ಮಂಗಳೂರಿನ ಟ್ರಾಫಿಕ್ ಸಮಸ್ಯೆ ಯಾವಾಗ ಪರಿಹಾರ ಆಗುತ್ತೆ ಎಂದು ಜ್ಯೋತಿಷ್ಯದಲ್ಲಿಯೂ ಉತ್ತರ ಇರಲಿಕ್ಕಿಲ್ಲ!
ನಾವು ಪ್ರತಿ ತಿಂಗಳು ಇಂತಹ ಸಭೆ ನಡೆಸುತ್ತೇವೆ ಎಂದು ಮೇಯರ್ ಹೇಳುತ್ತಾರೆ. ಪ್ರತಿ ಶುಕ್ರವಾರ ಬೆಳಿಗ್ಗೆ ಪೊಲೀಸ್ ಕಮೀಷನರೇಟ್ ಕಚೇರಿಯಲ್ಲಿ ಫೋನ್ ಇನ್ ಕಾರ್ಯಕ್ರಮ ನಡೆಯುತ್ತದೆ. ಇನ್ನು ಆರ್ ಟಿ ಒ ಕಚೇರಿಯಲ್ಲಿ ಕೂಡ ಪ್ರತಿ ಸೋಮವಾರ ಫೋನ್ ಇನ್ ಇಟ್ಟರೆ ಅಲ್ಲಿಯೂ ಗಂಟೆಗೆ ಮೂವತ್ತು ಕಾಲ್ ಬರಬಹುದೇನೊ. ಅದರ ನಂತರ ಪ್ರತಿ ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೂಡ ಫೋನ್ ಇನ್ ಇಟ್ಟರೆ ಅಲ್ಲಿ ಕೂಡ ಗಂಟೆಗೆ ನಲ್ವತ್ತು ಕಾಲ್ ಬರಬಹುದೇನೊ. ಇನ್ನು ಪ್ರತಿ ಬುಧವಾರ ದಕ್ಷಿಣದ ಶಾಸಕರು ಫೋನ್ ಇನ್ ಇಟ್ಟರೆ ಅಲ್ಲಿಯೂ ಗಂಟೆಗೆ 50 ಕಾಲ್ ಬರಬಹುದು. ಅದರೊಂದಿಗೆ ಪಾಲಿಕೆಯ ಕಮೀಷನರ್ ಪ್ರತಿ ಗುರುವಾರ ಫೋನ್ ಇನ್ ಇಟ್ಟರೆ ಅಲ್ಲಿಯೂ ಕಾಲ್ ಭರಪೂರ ಬರಬಹುದು. ಅಲ್ಲಿಗೆ ಒಂದು ವಾರ ಆಯಿತು. ಹೀಗೆ ಎಲ್ಲರೂ ನಿತ್ಯ ಫೋನ್ ಇನ್ ಕಾರ್ಯಕ್ರಮ ಇಟ್ಟು ತಮ್ಮ ತಮ್ಮ ಕಚೇರಿಯಲ್ಲಿ ಕುಳಿತುಕೊಂಡು ಕೇಳಿದರೂ ಎಲ್ಲಾ ನಾಗರಿಕರು ಒಂದೇ ರಾಗ, ಒಂದೇ ಹಾಡು. ಅದೇ ಟ್ರಾಫಿಕ್ ಸಮಸ್ಯೆ.
ಎಲ್ಲರೂ ಕೂಡ ಹೇಳುವುದು ಬೆಳಿಗ್ಗೆ ಮತ್ತು ಸಂಜೆ ಪೀಕ್ ಅವರ್ ನಲ್ಲಿ ಮಂಗಳೂರು ನಗರದೊಳಗೆ ಕಾಲಿಡಲು ಆಗುವುದಿಲ್ಲ. ಪ್ರತಿ ಸೋಮವಾರದಿಂದ ಶನಿವಾರದ ತನಕ ಎಲ್ಲ ಕಡೆ ಫೋನ್ ನಲ್ಲಿ ದೂರು ಕೊಟ್ಟರೂ ಈ ಸಮಸ್ಯೆ ಪರಿಹಾರ ಆಗಿಲ್ಲ ಎಂದು ನಾಗರಿಕರು ಹೇಳುತ್ತಾರೆ. ಎಲ್ಲಾ ಕಡೆ ಜನರ ಸಮಸ್ಯೆಗಳನ್ನು ಶಾಂತಚಿತ್ತದಿಂದ ಕೇಳಲಾಗುತ್ತದೆ. ನಂತರ ಇದಕ್ಕೆ ಏನು ಮಾಡೋಣ ಎಂದು ಹೆಚ್ಚೆಂದರೆ ಕಾರ್ಯಕ್ರಮ ನಡೆದ ಒಂದು ಗಂಟೆಯ ತನಕ ಇವರೆಲ್ಲ ತಮ್ಮ ಆಪ್ತರೊಂದಿಗೋ, ಅಧಿಕಾರಿಗಳೊಂದಿಗೋ ಕುಳಿತು ಚರ್ಚಿಸಬಹುದು. ಅದರ ನಂತರ ಏನು ಆಗುತ್ತದೆ. ಮುಂದಿನ ವಾರ ಬರುತ್ತದೆ, ಮುಂದಿನ ತಿಂಗಳು ಬರುತ್ತದೆ. ಮತ್ತೆ ಫೋನ್ ಇನ್ ಕಾರ್ಯಕ್ರಮ. ಮತ್ತೆ ಟ್ರಾಫಿಕ್ ಸಮಸ್ಯೆ. ಮತ್ತೆ ಕೇಳುವುದು, ಮತ್ತೆ ಬರೆದಿಡುವುದು, ಮತ್ತೆ ಮರೆಯುವುದು. ಹೆಚ್ಚೆಂದರೆ ಪತ್ರಕರ್ಥರು ಕೇಳಿದರೆ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಅದನ್ನು ಪೊಲೀಸ್ ಇಲಾಖೆ ನೋಡಬೇಕು ಎನ್ನುವುದು, ಅತ್ತ ಪೊಲೀಸ್ ಅಧಿಕಾರಿಗಳು ಇದನ್ನು ಪಾಲಿಕೆ ನೋಡಬೇಕು ಎನ್ನುವುದು, ಆರ್ ಟಿ ಒ ಅವರು ಇದನ್ನು ಜಿಲ್ಲಾಧಿಕಾರಿ ನೋಡಬೇಕು ಎನ್ನುವುದು, ಜಿಲ್ಲಾಧಿಕಾರಿಗಳು ಸಚಿವರ ಕಡೆ ಬೆರಳು ತೋರಿಸುವುದು, ಅವರು ನಾವು ಹೇಳಿದ ಸಲಹೆಗಳನ್ನು ಒತ್ತಡ ತಂದು ತೆಗೆದು ಹಾಕಿದರು ಎನ್ನುವುದು, ಶಾಸಕರು ಅದನ್ನು ಡಿಸಿಯವರು ನೋಡಬೇಕು ಎನ್ನುವುದು ಹೀಗೆ ನಡೆಯುತ್ತಲೇ ಇರುತ್ತದೆ. ಯಾರೂ ಕೂಡ ಇದನ್ನು ನಾವು ಮಾಡಬೇಕು, ನಮ್ಮ ಕೆಲಸ ಎಂದು ಹೇಳುವುದಿಲ್ಲ. ಯಾರು ಹೇಳುತ್ತಾರೋ ಆ ದಿನ ಸಮಸ್ಯೆಗೆ ಪರಿಹಾರ ಸಿಕ್ಕಿತು ಎಂದೇ ಅರ್ಥ. ಸಿಗುತ್ತಾ?
ಸ್ಟೇಟ್ ಬ್ಯಾಂಕಿನಿಂದ ಜ್ಯೋತಿ ದಾಟಿ ಪಿವಿಎಸ್ ಕಡೆ ಬರಲು ಒಂದು ಸಿಟಿ ಬಸ್ಸಿಗೆ ಒಂದು ವರ್ಷದ ಹಿಂದೆ ಎಷ್ಟು ಹೊತ್ತು ಹಿಡಿಯುತ್ತಿತ್ತೊ ಈಗಲೂ ಅಷ್ಟೇ ಹೊತ್ತು ಹಿಡಿಯುತ್ತದೆ. ಅದೇ ಬಸ್ಸಿಗೆ ಮುಂದಿನ ವರ್ಷ ಕೂಡ ಇಷ್ಟೇ ಹೊತ್ತು ಹಿಡಿಯುತ್ತದೆ ಎಂದು ಘಂಟಾಘೋಷವಾಗಿ ಹೇಳಬಲ್ಲೆ. ಒಂದು ವೇಳೆ ನಾನು ಹೇಳಿದ್ದು ತಪ್ಪಾಗಲಿದೆ ಎಂದು ಯಾವುದಾದರೂ ಇಲಾಖೆ ಹೇಳಲು ತಯಾರಿದ್ದರೆ ದಯವಿಟ್ಟು ಮಾಡಿ ತೋರಿಸಲಿ. ಒಂದು ಬಸ್ ಸ್ಟೇಟ್ ಬ್ಯಾಂಕಿನಿಂದ ಹೊರಟು ಜ್ಯೋತಿ ದಾಟಲು ಕನಿಷ್ಟ 20 ನಿಮಿಷ ತೆಗೆದುಕೊಳ್ಳುತ್ತದೆ. ಯಾಕೆ ಗೊತ್ತಾ? ಅಲ್ಲಲ್ಲಿ ಪ್ರಯಾಣಿಕರನ್ನು ಹತ್ತಿಸಲು ಇರುವ ಸ್ಪರ್ಧೆ. ಯಾರೂ ಕೂಡ ಮುಂದೆ ಹೋಗಲು ಬಯಸುವುದಿಲ್ಲ. ಹೋದರೆ ತನ್ನ ಬಸ್ಸಿನಲ್ಲಿ ಪ್ರಯಾಣಿಕರು ಕಡಿಮೆಯಾಗುತ್ತಾರಾ ಎಂದು ಹೆದರಿಕೆ. ವಿಜಯಾ ಪೆನ್ ಮಾರ್ಟ್ ನ ಹತ್ತಿರ ಬಸ್ಸುಗಳಿಗೆ ಪ್ರತ್ಯೇಕ ಬ್ಯಾರಿಕೇಡ್ ಹಾಕಿದ ಕಾರಣ ಇನ್ನೂ ನಿಧಾನವಾಗಿ ಒಂದರ ಬೆನ್ನನ್ನು ಇನ್ನೊಂದು ಸವರಿ ಪ್ರೀತಿ ಮಾಡುತ್ತಾ ಮುಂದಕ್ಕೆ ಹೋಗುತ್ತಾ ಇರುತ್ತವೆ. ಅದನ್ನು ನಿಲ್ಲಿಸಲು ಪೊಲೀಸ್ ಇಲಾಖೆಗೆ ಆಗುತ್ತಾ? ಆಗಲ್ಲ, ಯಾಕೆಂದರೆ ಬಸ್ಸಿನವರು ಪೊಲೀಸರನ್ನು ಕ್ಯಾರೆ ಮಾಡುತ್ತಿಲ್ಲ.ಇನ್ನು ಪ್ರತಿ ಬಸ್ ಸ್ಟಾಪ್ ಸರ್ಕಲ್ ಸನಿಹದಲ್ಲಿಯೇ ಇರುವುದರಿಂದ ಈ ಜಾಮ್ ಜಾಸ್ತಿ ಆಗುತ್ತಿದೆ. ಪ್ರತಿ ಬಸ್ ಸ್ಟಾಪ್ ಕನಿಷ್ಟ 150 ಮೀಟರ್ ದೂರ ಇರುವಂತೆ ಮಾಡಿದರೆ ಸಮಸ್ಯೆ ತನ್ನಿಂದ ತಾನೆ ದೂರವಾಗುತ್ತದೆ.
ಕೊನೆಯದಾಗಿ ಏನು ಹೇಳುವುದೆಂದರೆ ಪಾಲಿಕೆ ಮಾಡುವ ಯಾವುದೇ ಇಂತಹ ಮೀಟಿಂಗ್ ಗೆ “ಪರಿಹಾರ” ಕೊಡುವವರನ್ನು ಮಾತ್ರ ಕರೆಯಿರಿ. ಸಮಸ್ಯೆಯ ಬಗ್ಗೆ ಉದ್ದುದ್ದ ಭಾಷಣ ಮಾಡುವವರನ್ನು ಕರೆದರೆ ಟೈಂ ಪಾಸ್ ಆಗುತ್ತದೆ, ನಿಜ. ಆದರೆ ರಿಸಲ್ಟ್ ಸಿಗುವುದಿಲ್ಲ. ಅಷ್ಟಕ್ಕೂ ಈ ಸಭೆಗಳು ಇರುವುದು ಬೆರಳೆಣಿಕೆಯ ಕೆಲವರು ಬಂದು ಸಮಸ್ಯೆ ಹೇಳುವುದಕ್ಕೆ ಅಲ್ಲ. ಅಷ್ಟಕ್ಕೂ ಬರಿ ಸಮಸ್ಯೆನೆ ಹೇಳುವುದಿದ್ದರೆ ಅಂತವರನ್ನು ಜ್ಯೋತಿಷಿಗಳ ಬಳಿ ಕಳುಹಿಸಿ
Leave A Reply