ಮಹಾರಾಷ್ಟ್ರದಲ್ಲಿ ಪ್ಲಾಸ್ಟಿಕ್ ಬ್ಯಾನ್, ಇಲ್ಲಿ ಪ್ಲಾಸ್ಟಿಕ್ ನಮ್ಮ ಕ್ಲೋಸ್ ಫ್ರೆಂಡ್!!
ಕರ್ನಾಟಕದಲ್ಲಿ ಮಾಡಿದ ಹಾಗೆ ಮಹಾರಾಷ್ಟ್ರದಲ್ಲಿಯೂ ಪ್ಲಾಸ್ಟಿಕ್ ಬ್ಯಾನ್ ಮಾಡಲಾಗಿದೆ. ಅಲ್ಲಿ ಬ್ಯಾನ್ ಮಾಡಿದ ಬಳಿಕವೂ ಬ್ಯಾನ್ ಗೆ ಒಳಪಟ್ಟ ಪ್ಲಾಸ್ಟಿಕ್ ಅನ್ನು ಮಾರುತ್ತಿದ್ದ ಮುಂಬೈ ಮಹಾನಗರದ ಅಂಗಡಿಗಳ ಮೇಲೆ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಒಂದು ದಿನದಲ್ಲಿ ಅಲ್ಲಿ ಎರಡು ಲಕ್ಷ 90 ಸಾವಿರದಷ್ಟು ಫೈನ್ ಸಂಗ್ರಹ ಮಾಡಲಾಗಿದೆ. ಅಂದರೆ ಅವರು ದಾಳಿ ಮಾಡುವಾಗ ಯಾವ ಅಂಗಡಿಯಲ್ಲಿ ಎಷ್ಟು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಇತ್ತೋ ಅಷ್ಟು ಪ್ಲಾಸ್ಟಿಕ್ ವಶಪಡಿಸಿಕೊಂಡದ್ದಲ್ಲದೆ ಅದಕ್ಕೆ ಅನುಗುಣವಾಗಿ ದಂಡ ಕೂಡ ಕಕ್ಕಿಸಿದ್ದಾರೆ. ಈ ಮೂಲಕ ಪ್ಲಾಸ್ಟಿಕ್ ಬ್ಯಾನ್ ಅನ್ನು ಸಮರ್ಥವಾಗಿ ಅನುಷ್ಟಾನಕ್ಕೆ ತಂದಿದ್ದಾರೆ. ಅಲ್ಲಿನ ಅಧಿಕಾರಿಗಳಿಗೆ ಮೊದಲಿಗೆ ಹ್ಯಾಟ್ಸ್ ಆಫ್ ಹೇಳಬೇಕು. ಆದರೆ ನಮ್ಮಲ್ಲಿಯೂ ಅಧಿಕಾರಿಗಳಿದ್ದಾರೆ. ಅವರೆಲ್ಲಾ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಂಗಳೂರು ಮಹಾನಗರ ಪಾಲಿಕೆಯ ಆಯಕಟ್ಟಿನ ವಿಭಾಗಗಳಲ್ಲಿ ಕುಳಿತುಕೊಂಡಿದ್ದಾರೆ. ಅವರಿಗೆ ರೇಡ್ ಮಾಡುವುದು ಎಂದರೆ ಏನು ಎನ್ನುವುದು ಕವಿತಾ ಸನಿಲ್ ಮೇಯರ್ ಗಿರಿಯಿಂದ ಇಳಿದು ಹೋದ ಮೇಲೆ ಮರೆತುಬಿಟ್ಟಿದೆ. ಕವಿತಾ ಮೇಯರ್ ಆಗಿದ್ದಾಗ ಟಿವಿ ಕ್ಯಾಮೆರಾದವರನ್ನು ಒಟ್ಟು ಸೇರಿಸಿ ಒಂದಿಷ್ಟು ರೇಡ್ ಮಾಡಿದಂತೆ ಮಾಡಿ ಸುದ್ದಿಯಲ್ಲಿ ಇರುತ್ತಿದ್ದರು. ಅವರು ಹೋದ ಮೇಲೆ ಕಾಲು ಚಾಚಿ ಮಲಗಿಕೊಂಡ ಅಧಿಕಾರಿಗಳಿಗೆ ಪ್ಲಾಸ್ಟಿಕ್ ನಮ್ಮಲ್ಲಿ ಬ್ಯಾನ್ ಆಗಿದೆ ಎನ್ನುವುದರ ನೆನಪೇ ಇದ್ದಿರಲಿಕ್ಕಿಲ್ಲ.
ಮೇಜಿನ ಮೇಲೆ ಪ್ಲಾಸ್ಟಿಕ್ ಹಾಳೆ ಹಾಕಿ ಎಲೆ…
ಇದ್ದುದರಲ್ಲಿ ಮೂಲ್ಕಿ, ಬಂಟ್ವಾಳ ಸ್ಥಳೀಯಾಡಳಿತದ ಅಧಿಕಾರಿಗಳು ಪರವಾಗಿಲ್ಲ. ಆಗೊಮ್ಮೆ ಈಗೋಮ್ಮೆ ರೇಡ್ ಮಾಡಿ ಪ್ಲಾಸ್ಟಿಕ್ ವಶಪಡಿಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ಪಾಲಿಕೆಯ ಅಧಿಕಾರಿಗಳಿಗೆ ತಮ್ಮ ಕಚೇರಿಯಿಂದ ಹೊರಗೆ ಬರುವುದಕ್ಕೆ ಆಲಸ್ಯ. ಕುರ್ಚಿಗೆ ಬೇರು ಬಂದವರಂತೆ ವರ್ತಿಸುತ್ತಿದ್ದಾರೆ. ಒಂದು ವೇಳೆ ಅವರು ಪಾಲಿಕೆಯ ಕಟ್ಟಡಗಳಿಂದ ಹೊರಗೆ ಬಂದು ಎದುರು ಕಡೆ ಕಣ್ಣು ಹಾಯಿಸಿದರೆ ಅಲ್ಲಿ ಅವರಿಗೆ ಬ್ಯಾನ್ ಮಾಡಿದ ಪ್ಲಾಸ್ಟಿಕ್ ನಿಂದ ತಯಾರಿಸ್ಪಟ್ಟ ಫ್ಲೆಕ್ಸ್ ಗಳು ಕಾಣಿಸುತ್ತವೆ. ಅದನ್ನು ಮೊದಲು ಕಿತ್ತು ಬಿಸಾಡಿದರೆ ಅವರಿಗೆ ಪ್ಲಾಸ್ಟಿಕ್ ಬ್ಯಾನ್ ಆಗಿರುವುದು ನೆನಪಿನಲ್ಲಿ ಇರುವುದು ಗ್ಯಾರಂಟಿಯಾಗುತ್ತದೆ. ಆದರೆ ಇವರು ಅಂತಹ ಪ್ಲೆಕ್ಸ್ ಗಳಿಗೆ ಕೈ ಹಾಕುವುದಿಲ್ಲ. ಅಲ್ಲಿ ಹಾಕಿರುವ ಪ್ಲೆಕ್ಸ್ ಗಳಲ್ಲಿ ಕಾಂಗ್ರೆಸ್, ಭಾರತೀಯ ಜನತಾ ಪಾರ್ಟಿ, ಜಾತ್ಯಾತೀತ ಜನತಾದಳ ಮೂರು ಕಡೆಯವರ ಫ್ಲೆಕ್ಸ್ ಗಳು ಕೂಡ ಇವೆ. ಈ ವಿಷಯದಲ್ಲಿ ಎಲ್ಲಾ ಪಕ್ಷದವರು ಪ್ಲಾಸ್ಟಿಕ್ ಮಿತ್ರರು. ಇನ್ನು ನಮ್ಮಲ್ಲಿ ಹೋರ್ಡಿಂಗ್ಸ್ ತಯಾರಿಸುವಾಗ ಅದಕ್ಕೆ ಬ್ಯಾನ್ ಮಾಡಲ್ಪಟ್ಟ ಪ್ಲಾಸ್ಟಿಕ್ ನ ಅಂಶವೊಂದನ್ನು ಸೇರಿಸಿ ತಯಾರಿಸಲಾಗುತ್ತದೆ. ಪಾಲಿಕೆಯವರು ಅದಕ್ಕೂ ಕೈ ಹಾಕುವುದಿಲ್ಲ. ಇನ್ನು ಮೂರನೇಯದಾಗಿ ಈ ಕ್ಯಾಟರಿಂಗ್ ನವರು ಊಟದ ಟೇಬಲ್ ಮೇಲೆ ಪ್ಲಾಸ್ಟಿಕ್ ಶೀಟ್ ಅನ್ನು ಹಾಕಿರುತ್ತಾರೆ. ನೀವು ಯಾವುದಾದರೂ ಅನುಕೂಲಸ್ಥರ ಮದುವೆ, ಮುಂಜಿ, ಗೃಹ ಪ್ರವೇಶ ಅಥವಾ ತಿಥಿಗೆ ಹೋಗಿರಬಹುದು. ಅಲ್ಲಿ ಟೇಬಲ್ ಮೇಲೆ ಊಟಕ್ಕೆ ಕುಳಿತುಕೊಂಡಿರಬಹುದು. ಅಲ್ಲಿ ಪ್ಲಾಸ್ಟಿಕ್ ಹಾಳೆಗಳನ್ನು ಟೇಬಲ್ ಮೇಲೆ ಹಾಕಿರುವುದನ್ನು ನೋಡಿರಬಹುದು. ಊಟ ಮಾಡುವಾಗ ಪ್ಲಾಸ್ಟಿಕ್ ಕಪ್ ಇಟ್ಟು ಅದಕ್ಕೆ ನೀರು ಸುರಿಯುತ್ತಾರೆ. ಕೊನೆಗೆ ಮಜ್ಜಿಗೆ ಬಂದಾಗ ಅದಕ್ಕೆ ಇನ್ನೊಂದು ಲೋಟ ಇಟ್ಟು ಮಜ್ಜಿಗೆ ಸುರಿಯುತ್ತಾರೆ. ಕೊನೆಗೆ ಎಲೆಗಳನ್ನು ಪ್ಲಾಸ್ಟಿಕ್ ಹಾಳೆಗಳೊಂದಿಗೆ ಸುರುಳಿ ಸುತ್ತಿ ಆ ಪ್ಲಾಸ್ಟಿಕ್ ಲೋಟಗಳೊಂದಿಗೆ ಇನ್ನೊಂದು ಪ್ಲಾಸ್ಟಿಕ್ ಬ್ಯಾಗಿಗೆ ಹಾಕಿ ಯಾವುದಾದರೂ ಪಾಲಿಕೆಯ ಡಸ್ಟ್ ಬಿನ್ ನಲ್ಲಿ ಇಟ್ಟು ಬರುತ್ತಾರೆ. ಯಾವ ಅಧಿಕಾರಿ ಕೂಡ ಮಾತನಾಡುವುದಿಲ್ಲ. ಬೇಕಾದರೆ ಅವರು ಕೂಡ ಅಂತಹುದೇ ಮದುವೆಯಲ್ಲಿ ಊಟ ಮಾಡಿ ಕೈ ತೊಳೆದು ಎಲೆಅಡಿಕೆ ಹಾಕಿಕೊಂಡು ಬರುತ್ತಾರೆ ವಿನ: ರೇಡ್ ಎನ್ನುವಂತಹ ವಿಷಯವೇ ಅವರಿಗೆ ಗೊತ್ತಿರುವುದಿಲ್ಲ.
ಪ್ರತಿ ಚರಂಡಿಯಲ್ಲಿ ಕ್ವಿಂಟಾಲ್ ಗಟ್ಟಲೆ ಪ್ಲಾಸ್ಟಿಕ್…
ಪ್ಲಾಸ್ಟಿಕ್ ಅನ್ನು ಅವ್ಯಾಹತವಾಗಿ ಬಳಸುವುದದರಿಂದ ಏನಾಗುತ್ತೆ ಎಂದು ನೀವು ಕೇಳಬಹುದು. ಮೊನ್ನೆ ಬಂದ ಕೃತಕ ನೆರೆ ಆಗಾಗ ಬರುತ್ತದೆ. ಹೆಚ್ಚಿನ ಚರಂಡಿಗಳಲ್ಲಿ ಹೂಳು ತೆಗೆಯಲು ಹೋದರೆ ಅಲ್ಲಿ ಸಿಗುವುದು ಅರ್ಧದಷ್ಟು ಪ್ಲಾಸ್ಟಿಕ್ ತೊಟ್ಟೆ ಮತ್ತು ಪ್ಲಾಸ್ಟಿಕ್ ನ ಇತರ ವಸ್ತುಗಳು. ನಿಜ, ಪ್ಲಾಸ್ಟಿಕ್ ಅನ್ನು ಸಂಪೂರ್ಣವಾಗಿ ನಮ್ಮ ಸಮಾಜದಿಂದ ಹೊರಗೆ ಓಡಿಸಲು ಆಗದಷ್ಟು ನಾವು ಮುಂದುವರೆದು ಆಗಿದೆ. ಕನಿಷ್ಟ 40 ಮೆಕ್ರಾನ್ ಗಿಂತ ಕಡಿಮೆಯ ಪ್ಲಾಸ್ಟಿಕ್ ಉಪಯೋಗಿಸದಂತೆ ಎಲ್ಲಾ ಕಡೆ ಸೂಚನೆ ಹೊರಡಿಸಲಾಗಿದೆ. ಪ್ಲಾಸ್ಟಿಕ್ ಬ್ಯಾಗ್ ಬದಲಿಗೆ ಚೀಲದ ಬ್ಯಾಗ್ ಬಳಸಲು ಜಾಗೃತಿ ಮೂಡಿಸುವ ಕೆಲಸ ಕೆಲವು ಕಡೆ ನಡೆಯುತ್ತಿದೆ. ಆದರೆ ಮತ್ತೊಂದೆಡೆ ಪ್ಲಾಸ್ಟಿಕ್ ಬ್ಯಾಗ್ ಗಳ ಮಾರಾಟ ಕೂಡ ನಡೆಯುತ್ತಿದೆ. ಇಲ್ಲಿ ಬರುವ ಪ್ರಶ್ನೆ ಏನೆಂದರೆ ನಮ್ಮ ಪಾಲಿಕೆಯ ಅಧಿಕಾರಿಗಳಿಗೂ ಪ್ಲಾಸ್ಟಿಕ್ ಉತ್ಪಾದಕರಿಗೂ ಏನಾದರೂ ಅಂಡರ್ ಸ್ಟ್ಯಾಂಡ್ ಇದೆಯಾ? ದಾಖಲೆಗಳಲ್ಲಿ ಪ್ಲಾಸ್ಟಿಕ್ ಬ್ಯಾನ್ ಆಗಿರುವುದು ಕೇವಲ ಪುಸ್ತಕದಲ್ಲಿ ಮಾತ್ರವಾ? ಪ್ಲಾಸ್ಟಿಕ್ ಉತ್ಪಾದನೆ ಮಾಡುವ ಫ್ಯಾಕ್ಟರಿಗಳು ಇದಕ್ಕೆ ಎಷ್ಟು ಕಾರಣ, ಮಾರುವವರಿಗೆ ಅಷ್ಟು ಧೈರ್ಯ ಯಾಕೆ? ಮಧ್ಯೆ ಒಂದಿಷ್ಟು ದಿನ ಅಂಗಡಿಗಳಲ್ಲಿ, ಹೋಟೇಲ್ ಗಳಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಕೊಡಲು ಹೆದರುತ್ತಿದ್ದ ಅಂಗಡಿ, ಹೋಟೇಲಿನವರು ಈಗ ಪುನ: ರಾಜಾರೋಷವಾಗಿ ಮತ್ತೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಕೊಡುತ್ತಿದ್ದಾರೆ ಎಂದರೆ ಏನರ್ಥ? ಬಿಸಿಯಾಗದೇ ಬೆಣ್ಣೆ ಕರಗದು ಎನ್ನುವ ಗಾದೆ ಇದೆ. ಆದರೆ ಬಿಸಿಯಾಗದೇ ಪ್ಲಾಸ್ಟಿಕ್ ಕೂಡ ಕರಗುವುದಿಲ್ಲ!
Leave A Reply