ಕರಾವಳಿಯ ಸೇತುವೆಗಳು ಕಟ್ಟುವಾಗಲೇ “ಚೈನಾ ಮಾಲ್” ಲೆವೆಲ್ಲಿಗೆ ಬರುತ್ತವೆಯಾ?
ಪುಣ್ಯಕ್ಕೆ ಯಾವುದೇ ಜೀವಹಾನಿ ಆಗಿಲ್ಲ. ಒಂದು ವೇಳೆ ಆಗಿದಿದ್ದರೆ ಕಳೆದ ವರ್ಷ ಜಿಲ್ಲಾಧಿಕಾರಿಗಳು ವರದಿ ಕೇಳಿದಾಗ ಸೇತುವೆಗೆ ಯಾವುದೇ ಅಪಾಯವಿಲ್ಲವೆಂದು ಭರವಸೆ ನೀಡಿದ್ದ ಇಂಜಿನಿಯರ್ ಗಳನ್ನು ಬಂಧಿಸಿ ಒಳಗೆ ಕಳುಹಿಸಬೇಕಿತ್ತು. ನಾನು ಹೇಳುತ್ತಿರುವುದು ಮುಲ್ಲರಪಟ್ಣ ಸೇತುವೆ ಬಗ್ಗೆ. ಸೋಮವಾರ ಧರಾಶಾಯಿಯಾಗಿರುವ ಸೇತುವೆಯ ಮತ್ತೊಂದು ಸ್ಲ್ಯಾಬ್ ಮಂಗಳವಾರ ಫಲ್ಗುಣಿಯ ಒಡಲಿಗೆ ಸೇರುವುದರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅಷ್ಟಕ್ಕೂ ಇದೇನೂ ಹಳೆ ಬ್ರಿಟಿಷರ ಕಾಲದ ಅಥವಾ ಅದಕ್ಕಿಂತಲೂ ಹಳೆ ಅರಸರ ಕಾಲದ ಸೇತುವೆ ಏನಲ್ಲ. ಇದನ್ನು 38 ವರ್ಷಗಳ ಹಿಂದಷ್ಟೇ ಕಟ್ಟಲಾಗಿತ್ತು. ಇದಕ್ಕೆ ಹೋಲಿಸಿದರೆ ಸುರತ್ಕಲ್ ನಿಂದ ಮಂಗಳೂರು ಕಡೆಗೆ ಹೋಗುವಾಗ ಸಿಗುವ ಕುಳೂರು ಸೇತುವೆ ಇವತ್ತಿಗೂ ಚೆನ್ನಾಗಿದೆ. ಕಾರಣ ಅದನ್ನು ಕಟ್ಟಿಸಿದ್ದು ಬ್ರಿಟಿಷರು. ನಮ್ಮಲ್ಲಿ ಸೇತುವೆ ಕಟ್ಟುವಾಗ ಅದು ಎಷ್ಟರಮಟ್ಟಿಗೆ ಬಾಳ್ವಿಕೆ ಬರುವಷ್ಟು ಸ್ಟ್ರಾಂಗ್ ಆಗಿದೆ ಎನ್ನುವುದರ ಕುರಿತು ಸ್ವತ: ಅದನ್ನು ಕಟ್ಟಿಸಿದವರಿಗೆನೆ ಗ್ಯಾರಂಟಿ ಇರುವುದಿಲ್ಲ. 15 ಪರ್ಸೆಂಟ್ ಕಮೀಷನ್ ಕೊಟ್ಟು ಕೆಲವೊಮ್ಮೆ ಅದಕ್ಕಿಂತ ಜಾಸ್ತಿ ಕೇಳಿದರೆ ಕೊಟ್ಟು ಅಧಿಕಾರಿಗಳನ್ನು, ಆಡಳಿತದಲ್ಲಿರುವವರನ್ನು ಸಾಕಿ ಕೊನೆಗೆ ಸಿಮೆಂಟ್, ಮರಳು ಲೆಕ್ಕಕ್ಕಿಂತ ಕಡಿಮೆ ಹಾಕಿ ಗುತ್ತಿಗೆದಾರರು ಕೆಲಸ ಮುಗಿಸಿಕೊಡುವಾಗ ಅದು ಚೈನಾ ಮಾಲ್ ತರಹ ಆಗುತ್ತದೆ. ಅದಕ್ಕೆ ಆಯಸ್ಸು ಇಂತಿಷ್ಟೇ ಎಂದು ಗ್ಯಾರಂಟಿ ಇರುವುದಿಲ್ಲ. ಬಂದಷ್ಟು ದಿನ ಬರುತ್ತದೆ. ಯಾವತ್ತಾದರೂ ಒಂದು ದಿನ ತಾನು ಸಾಯುವ ಲಕ್ಷಣ ತೋರಿಸುತ್ತದೆ. ಕನಿಷ್ಟ ಆವಾಗ ಆದರೂ ನಮ್ಮ ಅಧಿಕಾರಿಗಳು ನಿದ್ರೆ ಬಿಟ್ಟು ಎಚ್ಚರವಾದರೆ ಬಚಾವ್. ಇಲ್ಲದಿದ್ದರೆ ಗ್ರಹಚಾರ ತುಂಬಿದವನ ರಾತ್ರಿ ಆಸ್ಪತ್ರೆಯಲ್ಲಿಯೋ, ಸ್ಮಶಾನದಲ್ಲಿಯೋ ಅಂತ್ಯವಾಗುತ್ತದೆ.
ಸೇತುವೆ ಎಚ್ಚರಿಕೆ ಕೊಟ್ಟಿತ್ತು….
ಮುಲ್ಲರಪಟ್ಣ ಸೇತುವೆ ಕೂಡ ಕಳೆದ ವರ್ಷವೇ ತನಗೆ ಚಿಕಿತ್ಸೆ ಕೊಡಿಸಿ ಎಂದು ಕೇಳಲು ಶುರು ಮಾಡಿ ಆಗಿತ್ತು. ಇವತ್ತಲ್ಲ, ನಾಳೆ ಪ್ರಾಣ ಬಿಡುತ್ತೇನೆ ಎಂದು ಉಬ್ಬಸ ಬಂದಂತೆ ವರ್ತಿಸುತ್ತಿತ್ತು. ಬಿರುಕು ಮೂಡಿ ಆಗಿತ್ತು. ಸ್ಥಳೀಯರು ಈ ಕುರಿತು ವಿಡಿಯೋ ಮಾಡಿ ಹರಿಯಬಿಟ್ಟಿದ್ದರು. ಆದರೆ ಜಿಲ್ಲಾಧಿಕಾರಿಯವರು ವರದಿ ಕೇಳಿದ್ದಕ್ಕೆ ಇಂಜಿನಿಯರ್ ಗಳು ಏನೂ ಆಗಲ್ಲ ಎಂದಿದ್ದರು. ಏನು ಆಗಲ್ಲ ಎಂದಿದ್ದ ಇಂಜಿನಿಯರ್ ಗಳನ್ನು ಇವತ್ತು ಒಂದು ಮೆರವಣಿಗೆ ಮಾಡಬೇಕು. ಎಲ್ಲರೂ ಅಂತಹ ಅದ್ಭುತ ಪ್ರತಿಭೆಯ ಇಂಜಿನಿಯರ್ ಗಳನ್ನು ನೋಡಲಿ. ಎಲ್ಲರಿಗೂ ಇವರ ಸಾಧನೆ, ಹಿನ್ನಲೆ ಗೊತ್ತಾಗಲಿ. ಇವರು ಹಣ ಕೊಟ್ಟು ಡಿಗ್ರಿ ಸರ್ಟಿಫಿಕೇಟ್ ಪಡೆದುಕೊಂಡವರಾ ಅಥವಾ ನಿಜವಾಗಿಯೂ ಕಲಿತೇ ಪಾಸ್ ಆದವರಾ ಎಂದು ಪರೀಕ್ಷಿಸಬೇಕು. ಈಗಿನ ಕಾಲದಲ್ಲಿ ಎಲ್ಲವೂ ನಕಲಿ ಬರುವುದರಿಂದ ಇಂಜಿನಿಯರ್ ಗಳು ಕೂಡ ನಕಲಿ ಆಗಿರುವಂತಹ ಸಾಧ್ಯತೆ ಇರುತ್ತದೆ.
ಮರಳಿನ ಹಣ ತಿಂದವರು ಸೇತುವೆ ಕಟ್ಟಲಿ…
ಮೂರನೇಯದಾಗಿ ಮರಳು ಮಾಫಿಯಾ. ಇದರಿಂದ ಕರಾವಳಿಯಲ್ಲಿ ಆಗಬಾರದ್ದೆಲ್ಲ ಆಗಿ ಹೋಗಿವೆ. ಹತ್ಯೆ, ಹತ್ಯಾ ಯತ್ನ, ಡಿಸಿ ಮೇಲೆ ಹಲ್ಲೆಗೆ ಯತ್ನ ಎಲ್ಲವೂ ನಡೆದಿವೆ. ಮರಳು ಮಾಫಿಯಾದಲ್ಲಿ ಇದ್ದವರಿಗೆ ಇಡೀ ಊರೇ ಅವರದ್ದು. ಹಾಗಿರುವಾಗ ಇಂತಹ ಸೇತುವೆಗಳು ಯಾವ ಲೆಕ್ಕ. ಸೇತುವೆ ಬೀಳಲಿ, ಉರುಳಲಿ ಮರಳು ತೆಗೆಯುವವರು ತೆಗೆಯುತ್ತಲೇ ಇರುತ್ತಾರೆ. ಯಾವಾಗ ಇವರು ಸಾಂಪ್ರದಾಯಿಕ ಮರಳುಗಾರಿಕೆ ಬಿಟ್ಟು ನೇರವಾಗಿ ಯಂತ್ರಗಳನ್ನು ಬಳಸಿ ನದಿಯ ಬುಡಕ್ಕೆ ಹೋದಾಗ ಸಮಸ್ಯೆಗಳು ಉದ್ಭವಿಸುತ್ತವೆ. ಅಷ್ಟೇ ಅಲ್ಲ, ಸೇತುವೆ ಇರುವಂತಹ ಜಾಗದಲ್ಲಿ ಇಂತಿಷ್ಟು ಸುತ್ತಳತೆಯ ತನಕ ಮರಳು ತೆಗೆಯುವಂತಿಲ್ಲ ಎಂಬ ನಿಯಮವೇ ಇದೆ. ಆದರೆ ಮರಳು ತೆಗೆಯುವವರಿಗೆ ಅದು ಅಗತ್ಯವೇ ಇಲ್ಲ. ಅವರಿಗೆ ತಮ್ಮ ಜೇಬು ತುಂಬಿದರೆ ಸಾಕು. ಯಾರಿಗೆ ಎಷ್ಟೆಷ್ಟು ಕೊಡಬೇಕೋ ಅಷ್ಟು ಕೊಟ್ಟು ಬಾಯಿ ಮುಚ್ಚಿಸಿದರೆ ಯಾರೂ ಕೇಳುವವರಿಲ್ಲ. ಅಂತಹ ಹಣ ತೆಗೆದುಕೊಂಡವರು ಆ ಹಣ ತಿಂದರೆ ಹೇಸಿಗೆ ತಿಂದಂತೆ ಎಂದು ಗೊತ್ತಿದ್ದರೂ ಮಾನ ಮರ್ಯಾದೆ ಪಕ್ಕಕ್ಕೆ ಇಟ್ಟು ಹಣ ತೆಗೆದುಕೊಳ್ಳುವುದರಿಂದ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತದೆ.
ಪ್ರಸ್ತುತ ಇಂತಹ ಅರ್ಧ ಜೀವ ಬಿಟ್ಟಿರುವ ಅನೇಕ ಸೇತುವೆಗಳು ಕರಾವಳಿ ಕರ್ನಾಟಕದಲ್ಲಿ ಇವೆ. ಅವು ಇನ್ನಷ್ಟು ಅಪಾಯವನ್ನು ಆಹ್ವಾನಿಸುತ್ತಿವೆ. ಯಾವುದೋ ಕಮಿಟಿ ಬಂದು ಇಂತಿಂತಹ ಸೇತುವೆ ಬಿದ್ದು ಹೋಗುವ ಚಾನ್ಸ್ ಇದೆ ಎಂದು ವರದಿ ಕೊಟ್ಟರೆ ಸಾಕಾಗುವುದಿಲ್ಲ. ಆ ಸೇತುವೆಯ ಅಂತಹ ಪರಿಸ್ಥಿತಿಗೆ ಏನು ಕಾರಣ, ಯಾರು ಕಾರಣ, ಹೇಗೆ ಕಾರಣ ಎಂದು ವರದಿಯಲ್ಲಿ ಹೇಳಬೇಕು. ಅಂತವರ ವಿರುದ್ಧ ಸಾರ್ವಜನಿಕ ಆಸ್ತಿಪಾಸ್ತಿ ನಾಶದ ಕೇಸ್ ಹಾಕಬೇಕು. ನಮಗೆ ಆದ ನಷ್ಟವನ್ನು ಹೊರಗೆ ಹಾಕಬೇಕು. ಹಾಗೆ ಎರಡು ಪ್ರಕರಣಗಳಲ್ಲಿ ಆದ್ರೆ ಮಾಡಿದವರಿಗೆ ಬುದ್ಧಿ ಬರುತ್ತದೆ. ಅದು ಬಿಟ್ಟು ಮಳೆಗಾಲ ಆದ ಕೂಡಲೇ ನಬಾರ್ಡ್ ಹಣದಲ್ಲಿ ಕಟ್ಟುತ್ತೇವೆ ಎಂದು ಭರವಸೆ ಸಿಕ್ಕಿದರೆ ಮರಳು ಮಾಫಿಯಾದವರಿಗೆ ಯಾವುದೇ ಶಿಕ್ಷೆ ಇಲ್ಲದೆ ಹಾಗೆ ಬಿಟ್ಟಂತೆ ಆಗುತ್ತದೆ!!
Leave A Reply