ಬೇರೆ ಊರಿನ ಭಕ್ತಾದಿಗಳಿಗೆ ಅನುಕೂಲ.
ಕರಾವಳಿ ದೇಗುಲಗಳ ನಾಡು. ಇಲ್ಲಿ ಕಟೀಲು, ಪೊಳಲಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಕುದ್ರೋಳಿ ಗೋಕರ್ನನಾಥ, ರಥಬೀದಿ ವೆಂಕಟರಮಣ, ಕದ್ರಿ ಮಂಜುನಾಥ, ಮಂಗಳಾದೇವಿ, ಮಾರಿಯಮ್ಮ ದೇವಸ್ಥಾನ, ಕುಂಭಾಶಿ ಆನೆಗುಡ್ಡೆ, ಉಡುಪಿ ಕೃಷ್ಣಮಠ, ಕೊಲ್ಲುರು ಮುಕಾಂಬಿಕೆ ಸಹಿತ ಇನ್ನೂ ಅನೇಕ ಪುಣ್ಯಕ್ಷೇತ್ರಗಳಿವೆ. ಮಂಗಳೂರಿನ ಇತಿಹಾಸ ಪ್ರಸಿದ್ಧ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವಂತೂ ಯಾರಿಗೆ ಗೊತ್ತಿಲ್ಲ ಹೇಳಿ. ಬೇರೆ ಬೇರೆ ಜಿಲ್ಲೆಗಳಿಂದ, ರಾಜ್ಯಗಳಿಂದ ಮಂಗಳೂರಿಗೆ ಬರುವ ಭಕ್ತಾದಿಗಳು ಯಾವುದೇ ಕಾರಣಕ್ಕೂ ಕಟೀಲಿಗೆ ಹೋಗದೆ ಹಿಂತಿರುಗುವುದಿಲ್ಲ. ಕಟೀಲಿನ ಮಹಿಮೆಯ ಬಗ್ಗೆ ಗೊತ್ತಿದ್ದವರು ನಿತ್ಯ, ವಾರಕ್ಕೊಮ್ಮೆ ಅಲ್ಲಿಗೆ ಹೋಗಿ ಪ್ರಾರ್ಥಿಸಿ ಬರುವುದುಂಟು. ಯಾವುದೇ ಒಳ್ಳೆಯ ಕೆಲಸದ ಮೊದಲು ಕಟೀಲು ತಾಯಿಯ ಚರಣದಲ್ಲಿ ಒಪ್ಪಿಸಿ ನಂತರ ಶುಭ ಕಾರ್ಯವನ್ನು ಪ್ರಾರಂಭಿಸುವವರು ಕೂಡ ಇದ್ದಾರೆ. ನಿತ್ಯ ಕಟೀಲು ದೇವಿಯ ಅನ್ನ ಪ್ರಸಾದವನ್ನು ಸ್ವೀಕರಿಸಲು ಸಾವಿರಾರು ಜನ ಆಗಮಿಸುತ್ತಾರೆ. ದೇವಳದ ಅನ್ನ ಛತ್ರದಲ್ಲಿ ಬಹಳ ಶಿಸ್ತುಬದ್ಧವಾಗಿ ದೇವಳದ ಸಿಬ್ಬಂದಿ, ಸ್ವಯಂ ಸೇವಕರು ದೇವರ ಅನ್ನ ಪ್ರಸಾದಕ್ಕೆ ಆಗಮಿಸುವ ಭಕ್ತರನ್ನು ಸತ್ಕರಿಸುತ್ತಾರೆ. ಆದ್ದರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನ್ನಪ್ರಸಾದ ಪ್ರಸಿದ್ಧವಾಗಿದೆ. ಅಂತಹ ಕಟೀಲು ದೇವಸ್ಥಾನದಲ್ಲಿ ಇದೀಗ ಬೆಳಗಿನ ಜಾವ ಭಕ್ತರಿಗೆ ಗಂಜಿ ಊಟ ಕೂಡ ಪ್ರಾರಂಭವಾಗಿದೆ.
ದೇವಳದಲ್ಲಿ ಯಾತ್ರಾರ್ಥಿಗಳಿಗಾಗಿ ಅನ್ನಪ್ರಸಾದ ವ್ಯವಸ್ಥೆ ಪ್ರತಿದಿನ ಮಧ್ಯಾಹ್ನ ಮತ್ತು ರಾತ್ರಿ ಇತ್ತು. ಇದೀಗ ಬೆಳಿಗ್ಗೆ ಬೇಗ ಬರುವ ಯಾತ್ರಿಗಳಿಗೆ ಗಂಜಿ ಊಟವನ್ನು ಪ್ರಸಾದ ರೂಪವಾಗಿ ಕೊಡುವ ಕ್ರಮ ಪ್ರಾರಂಭವಾಗಿದೆ. ಬೆಳಿಗ್ಗೆ ಸುಮಾರು 7.30 ಕ್ಕೆ ಪ್ರಾರಂಭವಾಗುವ ಗಂಜಿ ಊಟ ಪ್ರಸಾದ ಬೆಳಿಗ್ಗೆ 10 ಗಂಟೆಗೆ ಸಮಾಪ್ತಿಯಾಗುತ್ತದೆ.
ಪುಣ್ಯಕ್ಷೇತ್ರದಲ್ಲಿ ಮತ್ತು ಪ್ರವಾಸಿ ತಾಣವಾಗಿ ಗಮನ ಸೆಳೆಯುತ್ತಿರುವ ಕಟೀಲು ಶ್ರೀಕ್ಷೇತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಬೇರೆ ಬೇರೆ ಊರುಗಳಿಂದ ಭಕ್ತಾದಿಗಳು ಆಗಮಿಸುತ್ತಾರೆ. ಕೇವಲ ಮಧ್ಯಾಹ್ನ ಮತ್ತು ರಾತ್ರಿಯ ಅನ್ನಪ್ರಸಾದಕ್ಕಾಗಿಯೇ ಮೂರು ಕೋಟಿಗೂ ಮಿಕ್ಕಿ ಖರ್ಚು ಬರುತ್ತದೆ ಎಂದು ಹೇಳಲಾಗುತ್ತದೆ. ಬೇರೆ ಬೇರೆ ಊರುಗಳಿಂದ ಬರುವ ಭಕ್ತರಿಗೆ, ಶಾಲಾ ಪ್ರವಾಸದ ಕಾರಣ ಬರುವ ಬೇರೆ ಬೇರೆ ಊರಿನ ಮಕ್ಕಳಿಗೆ ಕಟೀಲು ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಇರುವುದು ಅನುಕೂಲವಾದಂತೆ ಇದೀಗ ಬೆಳಗ್ಗಿನ ಜಾವ ಬಿಸಿ ಬಿಸಿ ಗಂಜಿ ಊಟವು ಇನ್ನಷ್ಟು ಅನುಕೂಲಕರವಾಗಿದೆ. ಮುಂಬರುವ ದಿನಗಳಲ್ಲಿ ದೇಗುಲಕ್ಕೆ ಭೇಟಿ ನೀಡುವ ಭಕ್ತರಿಗಾಗಿ ದಿನವೀಡಿ ಪಾನೀಯ ನೀಡುವ ಬಗ್ಗೆ ಕಟೀಲು ಆಡಳಿತ ಮಂಡಳಿ ಚಿಂತನೆ ನಡೆಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ನಳಿನ್ ಕುಮಾರ್ ಕಟೀಲು ಅವರು ಸ್ವಕ್ಷೇತ್ರದಲ್ಲಿ ಇದ್ದಾಗ ಪ್ರತಿ ದಿನ ಬೆಳಿಗ್ಗೆ ತಪ್ಪದೆ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ ದೇವಿಯ ಆರ್ಸೀವಾದ ಪಡೆದುಕೊಂಡ ನಂತರವೇ ತಮ್ಮ ಕೆಲಸಕಾರ್ಯಗಳನ್ನು ಪ್ರಾರಂಭಿಸುತ್ತಾರೆ.
Leave A Reply