೀರಿನಿಂದಾಗಿ ಸಮಸ್ಯೆಯಾಗಿದೆ. ಇದು ನಾನು ಕೇವಲ ಉದಾಹರಣೆಯಾಗಿ ಕೊಟ್ಟಿರುವುದು. ಬೇರೆ ಬೇರೆ ಕ್ಷೇತ್ರಗಳಲ್ಲಿ ಬೇರೆ ಬೇರೆ ಉದಾಹರಣೆಗಳು ಇರಬಹುದು. ಈಗ ಇಂತಹ ಸಮಸ್ಯೆಗಳಾದರೆ ಅಲ್ಲಿನ ಕಾರ್ಪೋರೇಟರ್, ನಗರಸಭಾ ಸದಸ್ಯ, ಪುರಸಭಾ ಸದಸ್ಯ ಮೊದಲು ನೋಡಬೇಕು. ಆದರೆ ನಮ್ಮಲ್ಲಿ ಜನ ಎಲ್ಲದಕ್ಕೂ ಮೋದಿಯೇ ಉತ್ತರ ಎನ್ನುವಂತೆ ತಮ್ಮ ಸ್ಥಳೀಯ ಶಾಸಕರೇ ಬಂದು ನೋಡಬೇಕು ಎಂದು ಬಯಸುತ್ತಾರೆ. ಶಾಸಕರು ಹೋದರೆ ಪರವಾಗಿಲ್ಲ. ಆದರೆ ಸಮಸ್ಯೆಗಳ ಪರಿಹಾರಕ್ಕೆ ಫಾಲೋ ಅಪ್ ನೋಡಬೇಕು. ಸನ್ಮಾನಗಳು ನಿಲ್ಲದಿದ್ದರೆ ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಸಮಸ್ಯೆಗಳು ಪರಿಹಾರವಾಗದಿದ್ದರೆ ಗೊತ್ತಲ್ಲ!
Leave A Reply